ಹೆಚ್.ಡಿ.ಕೆ.-ಡಿ.ಕೆ.ಶಿ.ಟೀಕೆ, ನಿಂದನೆ ನಿಲ್ಲಿಸಿ ನಾಡಿನ ಅಭಿವೃದ್ಧಿ ಕಡೆಗೆ ಗಮನಹರಿಸಿ- ಕೆ.ಬಿ. ಬೋರೇಗೌಡ

ತುಮಕೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿಯವರು ನಾಡಿನ ಪ್ರತಿಷ್ಠಿತ ನಾಯಕರು. ಇಬ್ಬರೂ ನಾಯಕರಿಗೆ ರಾಜ್ಯಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳು, ಬೆಂಬಲಿಗರಿದ್ದಾರೆ. ಒಕ್ಕಲಿಗ ಸಮುದಾಯದ ಈ ನಾಯಕರಿಬ್ಬರೂ ಪರಸ್ಪರ ಟೀಕೆ ಮಾಡಿಕೊಳ್ಳುವುದನ್ನು ನಿಲ್ಲಿಸಿ ರಾಜ್ಯದ ಅಭಿವೃದ್ಧಿ ಕಡೆ ಗಮನ ಹರಿಸಬೇಕು ಎಂದು ಜಿಲ್ಲಾ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಕೆ.ಬಿ. ಬೋರೇಗೌಡ ಮನವಿ ಮಾಡಿದರು.

ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಮುಖ್ಯಂತ್ರಿ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ನಮ್ಮ ಸಮುದಾಯದವರು ಎಂಬದು ನಮಗೆ ಹೆಮ್ಮೆಯ ವಿಚಾರ. ಆದರೆ, ಈ ನಾಯಕರಿಬ್ಬರು ಇತ್ತೀಚೆಗೆ ಪ್ರತಿನಿತ್ಯ ಪರಸ್ಪರ ಟೀಕೆ, ನಿಂದನೆ ಮಾಡಿಕೊಳ್ಳುತ್ತಿರುವುದು ಒಕ್ಕಲಿಗ ಸಮಾಜಕ್ಕೆ ಹಾಗೂ ಅವರ ಅಭಿಮಾನಿಗಳಿಗೆ ತೀವ್ರ ನೋವು ತಂದಿದೆ. ಅವರ ಪಕ್ಷಗಳ ಕಾರ್ಯಕರ್ತರು, ಒಕ್ಕಲಿಗ ಸಮಾಜ ಬಾಂಧವರು ಮುಜುಗರಪಡುವಂತಾಗಿದೆ ಎಂದು ಹೇಳಿದರು.

ಈ ನಾಯಕರಿಬ್ಬರ ದಿನನಿತ್ಯದ ಜಗಳದಿಂದ ಒಕ್ಕಲಿಗ ಸಮಾಜದಲ್ಲಿ ಒಡಕು ಉಂಟಾಗುವ, ಸಮುದಾಯದಲ್ಲಿ ಗುಂಪುಗಾರಿಗೆ ಶುರುವಾಗಿ ಸಮಾಜದ ಐಕ್ಯತೆಗೆ ಧಕ್ಕೆಯಾಗುವ ಅಪಾಯವೂ ಇದೆ ಎಂಬ ಆತಂಕವೂ ಎದುರಾಗಿದೆ. ಹೆಚ್.ಡಿ. ಕುಮಾರಸ್ವಾಮಿಯವರು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಒಳ್ಳೆಯ ಆಡಳಿತ ನೀಡಿರುತ್ತಾರೆ. ಈಗ ನಮ್ಮದೇ ಸಮುದಾಯದ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಿದೆ. ಅವರ ನೇತೃತ್ವದ ಸರ್ಕಾರ ನೂರುದಿನ ಪೂರೈಸಿದೆ. ಮುಖ್ಯಮಂತ್ರಿಯಾಗಿ ಒಳ್ಳೆಯ ಆಡಳಿತವನ್ನೂ ನೀಡುತ್ತಿದ್ದಾರೆ. ಆದರೆ ಈ ನಾಯಕರಿಬ್ಬರು ಪ್ರತಿದಿನ ಒಬ್ಬರಿಗೊಬ್ಬರು ಟೀಕೆ ಮಾಡಿಕೊಳ್ಳುತ್ತಾ ಪರಸ್ಪರ ತೇಜೋವಧೆ ಮಾಡಿಕೊಳ್ಳುತ್ತಿರುವುದನ್ನು ಒಕ್ಕಲಿಗ ಸಮಾಜ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದನ್ನು ಸಮುದಾಯದ ‘ಸೋದರ ಕಲಹ’ ಎಂದು ಲಘುವಾಗಿ ಪರಿಗಣಿಸುವಂತಿಲ್ಲ. ಈ ನಾಯಕರ ಕಿತ್ತಾಟದಿಂದ ಒಕ್ಕಲಿಗ ಸಮಾಜವೂ ನಿತ್ಯ ಮುಜುಗರ ಅನುಭವಿಸುವಂತಾಗಿದೆ ಎಂಬುದನ್ನು ಇವರು ಅರಿತುಕೊಳ್ಳಲಿ ಎಂದು ಬೋರೇಗೌಡರು ಹೇಳಿದರು.

ಕುಮಾರಸ್ವಾಮಿಯವರಯ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಟೀಕೆ ಮಾಡುವುದನ್ನು ಬಿಟ್ಟು ಅವರು ರಾಜ್ಯದ ಅಭಿವೃದ್ಧಿ ಕೆಲಸ ಮಾಡಲು ಬಿಡಬೇಕು. ಅಭಿವೃದ್ದಿಪರ ಆಡಳಿತ ನಡೆಸಲು ಡಿ.ಕೆ. ಶಿವಕುಮಾರ್ ಅವರಿಗೆ ಸಲಹೆ, ಸಹಕಾರ ನೀಡಲಿ. ಹಾಗೇ, ಕೇಂದ್ರ ಕೈಗಾರಿಕಾ ಸಚಿವರಾಗಿರುವ ಕುಮಾರಸ್ವಾಮಿಯವರು ಕೇಂದ್ರದಿಂದ ಹೆಚ್ಚು ಅನುದಾನ ತಂದು ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಪ್ರಯತ್ನಿಸಲಿ, ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡಿ, ಕನ್ನಡಿಗರಿಗೆ ಉದ್ಯೋಗಾವಕಾಶ ದೊರಕಿಸುವ ನಿಟ್ಟಿನಲ್ಲಿ ಗಮನಹರಿಸಲಿ. ಈ ಇಬ್ಬರೂ ನಾಯಕರು ಅನ್ನ ನೀಡುವ ರೈತ ಸಮುದಾಯದಿಂದ ಬಂದವರು, ಈಗ ರಾಜ್ಯದಲ್ಲಿ ತೀವ್ರ ಬರವಿದ್ದು ರೈತರು ಸಂಕಷ್ಟದಲ್ಲಿದ್ದಾರೆ. ರೈತರ ಸಮಸ್ಯೆ ಪರಿಹಾರ ಕಾರ್ಯಕ್ರಮ ರೂಪಿಸಲು ಈ ನಾಯಕರು ಒಂದಾಗಿ ಗಮನ ಹರಿಸಬೇಕು. ಈ ಮೂಲಕ ತಾವು ಕೃಷಿಕ ಒಕ್ಕಲಿಗ ಸಮುದಾಯದ ನಾಯಕರು ಎಂಬುದನ್ನು ಸಾಬೀತುಪಡಿಸಲಿ ಎಂದರು.

ಜನರ ಪರವಾಗಿ, ರಾಜ್ಯದ ಅಭಿವೃದ್ಧಿಗಾಗಿ ಕೆಲಸ ಮಾಡಿ ಯಾರು ಜನರ ವಿಶ್ವಾಸ ಗಳಿಸುತ್ತಾರೋ ಅವರು ಅವರಿಗೆ ಜನ ಆಶೀರ್ವಾದ ಮಾಡಬಹುದು. ಇನ್ನಾದರೂ ಡಿ.ಕೆ. ಶಿವಕುಮಾರ್ ಹಾಗೂ ಹೆಚ್.ಡಿ. ಕುಮಾರಸ್ವಾಮಿಯವರು ಪರಸ್ಪರ ಟೀಕೆ, ಆರೋಪ ಮಾಡುವುದನ್ನು ನಿಲ್ಲಿಸಲಿ. ನಮ್ಮ ಸಮಾಜದ ಗುರುಗಳು ಈ ನಾಯಕರ ಮಧ್ಯೆ ಪ್ರವೇಶಿಸಿ, ಇವರ ಮನಸ್ತಾಪ ನಿವಾರಣೆ ಮಾಡಲು ಸಲಹೆ ನೀಡಬೇಕು ಎಂದು ತುಮಕೂರು ಜಿಲ್ಲಾ ಒಕ್ಕಲಿಗರ ಸಂಘದ ಪರವಾಗಿ ಬೋರೇಗೌಡರು ಮನವಿ ಮಾಡಿದರು.

ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕರಾದ ಸಿದ್ಧಲಿಂಗೇಗೌಡ, ಕೇಶವಮೂರ್ತಿ, ಬಿ.ಸಿ. ರಂಗಪ್ಪ, ನಂಜಪ್ಪ ಹಾಜರಿದ್ದರು.

Leave a Reply

Your email address will not be published. Required fields are marked *