ತುಮಕೂರು: ಮಕ್ಕಳ ಹುಟ್ಟು ಹಬ್ಬವನ್ನು ಕೆಲವರು ಶ್ರೀಮಂತಿಕೆ ತೋರಿಸಿಕೊಳ್ಳಲು ಅದ್ಧೂರಿಯಾಗಿ ಮಾಡಿದರೆ, ಇನ್ನು ಕೆಲವರು ತಮ್ಮ ಮಕ್ಕಳ ಹುಟ್ಟು ಹಬ್ಬವನ್ನು ಸಾಮಾಜಿಕ ಕಾರ್ಯ ಮಾಡುವ ಮೂಲಕ ಆಚರಿಸುತ್ತಾರೆ.
ಅದೇ ರೀತಿ ಅಂಗವಿಕಲರ ಕಲ್ಯಾಣ ಕ್ರಿಯಾಸಮಿತಿ ಅಧ್ಯಕ್ಷರಾದ ಸಿ.ಗಂಗರಾಜು ಅವರು ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಿಸುವ ಮೂಲಕ ತಮ್ಮ ಮಗ ಸಾತ್ವಿಕ್ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ.
ತುಮಕೂರು ತಾಲ್ಲೂಕು ಬಳ್ಳಗೆರೆಯ ನೆಹರು ಗ್ರಾಮಾಂತರ ಪ್ರೌಢಶಾಲೆಯ ಮಕ್ಕಳಿಗೆ ಸಮವಸ್ತ್ರವನ್ನು ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಶಾಸಕ ಹೆಚ್.ನಿಂಗಪ್ಪ ಗ್ರಾಮೀಣ ಮಕ್ಕಳು ಉದಾತ್ತ ಗುರಿಯನ್ನು ಇಟ್ಟುಕೊಂಡು ಶಿಕ್ಷಣ ಪಡೆಯಬೇಕು, ಕಠಿಣ ಪರಿಶ್ರಮ ಮತ್ತು ಸರಿಯಾದ ಮಾರ್ಗದರ್ಶನ ಎಂಬುದು ಇದ್ದರೆ ಯಾವುದು ಆಸಾಧ್ಯವಲ್ಲ. ಹಾಗೂ ದೊಡ್ಡ ಗುರಿಯನ್ನು ಹೊಂದುವಂತೆ ಸಲಹೆ ನೀಡಿದರು.
ಅಂಗವಿಕಲರ ಕಲ್ಯಾಣ ಜಂಟಿ ಕ್ರಿಯಾಸಮಿತಿಯ ಅಧ್ಯಕ್ಷ ಸಿ.ಗಂಗರಾಜು ಮಾತನಾಡಿ,ನಾನು ಬಡವನಾಗಿದ್ದರೂ, ನನ್ನ ದುಡಿಮೆಯ ಒಂದು ಭಾಗವನ್ನು ಸಮಾಜ ಸೇವೆಗೆ ಮೀಸಲಿಟ್ಟಿದ್ದೇನೆ. ನನ್ನ ಮಗನ ಹುಟ್ಟು ಹಬ್ಬವನ್ನು ಈ ಹಿಂದೆ ಆನಾಥಾಶ್ರಮ,ವೃದ್ದಾಶ್ರಮ,ಗ್ರಾಮೀಣ ಭಾಗದ ಸರಕಾರಿ ಶಾಲೆಗಳಲ್ಲಿ ಆಚರಿಸಿ,ನಮ್ಮ ಕೈಲಾದ ಕೊಡುಗೆಯನ್ನು ನೀಡುತ್ತಿ ದ್ದೇವೆ.ಈ ಶಾಲೆಯ ಮುಖ್ಯೋಪಾಧ್ಯಾಯರ ಕೋರಿಕೆ ಮೇರೆಗೆ ಈ ಬಾರಿ ನೆಹರು ಗ್ರಾಮಾಂತರ ಪ್ರೌಢಶಾಲೆಯಲ್ಲಿ ಆಚರಿಸಿಕೊಳ್ಳುವುದರ ಜೊತೆಗೆ,ಶಾಲೆಯಲ್ಲಿರುವ ಸುಮಾರು 102 ಮಕ್ಕಳಿಗೆ ಅಗತ್ಯವಿರುವ ಸಮವಸ್ತ್ರವನ್ನು ಇಂದು ನೀಡಿದ್ದೇವೆ.ಶಿಕ್ಷಣದ ಖಾಸಗೀಕರಣದಿಂದ ಬಡವರಿಗೆ ಕೈಗೆಟುಕದ ಸ್ಥಿತಿಗೆ ಬಂದಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲೆಯ ಮುಖ್ಯಶಿಕ್ಷಕ ಭೀಮಣ್ಣ,ನಾವು ಪದವಿ ಮುಗಿಸಿ ಬಂದಾಗ 1985ರಲ್ಲಿ ನಮಗೆ ಇಲ್ಲಿ ಕೆಲಸ ನೀಡಿದರು. ಆದರ ಋಣ ತೀರಿಸುವ ನಿಟ್ಟಿನಲ್ಲಿ ಸಂಕಷ್ಟದಲ್ಲಿರುವ ಶಾಲೆಯನ್ನು ಉಳಿಸಲು ಪ್ರತಿ ತಿಂಗಳ 46 ಸಾವಿರ ರೂಗಳನ್ನು ಖರ್ಚು ಮಾಡಿ ನಾಲ್ವರು ಅತಿಥಿ ಉಪನ್ಯಾಸಕರು ನೇಮಕದ ಜೊತೆಗೆ, ಮಕ್ಕಳನ್ನು ಶಾಲೆಗೆ ಕರೆತರಲು ಆಟೋ ವ್ಯವಸ್ಥೆ ಮಾಡಲಾಗಿದೆ.ದಾನಿಗಳ ಸಹಕಾರದಿಂದ ಮಕ್ಕಳಿಗೆ ಅಗತ್ಯವಿರುವ ಪುಸ್ತಕ,ಲೇಖನ ಸಾಮಗ್ರಿಗಳನ್ನು ಕೊಡಿಸುವ ಮೂಲಕ ಮಕ್ಕಳಿಗೆ ಸಂಪೂರ್ಣ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಕಳೆದ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ನಮ್ಮ ಶಾಲೆಗೆ ಶೇ92 ರಷ್ಟು ಫಲಿತಾಂಶ ಬಂದಿದ್ದು,ಅವರಲ್ಲಿ ಮೂರು ಜನರು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ನಮ್ಮ ಶಾಲೆಯ ಒರ್ವ ವಿದ್ಯಾರ್ಥಿನಿ 625ಅಂಕಗಳಿಗೆ 600 ಅಂಕ ಪಡೆಯುವ ಮೂಲಕ ಹೆಬ್ಬೂರು ಹೋಬಳಿಗೆ ಹೆಮ್ಮೆಯ ವಿಷಯ ಎಂದರು.