ತುಮಕೂರು : ವರದಕ್ಷಿಣೆ ವಿರೋಧಿ ವೇದಿಕೆ- ತುಮಕೂರು ನಗರ ಸಾಂತ್ವನ ಕೇಂದ್ರವು ಪ್ರತಿವರ್ಷ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ನೀಡುವ ಸಾಧಕ ಮಹಿಳೆಯರಿಗೆ ಈ ಕೆಳಕಂಡಂತೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ಅಲೆಮಾರಿ, ಕುರಿಗಾಹಿಗಳಿಗೆ ಲಸಿಕೆ, ಔಷಧೋಪಚಾರ, ಆರೋಗ್ಯದ ಅರಿವು ಮೂಡಿಸುತ್ತಾ ಬಂದಿರುವ, ರಸ್ತೆ ಬದಿಯ ಗಿಡ ಮರಗಳಿಗೆ ಗೊಬ್ಬರ ಹಾಕಿ ಅವುಗಳ ರಕ್ಷಣೆಗೆ ಅರಿವು ಮೂಡಿಸುತ್ತಿರುವ, ಮಕ್ಕಳಲ್ಲಿ ಪರಿಸರದ ಅರಿವು ಮೂಡಿಸುತ್ತಾ ಅವರನ್ನೊಳಗೊಂಡ ಹಕ್ಕಿ ಪಕ್ಕ ಬಳಗ ಕಟ್ಟಿಕೊಂಡು ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡಿರುವ ಗುಬ್ಬಿ ತಾಲ್ಲೂಕು ಅಳ್ಳೇನಹಳ್ಳಿಯ ಗೀತಾ ಜೆ ಅವರಿಗೆ ಡಾ.ಜಿ. ಪರಮೇಶ್ವರ ಅವರು ಸ್ಥಾಪಿತ ಶ್ರೀಮತಿ ಗಂಗಮಾಳಮ್ಮ ಗಂಗಾಧರಯ್ಯ ನೆನಪಿನ ಮಹಿಳಾ ಚೇತನ ಪ್ರಶಸ್ತಿ ನೀಡಲಾಗುತ್ತಿದೆ.
ಚಿಕ್ಕನಾಯಕನಹಳ್ಳಿ ತಾಲ್ಲೂಕು ಗಡಿಭಾಗದ ಹೊಯ್ಸಳಕಟ್ಟೆಯಲ್ಲಿ ಕಳೆದ 20 ವರ್ಷಗಳಿಂದ ನೂರಾರು ಮಹಿಳೆಯರಿಗೆ ಉಚಿತವಾಗಿ ಟೈಲರಿಂಗ್ ತರಬೇತಿ ನೀಡಿ ಅವರಲ್ಲಿ 20 ಕ್ಕೂ ಹೆಚ್ಚು ಮಹಿಳೆಯರು ಉದ್ಯೋಗ ವೃತ್ತಿ ಸೃಜಿಸಿಕೊಳ್ಳಲು ನೆರವಾಗಿರುವ, ಸುತ್ತಮುತ್ತಲ ಪ್ರದೇಶಗಳಲ್ಲಿ ಹಲವು ಸ್ವ ಸಹಾಯ ಸಂಘಗಳನ್ನು ಸ್ಥಾಪಿಸಲು ನೆರವಾಗಿ ಆ ಸಂಘಗಳ ಸದಸ್ಯರಲ್ಲಿ ಉಳಿತಾಯ ಮನೋಭಾವ, ಉತ್ಪಾದಕ ಚಟುವಟಿಕೆಗಳ ಅರಿವು ಮೂಡಿಸುತ್ತಿರುವ ಬಿ.ಎಂ. ಶ್ರೀದೇವಿ ಅವರಿಗೆ ದಿ. ಸಿ. ಚೆನ್ನಿಗಪ್ಪ ಅವರು ಸ್ಥಾಪಿಸಿರುವ ಶ್ರೀಮತಿ ಚೆನ್ನಮ್ಮ ಚನ್ನರಾಯಪ್ಪ ನೆನಪಿನ ಮಹಿಳಾ ಸಾಧಕಿ ಪ್ರಶಸ್ತಿ ನೀಡಲಾಗುತ್ತಿದೆ.
31 ವರ್ಷಗಳ ಕಾಲ ಅಂಗನವಾಡಿ ಶಿಕ್ಷಕಿಯಾಗಿ ಆ ನಂತರವೂ ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ, ಮಹಿಳೆಯರ ಆರೋಗ್ಯ ತಪಾಸಣೆ ಶಿಬಿರಗಳಲ್ಲಿ ಸ್ವಯಂ ಸೇವಾ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಾ ಮಹಿಳೆಯರ ವಿವಿಧ ತರಬೇತಿಗಳನ್ನು ನೀಡಿ ಅವರಲ್ಲಿ ಜಾಗೃತಿ ಮೂಡಿಸುತ್ತಿರುವ ತುಮಕೂರು ನಗರದ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ದಿವಂಗತ ಟಿ. ಎಂ. ಚಂದ್ರಪ್ಪ ಅವರ ಪುತ್ರಿ ಟಿ.ಸಿ. ಜಯಂತಿ ಅವರಿಗೆ ಸ್ವಾತಂತ್ರ್ಯ ಹೋರಾmಗಾರ ಟಿ.ಆರ್. ರೇವಣ್ಣ ಅವರು ತಮ್ಮ ಪತ್ನಿ ಸರೋಜ ಹೆಸರಲ್ಲಿ ಸ್ಥಾಪಿಸಿರುವ ಶ್ರಮಜ್ಯೋತಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಪ್ರಶಸ್ತಿಯು ತಲಾ 5000 ರೂ. ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ. ವರದಕ್ಷಿಣೆ ವಿರೋಧಿ ವೇÉದಿಕೆ, ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ, ಶ್ರೀ ಈಶ್ವರಿ ಮಹಿಳಾ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಮಾರ್ಚ 15 ರಂದು ನಗರದ ಕನ್ನಡಭವನದಲ್ಲಿ ಬೆಳಿಗ್ಗೆ 11 ಗಂಟೆಗೆ ಏರ್ಪಾಟಾಗಿರುವ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.