
ತುಮಕೂರು : ಬಿಜೆಪಿ ಸರ್ಕಾರವು ಜನರ ಭಾವಣೆಗಳನ್ನು ಅರ್ಥ ಮಾಡಿಕೊಳ್ಳದೆ ರಾಜ್ಯದಲ್ಲಿ ಕೆಟ್ಟ ಆಡಳಿತವನ್ನು ನೀಡಿತು ಎಂದು ನೂತನವಾಗಿ ಸಂಪುಟದರ್ಜೆ ಸಚಿವರಾಗಿ ಪ್ರಮಾಣ ಸ್ವೀಕರಿಸಿದ ನಂತರ ಮೊದಲ ಬಾರಿಗೆ ತುಮಕೂರು ಕಾಂಗ್ರೆಸ್ ಕಛೇರಿಯಲ್ಲಿ ಕಾರ್ಯಕರ್ತರು ಹಾಗೂ ಅಭಿಮಾನಿಗಳನ್ನು ಕುರಿತು ಮಾತನಾಡುತ್ತಿದ್ದರು.
ಅತ್ಯಂತ ಭ್ರಷ್ಟ, ಜನವಿರೋಧಿ ಸರ್ಕಾರ ನೀಡಿದ್ದರೂ ಬಿಜೆಪಿಯವರಿಗೆ ನಾವು ಹೇಗೋ ಗೆದ್ದು ಬರುತ್ತೇವೆ ಎಂಬ ಆತ್ಮಸ್ಥೈರ್ಯವಿದೆ ಎಂದು ಯಾವ ಲೆಕ್ಕಚಾರದಲ್ಲಿ ಹೇಳುತ್ತಿದ್ದರೋ ಗೊತ್ತಿಲ್ಲ, ರಾಜ್ಯ ಮತ್ತು ರಾಷ್ಟ್ರದ ಬಿಜೆಪಿ ನಾಯಕರೆಲ್ಲಾ ನಾವು ಅಧಿಕಾರಕ್ಕೆ ಬರುತ್ತೇವೆ ಎಂದೇ ಹೇಳಿದರು, ಕರ್ನಾಟಕದ ಜನರನ್ನು ಕೊಂಡುಕೊಂಡಿದ್ದೇವೆ ಎನ್ನುವಂತೆ ಮಾತನಾಡಿದರು, ನಾಲ್ಕೂವರೆ ವರ್ಷದಲ್ಲಿ ರಾಜ್ಯದ ಜನ ಕಣ್ಣಲ್ಲಿ ನೀರು ಹಾಕಿದ್ದಾರೆ, ರಕ್ತ ಹರಿಸಿದ್ದಾರೆ, ಅತ್ಯಂತ ಕಡು ಬಡವರು ಕೆಲಸವಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಅಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷವೇ ಪರಹಾರ ಎಂದು ನಮಗೆ ಅಧಿಕಾರ ಕೊಟ್ಟಿದ್ದಾರೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಸೌಹಾರ್ದತೆಯನ್ನು ಹಾಳು ಮಾಡಿದ್ದಾರೆ, ಈಗ ಅದನ್ನು ಸರಿ ಮಾಡುತ್ತೇವೆ, ಕಾನೂನು ಚೌಕಟ್ಟಿನ ಹೊರಗಿರುವವರನ್ನು, ಕಾನೂನಿಗೆ ವಿರುದ್ಧವಾಗಿ ಕೆಲಸ ಮಾಡುವವರನ್ನು, ಅಶಾಂತಿ ಉಂಟು ಮಾಡುವವರನ್ನು ಬಿಡುವುದಿಲ್ಲ, ಭಾರತದ ಸಂವಿಧಾನ, ಕಾನೂನು ಎಲ್ಲರಿಗೂ ಒಂದೇ ಎಂಬುದು ನೆನಪಿರಲಿ ಎಂದು ಹೇಳಿದರು.
ನನ್ನ ಅಧ್ಯಕ್ಷತೆಯಲ್ಲಿ ತಯಾರಾದ ಪ್ರಣಾಳಿಕೆ ಆಟೋ ಚಾಲಕನಿಂದ ಹಿಡಿದು ಬಡ ಕೂಲಿ ಕಾರ್ಮಿಕನನ್ನು ಮಾತನಾಡಿಸಿ ತಯಾರು ಮಾಡಲಾಯಿತು ಈ ಹಿನ್ನಲೆಯಲ್ಲಿಯೇ ಐದು ಗ್ಯಾರಂಟಿಗಳನ್ನು ಕೊಡಲಾಯಿತು ಎಂದರು.
ನಾವು ಅಧಿಕಾರ ವಹಿಸಿಕೊಂಡ ಅರ್ಧ ಗಂಟೆಯಲ್ಲೇ ನಮ್ಮ ಐದು ಗ್ಯಾರಂಟಿಗಳನ್ನು ಈಡೇರಿಕೆ ಆದೇಶ ಹೊರಡಿಸಲಾಗಿದೆ, ಮುಂದಿನ ಸಂಪುಟ ಸಭೆಯಲ್ಲಿ ಅವುಗಳನ್ನು ಜಾರಿಗೆ ತರಲಾಗುವುದು, ಎಂದರು.
ರಾಹುಲ್ ಗಾಂಧಿಯವರು ಭ್ರಷ್ಟಚಾರ ರಹಿತ ಆಡಳಿತ ನೀಡುವುದಾಗಿ ಮಾತು ಕೊಟ್ಟಿದ್ದಾರೆ, ಅದಕ್ಕೆ ಬದ್ಧರಾಗಿ ಕೆಲಸ ಮಾಡುತ್ತೇವೆ ಎಂದರು.
ತುಮಕೂರಿನ ವಸಂತ ನರಸಾಪುರದವರೆಗೆ ಮೆಟ್ರೋ ರೈಲನ್ನು ತರಲಾಗುವುದು, ತುಮಕೂರು ಸ್ಮಾರ್ಟ್ ಸಿಟಿಯಲ್ಲಿ ಆಗಿರುವ ಅದ್ವಾನಗಳು, ಭ್ರಷ್ಟಚಾರಗಳ ಬಗ್ಗೆ ಕೂಲಂಕುಷವಾಗಿ ಚರ್ಚೆ ನಡೆಯಬೇಕಿದೆ, ವಸಂತ ನರಸಾಪುರ ಕೈಗಾರಿಕಾ ಪ್ರದೇಶವಾಗಲಿ, ಹೆಚ್.ಎ.ಎಲ್.ಆಗಿರಲಿ ಸ್ಥಳಿಯರಿಗೆ ಉದ್ಯೋಗ ಕೊಡುವಂತೆ ತಾಕೀತು ಮಾಡಲಾಗುವುದು ಎಂದರು.
2024ರಲ್ಲಿ ಲೋಕಸಭೆ ಚುನಾವಣೆ ಬರಲಿದ್ದು, ಆ ಚುನಾವಣೆಗೆ ಕಟಿ ಬದ್ಧರಾಗಿ ಕೆಲಸ ಮಾಡಿ ಪಕ್ಷವನ್ನು ಗೆಲ್ಲಿಸಿ ಮಲ್ಲಿಕಾರ್ಜುನ ಖರ್ಗೆ, ರಾಹುಲ್‍ಗಾಂಧಿ ಅವರನ್ನು ಪ್ರಧಾನಿಯನ್ನಾಗಿ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಕಾಂಗ್ರೆಸ್‍ನ ಎಲ್ಲಾ ಪದಾಧಿಕಾರಿಗಳು ಹಗಲು, ರಾತ್ರಿ ಕೆಲಸ ಮಾಡಿದ್ದಾರೆ, ಕೆಲವು ಸಲ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನೊಳಗೊಂಡಂತೆ ಕೆಲವರನ್ನು ಬೈಯ್ದಿರುವುದುಂಟು, ಆ ಹಿನ್ನಲೆಯಲ್ಲಿಯೇ ಕಾಂಗ್ರೆಸ್ ಬಂದಿರುವುದು, ಅವರೆಲ್ಲರಿಗೂ ಅಭಿನಂದಿಸುವುದಾಗಿ ಹೇಳಿದರು.
ಮುಂದಿನ ದಿನಗಳಲ್ಲಿ ತುಮಕೂರಿನಲ್ಲಿ ಬೃಹತ್ ಸಮಾರಂಭ ಏರ್ಪಡಿಸಿ ಎಲ್ಲಾ ನಾಯಕರಿಗೆ ಅಭಿನಂದನೆ ಸಲ್ಲಿಸಲಾಗುವುದು ಎಂದರು.
ನಾನು ಸೋಲುತ್ತೇನೆ ಎಂದು ಕೊರಟಗೆರೆ ಕ್ಷೇತ್ರ ಬಿಟ್ಟು ಬೇರೆಡೆ ಹೋಗುತ್ತೇನೆ ಎಂದು ಪುಕಾರು ಹಬ್ಬಿಸಿದರು, ಆದರೆ ನಾನು ನನ್ನ ಕ್ಷೇತ್ರ ಬಿಡದೆÉ, ಯಾರು ಬರುತ್ತಿರ ಬನ್ನಿ ಎಂದು ದೃಢವಾಗಿ ನಿಂತೆ, ಇದರಿಂದಲೇ ನಾನು ಗೆದ್ದೆ ಎಂದರು.
ಪಾವಗಡ ಶಾಸಕ ಹೆಚ್.ವಿ.ವೆಂಕಟೇಶ್, ಮಾಜಿ ಶಾಸಕ ಹೆಚ್.ನಿಂಗಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರಗೌಡ, ಕೆಪಿಸಿಸಿ ಕಾರ್ಯದರ್ಶಿ ಮುರಳೀಧರ ಹಾಲಪ್ಪ, ಇಕ್ಬಾಲ್ ಅಹ್ಮದ್, ನಿಕೇತ್‍ರಾಜ್ ಮೌರ್ಯ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಆರ್.ರಾಮಕೃಷ್ಣ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ರಾಯಸಂದ್ರ ರವಿಕುಮಾರ್ ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಕ್ಯಾತ್ಸಂದ್ರ ಟೋಲ್‍ನಿಂದ ಬೈಕ್ ರ್ಯಾಲಿ ಮೂಲಕ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಮೆರವಣಿಗೆ ಮೂಲಕ ಜಿಲ್ಲಾ ಕಾಂಗ್ರೆಸ್ ಕಛೇರಿಗೆ ಕರೆ ತಂದು ಅಭಿನಂದಿಸಲಾಯಿತು.

ಸಚಿವರ ಆಗಮನಕ್ಕೆ ಬಿ.ಹೆಚ್.ರಸ್ತೆಯಲ್ಲಿ ಸ್ವಾಗತ ಕೋರುವ ಪ್ಲೆಕ್ಸ್‍ಗಳನ್ನು ಹಾಕಲಾಗಿತ್ತು, ಜಿಲ್ಲಾ ಕಾಂಗ್ರೆಸ್ ಕಛೇರಿಯ ದ್ವಾರಕ್ಕೆ ಬಲೂನ್ ತೋರಣ ಕಟ್ಟಿ ಸಿಂಗರಿಸಲಾಗಿತ್ತು.
ವರದಿ :ವೆಂಕಟಾಚಲ.ಹೆಚ್.ವಿ.