ಎನ್‍ಡಿಎ ಅಭ್ಯರ್ಥಿ ಕೆ.ಎಂ. ಸುರೇಶ್ ಜಯಭೇರಿ: ವಿಜಯೋತ್ಸವ

ತುಮಕೂರು: ಆಗ್ನೇಯ ಪದವೀಧರರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಯಲ್ಲಿ ಎನ್‍ಡಿಎ ಅಭ್ಯರ್ಥಿ ಕೆ.ಎಂ. ಸುರೇಶ್ ಅವರು 23 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಮೈತ್ರಿ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಬುಧವಾರ ನಗರದ ಬಿಜಿಎಸ್ ವೃತ್ತದಲ್ಲಿ ವಿಜಯೋತ್ಸವ ಆಚರಿಸಿ, ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು.

ಈ ವೇಳೆ ಮಾತನಾಡಿದ ಶಾಸಕ ಜಿ.ಬಿ ಜ್ಯೋತಿಗಣೇಶ್, ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯಕ್ಕೆ ಪದವಿಧರ ಮತದಾರರು ಈ ಚುನಾವಣೆ ಫಲಿತಾಂಶದಲ್ಲಿ ಉತ್ತರ ನೀಡಿದ್ದಾರೆ. ಎಲ್ಲಾ ನಾಲ್ಕು ವಿಧಾನ ಪರಿಷತ್ ಚುನಾವಣೆಗಳಲ್ಲಿ ಎನ್‍ಡಿಎ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ. ಈ ಫಲಿತಾಂಶ 28 ವಿಧಾನಸಭಾ ಚುನಾವಣೆಯ ದಿಕ್ಸೂಚಿಯಾಗಲಿದೆ ಎಂದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಉತ್ತಮ ಆಡಳಿತ, ಬಿ.ಎಸ್. ಯಡೀಯೂರಪ್ಪ, ಬಿ.ವೈ. ವಿಜಯೇಂದ್ರ, ಹೆಚ್.ಡಿ. ದೇವೇಗೌಡರು, ಹೆಚ್.ಡಿ. ಕುಮಾರಸ್ವಾಮಿ, ನಿಖಿಲ್‍ಕುಮಾರಸ್ವಾಮಿ ಅವರ ಮಾರ್ಗದರ್ಶನದಂತೆ ಬಿಜೆಪಿ ಹಾಗೂ ಜೆಡಿಎಸ್‍ನ ಮುಖಂಡರು ಕಾರ್ಯಕರ್ತರು ಈ ಚುನಾವಣೆಯಲ್ಲಿ ಒಗ್ಗಟ್ಟಾಗಿ ಶ್ರಮಿಸಿದರು. ಮುಂಬರುವ ಚುನಾವಣೆಗಳಲ್ಲೂ ಎರಡೂ ಪಕ್ಷಗಳು ಇದೇ ರೀತಿ ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ ಮಾತನಾಡಿ, ಎನ್‍ಡಿಎ ಅಭ್ಯರ್ಥಿ ಕೆ.ಎಂ. ಸುರೇಶ್ ಅವರು ದಾಖಲೆಯ ಮತಗಳ ಅಂತರದಿಂದ ಗೆಲುವು ಪಡೆಯಲು ಎರಡೂ ಪಕ್ಷಗಳು ಮುಖಂಡರು, ಕಾರ್ಯಕರ್ತರು ಕಾಳಜಿಯಿಂದ ಕೆಲಸ ಮಾಡಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲೂ ಇದೇ ರೀತಿ ಎರಡು ಪಕ್ಷಗಳು ಒಟ್ಟಾಗಿ ಕೆಲಸ ಮಾಡಿದ ಪರಿಣಾಮ ವಿ. ಸೋಮಣ್ಣ ಅವರು ಜಯಗಳಿಸಿ ಕೇಂದ್ರದ ಮಂತ್ರಿಯೂ ಆಗಿದ್ದಾರೆ. ಮೈತ್ರಿ ಪಕ್ಷಗಳು ಒಂದುಗೂಡಿ ಹೋದರೆ ಎಲ್ಲಾ ಚುನಾವಣೆಗಳನ್ನು ಗೆಲ್ಲಬಹುದು ಎಂಬ ವಿಶ್ವಾಸ ಮೂಡಿದೆ ಎಂದರು.

ಆಗ್ನೇಯ ಪದವಿಧರ ಕ್ಷೇತ್ರದ 35 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸಚಿವರುಗಳಿದ್ದಾರೆ. ಅವರದೇ ಸರ್ಕಾರವಿದೆ. ಬಿಜೆಪಿ, ಜೆಡಿಎಸ್‍ನ ಆರು ಶಾಸಕರಿದ್ದಾರೆ. ಆದರೂ ಪದವಿಧರ ಮತದಾರರು ಯಾವುದೇ ಆಮಿಷಕ್ಕೆ, ಒತ್ತಡಕ್ಕೆ ಬಲಿಯಾಗದೆ ಮೈತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡಿರುವುದು ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಈ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ ಎಂದು ಬೇಸತ್ತಿರುವ ರಾಜ್ಯದ ಜನ ಈ ಸರ್ಕಾರವನ್ನು ಕಿತ್ತೊಗೆಯಲು ಚುನಾವಣೆಯನ್ನು ಕಾಯುತ್ತಿದ್ದಾರೆ ಎಂದು ಹೇಳಿದರು.

ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಟಿ.ಆರ್. ನಾಗರಾಜ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಜನಪರ ಆಡಳಿತ ನೀಡುತ್ತಿಲ್ಲ, ಬರ ಪರಿಸ್ಥಿತಿಯಲ್ಲಿ ರೈತರ ಸಂಕಷ್ಟಗಳಿಗೆ ಸ್ಪಂದಿಸಲಿಲ್ಲ, ಯಾವುದೇ ಅಭಿವೃದ್ಧಿ ಕಾರ್ಯ ಮಾಡದೆ, ಅನಗತ್ಯ ವಿಚಾರಗಳಲ್ಲಿ ಕಾಲಹರಣ ಮಾಡುತ್ತಾ ಕಾಂಗ್ರೆಸ್ ನಾಯಕರು ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಈ ಚುನಾವಣೆಯಲ್ಲಿ ಪ್ರಜ್ಞಾವಂತ ಮತರಾರರು ಸರ್ಕಾರಕ್ಕೆ ತಕ್ಕ ಉತ್ತರ ನೀಡಿದ್ದಾರೆ ಎಂದರು.

ಜೆಡಿಎಸ್ ನಗರ ಅಧ್ಯಕ್ಷ ಟಿ.ಹೆಚ್. ಜಯರಾಮ್ ಮಾತನಾಡಿ, ರಾಜ್ಯದ ನಾಲ್ಕೂ ಕ್ಷೇತ್ರಗಳವಿಧಾನ ಪರಿಷತ್ ಚುನಾವಣೆಯಲ್ಲಿ ಪ್ರಬುದ್ಧ ಮತದಾರರು ಎನ್‍ಡಿಎ ಅಭ್ಯರ್ಥಿಗಳಿಗೆ ಆಶೀರ್ವಾದ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿದೆ. ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯಲು ಎನ್‍ಡಿಎ ಸಮರ್ಥ ಎಂದು ಈ ಚುನಾವಣೆ ಫಲಿತಾಂಶದಲ್ಲಿ ಸಂದೇಶ ನೀಡಿದ್ದಾರೆ ಎಂದು ಹೇಳಿದರು.

ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಬ್ಯಾಟರಂಗೇಗೌಡ, ಜೆಡಿಎಸ್‍ನ ಹಿರಿಯ ಮುಖಂಡ ಟಿ.ಎಲ್. ಕುಂಭಯ್ಯ, ನಗರ ಕಾರ್ಯಾಧ್ಯಕ್ಷ ಮೋಹನ್‍ಕುಮಾರ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಟಿ.ಹೆಚ್. ಹನುಮಂತರಾಜು, ರಾಜಶೇಖರ್, ಉಪಾಧ್ಯಕ್ಷ ಹೆಚ್.ಎಂ. ರವೀಶಯ್ಯ, ಮಹಿಳಾ ಮೋರ್ಚಾ ಜಿಲ್ಲಾಧÀ್ಯಕ್ಷೆ ಚೈತ್ರ ಮಂಜುನಾಥ್, ನಗರ ಅಧ್ಯಕ್ಷ ಧನುಷ್, ಎರಡೂ ಪಕ್ಷಗಳ ಮುಖಂಡರಾದ ಸೋಲಾರ್ ಕೃಷ್ಣಮೂರ್ತಿ, ರುದ್ರೇಶ್, ಶ್ರೀನಿವಾಸ್‍ಪ್ರಸಾದ್, ಟಿ.ಜಿ. ನರಸಿಂಹರಾಜು, ಭೈರಣ್ಣ, ಹೆಚ್.ಎಸ್. ವಿರೂಪಾಕ್ಷಪ್ಪ, ಲಕ್ಷ್ಮಮ್ಮ, ಕೆಂಪರಾಜು, ಭೈರೇಶ್, ವಿಜಯ್‍ಗೌಡ, ಮನೋಹರಗೌಡ, ಪ್ರತಾಪ್, ಗಂಗೇಶ್, ಮೆಡಿಕಲ್ ಮಧು, ವೆಂಕಟೇಶ್, ಟಿ.ಸಿ. ಪ್ರಭಾಕರ್, ಯಶೋಧ, ತಿಪ್ಪೇಸ್ವಾಮಿ, ಗಣೇಶ್ ಸೇರಿದಂತೆ ವಿವಿಧ ಮೋರ್ಚಾ, ಘಟಕಗಳ ಮುಖಂಡರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *