ತುಮಕೂರು:ಬುಡುಗ ಜಂಗಮರ ಹೆಸರಿನಲ್ಲಿ ಬೇಡ ಜಂಗಮರಿಗೆ ಜಾತಿ ಪ್ರಮಾಣ ಪತ್ರ ನೀಡಲು ಬೇಡ ಜಂಗಮ ಒಕ್ಕೂಟಕ್ಕೆ ಕಂದಾಯ ಇಲಾಖೆ ಅಧಿಕಾರ ನೀಡಿರುವುದು ಖಂಡನೀಯ, ಇದನ್ನು ವಿರೋಧಿಸಿ,ಜನತೆ ವಾಸ್ತವವನ್ನು ತಿಳಿಸುವ ನಿಟ್ಟಿನಲ್ಲಿ ಕರ್ನಾಟಕ ಸ್ವಾಭಿಮಾನಿ ಎಸ್ಸಿ-ಎಸ್ಟಿ ಸಂಘಟನೆಗಳ ಒಕ್ಕೂಟದ ವತಿಯಿಂದ ಜುಲೈ 28 ರಂದು ಬೆಂಗಳೂರಿನ ಪ್ರೀಡಂ ಪಾರ್ಕಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಸಂಚಾಲಕ, ವಕೀಲ ಪಾರ್ಥ ಸಾರಥಿ ತಿಳಿಸಿದರು,
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1982ರಿಂದಲೇ ಬೇಡ ಜಂಗಮದ ಹೆಸರಿನಲ್ಲಿ ವೀರಶೈವ ಲಿಂಗಾಯತರು ಪರಿಶಿಷ್ಟರ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ,ರಾಜಕೀಯವಾಗಿ ಪ್ರಬಲವಾಗಿರುವ ಸಮುದಾಯ ಮೀಸಲಾತಿ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದರು.
ಮೈಸೂರು, ಕೊಡಗು ಭಾಗದಲ್ಲಿ ಇರುವ ಕಾಡು ಕುರುಬ ಸಮುದಾಯ ಕಾಡೇ ಇಲ್ಲದ ಯಾದಗಿರಿಯಲ್ಲಿ ಆರು ಸಾವಿರ ಇದೆ, ಬೇಡ ಜಂಗಮದ ಹೆಸರಿನಲ್ಲಿಯೂ ಇದೇ ರೀತಿ ನುಸುಳುಕೋರತನ ಇದೆ,ಬೇಡ ಜಂಗಮ ಹೆಸರಿನಲ್ಲಿ ಮೀಸಲಾತಿ ಪಡೆಯುತ್ತಿರುವ ವೀರಶೈವ ಲಿಂಗಾಯತರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜು.28ರಂದು ಬೆಂಗಳೂರಿನ ಪ್ರೀಡಂಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು.
ಚಿಂತಕ ಪ್ರೊ.ದೊರೈರಾಜು ಮಾತನಾಡಿ,ಜಾತಿ ಪ್ರಮಾಣಪತ್ರ ನೀಡಲು ಇಂತಹ ನಿಯಮಗಳನ್ನು ಪಾಲಿಸಬೇಕೆಂಬ ನಿಯಮವಿದ್ದರು, ಸಂಘಟನೆ ಮತ್ತು ಸಚಿವರ ಶಿಫಾರಸ್ಸಿನ ಮೇಲೆ ಜಾತಿ ಪ್ರಮಾಣ ಪತ್ರ ಪಡೆದುಕೊಂಡಿದ್ದಾರೆ, ತನಿಖೆ ನಂತರ ಸುಳ್ಳು ಜಾತಿ ಪ್ರಮಾಣಪತ್ರ ಪಡೆದ ಮೇಲೆ ಕ್ರಿಮಿನಲ್ ಮೊಕದ್ದಮೆ ಹಾಕುತ್ತಿಲ್ಲ.ತಂದೆ,ತಾಯಿ ಎಲ್ಲರು ಲಿಂಗಾಯಿತರಾದರು ಬೇಡ ಜಂಗಮದ ಹೆಸರಿನಲ್ಲಿ ರೇಣುಕಾಚಾರ್ಯ,ಎಂ.ಪಿ.ಪ್ರಕಾಶ್ ಅವರ ಮಕ್ಕಳು ಜಾತಿ ಪ್ರಮಾಣಪತ್ರ ಪಡೆದುಕೊಂಡಿದ್ದು, ಮುಂದಿನ ಚುನಾವಣೆಗಳಲ್ಲಿ ಸ್ಪರ್ಧಿಸಲು ಸಿದ್ಧರಾಗಿದ್ದಾರೆ ಇಂತಹ ಪ್ರವೃತ್ತಿಗೆ ಕಡಿವಾಣ ಹಾಕಬೇಕಿದೆ ಎಂದು ಒತ್ತಾಯಿಸಿದರು.
ಬಿಜೆಪಿ ಸರಕಾರ ಬಂದ ನಂತರ ರಾಜಕೀಯ ಹಕ್ಕನ್ನು ಕಸಿಯಲು ಇಂತಹ ಸುಳ್ಳು ಜಾತಿ ಪ್ರಮಾಣಪತ್ರ ನೀಡಲು ಕುಮ್ಮಕ್ಕು ನೀಡುತ್ತಿದೆ,ಪರಿಶಿಷ್ಠರ ಅನ್ನವನ್ನು ಕಸಿಯಲು ಉತ್ತೇಜನ ನೀಡುತ್ತಿರುವ ಸರಕಾರ ತನ್ನ ನಡೆಯನ್ನು ಬದಲಿಸದಿದ್ದರೆ ಹೋರಾಟವನ್ನು ತೀವ್ರ ಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಚಿತ್ರದುರ್ಗದಿಂದ ಮಹಾರಾಷ್ಟ್ರದವರೆಗೆ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುವುದು ಸಾಂಕ್ರಾಮಿಕ ಕಾಯಿಲೆ ರೀತಿ ಹಬ್ಬುತ್ತಿದೆ, ಶಾಲಾ ಹಂತದಲ್ಲಿಯೇ ಬೇಡ ಜಂಗಮ ಎಂದು ನಮೂದಿಸಿ, ಸೌಲಭ್ಯ ಪಡೆಯುವವರ ಸಂಖ್ಯೆ ಹೆಚ್ಚಳವಾಗಿದ್ದು,ನಮ್ಮ ಪ್ರತಿರೋಧ ತೋರುವುದು ಅವಶ್ಯಕವಾಗಿದ್ದು, ಸರಕಾರ ಕ್ರಮ ಕೈಗೊಳ್ಳದಿದ್ದರೆ ಪರಿಶಿಷ್ಟರು ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಡಾ.ಮುರುಳೀಧರ,ನರಸೀಯಪ್ಪ,ಚಂದ್ರಪ್ಪ,ಭಾನುಪ್ರಕಾಶ್,ಕೊಟ್ಟಶಂಕರ್,ಬಿ.ಕೆ.ಗಂಗಾಧರ್, ಬಂಡೆ ಕುಮಾರ್, ತಿಪ್ಪೇಶನಾಯಕ ಸೇರಿದಂತೆ ಇತರರಿದ್ದರು.