ಮೂರುಕಾಸಿನ ‘ಅಡ್ವೋಕೇಟ್ ಜನರಲ್’ ಸರ್ಕಾರಿ ಹುದ್ದೆಗೆ ರಾಜೀನಾಮೆ ಬಿಸಾಕಿ ಬಂದ ಪ್ರೊಫೆಸರ್-“ಸೋಕಾಲ್ಡ್ ವಾದಿ”ಗಳು ಮೆಣಸಿನಗಿಡ ನೇಣಿಗೇರಿ—-

ಅವರದೇ ಹುಟ್ಟೂರು ವಿದಾನಸಭಾ ಕ್ಷೇತ್ರದ ಶಾಸಕರಾಗಿ, ಕಾನೂನು ಮಂತ್ರಿಯಾಗಿದ್ದವರೊಬ್ಬರು ಮನಸ್ಸಿಗೆ ಘಾಸಿಯಾಗುವಂತಹ ನೇಮಕಾತಿಯನ್ನು ಕೇಳದೆ ಮಾಡಿದ್ದಕ್ಕೆ ಅಡ್ವಕೇಟ್ ಜನರಲ್ ಆಗಿದ್ದ ಪ್ರೊಫೆಸರ್ ಅವರು ಆ ಕ್ಷಣದಲ್ಲೇ ರಾಜೀನಾಮೆ ಬಿಸಾಕಿ ಹೈಕೋರ್ಟ್ ನಲ್ಲಿದ್ದ ಅಡ್ವೋಕೇಟ್ ಜನರಲ್ ಕಛೇರಿಯಲ್ಲಿ ಕೋಟು ಬಿಚ್ಚಾಕಿ ನಡೆದೇ ಬಿಟ್ಟರು.

ಕಛೇರಿಯ ಸಿಬ್ಬಂದಿಗೆ ಗರ ಬಡಿದರೆ, ಟಿವಿಗಳಲ್ಲಿ, ಜಾಲತಾಣಗಳಲ್ಲಿ ಈ ರಾಜೀನಾಮೆಯೇ ಬ್ರೇಕಿಂಗ್ ನ್ಯೂಸ್ ಆಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ಗೆಳೆಯರಾದ ಪ್ರೊಫೆಸರ್ ಅಡ್ವೋಕೇಟ್ ಜನರಲ್ ಗೆ ರಾಜೀನಾಮೆ ಹಿಂಪಡೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವೊಲಿಸುತ್ತಿದ್ದಾರಂತೆ ಎಂಬೆಲ್ಲಾ ಸುದ್ದಿ ಎರಡು-ಮೂರು ದಿನ ಟ್ರೋಲ್ ಆಗಿದ್ದೇ ಆಗಿದ್ದು, ಆಗಿದ್ದೇ. ಪ್ರೊಫೆಸರ್ ಮಾತ್ರ ಯಾವುದಕ್ಕೂ ಬಗ್ಗದೆ, ತಮ್ಮ ಪ್ರೀತಿಯ ರಾಮಮನೋಹರ ಲೋಹಿಯಾ ಸಮತಾ ವಿದ್ಯಾಲಯದಲ್ಲಿ ಗಿಡಗಳಿಗೆ ನೀರುಣಿಸುತ್ತಾ, ಆಗಾಗ ಬಂದವರ ಜೊತೆ ಏನ್ರಯ್ಯ ನಿಮಗೆ ಬಂದಿರೋದು ಏನಾದರೂ ಅಚೀವು ಮಾಡ್ರಿ , ಹೋರಾಟಕ್ಕೆ ಇಳಿಯೋಣ, ಬಾವುಟ ಹಿಡಿಯೋಣ, ನಡೆಯಿರಿ ಪಾದಯಾತ್ರೆ ಮಾಡೋಣ, ಬಡವರ, ರೈತರನ್ನು ನರಕಕ್ಕೆ ನೂಕುತ್ತಿರುವ ಸರ್ಕಾರಗಳಿಗೆ ಬಾರಿ ಕೋಲಿನ ಛಡಿ ಏಟು ಕೊಡೋಣ ಅಂತ ಹುರಿದುಂಬಿಸುತ್ತಿದ್ದರು.

ಪ್ರೊಫೆಸರ್ ಅಡ್ವೋಕೇಟ್ ಜನರಲ್ ಗೆ ರಾಜೀನಾಮೆ ನೀಡದರು ಎಂಬುದನ್ನು ಕೇಳಿಯೇ ಅವರ ಆಪ್ತ ಲೋಹಿಯಾವಾದಿಗಳಿಗೆ, ಸಮಾಜವಾದಿಗಳಿಗೆ ಆಕಾಶವೇ ಕಳಚಿ ಬಿದ್ದಂತಾಯಿತು, ಪ್ರೊಫೆಸರ್ ಗೆ ಸಿಕ್ಕಿದ ಹುದ್ದೆಯನ್ನು ಅನುಭವಿಸುವುದು ಬಿಟ್ಟು ಬಂದಿದ್ದಾರೆ ಅವರಿಗೆ ಹುಚ್ಚು ಹಿಡಿದಿದೆ ಎಂದೆಲ್ಲಾ ವಿಶ್ಲೇಷಿಸಿದರು, ಅವರ ಬಳಿಗೆ ಹೋಗಿ ರಾಜೀನಾಮೆ ಹಿಂಪಡೆಯಿರಿ ಎಂದು ದೈನೇಶಿಯಿಂದ ಬೇಡಿದರು, ಪ್ರೊಫೆಸರ್ ಒಂದೇ ಮಾತಿನಲ್ಲಿ ಆ ಗುಲಾಮಗಿರಿ ಅಡ್ವೋಕೇಟ್ ಜನರಲ್ ಹುದ್ದೆ ಯಾವನಿಗೆ ಬೇಕ್ರೀ, ಸರ್ಕಾರ, ಮುಖ್ಯಮಂತ್ರಿ, ಯಾವಾನೋ ಮಂತ್ರಿ ಹೇಳಿದ್ದನ್ನು ಮಾಡೋದಕ್ಕೆ ನಾನೇನು ಸರ್ವೆಂಟೇನ್ರೀ ಅವರಿಗೆ ಅಡ್ವೋಕೇಟ್ ಜನರಲ್ ಹುದ್ದೆಯ ಅರ್ಥ, ಘನತೆಯೇ ಗೊತ್ತಿಲ್ಲ, ಯಾವಾಗಲೂ ಅವರನ್ನು ಖುಷಿ ಪಡಿಸುವಂತಹ ವಾದ, ತೀರ್ಮಾನಕ್ಕಾಗಿ ನನ್ನಂತಹವನಿಂದ ಅದು ಸಾಧ್ಯವಿಲ್ಲ ಕಣ್ಣ್ರೀ, ಬನ್ನಿ ಸಂವಿಧಾನದಡಿ, ಪ್ರಜಾಸತ್ತಾನ್ಮಕವಾಗಿ ಹೋರಾಟ ಮಾಡಿ ಇವರಿಗೆಲ್ಲಾ ಬುದ್ದಿ ಕಲಿಸೋಣ ಎಂದು ಬಿಟ್ಟರು, ಇವರನ್ನು ಹೊತ್ತು ತಿರುಗುತ್ತಿದ್ದ ಸಮಾಜವಾದಿಗಳಿಗೆ, ಲೋಹಿಯಾವಾದಿಗಳಿಗೆ ಕಪಾಳಕ್ಕೆ ಹೊಡೆದಂತಾಯಿತು.

ಅಡ್ವೋಕೇಟ್ ಜನರಲ್ ಹುದ್ದೆಗೆ ನಿಮ್ಮ ಸಮಾಜವಾದಿ ಗುರುಗಳು, ನಿಮ್ಮ ಹಿರಿಯ ಗೆಳೆಯರಾದ ಪ್ರೊಫೆಸರ್ ರಾಜೀನಾಮೆ ನೀಡಿದ್ದಾರೆಂದು ನಮ್ಮ ಬೆಂಗಳೂರು ವರದಿಗಾರರು ಪೋನ್ ಮಾಡಿದಾಗ ಸ್ವಲ್ಪ ಏನು ಮಾತನಾಡಲು ಆಗಲಿಲ್ಲ, ನಾನು ಇತತರರಂತೆ ಅವರಿಗೆಲ್ಲೋ ಹುಚ್ಚು ಇರಬೇಕು ಅನ್ನದೆ ನಮ್ಮ ವರದಿಗಾರರಿಗೆ ಯಾಕೆ ರಾಜೀನಾಮೆ ಕೊಟ್ರು, ಅಂತಹ ಪ್ರಬಲವಾದ ಕಾರಣವೇನು ಎಂಬುದನ್ನು ಮೊದಲು ಹುಡಕಿ ಸುದ್ದಿ ಮಾಡಿ ಅದನ್ನು ಬಿಟ್ಟು ರಾಜೀನಾಮೆ ಕೊಟ್ಟಿರುವುದನ್ನು ದೊಡ್ಡದು ಮಾಡಬೇಡಿ ಅದರ ಹಿಂದಿನ ಕಾರಣವನ್ನು ಇಟ್ಟುಕೊಂಡು ಬೇರೆ ಕೋನದಲ್ಲಿ ಸುದ್ದಿ ಮಾಡಿ ಕಳಿಸಿ ಎಂದೆ, ಆಗ ಅವರಿಗೆ ಜ್ಞಾನೋದಯವಾದಂತೆ ಸಾರ್ ನಮಗೆ ಇದು ಹೊಳೆಯಲೇ ಇಲ್ಲ ಅಂದಾಗ ಗೊತ್ತಾಗಿದ್ದರೆ ಬೆಂಗಳೂರಿನಲ್ಲಿದ್ದು ಇನ್ನೂ ಯಾಕೆ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆಯುತ್ತಿದ್ರಿ ಅಂದೆ.

ಆ ನಂತರ ನಮ್ಮ ವರದಿಗಾರರು ಕಾನೂನು ಸಚಿವರು ಅಡ್ವಕೇಟ್ ಜನರಲ್ ಆಗಿದ್ದ ಪ್ರೊ.ರವಿವರ್ಮಕುಮಾರ್ ಅವರನ್ನು ಕೇಳದೆ ಆ ಇಲಾಖೆಗೆ ಒಬ್ಬ ವಕೀಲರನ್ನು ನೀಮಿಸಿರುವುದನ್ನು ವಿವರವಾಗಿ ಬರೆದರು, ಪಾಪ ಪ್ರೊಫೆಸರ್ ಆಪ್ತ, ಲೋಹಿವಾದಿಗಳು, ಸಮಾಜವಾದಿಗಳು ಒಂದರೆಡು ದಿನ ಸಂಜೆಯ ಪಾನಗೋಷ್ಠಿಗಳಲ್ಲಿ ಮೊಸಳೆಯ ಕಣ್ಣೀರು ಸುರಿಸಿ ಅವರವರನ್ನೇ ಸಮಾದಾನ ಮಾಡಿಕೊಂಡು ಸಿಕ್ಕ ಹುದ್ದೆ ಬಿಡುವುದುಂಟೇ ನಮ್ಮಂತಹವರಿಗೆ ಸಿಕ್ಕಿದ್ದರೇ ಅಂತ ತಮ್ಮ ಮಂಡಿಗೆಯನ್ನು ತಾವೆ ಕಚ್ಚಿಕೊಂಡರು.

ಮೊನ್ನೆ ನಮ್ಮ ಹಿರಿಯ ಗೆಳೆಯರೊಬ್ಬರು ಪೋನ್ ಮಾಡಿ ಅದೇನು ಕಛೇರಿಯಲ್ಲಿ ಕಿತ್ತು ಗುಡ್ಡೆ ಹಾಕುತ್ತಿದ್ದೀಯ ಪ್ರೊಫೆಸರ್ ಭದ್ರ ಮೇಲ್ದಂಡೆ ನೀರಿಗಾಗಿ ಶಿರಾ ತಾಲ್ಲೂಕಿನ ಬುಕ್ಕಾಪಟ್ಟಣದಲ್ಲಿ ಸಭೆ ಮಾಡುತ್ತಿದ್ದಾರೆ ಬಾ ಮಾರಯ್ಯ ಅಂದ್ರು, ಅಯ್ಯೋ ಪ್ರೊಫೆಸರ್ ಗೆ ಕೆಲಸವಿಲ್ಲ ಮಾಡ್ತಾರೆ ಬಿಡಿ ಅಂದೆ, ಏ ಈ ಚೇಷ್ಠೇ ಎಲ್ಲಾ ಬಿಟ್ಟು ಬರುತ್ತೀಯೋ ಇಲ್ಲವೋ ಅಂತ ಸ್ವಲ್ಪ ಜೋರಾಗಿ ಕಡಕ್ಕಾಗಿ ನನ್ನ ಧೋರಣೆಯನ್ನು ಖಂಡಿಸಿದರು, ಆಯಿತು ಬಿಡ್ರೀ ಅದ್ಯಾಕೆ ಎಡೆಮಟ್ಟೆ ತಗೊಂಡು ಹೊಡುಬೇಡಿ ಎಂದೆ.

ಆ ಸಭೆಗೆ ಹೋದಾಗ ನೂರಕ್ಕೂ ಹೆಚ್ಚು ರೈತರು ಭದ್ರಮೇಲ್ದಂಡೆ ಯೋಜನೆ 25 ವರ್ಷಗಳಿಂದ ಆಮೆ ಗತಿಯಲ್ಲಿ ಸಾಗುತ್ತಿರುವುದನ್ನು ರೈತರು ಆ ಯೋಜನೆಗೆ ತೊಡಕಾಗಿರುವ ತಾಂತ್ರಿಕ ತೊಂದರೆಗಳು, ಅದಕ್ಕೆ ಈಗಿನ ವೆಚ್ಚವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.

ಕೊನೆಯಲ್ಲಿ ಮಾತನಾಡಿದ ಈ ರೈತರ ಸಭೆಯ ನೇತೃತ್ವ ವಹಿಸಿದ್ದ ನನ್ನ ನೆಚ್ಚಿನ ಹೋರಾಟದ ಹಿರಿಯ ಗೆಳೆಯರು ನಮ್ಮನ್ನು 90ರ ದಶಕದಲ್ಲಿ ಕುಲುಮೆಯಲ್ಲಿ ಚೆನ್ನಾಗಿ, ಹದವಾಗಿ ಕಾಯಿಸಿ ತಟ್ಟಿ ಚೂಪು ಮಾಡಲು ಇಂದಿಗೂ ನಮಗೆ ಸುತ್ತಿಗೆ ತಗೊಂಡು ತಟ್ಟುತ್ತಿರುವ ಪ್ರೊ.ರವಿವರ್ಮಕುಮಾರ್ ಅವರು 76ವರ್ಷದಲ್ಲೂ ಹರೆಯದ ಹೋರಾಟದ ಹುಡುಗನಂತೆ ತಮ್ಮ ಕೊರಳಿಗೆ ಹಸಿರು ಶಾಲು ಹಾಕಿಕೊಂಡಿದ್ದನ್ನು ಸರಿ ಮಾಡಿಕೊಂಡು ಮಾತನಾಡಲು ಎದ್ದು ನಿಂತರು.

ಎದ್ದು ನಿಂತು ಮೊದಲಿಗೆ “ತಾಯಿ ಎದೆ ಹಾಲು ನಂಜಾಗಿದೆ” ಅಂತಹ ನೀರನ್ನು ಕುಡಿಯುತ್ತಿದ್ದಾರೆ, ನಾವು ಕುಡಿಯಲು ನೀರು ಕೊಡಿ ಎಂದು ಕೇಳುತ್ತಿದ್ದೇವೆ, ನಮ್ಮ ನೀರು ಪಡೆಯಲು ಯಾವ ದೊಣೆ ನಾಯಕನ ಅಪ್ಪಣೆಯೂ ಬೇಕಾಗಿಲ್ಲ, ಮೊದಲು ಹೋರಾಟಕ್ಕೆ ಧುಮುಕೋಣ, ಪ್ರತಿಮನೆಯಿಂದಲೂ ಒಬ್ಬೊಬ್ಬರು ಬರುವುದರ ಜೊತೆಗೆ ಮಹಿಳೆಯರನ್ನೂ ಕರೆ ತರಲೇ ಬೇಕು, ನಾವು ಏನೇ ಹೋರಾಟ ಮಾಡಿದರೂ ಮಹಿಳೆಯರು ಇರಲೇಬೇಕು, ಅವರಿಲ್ಲದಿದ್ದರೆ ಹೋರಾಟಕ್ಕೆ ಅರ್ಥವೂ ಇಲ್ಲ, ಹೋರಾಟಕ್ಕೆ ಕೆಚ್ಚು, ಸೆಡವು ಬರುವುದಿಲ್ಲ, ನೀರಿಗಾಗಿ ಆ ತಾಯಂದಿರು ಬೀದಿಗೆ ಬರಲೇ ಬೇಕು, ಆ ಮಹಿಳೆಯರ ಶಕ್ತಿ ಈ ಹೋರಾಟಕ್ಕೆ ಸಿಗದಿದ್ದರೆ ನಾವು ಎಷ್ಟೇ ಹೋರಾಟ ಮಾಡಿದರೂ ಅದಕ್ಕೆ ತಾರ್ಕಿಕ ಅಂತ್ಯ ಸಿಗದು ಎಂದರು.

ಆದ್ದರಿಂದ ಎಲ್ಲಾ ರೈತರು ತಮ್ಮ ಮನೆಯ ಮಹಿಳೆಯರನ್ನು ಹೋರಾಟಕ್ಕೆ ತರಬೇಕು, ಹಾಗೆಯೇ ಈ ಹೋರಾಟದಲ್ಲಿ ಬರೀ ರೈತರಲ್ಲದೆ ಹಿಂದುಳಿದವರು, ದಲಿತರು, ಯುವಕರು, ಇರಲೇಬೇಕೆಂದು ಗುಡುಗಿದರು. ನಾನು ಈ ಎಪ್ಪತ್ತಾರರ ವಯಸ್ಸಿನಲ್ಲಿ ಹೋರಾಟದ ಕೆಚ್ಚು ಸ್ವಲ್ಪವೂ ಕಡಿಮೆಯಾಗಿಲ್ಲವಲ್ಲ ಎಂದು ಬೆಪ್ಪಾಗಿ ನಿಂತುಬಿಟ್ಟೆ.

ಅಂದು ರಾತ್ರಿ 8ಗಂಟೆಗೆ ಮತ್ತೊಮ್ಮೆ ಪ್ರೊ.ರವಿವರ್ಮಕುಮಾರ್ ಅವರನ್ನು ಮಾತನಾಡಿಸಿಕೊಂಡೇ ಹೋಗೋಣ ಅಂತ ಹಿರಿಯ ಗೆಳೆಯರು ಅವರ ತೋಟದ ಮನೆಗೆ ಜಿಟಿಜಿಟಿ ಮಳೆಯಲ್ಲಿ ಅವರು ಮಲಗಿದ್ದ ಸ್ಥಳಕ್ಕೆ ಹೋದಾಗ ನಾನು ಭೂಮಿಗೆ ಇಳಿದು, ದಂಗಾಗಿ ಹೋದೆ.

ಸರ್ವೋಚ್ಚ ನ್ಯಾಯಾಲಯ, ಹೈಕೋರ್ಟ್ ನಲ್ಲಿ ತಮ್ಮ ವಕೀಲ ಗಿರಿಯ ಗೌನ್ ಹಾಕಿ ಅಬ್ಬರಿಸುವ ಪ್ರೊಫೆಸರ್ ಇವರೇನಾ ಅನ್ನಿಸಿತು, ಗುಡಿಸಲೊಂದರಲ್ಲಿ ಒಂದು ಹಗ್ಗದ ಮಂಚದ ಮೇಲೆ ಒಂದು ಸಾಮಾನ್ಯ ರಗ್ಗು ಹೊದ್ದುಕೊಂಡು ಮುದುಡಿ ಮಲಗಿಕೊಂಡಿದ್ದರು, ನಾವು ಬಂದಿದ್ದೇವೆಂದು ಅವರ ಕಾರು ಚಾಲಕ ಮೆಲ್ಲಗೆ ಉಸಿರಿದಾಗ ಹೌದಾ ಅಂತ ದಢಾರನೇ ಪ್ರೀತಿಯ ನಗುವಿನೊಂದಿಗೆ ಎದ್ದು ಬಂದೇ ಬಿಟ್ಟರು, ಬಂದಿದ್ದು ಒಳ್ಳೆಯದಾಯಿತು ಅಂತ ಒಂದಷ್ಟು ಟೀ, ಕಾರ, ಕುರುಕಲು ತಿಂಡಿಯೊಂದಿಗೆ ಗಹನವಾದ ಚರ್ಚೆ ನಡೆಯುತ್ತಿರುವಾಗ ತುರ್ತುಪರಿಸ್ಥಿತಿಯಲ್ಲಿ ಯಂಗ್, ಚಿಗುರುಮೀಸೆ, ತೆಳು ಮೈ ಕಟ್ಟಿನ ತುಂಬಾ ಸುಂದರವಾಗಿದ್ದ ಸಬ್ ಇನ್ಸ್ ಫೆಕಟರ್ ಶಕೀಲ್ ಅಹ್ಮದ್ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಡಗಿದ್ದ ನನ್ನ ಮತ್ತು ನಂಜುಂಡಸ್ವಾಮಿಯನ್ನು ಹಿಡಿದು ತಂದು ಸಂವಿಧಾನದಡಿ ಕಾನೂನು ಪಾಠ ಹೇಳುವ ನೀವು ದೇಶದ್ರೋಹ ಕೆಲಸ ಮಾಡ್ತೀರ ಅಂತ ಚೆನ್ನಾಗಿ ಚೆಚ್ಚಿ ಹಣ್ಣುಗಾಯಿ-ನೀರುಗಾಯಿ ಮಾಡಿ ಹಾಕಿದ್ದರು ಎಂದು ಪಕಾರನೇ ನಕ್ಕರು.

ಶಿರಾ ತಾಲ್ಲೂಕಿಗೆ ಕುಡಿಯುವ ನೀರು ಈಗ ಬಹಳ ಅಗತ್ಯವಿದೆ, ಈ ಹಿನ್ನೆಲಯಲ್ಲಿ ಒಂದು ದೊಡ್ಡ ಹೋರಾಟ ನಡೆಯಲೇ ಬೇಕು, ಯಾವ ರಾಜಕಾರಣಿಯ ಮುಲಾಜು ಬ್ಯಾಡ ಅದೇನು ಅಗುತ್ತೋ ಆಗಲಿ, ಸಧ್ಯದಲ್ಲೇ ಶಿರಾದ ಗುಮ್ಮನಹಳ್ಳಿಯ ರಾಮಮನೋಹರ ಲೋಹಿಯಾ ಸಮತಾ ವಿದ್ಯಾಲಯದಲ್ಲಿ ರೈತರ ಪೂರ್ವಭಾವಿ ಸಭೆ ಕರೆಯಲಾಗುವುದು ಎಂದು ವಿವರಿಸಿದರು.

ಹೊತ್ತು ಮೀರುತ್ತಿರುವುದರಿಂದ ನಾವು ಅಲ್ಲಿದಂದ ಹೊರೆಟೆವು, ಕೆಲವರು ಮಾತನಾಡುತ್ತಾ ಅಯ್ಯೋ ಪ್ರೊಫೆಸರ್ ಹೈ-ಫೈ ಅವರು ರೈತರ ಯಾವ ಕೇಸನ್ನು ನಡೆಸಿಲ್ಲವಂತೆ, ಕೇಸು ಕೊಡಲು ಹೋದರೆ ವಿಫರೀತ ಹೆಚ್ಚಿಗೆ ಫೀ ಅಂತೆ ಎಂಬುದೆಲ್ಲಾ ನನ್ನ ಮನಸ್ಸಿಗೆ ತುಂಬಿದ್ದನ್ನು ಜರ್ರನೇ ಇಳಿಸಿಕೊಂಡು ಬಿಟ್ಟೆ.

ಪ್ರೊ.ರವಿವರ್ಮಕುಮಾರ್ ಅವರು ಮೂಲತಃ ದಲಿತ ಮತ್ತು ರೈತ ಚಳುವಳಿಯ ಹಿನ್ನೆಲೆಯಲ್ಲಿ ಬಂದಂತಹವರು ಅಂದಿನಿಂದಲೂ ಆ ಚಳುವಳಿಗಳಲ್ಲಿ ಭಾಗವಹಿಸುತ್ತಾ, ಚಳುವಳಿಗಳನ್ನು ರೂಪಿಸುತ್ತಾ ಪ್ರೊ.ನಂಜುಂಡಸ್ವಾಮಿ, ಸಿದ್ದರಾಮಯ್ಯ, ರಾಮದಾಸ್, ಪೂರ್ಣಚಂದ್ರ ತೇಜಸ್ವಿ ಅವರ ಸಮಾಜವಾದ ಮತ್ತು ಪ್ರಗತಿಪರ ಚಿಂತನೆಗಳನ್ನು ಅಳವಡಿಸಿಕೊಂಡು ಜಾತಿ ನಿರ್ಮೂಲನೆ ಮಾಡಬೇಕೆಂದು ಮೊದಲಿಗೆ ಅವರೇ ಅಂತರ್ಜಾತಿ ವಿವಾಹವಾಗಿ, ಇಲ್ಲಿಯತನಕ ನೂರಾರು ಅಂತರ್ಜಾತಿ ವಿವಾಹಗಳನ್ನು ಮಾಡಿಸಿದ್ದಾರೆ, ಮಾಡಿಸುತ್ತಲೇ ಇದ್ದಾರೆ.

80-90ರ ದಶಕದಲ್ಲಿ ರಾಜ್ಯದ ತುಂಬೆಲ್ಲಾ ಟೊಂಕಕಟ್ಟಿ ಸಮಾಜವಾದಿ ಗೆಳೆಯರೊಂದಿಗೆ ತಮ್ಮ ಬಿಹಾರದ ಗೆಳೆಯರಾದ ಕಿಷನ್ ಪಟ್ನಾಯಕ್ ಅವರನ್ನು ಕರೆ ತಂದು ತಮ್ಮ ಕಿರಿಯ ಗೆಳೆಯರನ್ನು ಗುಡ್ಡೆ ಹಾಕಿ ವಿಚಾರ ಸಂಕೀರ್ಣ, ಕಮ್ಮಟಗಳ ಮೂಲಕ ಸಮಾಜವಾದಿಗಳು, ಲೋಹಿಹಿಯಾವಾದಿಗಳನ್ನಾಗಿ ಮಾಡಿದ್ದಲ್ಲದೆ, ದೇಶದ ಜ್ವಲಂತ ಸಮಸ್ಯೆಗಳು ಎದುರಾದಾಗ ಚಿಂತಕರು, ಪ್ರಗತಿಪರರು ಯಾರಿಗೂ ಡೊಗ್ಗು ಸಲಾಮು ಹೊಡೆಯದೆ, ಅಧಿಕಾರದ ಲಾಲಸೆಗಳಿಗೆ ಆಸೆಪಡದೆ ಎದೆಯುಬ್ಬಿಸಿ ಬೀದಿಯಲ್ಲಿ ಬಾವುಟ ಹಿಡಿದು ಹೋರಾಡುವ ಅಧಮ್ಯ ಚೈತನ್ಯ, ಧೈರ್ಯ ಮತ್ತು ಬೌದ್ಧಿಕ ಪ್ರಜ್ಞೆಯನ್ನು ನೀಡಿ ಇವರು ಮತ್ತು ಬುದ್ಧ ಗುರುಗಳಾದ ಕೆ.ಎಂ.ಶಂಕರಪ್ಪ ಅವರು ಬುದ್ಧ ತೋರಿದ ದಾರಿಯಲ್ಲಿ, ಗಾಂಧಿಯ ಹಾದಿಯಲ್ಲಿ ನಡೆದಾಗ ಯಾರು ನಮ್ಮನ್ನು ತಡೆಯಲು ಸಾಧ್ಯವಿಲ್ಲವೆಂದು ಸಾಣೆ ಹಿಡಿದು ಜ್ಞಾನದ ಹಲಗೆ ಬೆನ್ನಿಗೆ ಕಟ್ಟಿದವರು.
ಇಂದು ಕೆಲ ಪ್ರಗತಿಪರರು ಸರ್ಕಾರಗಳು ಮಾಡುತ್ತಿರುವ ಜನ ವಿರೋಧಿ, ಪ್ರಜಾಪ್ರಭುತ್ವ ಧೋರಣೆರಗಳನ್ನು ಖಂಡಿಸಲು, ಮತ್ತೆ ಚಳುವಳಿಗೆ ಧುಮುಕಲು, ಹೋರಾಟಕ್ಕಿಳಿಯಲು 90-80ರ ದಶಕದಲ್ಲಿ ಇವರು ಬಿತ್ತಿದ ಹೋರಾಟ ಮತ್ತು ಪ್ರಗತಿಪರ ಚಿಂತನೆಗಳೆ ಕಾರಣವೆ ಹೊರತು ಮತ್ಯಾವುದೂ ಅಲ್ಲ.

ಇಂತಹ ಪ್ರೊಫೆಸರ್ ಅವರೇ ಬೆಳಸಿದ ಶಿಷ್ಯರು, ಅವರ ಅನುಯಾಯಿಗಳು ಅಧಿಕಾರ, ರಾಜಕಾರಣ, ಹಂತಸ್ತು, ದವಲತ್ತು, ಮದಮತ್ಸರ, ಎಲ್ಲಾ ನಮ್ಮಿಂದಲೇ ಎಂದು ಅವರನ್ನೇ ಅವರು ನಾಯಕರೆಂದುಕೊಂಡು ಮೊಂಡು ಕತ್ತಿಯಾಗಿರುವವರನ್ನೂ ದೂಷಿಸದೆ, ಖಂಡಿಸದೇ ಅವರೆಲ್ಲಾ ನನ್ನ ಹೂ.ಗಳೆ, ಗುಲಾಬಿಯ ಕೆಳಗೆ ಮುಳ್ಳಿದೆ ಎಂದು ತಿಳಿದೇ ಅವರನ್ನು ಇಂದಿಗೂ ತಬ್ಬಿಕೊಂಡು ಮತ್ತೆ ಅವರನ್ನು ಸರಿ ದಾರಿಗೆ ತರಲು ಈ ವಯಸ್ಸಿನಲ್ಲಿ ಹೋರಾಟ, ಚಳುವಳಿಗೆ ಪ್ರೊ.ರವಿವರ್ಮಕುಮಾರ್ ಇಳಿದಿರುವುದು ನನ್ನಂತಹ ಪತ್ರಕರ್ತನಿಗೆ ಬರಹಗಾರನಿಗೆ ಅವರ ಹೋರಾಟಕ್ಕೆ ಹಲಗೆಯಾಗಿ, ಕತ್ತಿಯಾಗಿ ನಿಲ್ಲಬೇಕೆಂಬ ಒತ್ತಾಸೆ, ಮನದಾಸೆ ಮೂಡಿದೆ.

ಯಾರು ಬರುತ್ತಾರೋ, ಬಿಡುತ್ತಾರೋ ಅದನ್ನು ಹಿಂತಿರುಗಿ ನೋಡದೆ ಗಾಂಧಿಯಂತೆ ಈಗಲಾದರೂ ಸೋತ ಕಣ್ಣುಗಳಲ್ಲಿ ಮಿಂಚೊಂದನ್ನು ಕಾಣಲು ಕಾತರಿಸುತ್ತಿರುವ ಸಮಾಜವಾದಿ, ಲೋಹಿಯವಾದಿಗಳಿಗೆ ಇದರಿಂದ ಹೊಸ ಬೆಳಕಿನ ಕಿರಣ ಸಿಗಲಿ, ಇಷ್ಟು ದಿನ ಯಾರಿಗೋ ತಲೆ ಮೇಲೆ ಹೊತ್ತು ತಿರುಗಿದ್ದಕ್ಕಿಂತ ಈಗ ನಾವು, ನಮ್ಮನ್ನೇ ತಲೆ ಮೇಲೆ ಹೊತ್ತುಕೊಂಡು ಪಕ್ವವಾಗಿರುವ ಕಾಲದಲ್ಲಿ ಪ್ರಬಲವಾದ ಹೋರಾಟದ ಮೂಲಕ, ರಾಜಕೀಯಶಕ್ತಿ, ಸಮಾಜದಲ್ಲಿ ಇನ್ನೂ ಸಾಮಾಜಿಕ ಸಮಾನತೆ ಸಿಗದವರಿಗೆ ಸಾಮಾಜಿಕ ಸಮಾನತೆಯನ್ನು ಈಗಲಾದರೂ ನಮ್ಮ ಕಣ್ಣುಗಳಲ್ಲಿ ಬೆಳೆದಿರುವ ಪೊರೆಯನ್ನು ತೆಗೆದು ಹಾಕಿ ಪ್ರೊ.ರವಿವರ್ಮಕುಮಾರ್ ಅವರ ಹೋರಾಟಕ್ಕೆ ನಮ್ಮ ರಕ್ತ, ಮಾಂಸ, ಶಕ್ತಿಯನ್ನು ಸ್ವಲ್ಪವೂ ಅಳುಕದೆ, ಅಂಜದೆ, ನಮ್ಮ ಘನತೆ, ಗೌರವ, ಆಸ್ತಿ, ಹಂತಸ್ತು, ಸೋಕಾಲ್ಡ್ ತನವನ್ನು ಬಿಟ್ಟು ನಮ್ಮನ್ನು ನಾವು ವೈಟ್ ಕಾಲರ್ ತರಹ ನೀವಿಕೊಳ್ಳುವುದನ್ನು ಬಿಟ್ಟು ಹೋರಾಟಕ್ಕೆ ಬಾರದಿದ್ದರೆ ಪ್ರೊಫಿಸರ್ ಈ ವಯಸ್ಸಿನ ಹೋರಾಟಕ್ಕೆ ನ್ಯಾಯ ಸಿಗದಿದ್ದರೆ ವಿಧಾನಸೌಧ-ಹೈಕೋರ್ಟ್ ನಡುವೆ ಇರುವ ರಸ್ತೆಯಲ್ಲಿ ಸೋತು ನೇಣುಗಂಬಕ್ಕೇರಿರುವ ಚಳುವಳು-ಹೋರಾಟದ ಬಾವುಟಕ್ಕೆ ಶ್ರದ್ಧಾಂಜಲಿ ಅರ್ಪಿಸುವುದು ಒಳಿತು. ಇದರಿಂದ ಇಷ್ಟೇ ಎಂದು ಕೂಗಿ ನಮ್ಮನ್ನು ಎಂಬತ್ತರ ದಶಕದಿಂದ ಹೀಗೆಳೆಯುತ್ತಿರುವವರ ಬಾಯಿಗೆ ತುತ್ತಾಗುತ್ತೇವೆ.

ಈಗಲಾದರೂ ನಿಮ್ಮ ಎದೆಯಾಳದಲ್ಲಿ, ಕಣ್ಣುಗಳಲ್ಲಿ ಈ ದೇಶವು ಹಳಿ ತಪ್ಪುತ್ತಿರುವ ಕಾಲದಲ್ಲಿ ಯಾರು ಏನಾದರೂ ಮಾಡಿಕೊಳ್ಳಲ್ಲಿ ಎಂದು ಅರೆಗಣ್ಣು ಮುಚ್ಚಿಕೊಂಡು ಒಗರಿನ ವಿಸ್ಕಿಯನ್ನು ಗುಟುಕರಿಸುತ್ತಾ ರೌಂಡ್ ಟೇಬಲ್ ಕಾನ್ಫರೆನ್ಸಿನಿಂದ ಏನು ಪ್ರಯೋಜನವಿಲ್ಲ, ನಾವಿರುವುದೇ ಹೀಗೆ ಅಂದುಕೊಂಡರೆ ನಿಮ್ಮೆಲ್ಲಾ ತತ್ವ-ಸಿದ್ಧಾಂತಗಳನ್ನು ಯಾವುದಾದರೂ ಹುಣಸೆ ಮರಕ್ಕೆ ನೇತಾಕಿ ಈ ಸಮಾಜವಾದಿಗಳು, ಲೋಹಿಯಾವಾದಿಗಳು, ಪ್ರಕಾರ ಪ್ರಗತಿಪರರು ಮೆಣಸಿನಗಿಡಕ್ಕೆ ನೇಣು ಬಿಗಿದುಕೊಳ್ಳುವುದು ಒಳ್ಳೆಯದು.

ತಾವೇ ಬೆಳಸಿದ ಈ ಸೋಕಾಲ್ಡ್ ಸಮಾಜವಾದಿಗಳು, ಲೋಹಿಯಾವಾದಿಗಳು, ಪ್ರಗತಿಪರರು ಬದುಕಿರುವಾಗಲೇ ತಮ್ಮನ್ನು ತಾವು “ಸಮಾದಿ” ಮಾಡಿಕೊಂಡಿದ್ದನ್ನು ಕಂಡು ಪ್ರೊ.ರವಿವರ್ಮಕುಮಾರ್ ಏನ್ರಯ್ಯ ನಿಮ್ಮದು, ಏನು ಬಂದಿತ್ರಯ್ಯ ಹಿಂಗೆ ಸಾಯೋಕೆ ಅಂತ ವಿಸ್ಕಿಯ ರಾ ವನ್ನು ಗುಟುಕಿಸಿ ತಮ್ಮ ಬೆಚ್ಚನೆಯ ಗುಡಿಸಲ ಮುರುಕು ಕುರ್ಚಿಯ ಮೇಲೆ ಕುಳಿತು ಪಕಾರನೇ ನಕ್ಕು ಸಮಾದಾನ ಮಾಡುಕೊಳ್ಳುತ್ತಾರೆ.

-ವೆಂಕಟಾಚಲ.ಹೆಚ್.ವಿ.
ಸಂಪಾದಕರು, ಮೈತ್ರಿನ್ಯೂಸ್.
ತುಮಕೂರು.

Leave a Reply

Your email address will not be published. Required fields are marked *