2,000 ವರ್ಷಗಳ ಇತಿಹಾಸ, ಸಂಸ್ಕೃತಿ ದಾಖಲಿಸಿದ ಕನ್ನಡದ ಶಕ್ತಿ ಅಪಾರ: ಪ್ರೊ. ಎಂ. ಕೃಷ್ಣೇಗೌಡ

ತುಮಕೂರು: ಭಾಷೆ ಎನ್ನುವುದು ಕೇವಲ ಸಂವಹನದ ಸಾಧನವಲ್ಲ. ಸಂಗೀತ, ಭಾವನೆ, ಸಂಭಾಷಣೆ, ಕೋಪ, ಕಾಮ, ಮದ ಸೇರಿದಂತೆ ಮನುಷ್ಯನ ವಿವಿಧ ಭಾವನೆಗಳನ್ನು ಪದಗಳಲ್ಲಿ ಪ್ರೋಣಿಸಿ ಅಭಿವ್ಯಕ್ತಿಸುವ ಅದ್ಭುತ ಮಾಧ್ಯಮ. ಸಪ್ತಸ್ವರಗಳನ್ನು ತುಂಬಿಕೊಂಡು ಅಭಿನಯಿಸುವ, ಬಿರುಗಾಳಿಯ ಅಬ್ಬರವನ್ನೂ ಶಬ್ದಸಹಿತವಾಗಿ ಕಟ್ಟಿಕೊಡುವ ಶಕ್ತಿ ಕನ್ನಡ ಭಾಷೆಗಿದೆ ಎಂದು ಖ್ಯಾತ ವಾಗ್ಮಿ ಪ್ರೊ.ಎಂ. ಕೃಷ್ಣೇಗೌಡ ಹೇಳಿದರು.

ತುಮಕೂರು ವಿಶ್ವವಿದ್ಯಾನಿಲಯದ ಡಾ. ಡಿ.ವಿ.ಜಿ. ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಅ. 28ರ ಬುಧವಾರ ಆಯೋಜಿಸಿದ್ದ ನಾಡೋಜ ಪ್ರೊ. ಕಮಲಾ ಹಂಪನಾ ದತ್ತಿ ಉಪನ್ಯಾಸ ಹಾಗೂ ಕನ್ನಡ ಕಾವ್ಯಭಾಷೆ ಕುರಿತ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಭಾಷೆಗೆ ನಾದ ಮತ್ತು ಅರ್ಥದ ಸೊಗಸಷ್ಟೇ ಅಲ್ಲ, ಅಭಿನಯಿಸುವ ಸಾಮರ್ಥ್ಯವೂ ಇದೆ. ಬದುಕಿನ ಅನುಭವಗಳನ್ನು ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಲು ಕನ್ನಡ ಅತ್ಯಂತ ಸಮರ್ಥ ಭಾಷೆಯಾಗಿದೆ. ಆದರೆ, ಭಾಷೆಯ ನಿಜವಾದ ಶಕ್ತಿಯ ಅರಿವು ಮೂಡಬೇಕಾದರೆ ನಿರಂತರವಾಗಿ ಬರೆಯಬೇಕು, ಓದಬೇಕು ಮತ್ತು ಮಾತನಾಡಬೇಕು. ಎಲ್ಲ ಕ್ಷೇತ್ರಗಳಲ್ಲೂ ವಿಕಾಸ ನಡೆಯುವಂತೆ ಕನ್ನಡ ಭಾಷೆಯಲ್ಲೂ ನಿರಂತರ ಬೆಳವಣಿಗೆ ಆಗುತ್ತಿದೆ ಎಂದರು.

ಸುಮಾರು ಎರಡು ಸಾವಿರ ವರ್ಷಗಳ ಗತವೈಭವ, ಕಲೆ, ಸಂಸ್ಕೃತಿ, ಆಚರಣೆ, ವಿಚಾರಧಾರೆಗಳು, ಗೆಲುವು – ಸೋಲು ಸೇರಿದಂತೆ ನಾಡಿನ ಬದುಕಿನ ವಿವಿಧ ಆಯಾಮಗಳನ್ನು ದಾಖಲಿಸಿರುವ ಹೆಗ್ಗಳಿಕೆ ಕನ್ನಡ ಭಾಷೆಗಿದೆ. ಕನ್ನಡದ ಸಾಹಿತ್ಯಿಕ ಶ್ರೀಮಂತಿಕೆ ಮತ್ತು ಅಭಿವ್ಯಕ್ತಿ ಸಾಮರ್ಥ್ಯವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದು ಹೇಳಿದರು.

ನಾಡೋಜ ಪ್ರೊ. ಹಂ. ಪ. ನಾಗರಾಜಯ್ಯ ಮಾತನಾಡಿ, ಕಮಲಾ ಹಂಪನಾ ಅವರು ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅಷ್ಟೇ ಅಲ್ಲ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಜಿ.ಎಸ್. ಶಿವರುದ್ರಪ್ಪ ಅವರು ಕರ್ನಾಟಕದ ಮೂರನೇ ರಾಷ್ಟ್ರಕವಿಯಾಗುವಲ್ಲಿ ಕಮಲಾ ಹಂಪನಾ ಅವರ ಪಾತ್ರ ಮಹತ್ವದ್ದಾಗಿತ್ತು. ಕರ್ನಾಟಕದ ಹಲವು ಆಯ್ಕೆ ಸಮಿತಿಗಳು ಅವರ ಸಲಹೆಗಳನ್ನು ಪಡೆಯುತ್ತಿದ್ದವು. ಅವರ ಅಭಿಪ್ರಾಯಗಳಿಗೆ ಸರ್ಕಾರ ಮನ್ನಣೆ ನೀಡುತ್ತಿದ್ದುದೇ ಅವರ ಸಾಹಿತ್ಯಿಕ ಜ್ಞಾನ, ದೂರದೃಷ್ಟಿ ಮತ್ತು ಪ್ರಭಾವಕ್ಕೆ ಸಾಕ್ಷಿ ಎಂದು ತಮ್ಮ ಪತ್ನಿ ಕಮಲಾ ಹಂಪನಾ ಅವರೊಂದಿಗಿನ ಒಡನಾಟ ಹಾಗೂ ಅವರ ಸಾಧನೆಗಳನ್ನು ಸ್ಮರಿಸಿದರು.

ಪರೀಕ್ಷಾಂಗ ಕುಲಸಚಿವ ಪ್ರೊ. ಮೋಹನ್ ಎಚ್.ಎಸ್., ಕಲಾ ನಿಕಾಯದ ಡೀನ್ ಪ್ರೊ. ಪರಶುರಾಮ್ ಕೆ.ಜಿ., ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷೆ ಪ್ರೊ. ಅಣ್ಣಮ್ಮ ಹಾಗೂ ಕಾರ್ಯಕ್ರಮದ ಸಂಯೋಜಕಿ ಪ್ರೊ. ಗೀತಾ ವಸಂತ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *