ಇಂದು ಮಧ್ಯಾಹ್ನ ಸುರಿದ ಜೋರು ಮಳೆಗೆ ವ್ಯಕ್ತಿಯೊಬ್ಬ ಮೋರಿಯಲ್ಲಿ ಕೊಚ್ಚಿ ಹೋದ ಘಟನೆ ತುಮಕೂರು ನಗರದಲ್ಲಿ ನಡೆದಿದೆ.
ಇಂದು ಬೆಳಿಗ್ಗೆಯಿಂದ ಬಿಸಿಲು ಮೋಡದ ನಡುವೆ ಆಗಾಗ್ಗೆ ನಡೆಯುತ್ತಿದ್ದ ಜುಗಲ್ ಬಂಧಿಗೆ ಮಧ್ಯಾಹ್ನ ಜೋರು ಮಳೆ ಬೀಳುವುದರ ಮೂಲಕ ತೆರೆ ಬಿದ್ದಿತು. ನಗರದಲ್ಲಿ ಜೋರು ಮಳೆ ಬಿದಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿತು.
ಜೋರು ಮಳೆ ಬಿದಿದ್ದರಿಂದ ನಗರದ ಚರಂಡಿ, ಮೋರಿಗಳು ತುಂಬಿ ಹರಿದವು, ಇದೇ ರೀತಿ ಹಗಡೆ ಕಾಲೋನಿ ಬಳಿಯ ರಿಂಗ್ ರಸ್ತೆಯ ರೈಲ್ವೆ ಅಂಡರ್‍ಪಾಸ್ ಕೆಳಗೆ ತುಂಬಿ ಹರಿಯುತ್ತಿದ್ದ ಮೋರಿ ಪೋಟೋ ತೆಗೆಯಲು ಹೋದ ಆಟೋ ಚಾಲಕನೊಬ್ಬ ಕೊಚ್ಚಿ ಹೋಗಿದ್ದಾನೆ.
ದಾನ ಪ್ಯಾಲೇಸ್ ಕಡೆಯಿಂದ ಗುಬ್ಬಿಗೇಟ್ ಕಡೆ ಹೋಗಲು ಆಟೋಚಾಲಕ ತುಂಬಿ ಹರಿಯುತ್ತಿದ್ದ ಮೋರಿಯನ್ನು ಕಂಡು ಮೊಬೈಲ್‍ನಲ್ಲಿ ಸೆರೆ ಹಿಡಿಯಲು ಕೆಳಗಿಳಿದಾಗ ನೀರು ರಭಸವಾಗಿ ಹರಿಯುತ್ತಿದ್ದರಿಂದ ಮೋರಿಗೆ ಬಿದ್ದು ಕೊಚ್ಚಿಕೊಂಡು ಹೋಗಿದ್ದಾನೆ.
ಮೋರಿಯ ಎರಡೂ ಕಡೆ ಮೋರಿಯ ಬಾಯಿಗಳು ತೆರೆದೆ ಇದ್ದುದರಿಂದ ನೀರು ಹರಿಯುವಾಗ ಮೋರಿ ಯಾವುದು, ರಸ್ತೆ ಯಾವುದು ಎಂಬುದೇ ಕಾಣಿಸುತ್ತಿರಲಿಲ್ಲ.
ಕೊಚ್ಚಿ ಹೋದ ವ್ಯಕ್ತಿಯನ್ನು ಮರಳೂರು ದಿಣ್ಣೆಯ ನಿವಾಸಿ ಅಮ್ಜದ್ ಎಂದು ಹೇಳಲಾಗಿದೆ.
ಆಟೋ ಚಾಲಕ ಕೊಚ್ಚಿ ಹೋಗಿರುವ ಸ್ಥಳವು ತುಂಬಾ ಕಿರಿದಾಗಿದ್ದು, ರೈಲ್ವೆಯ ಅಂಡರ್‍ಪಾಸ್ ಕೆರೆಯಂತಾಗುತ್ತಿತ್ತು, ಮಳೆ ಬಂದ ಸಂದರ್ಭದಲ್ಲಿ ಯಾವುದೇ ವಾಹನಗಳು ಓಡಾಡಲು ಆಗುತ್ತಿರಲಿಲ್ಲ.
ಸ್ಥಳಕ್ಕೆ ತಿಲಕ್ ಪಾರ್ಕ್ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಕೊಚ್ಚಿಹೋದ ವ್ಯಕ್ತಿಗಾಗಿ ಹುಡುಕಾಟ ನಡೆಸಿದಾಗ, ಕೊಚ್ಚಿ ಹೋದ ಆಟೋ ಚಾಲಕ ಬೀಮಸಂದ್ರದ ದೊಡ್ಡ ಚರಂಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ