ಜಿ.ಬಿ. ಜ್ಯೋತಿಗಣೇಶ್ ಪರ ಭರ್ಜರಿ ಬೈಕ್ ರ್ಯಾಲಿ ನಡೆಸಿದ ಕಾರ್ಯಕರ್ತರು

ತುಮಕೂರು: ಬಹಿರಂಗ ಪ್ರಚಾರದ ಕೊನೆಯ ದಿನವಾದ ಸೋಮವಾರ ನಗರದ 26ನೇ ವಾರ್ಡ್‍ನಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಬಿ. ಜ್ಯೋತಿಗಣೇಶ್ ಅವರು ಭರ್ಜರಿ ಬೈಕ್ ರ್ಯಾಲಿ ನಡೆಸಿದರು.

ಚುನಾವಣೆ ಆರಂಭವಾದಾಗಿನಿಂದ ಬಿಜೆಪಿ ಹಾಗೂ ಸಂಘ ಪರಿವಾರದ ನಾನಾ ಘಟಕೆಗಳ 5 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ವಿವಿಧ ವಾರ್ಡ್‍ಗಳಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಮಂಗಳವಾರ ಶಾಸಕ ಜಿ.ಬಿ. ಜ್ಯೋತಿಗಣೇಶ್ ಅವರು ಮನೆಮನೆ ಪ್ರಚಾರ ಕೈಗೊಳ್ಳಲಿದ್ದಾರೆ.

ಕಳೆದ 15 ದಿನಗಳಿಂದ ನಡೆದ ಪ್ರಚಾರ ಕಾರ್ಯದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲು, ಸಂಸದ ತೇಜಸ್ವಿ ಸೂರ್ಯ, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಆನೇಕಲ್ ನಾರಾಯಣಸ್ವಾಮಿ, ಮಾಜಿ ಸಚಿವ ಡಿ.ಎಸ್. ವೀರಯ್ಯ ಮತ್ತಿತರರು ಪಾಲ್ಗೊಂಡು ಜ್ಯೋತಿಗಣೇಶ್ ಪರ ಮತ ಯಾಚಿಸಿದರು.

ಬೃಹತ್ ಸಮಾವೇಶ ನಡೆಸಿದ ಪ್ರಧಾನಿ, ಜಿಲ್ಲೆಯ ಎಲ್ಲ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಮನವಿ ಮಾಡಿದರೆ, ಬಿ.ಎಸ್. ಯಡಿಯೂರಪ್ಪ ಅವರು ತುಮಕೂರು ವೀರಶೈವ-ಲಿಂಗಾಯಿತ ಮುಖಂಡರು, ಕಾರ್ಯಕರ್ತರ ಪ್ರತ್ಯೇಕ ಸಭೆ ನಡೆಸಿ, ಸಮಾಜದ ಬೆಂಬಲ ಕೋರಿದರು. ಸ್ವತಃ ನಾನೇ ಅಭ್ಯರ್ಥಿ ಎಂದು ಭಾವಿಸಿ ಮತ ನೀಡುವಂತೆ ಮನವಿ ಮಾಡಿದರು. ತೆರೆದ ವಾಹನದಲ್ಲಿ ರ್ಯಾಲಿ ನಡೆಸಿದರು.

“ಜ್ಯೋತಿಗಣೇಶ್ ಅವರು ಸ್ಮಾರ್ಟ್‍ಸಿಟಿಯನ್ನು ರಾಜ್ಯದಲ್ಲೇ ನಂಬರ್ 1 ಮಾಡಿದ್ದಾರೆ. ಸ್ಮಾರ್ಟ್‍ಸಿಟಿ ಯೋಜನೆಗಳ ಅನುಷ್ಠಾನದ ಹಿಂದೆ ಅವರ ಶ್ರಮ ದೊಡ್ಡದಿದೆ. ಸ್ಮಾರ್ಟ್‍ಸಿಟಿ ಹೊರತಾಗಿಯೂ ನೂರಾರು ಕೋಟಿ ಅನುದಾನ ತರುವಲ್ಲಿ ಯಶಸ್ವಿಯಾಗಿದ್ದಾರೆ. ಸುಶಿಕ್ಷಿತ, ಸಜ್ಜನರಾದ ಜ್ಯೋತಿಗಣೇಶ್ ಅವರನ್ನು ಭಾರೀ ಅಂತರದಲ್ಲಿ ಗೆಲ್ಲಿಸಬೇಕು. ಇದು ನನ್ನ ಗೌರವದ ಪ್ರಶ್ನೆ,’’ ಎಂದರು. ವಿಜಯೋತ್ಸವಕ್ಕೆ ಬರುತ್ತೇನೆ ಎಂದು ಹೇಳಿದರು.

ಜ್ಯೋತಿಗಣೇಶ್ ಪರ ಸುದ್ದಿಗೋಷ್ಠಿ ನಡೆಸಿದ ತುಮಕೂರು ನಗರದ ವೀರಶೈವ ಸಮಾಜದ ಮುಖಂಡರು, ಸಮಾಜ ಯಡಿಯೂರಪ್ಪ ಹಾಗೂ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದೆ. ಜ್ಯೋತಿಗಣೇಶ್ ಅವರನ್ನು 25 ಸಾವಿರ ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಕೋರಿದರು. ನಾನಾ ಸಮುದಾಯಗಳ ಮುಖಂಡರು ಸುದ್ದಿಗೋಷ್ಠಿ ನಡೆಸಿ, ಜ್ಯೋತಿಗಣೇಶ್ ಅವರಿಗೆ ಬೆಂಬಲ ಸೂಚಿಸಿದವು.

ಮರಳೂರು ಶನಿ ಮಹಾತ್ಮ ದೇವಸ್ಥಾನ, ಬಟವಾಡಿಯ ಆಂಜನೇಯ ಸ್ವಾಮಿ, ಹನುಮಂತಪುರದ ಭೈಲಾಂಜನೇಯಸ್ವಾಮಿ ದೇವಸ್ಥಾನ ಹೀಗೆ ನಾನಾ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ಏಪ್ರಿಲ್ 29ರಂದು ಭರ್ಜರಿ ರೋಡ್ ಶೋಗಳನ್ನು ಆರಂಭಿಸಿ, ಮೇ 8ರವರೆಗೂ ನಗರದ ಪ್ರತಿ ವಾರ್ಡ್‍ಗಳಲ್ಲಿ ಮುಂದುವರಿಸಿದರು. ಭಾರೀ ಸಂಖ್ಯೆಯಲ್ಲಿ ಬೆಂಬಲಿಸಿದ ಸಾರ್ವಜನಿಕರು, ಬಿಜೆಪಿ ಕಾರ್ಯಕರ್ತರು, ಮುಖಂಡರು, ವಾರ್ಡ್ ಅಧ್ಯಕ್ಷರು, ಹಾಲಿ, ಮಾಜಿ ಪಾಲಿಕೆ ಸದಸ್ಯರು ರ್ಯಾಲಿಗಳನ್ನು ಅಭೂತಪೂರ್ವವಾಗಿ ಯಶಸ್ವಿಗೊಳಿಸಿದರು.

ಮಾರುಕಟ್ಟೆ, ಅಂಗಡಿ ಮುಂಗಟ್ಟು, ಬಸ್ ನಿಲ್ದಾಣ ಸೇರಿದಂತೆ ಪ್ರತಿ ವಾರ್ಡ್‍ಗಳಲ್ಲಿ ಪ್ರಮುಖ ಸ್ಥಳಗಳಲ್ಲಿ ಕಾಲ್ನಡಿಗೆಯಲ್ಲಿ ತೆರಳಿ ಮತ ಯಾಚನೆ ಮಾಡಿದರು.

Leave a Reply

Your email address will not be published. Required fields are marked *