ತುಮಕೂರು-ಬಿಜೆಪಿ ಸಮಸ್ತ ಹಿಂದುಗಳ ಹೆಸರಿನಲ್ಲಿ ಹಿಂದುತ್ವದ ಮೂಲಕ ಅಧಿಕಾರಕ್ಕೆ ಬಂದಿದೆಯೇ ಹೊರತು ಕೇವಲ ಲಿಂಗಾಯತರಿಂದಲ್ಲ. ಕೇವಲ ಲಿಂಗಾಯತ ಪಕ್ಷ ಎನ್ನುವುದಾದರೆ ಅದನ್ನು ಬಹಿರಂಗವಾಗಿ ಘೋಷಣೆ ಮಾಡಲಿ. ಇಲ್ಲವೇ 2ಎ ಮೀಸಲಾತಿ ಪ್ರಸ್ತಾವನೆಗೆ ಉತ್ತೇಜನ ಮಾಡುವುದನ್ನು ಬಿಡಲಿ, ಕರ್ನಾಟಕ ಕ್ಷತ್ರಿಯ ಒಕ್ಕೂಟದ ರಾಜ್ಯಾಧ್ಯಕ್ಷ ಉದಯ್‍ಸಿಂಗ್ ಎಚ್ಚರಿಸಿದರು.
ನಗರದಲ್ಲಿ ಪತ್ರಿಕಾಗೋಷ್ಠೊಯಲ್ಲಿ ಮಾತನಾಡಿದ ಅವರು, ಪಂಚಮಸಾಲಿಗಳು ಸೇರಿ ವೀರಶೈವ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದು, ಇದು ಅತಿ ಹಿಂದುಳಿದ ವರ್ಗಗಳಿಗೆ ಮಾಡುವ ಘೋರ ಅನ್ಯಾಯವಾಗಿದೆ. ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಕೇವಲ ವೀರಶೈವ ಲಿಂಗಾಯತ ಪಂಚಮಸಾಲಿಗಳನ್ನು ಓಲೈಸಲು ಹೊರಟಿದ್ದು, ಆ ಸಮುದಾಯಕ್ಕೆ ಶೇ. 15 ರಷ್ಟು ಮೀಸಲಾತಿ ದೊರಕಿಸಿಕೊಡಲು ಹೊರಟರೆ ಪ್ರಸ್ತುತ ಪ್ರವರ್ಗ 2ಎ ಪಟ್ಟಿಯಲ್ಲಿರುವ 102ಕ್ಕೂ ಹೆಚ್ಚು ಜಾತಿಗಳು ಮೀಸಲಾತಿಯಿಂದ ವಂಚಿತವಾಗುತ್ತವೆ. ಬಲಿಷ್ಠ ಸಮಾಜಕ್ಕೆ ಪೂರ್ತಿ ಮೀಸಲಾತಿ ಸವಲತ್ತು ದೊರೆತು ಸಣ್ಣ, ಅತಿಸಣ್ಣ ಹಿಂದುಳಿದ ವರ್ಗಗಳಿಗೆ ಪ್ರಾತಿನಿಧ್ಯ ಸಿಗಬೇಕೆಂಬ ಮೀಸಲಾತಿಯ ಸಾಂವಿಧಾನಿಕ ಆಶಯವೇ ಮಣ್ಣು ಪಾಲಾಗಲಿದೆ ಎಂದರು.
ರಾಜ್ಯದಲ್ಲಿ ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಪ್ರಬಲವಾಗಿರುವ ಪಂಚಮಸಾಲಿ, ವೀರಶೈವ ಲಿಂಗಾಯತ ಸಮುದಾಯ ಮತ್ತು ಅದರ ಉಪಜಾತಿಗಳನ್ನು ಪ್ರವರ್ಗ 2ಎಗೆ ಸೇರ್ಪಡೆ ಮಾಡುವುದನ್ನು ವಿರೋಧಿಸಿರುವ ಕರ್ನಾಟಕ ಕ್ಷತ್ರಿಯ ಒಕ್ಕೂಟದ ರಾಜ್ಯಾಧ್ಯಕ್ಷ ಉದಯ್‍ಸಿಂಗ್ ಅವರು ಪ್ರವರ್ಗ-2ಎ ಸಮುದಾಯಗಳಿಗೆ ಅನ್ಯಾಯ ಮಾಡಿದರೆ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ರಾಜ್ಯದಲ್ಲಿ ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಪ್ರಬಲವಾಗಿರುವ ಪಂಚಮಸಾಲಿ ಸೇರಿ ವೀರಶೈವ ಲಿಂಗಾಯತ ಸಮುದಾಯ ಮತ್ತು ಅದರೊಳಗಿನ ಉಪಜಾತಿಗಳನ್ನು 2ಎ ಪಟ್ಟಿಗೆ ಸೇರ್ಪಡೆ ಮಾಡಿದರೆ ಪ್ರವರ್ಗ 2ಎ ಮೀಸಲಾತಿ ಪಟ್ಟಿಯಲ್ಲಿರುವ ಕ್ಷತ್ರಿಯ ಜನಾಂಗ ಮತ್ತು ನಮ್ಮ ಉಪಜಾತಿಗಳು ಸೇರಿ ಅತಿ ಹಿಂದುಳಿದ 102ಕ್ಕೂ ಹೆಚ್ಚು ಜಾತಿಗಳಿಗೆ ಅನ್ಯಾಯವಾಗುತ್ತದೆ. ಇದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದ್ದು, ನಾವು ಸಹಿಸಲು ಸಾಧ್ಯವಿಲ್ಲ ಎಂದರು.
ಬಲಿಷ್ಟವಾಗಿ ಬೆಳೆದು ರಾಜ್ಯದ ಮೇಲ್ವರ್ಗವಾಗಿ ಗುರುತಿಸಿಕೊಂಡರೂ ಪ್ರವರ್ಗ ‘2ಎ’ಗೆ ಸೇರಲು ಹವಣಿಸುತ್ತಿರುವುದು ಆ ಪ್ರವರ್ಗಕ್ಕೆ ಮೀಸಲಿರುವ ಶೇ. 15 ರಷ್ಟು ಮೀಸಲು ಕಬಳಿಸಲು ಎಂಬುದು ಎಂತಗವರಿಗಾದರೂ ಅರ್ಥವಾಗುತ್ತದೆ. ಇದಕ್ಕೆ ಬಿಜೆಪಿ ಪೆÇ್ರೀತ್ಸಾಹ ನೀಡುತ್ತಿರುವುದು ಅತಿ ಹಿಂದುಳಿದ ವರ್ಗಗಳಿಗೆ ಧ್ವನಿ ಇಲ್ಲದ ಸಮುದಾಯಗಳಿಗೆ ವಂಚನೆ ಮಾಡುವ ಧೋರಣೆಯಾಗಿದೆ ಎಂದು ದೂರಿದರು.
ಪ್ರವರ್ಗ 2ಎ ಪಟ್ಟಿಯಲ್ಲಿರುವ 102 ಜಾತಿಗಳ ಪೈಕಿ ಬೆರಣಿಕೆಯಷ್ಟು ಸಮುದಾಯಗಳು ಬಿಟ್ಟು ಇತರೆ ಯಾವುದೇ ಸಮುದಾಯ ಈವರೆಗೂ ನ್ಯಾಯಬದ್ಧ ಹಕ್ಕು ಪಡೆದುಕೊಂಡಿಲ್ಲ. ಅನೇಕ ಸಣ್ಣ ಅತಿ ಸಣ್ಣ ಸಮುದಾಯಗಳು ಇಂದಿಗೂ ನಿಕೃಷ್ಣ ಸ್ಥಿತಿಯಲ್ಲಿ ಬದುಕುತ್ತಿವೆ. ಶಿಕ್ಷಣ, ಉದ್ಯೋಗ, ಆರ್ಥಿಕ ಮತ್ತು ಸಾಮಾಜಿಕವಾಗಿ ಸುಧಾರಣೆಯಾಗದೆ ಸಮಾಜದ ಮುಖ್ಯವಾಹಿನಿಯಿಂದ ದೂರ ಉಳಿದಿವೆ ಎಂದರು.
ಅವೈಜ್ಞಾನಿಕ ಅಂಶಗಳನ್ನು ಮುಂದಿಟ್ಟುಕೊಂಡು ಲಿಂಗಾಯತ ಒಳಪಂಗಡಗಳು ಹಿಂದುಳಿದಿವೆ ಎಂದರೆ ಅದನ್ನು ಒಪ್ಪಲು ಸಾಧ್ಯವಿಲ್ಲ ಎಂದರು.
ಪಂಚಮಸಾಲಿಗಳು ಮತ್ತು ಲಿಂಗಾಯತರು ವೀರಶೈವ ಲಿಂಗಾಯತರ ಹೆಸರಿನಲ್ಲಿ 3ಬಿ ಪ್ರವರ್ಗದಲ್ಲಿರುವುದು ಸಮಂಜಸವಾಗಿದೆ. ಅತಿ ಹಿಂದುಳಿದ ವರ್ಗಗಳ ಪಾಲು ಕಸಿದುಕೊಂಡು ಹೆಚ್ಚು ಹೆಚ್ಚು ಮೀಸಲಾತಿ ಪ್ರಯೋಜನ ಪಡೆಯಲು 2ಎ ಪ್ರವರ್ಗದ ಶೇ.15ರ ಮೀಸಲಾತಿ ಮೇಲೆ ಕಣ್ಣು ಹಾಕಿದರೆ ದುರ್ಬಲ ವ್ಯಕ್ತಿಯ ಅನ್ನ ಕಸಿದಂತಾಗುತ್ತದೆ. ದುರ್ಬಲರನ್ನು ಮೇಲೆತ್ತುವುದರ ಬದಲು ಸರ್ಕಾರ ಅವರನ್ನು ತುಳಿಯಲು ಹೊರಟರೆ ಅಮಾನವೀಯವಾಗುತ್ತದೆ. ಹೀಗಾಗಿ ಇದರ ವಿರುದ್ಧ ಹೋರಾಟ ಅನಿವಾರ್ಯ ಎಂದರು.
2ಎ ಪ್ರವರ್ಗಕ್ಕೆ ಲಿಂಗಾಯತ ಒಳಪಂಗಡಗಳನ್ನು ಸೇರಿಸುವುದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವೇ ಇಲ್ಲ. ಹೀಗಾಗಿ ಇದನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ. ಈ ಸಂಬಂಧ ಕರ್ನಾಟಕ ಕ್ಷತ್ರಿಯ ಒಕ್ಕೂಟ ರಾಜ್ಯವ್ಯಾಪಿ ಹೋರಾಟ ಕೈಗೆತ್ತಿಕೊಳ್ಳಲಿದೆ. ಜತೆಗೆ ರಾಜ್ಯಪಾಲರು ಮತ್ತು ಕೇಂದ್ರ ಸರ್ಕಾರಕ್ಕೆ ದೂರು ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಕೆಓ ಜಿಲ್ಲಾಧ್ಯಕ್ಷ ಟಿ.ಎಲ್. ಕುಂಭಯ್ಯ, ಗಾಯಕವಾಡು, ರಮಾನಂದ, ಗಂಗಹನುಮಯ್ಯ, ಪ್ರೆಸ್ ರಾಜಣ್ಣ, ನಾರಾಯಣಸ್ವಾಮಿ, ಸುರೇಂದ್ರ ಸಿಂಗ್, ಆಂಜಿನಪ್ಪ, ಪುರುಷೋತ್ತಮ್ ಮತ್ತಿತರರು ಉಪಸ್ಥಿತರಿದ್ದರು.