ತುಮಕೂರು:ಭೂಮಿ ಕಳೆದುಕೊಳ್ಳುವ ರೈತರೊಂದಿಗೆ ಚರ್ಚೆ ನಡೆಸದೆ ಏಕಾಎಕಿ ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ ನಿರ್ಮಾಣ ಪ್ರಾಧಿಕಾರ ರಚನೆ ಮಾಡಿರುವ ಸರಕಾರದ ಕ್ರಮ ಕಾನೂನು ಬಾಹಿರವಾಗಿದ್ದು,ಕೂಡಲೇ ಸದರಿ ಪ್ರಾಧಿಕಾರವನ್ನು ರದ್ದು ಪಡಿಸಬೇಕೆಂದು ಆಗ್ರಹಿಸಿ ಚನೈ-ಬೆಂಗಳೂರು ಇಂಡಸ್ಟ್ರೀಯಲ್ ಕಾರಿಡಾರ್ ಯೋಜನಾ ಪ್ರದೇಶಗಳ ರೈತರ ಹೋರಾಟ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಿ,ಮನವಿ ಸಲ್ಲಿಸಲಾಯಿತು.
ಕರ್ನಾಟಕ ಪ್ರಾಂತ ರೈತ ಸಂಘ,ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ವಿವಿಧ ರೈತ ಸಂಘಟನೆಗಳ ನೇತೃತ್ವದಲ್ಲಿ ನಗರದ ಟೌನ್‍ಹಾಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ,ಸರಕಾರದ ರೈತ ವಿರೋಧಿ ಧೋರಣೆಯನ್ನು ಖಂಡಿಸಿದರು.
ಈ ವೇಳೆ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷರಾದ ಜಿ.ಸಿ.ಬೈಯಾರೆಡ್ಡಿ ಅವರು, ದೇಶದ ಸ್ವಾತಂತ್ರೋತ್ಸವದ 75ನೇ ವರ್ಷಾಚರಣೆಯಲ್ಲಿರುವ ರೈತರಿಗೆ ಕನಿಷ್ಟ ಸೌಜನ್ಯಕ್ಕೂ ಮಾಹಿತಿ ನೀಡದೆ ಯೋಜನಾ ವ್ಯಾಪ್ತಿಗೆ ಬರುವ ಸುಮಾರು132 ಗ್ರಾಮಗಳನ್ನು ಹಂತ ಹಂತವಾಗಿ ರೈತರ ಫಲವತ್ತಾದ ಭೂಮಿಯನ್ನು ವಶಪಡಿಸಿಕೊಳ್ಳುವ ಪ್ರಯತ್ನ ಆರಂಭವಾಗಿದೆ. ಇದಕ್ಕೆ ಎಂದಿಗೂ ನಾವು ಅವಕಾಶ ನೀಡುವುದಿಲ್ಲ.ಬೇರೆಲ್ಲಾ ವಿಚಾರಗಳಲ್ಲಿ ಸಂವಿಧಾನದ ನೀತಿ,ನಿಯಮಗಳು ಪಾಲನೆಯಾದರೆ,ರೈತರ ವಿಚಾರದಲ್ಲಿ ಮಾತ್ರ ಸಂವಿಧಾನ ವಿರೋಧಿ ನೀತಿಗಳೇ ಹೆಚ್ಚಾಗಿವೆ ಎಂದು ಆರೋಪಿಸಿದರು.
ಒಂದು ಯೋಜನೆ ಆರಂಭಿಸುವ ಮೊದಲು ಅಲ್ಲಿನ ಗ್ರಾಮಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳಿಗೆ ಮಾಹಿತಿ ನೀಡಿ, ಗ್ರಾಮಸಭೆಗಳನ್ನು ನಡೆಸಿ, ರೈತರಿಗೆ,ಸಾರ್ವಜನಿಕರಿಗೆ ಮಾಹಿತಿ ನೀಡಿ,ನಂತರ ಅಗತ್ಯ ಕ್ರಮ ಕೈಗೊಳ್ಳಬೇಕು.ಆದರೆ ಚನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ ವಿಚಾರದಲ್ಲಿ ಈ ನಿಯಮ ಪಾಲನೆಯಾಗಿಲ್ಲ. ಅಧಿಕಾರಿಗಳು ಇದು ಹೆಸರಿಗೆ ಮಾತ್ರ ಪ್ರಾಧಿಕಾರ, ಇಲ್ಲಿ ಯಾರ ಜಮೀನಿನನ್ನುವಶಪಡಿಸಿಕೊಳ್ಳುವುದಿಲ್ಲ ಎಂದು ರೈತರ ಕಿವಿಯ ಮೇಲೆ ಹೂ ಮುಡಿಸುವ ಕೆಲಸ ಮಾಡುತ್ತಿದ್ದಾರೆ.ಈಗಾಗಲೇ ನಮ್ಮ ಮುಂದೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಭೂಮಿ ಕಳೆದುಕೊಂಡು ಪರಿತಪಿಸುತ್ತಿರುವ ರೈತರ ದಯನೀಯ ಸ್ಥಿತಿ ನಮ್ಮ ಕಣ್ಣುಮುಂದೆ ಇದೆ. ಹಾಗಾಗಿ ರೈತರು ಎಚ್ಚರಿಕೆಯಿಂದ ಇರಬೇಕೆಂದು ಜಿ.ಸಿ.ಬಯಾರೆಡ್ಡಿ ಮನವಿ ಮಾಡಿದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಹಾಗು ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ,ಸರಕಾರದ ನಡೆ ರೈತರನ್ನು ಕತ್ತಲಲ್ಲಿ ಇಡುವಂತೆ ಮಾಡಿದೆ.ಕನಿಷ್ಟ ಪಕ್ಷ ಜಿಲ್ಲಾಡಳಿತದ ಬಳಿಯೂ ಇದರ ಸ್ಪಷ್ಟ ಮಾಹಿತಿ ಇಲ್ಲ.ಹಾಗಾಗಿ ರೈತರಿಗೆ ಮಾರಕವಾಗಿರುವ ಚನೈ-ಬೆಂಗಳೂರು ಕೈಗಾರಿಕಾ ಪ್ರಾಧಿಕಾರವನ್ನುರದ್ದು ಪಡಿಸಬೇಕೆಂದು ಆಗ್ರಹಿಸಿದರು.
ಪ್ರಾಂತ ರೈತ ಸಂಘದ ಬಿ.ಉಮೇಶ್,ಅಜ್ಜಪ್ಪ,ಸಿಐಟಿಯುನ ಸೈಯದ್ ಮುಜೀಬ್ ಮಾತನಾಡಿದರು. ಪ್ರತಿಭಟನೆಯಲ್ಲಿ ಪ್ರಾಂತ ರೈತ ಸಂಘದ ಅಜ್ಜಪ್ಪ,ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನಕಾರ್ಯದರ್ಶಿ ಕೃಷ್ಣಪ್ಪ ,ಹೋರಾಟ ಸಮಿತಿಯ ದಯಾನಂದ ಸಾಗರ್,ಶಿವಾನಂದ್,ಷಣ್ಮುಖಪ್ಪ,ಶಿವಣ್ಣ,ವೀರಣ್ಣ,ಕರಿಬಸವಯ್ಯ,ಮಂಜುನಾಥ್, ಪಾಲಾಕ್ಷ,ಜಯರಾಮಯ್ಯ,ರುದ್ರೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.