ಚುನಾವಣೆ, ನಾಮಪತ್ರ ಸಲ್ಲಿಕೆಗೆ ಅರ್ಹತೆ, ನಿಯಮಗಳೇನು

ತುಮಕೂರು : ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಮೇ 10ರಂದು ಚುನಾವಣೆ ನಡೆಯಲಿದ್ದು, ಮೇ 13ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

ಚುನಾವಣಾ ಅಧಿಸೂಚನೆ ಏಪ್ರಿಲ್ 13ರಿಂದ ಜಾರಿಗೆ ಬರಲಿದಗದು, ಏಪ್ರಿಲ್ 20ರ ತನಕ ನಾಮಪತ್ರಗಳನ್ನು ಸಲ್ಲಿಕೆಗೆ ಅವಕಾಶವಿರುತ್ತದೆ.

ನಾಮಪತ್ರ ಸಲ್ಲಿಕೆಗೆ ಬೇಕಾದ ಅರ್ಹತೆ, ಅನುಸರಿಸಬೇಕಾದ ನಿಯಮ ಸೇರಿದಂತೆ ವಿವಿಧ ಮಾಹಿತಿಗಳನ್ನು ಚುನಾವಣಾ ಆಯೋಗ ನೀಡಿದೆ. ಏಪ್ರಿಲ್ 13ರಿಂದ 20ರ ತನಕ ಬೆಳಗ್ಗೆ 11 ರಿಂದ ಮಧ್ಯಾಹ್ನ 3 ರವರೆಗೆ (ಏ.14 ಮತ್ತು 16 ರಜೆ ದಿನಗಳನ್ನು ಹೊರತುಪಡಿಸಿ) ನಾಮಪತ್ರಗಳನ್ನು ಸಲ್ಲಿಸಬಹುದು.

ಏಪ್ರಿಲ್ 21ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಏಪ್ರಿಲ್ 24 ರಂದು ಮಧ್ಯಾಹ್ನ 3 ರವರೆಗೆ ಅವಕಾಶವಿರುತ್ತದೆ.

ಬಳಿಕ ಅಭ್ಯರ್ಥಿಗಳಿಗೆ ಚುನಾವಣಾ ಚಿಹ್ನೆಗಳನ್ನು ಹಂಚಿಕೆ ಮಾಡಿ ಅಂತಿಮ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ದಪಡಿಸಲಾಗುತ್ತದೆ.

ನಾಮಪತ್ರಗಳ ಪತ್ರಗಳನ್ನು 2ಬಿಯ ಸಲ್ಲಿಸಬೇಕು. ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಯ ವಯಸ್ಸು 25 ವರ್ಷಕ್ಕಿಂತ ಕಡಿಮೆ ಇರಬಾರದು. ಒಬ್ಬ ಅಭ್ಯರ್ಥಿ ಗರಿಷ್ಠ 4 ನಾಮಪತಗಳನ್ನು ಸಲ್ಲಿಸಲು ಅವಕಾಶವಿದೆ. ನಾಮಪತ್ರ ಸಲ್ಲಿಕೆ ಮಾಡುವಾಗ ವಿಧಾನಸಭಾ ಕ್ಷೇತ್ರವು ಯಾವ ಅಭ್ಯರ್ಥಿಗಳಿಗೆ ಮೀಸಲಿಟ್ಟ ಕ್ಷೇತ್ರವಾಗಿರುತ್ತದೆ ಎಂದು ಮಾಹಿತಿ ತಿಳಿದಿರಬೇಕು. ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಕರ್ನಾಟಕದ ಯಾವುದಾದರೂ ಒಂದು ವಿಧಾನಸಭಾ ಕ್ಷೇತ್ರದ ಮತದಾರರಾಗಿರಬೇಕು. ನಾಮಪತ್ರದೊಂದಿಗೆ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರಾಗಿರುವ ಬಗ್ಗೆ ಸಂಬಂಧಿಸಿದ ಮತದಾರರ ನೋಂದಣಾಧಿಕಾರಿ ಅಥವಾ ಸಹಾಯಕ ಮತದಾರರ ನೋಂದಣಾಧಿಕಾರಿಯಿಂದ ಪಡೆದ ಮತದಾರರ ಪಟ್ಟಿಯ ದೃಢೀಕೃತ ಪಟ್ಟಿಯನ್ನು ಹಾಜರುಪಡಿಸಬೇಕು.

ವಿಧಾನಸಭಾ ಕ್ಷೇತ್ರದ ಮತದಾರರು ಸೂಚಕರಾಗಿ ನಾಮಪತ್ರದಲ್ಲಿ ಸಹಿ ಮಾಡಿರಬೇಕು. ಅಭ್ಯರ್ಥಿಯು ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ಪಕ್ಷದ ಮೂಲಕ ಸ್ಪರ್ಧಿಸಿದರೆ ಒಬ್ಬ ಸೂಚಕರು, ಅಭ್ಯರ್ಥಿಯು ನೋಂದಾಯಿತ ಮನ್ನಣೆ ಪಡೆಯದ ರಾಜಕೀಯ ಪಕ್ಷಗಳ ಮೂಲಕ ಸ್ಪರ್ಧಿಸಿದರೆ ಅಥವಾ ಪಕ್ಷೇತರ ಅಭ್ಯರ್ಥಿಯಾಗಿದ್ದರೆ ಈ ಚುನಾವಣೆ ಕ್ಷೇತ್ರದ 10 ಮಂದಿ ಮತದಾರರಿಂದ ನಾಮಪತ್ರಗಳಲ್ಲಿ ಸಹಿ ಪಡೆದಿರಬೇಕು.

ಎಷ್ಟು ಠೇವಣಿ ಇಡಬೇಕು? ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡುವ ಅಭ್ಯರ್ಥಿಗಳು 5 ಸಾವಿರ ರೂ.ಗಳನ್ನು ಠೇವಣಿಯನ್ನಾಗಿ ಪಾವತಿಸಬೇಕು. ಚುನಾವಣಾಧಿಕಾರಿಯವರ ಕಚೇರಿಗೆ 100 ಮೀಟರ್ ಸುತ್ತ-ಮುತ್ತ ವ್ಯಾಪ್ತಿಯಲ್ಲಿ ಅಭ್ಯರ್ಥಿ ಹಾಗೂ ಅವರೊಡನೆ ಬರುವ ವ್ಯಕ್ತಿಗಳಿಗಾಗಿ ಗರಿಷ್ಠ 3 ವಾಹನಗಳಿಗೆ ಮಾತ್ರ ಅವಕಾಶವಿರುತ್ತದೆ. ಸದರಿ ವಾಹನಗಳ ಪರವಾನಿಗೆಯನ್ನು ಚುನಾವಣಾಧಿಕಾರಿಗಳಿಂದ ಪಡೆಯಬೇಕು. ಚುನಾವಣಾಧಿಕಾರಿಯವರ ಕಚೇರಿಯಲ್ಲಿ ಸಿಸಿಟಿವಿ ಅಳವಡಿಸಲಾಗುವುದು ಹಾಗೂ ನಾಮಪತ್ರ ಸ್ವೀಕೃತಿ ಪ್ರಕ್ರಿಯೆಗಳನ್ನು ವಿಡಿಯೋಗ್ರಫಿ ಮಾಡಲು ಕ್ರಮವಹಿಸಲಾಗುತ್ತದೆ. ಅಭ್ಯರ್ಥಿ ಸೇರಿ ಐದು ಜನರು ನಾಮಪತ್ರ ಸಲ್ಲಿಸುವ ವೇಳೆ ಹಾಜರಿರಬಹುದು.

ಆನ್‌ಲೈನ್‌ನಲ್ಲಿಯೂ ಸಲ್ಲಿಕೆಗೆ ಅವಕಾಶ ಸುವಿಧಾ ತಂತ್ರಾಂಶದಲ್ಲಿ ಅಭ್ಯರ್ಥಿಗಳು ಆನ್‍ಲೈನ್ ಮೂಲಕ ನಾಮಪತ್ರಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿರುತ್ತದೆ. ಅದರ ಜೊತೆಗೆ ವಿವಿಧ ಚುನಾವಣಾ ಪರವಾನಿಗೆಗಳನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಪ್ರತಿಯೊಬ್ಬ ಅಭ್ಯರ್ಥಿ ಅಥವಾ ಆತನ ಚುನಾವಣಾ ಏಜೆಂಟ್‍ ಆತ ಅಭ್ಯರ್ಥಿಯಾಗಿ ನಾಮನಿರ್ದೇಶಿತನಾದ ದಿನಾಂಕದಿಂದ ಚುನಾವಣಾ ಫಲಿತಾಂಶ ಘೋಷಣೆ ದಿನಾಂಕದವರೆಗೆ ಆತನಿಂದ ಅಥವಾ ಆತನ ಚುನಾವಣಾ ಏಜೆಂಟಿನಿಂದ ಮಾಡಲಾದ ಎಲ್ಲಾ ವೆಚ್ಚಗಳ ಪ್ರತ್ಯೇಕವಾದ ಮತ್ತು ಸರಿಯಾದ ಲೆಕ್ಕವನ್ನು ಆಯೋಗ ನಿಗದಿಪಡಿಸಿದ ರಿಜಿಸ್ಟರ್‌ಗಳಲ್ಲಿ ನಿರ್ವಹಿಸಬೇಕು.

ಈ ಚುನಾವಣಾ ವೆಚ್ಚದ ಮೇಲ್ವಿಚಾರಣೆಯನ್ನು ಸುಲಭಗೊಳಿಸುವ ದೃಷ್ಟಿಯಿಂದ ಪ್ರತಿಯೊಬ್ಬ ಅಭ್ಯರ್ಥಿಯು ಚುನಾವಣಾ ವೆಚ್ಚದ ಉದ್ದೇಶಕ್ಕೆ ಏಕಮಾತ್ರವಾಗಿ ಒಂದು ಪ್ರತ್ಯೇಕ ಬ್ಯಾಂಕ್ ಖಾತೆಯನ್ನು ಆತ ನಾಮಪತ್ರ ಸಲ್ಲಿಸುವ ದಿನಾಂಕಕ್ಕಿಂತ ಒಂದು ದಿವಸ ಮುಂಚಿತವಾಗಿ ತೆರೆಯಬೇಕು. ಬ್ಯಾಂಕ್ ಖಾತೆ ಸಂಖ್ಯೆಯನ್ನು ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಚುನಾವಣಾಧಿಕಾರಿ ಅವರಿಗೆ ಲಿಖಿತ ರೂಪದಲ್ಲಿ ನೀಡಬೇಕು.

ಕ್ರಿಮಿನಲ್ ಪ್ರಕರಣಗಳಿರುವ ಅಭ್ಯರ್ಥಿಗಳು ಅದಕ್ಕೆ ಸಂಬಂಧಿಸಿದ ವಿವರಗಳನ್ನು ಭಾರತ ಆಯೋಗ ನಿರ್ದೇಶಿಸಿರುವ ರೀತಿ ಟಿವಿ, ದಿನಪತ್ರಿಕೆಗಳಲ್ಲಿ ವಿಸ್ತೃತ ಪ್ರಚುರಾತಿಗಾಗಿ ಪ್ರಕಟಿಸಬೇಕು. ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಯು ಸಕ್ಷಮ ಪ್ರಾಧಿಕಾರಿಯವರಿಂದ ಪಡೆದ ಜಾತಿ ದೃಢೀಕರಣ ಪತ್ರವನ್ನು ನಾಮಪತ್ರದೊಂದಿಗೆ ಲಗತ್ತಿಸಬೇಕು. ಸ್ಪರ್ಧಿಸುವ ಅಭ್ಯರ್ಥಿಗಳು ನಿಗದಿತ ಫಾರಂ-26 ರಲ್ಲಿ ಕ್ರಿಮಿನಲ್ ಮೊಕದ್ದಮೆಗಳು, ಆಸ್ತಿ ವಿವರಗಳು, ವಿದ್ಯಾರ್ಹತೆ ಇತ್ಯಾದಿ ಮಾಹಿತಿಗಳ ಅಫಿಡೆವಿಟ್‍ಗಳನ್ನು ಪಬ್ಲಿಕ್ ನೋಟರಿಯಿಂದ ಪ್ರಮಾಣೀಕರಿಸಿ ಸಲ್ಲಿಸಬೇಕು.

ನಾಮಪತ್ರ ಸಲ್ಲಿಸುವ ಅಭ್ಯರ್ಥಿ ಸೇರಿದಂತೆ ಒಟ್ಟು 5 ಜನರಿಗೆ ಮಾತ್ರ ಚುನಾವಣಾಧಿಕಾರಿಯವರ ಕಚೇರಿಗೆ ಪ್ರವೇಶಾವಕಾಶವಿರುತ್ತದೆ. ಅದೇರೀತಿ ನಾಮಪತ್ರಗಳನ್ನು ಸಲ್ಲಿಸಿದ ನಂತರ ಅಭ್ಯರ್ಥಿಯು ಚುನಾವಣಾಧಿಕಾರಿಯವರ ಮುಂದೆ ಗೊತ್ತುಪಡಿಸಿದ ನಮೂನೆಯನ್ನು ಪ್ರಮಾಣವಚನ ಅಥವಾ ದೃಢೀಕರಣವನ್ನು ಮಾಡಿಸಬೇಕು.

Leave a Reply

Your email address will not be published. Required fields are marked *