ಶೇ40% ಆರೋಪ ಮಾಡಿದ್ದು ಗುತ್ತಿಗೆದಾರರು, ಬಿಜೆಪಿ ಸರ್ಕಾರ ತನಿಖೆ ಯಾಕೆ ಮಾಡಿಸಲಿಲ್ಲ-ಸಚಿವ ಎಂ.ಬಿ.ಪಾಟೀಲ್

ತುಮಕೂರು.: ಬಿಜೆಪಿಯವರು ಶೇ40% ಕಮಿಷನ್ ಆರೋಪಕ್ಕೆ ಆಧಾರ ಕೊಡಲಿ ಎಂದು ಕೇಳುತ್ತಿದ್ದಾರೆ, ಆ ಆರೋಪ ಮಾಡಿದವರು ಗುತ್ತಿಗೆದಾರ ಸಂಘದವರು, ಎರಡು ವರ್ಷಗಳ ಹಿಂದೆಯೇ ದೂರು ನೀಡಿದ್ದರೂ ಬಿಜೆಪಿ ಸರ್ಕಾರ ತನಿಖೆ ಯಾಕೆ ಮಾಡಿಸಲಿಲ್ಲ ಎಂದು ನೂತನ ಸಚಿವ ಎಂ.ಬಿ.ಪಾಟೀಲ್ ಹೇಳಿದರು.

ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಅಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸ್ವೀಕರ ಯಾರಾಗುತ್ತಾರೆ ಎಂಬುದು ಇದುವರೆಗೂ ಚರ್ಚೆಯಾಗಿಲ್ಲ. ಮೇ.24ರಂದು ಆದಿವೇಶನದಲ್ಲಿಯೇ ತೀರ್ಮಾನವಾಗಲಿದೆ ಎಂದರು.

ಬಿಜೆಪಿಯವರು ಶೇ40 ಕಮಿಷನ್ ಆರೋಪಕ್ಕೆ ಆಧಾರ ಕೊಡಲಿ ಎಂದು ಕೇಳುತ್ತಿದ್ದಾರೆ.ಆದರೆ ಈ ಆರೋಪ ಮಾಡಿದ್ದು ನಾವಲ್ಲ. ಈ ರಾಜ್ಯದ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣ. ಇದುವರೆಗೂ ಅವರ ವಿರುದ್ದ ಸರಕಾರ ಯಾವುದೇ ತನಿಖೆಗೆ ಮುಂದಾಗಿಲ್ಲ ಎಂದರೆ ಅವರ ಆರೋಪವನ್ನು ಒಪ್ಪಿಕೊಂಡಂತೆ ಅಲ್ಲವೇ ಎಂದು ಪ್ರಶ್ನಿಸಿದ ಅವರು,ಕೆಂಪಣ್ಣ ಅವರು ಬಿಜೆಪಿ ಪಕ್ಷದ ಮೇಲೆ ಆರೋಪ ಮಾಡಿ ಎರಡು ವರ್ಷ ಆಗಿದೆ. ಸಣ್ಣಪುಟ್ಟ ವಿಚಾರಗಳಿಗೂ ಐಟಿ,ಇಡಿ ದಾರಿ ಹಿಡಿಯುವ ಪ್ರಧಾನ ಮಂತ್ರಿಗಳು,ಈ ವಿಚಾರದಲ್ಲಿ ಏಕೇ ಮೌನವಹಿಸಿದ್ದಾರೆ.ಇದರ ಹಿಂದಿನ ಗುಟ್ಟೇನು ಎಂಬುದನ್ನು ಮಾಜಿ ಮುಖ್ಯಮಂತ್ರಿಗಳೇ ಬಹಿರಂಗ ಪಡಿಸಬೇಕು.ಓರ್ವ ನಿಗಮದ ಅಧ್ಯಕ್ಷನ ಮನೆಯಲ್ಲಿಯೇ ಕೋಟಿ,ಕೋಟಿ ಹಣ ಸಿಕ್ಕಿದೆ ಇದಕ್ಕಿಂತ ಸಾಕ್ಷಿ ಬೇಕೇ? ಎಂದು ಎಂ.ಬಿ.ಪಾಟೀಲ್ ನುಡಿದರು.

ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಸಾಕ್ಷಿ ಬೇಕು ಎನ್ನುವವರು ರಾಜ್ಯದಲ್ಲಿ ನಿಮ್ಮ ಸರಕಾರವಿದ್ದಾಗ ಎಷ್ಟು ಜನ ಗುತ್ತಿಗೆದಾರರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತನಿಖೆ ನಡೆಸಲಿ, ಅಲ್ಲದೆ ಒಂದು ಸರಕಾರ ಡಿಜಿಪಿ ಹುದ್ದೆಯಲ್ಲಿದ್ದ ವ್ಯಕ್ತಿಯೇ ಪಿ.ಎಸ್.ಐ ಹಗರಣದಲ್ಲಿ ಬಂಧಿಯಾಗಿದ್ದು,ಇದುವರೆಗೂ ಜಾಮೀನು ದೊರೆತಿಲ್ಲ.ನೇಮಕಾತಿ ಮತ್ತು ಕಾಮಗಾರಿಯಲ್ಲಿ ಭಷ್ಟ್ರಾಚಾರ ನಡೆದಿರುವ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇದೆ, ಅದನ್ನು ಆಧಾರವಾಗಿಟ್ಟುಕೊಂಡು ತನಿಖೆ ನಡೆಸುತ್ತೇವೆ ಎಂದರು.

ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರಿ ಸೋಲುಂಡಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಸೂಕ್ತ ಸ್ಥಾನಮಾನ ನೀಡುವ ಬಗ್ಗೆ ಈಗಾಗಲೇ ಎಐಸಿಸಿ ಮತ್ತು ಕೆ.ಪಿ.ಸಿ.ಸಿ ಮುಖಂಡರು ಚರ್ಚೆ ನಡೆಸಿದ್ದಾರೆ.ಅವರಿಗೆ ಸೂಕ್ತ ಸ್ಥಾನ ಮಾನ ಕೊಡುವುದು ನಿಶ್ಚಿತ.ವೀರೇಂದ್ರಪಾಟೀಲ್ ನಂತರ ಇದೇ ಪ್ರಥಮ ಬಾರಿಗೆ ಬಿಜೆಪಿಯ ಅಪಪ್ರಚಾರವನ್ನು ಮೆಟ್ಟಿನಿಂತು ಲಿಂಗಾಯಿತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್‍ಗೆ ಮತ ನೀಡಿದ್ದಾರೆ. ಇದರ ಜೊತೆಗೆ ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ್ದಾರೆ. ಹಾಗಾಗಿ ಎಲ್ಲರನ್ನು ಒಳಗೊಂಡ ಮಂತ್ರಿ ಮಂಡಲ ಇದಾಗಬೇಕು. ಈ ನಿಟ್ಟಿನಲ್ಲಿ ಹಂತ ಹಂತವಾಗಿ ಎಲ್ಲ ಸಮುದಾಯಗಳಿಗೆ ನ್ಯಾಯ ಒದಗಿಸುವ ಕೆಲಸ ಆಗಲಿದೆ ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.

ಯಾರಿಗೆ ಯಾವ ಖಾತೆ ನೀಡಬೇಕಂಬುದು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ.ಇಂತಹ ಖಾತೆ ಇದ್ದರೆ ಜನರ ಸೇವೆ ಮಾಡಲು ಹೆಚ್ಚು ಅನುಕೂಲ ಎಂಬ ಮನದಾಳದ ಮಾತನ್ನು ಈಗಾಗಲೇ ಮುಖ್ಯಮಂತ್ರಿಗಳಿಗೆ ತಿಳಿಸಿದ್ದೇನೆ. ಮುಂದಿನ ಗುರುವಾರ ಅಥವಾ ಶುಕ್ರವಾರ ಖಾತೆಗಳ ಹಂಚಿಕೆ ಮಾಡುವ ಸಾಧ್ಯತೆಗಳಿವೆ ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ಮೀಸಲಾತಿ ಹಂಚಿಕೆಯಲ್ಲಿ ಈ ಹಿಂದಿನ ಬಿಜೆಪಿ ಸರಕಾರ ಎಡವಿದೆ.ಸುಪ್ರಿಂಕೋರ್ಟಿನ ಆದೇಶ ಶೇ50 ಎಂಬುದನ್ನು ಮೀರಿದೆ. ಈಗಾಗಿ ನ್ಯಾಯಾಲಯದಲ್ಲಿ ನಿಲ್ಲುವುದಿಲ್ಲ.ಈಗಾಗಲೇ ಮಹಾರಾಷ್ಟ್ರ, ಆಂಧ್ರ ಸೇರಿದಂತೆ ಹಲವಡೆ ನ್ಯಾಯಾಲಯ ತಡೆ ಹಿಡಿದಿದೆ. ಈ ಎಲ್ಲಾ ಅಂಶಗಳನ್ನು ತುಲನೆ ಮಾಡಿ, ನಾವು ಮೀಸಲಾತಿ ಘೋಷಿಸಬೇಕಿದೆ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈ ವೇಳೆ ಸಚಿವ ಎಂ.ಬಿ.ಪಾಟೀಲ್ ಪತ್ನಿ ಶ್ರೀಮತಿ ಆಶಾಪಾಟೀಲ್,ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಶಿಹುಲಿಕುಂಟೆ ಮಠ್,ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ರಾಯಸಂದ್ರರವಿಕುಮಾರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *