ಬ್ರಾಹ್ಮಣ ಸಮುದಾಯದ ಒಡೆತನದಲ್ಲಿ ನಡೆಯುತ್ತಿರುವ ಪತ್ರಿಕೆಗಳಿಗೆ ಪ್ರತಿ ತಿಂಗಳು 2ಪುಟ ಜಾಹಿರಾತು ನೀಡುವಂತೆ ರಾಜ್ಯ ಸರ್ಕಾರವು ವಾರ್ತಾ ಇಲಾಖೆಗೆ ಆದೇಶ ಹೊರಡಿಸಿ ಸೂಚಿಸಿದೆ.
2023ನೇ ಜನವರಿ 24 ರ ಮಂಗಳವಾರ ಹೊರಡಿಸಲಾಗಿರುವ ಸುತ್ತೋಲೆಯಲ್ಲಿ, “ವಾರ್ತಾ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಬ್ರಾಹ್ಮಣ ಸಮುದಾಯದ ಒಡೆತನದ ಪತ್ರಿಕೆಗಳಿಗೆ ಪ್ರತೀ ತಿಂಗಳು ಎರಡು ಪುಟಗಳ ಜಾಹಿರಾತು ಬಿಡುಗಡೆ ಮಾಡಲು ಸರ್ಕಾರದ ಮಂಜುರಾತಿ ಆದೇಶ ಹೊರಡಿಸಿರುವುದಾಗಿ ವಾರ್ತಾ ಇಲಾಖೆ ತಿಳಿಸಿದೆ.
ಬ್ರಾಹ್ಮಣದ ಒಡೆತನೆ ಪತ್ರಿಕೆಗಳಿಗೆ ಜಾಹಿರಾತು ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರವು ವಾರ್ತಾ ಇಲಾಖೆಗೆ ಜನವರಿ 13ರ ಶುಕ್ರವಾರ ಆದೇಶ ನೀಡಿದೆ ಎಂದು ಸುತ್ತೋಲೆಯಲ್ಲಿ ವಾರ್ತಾ ಇಲಾಖೆ ಉಲ್ಲೇಖಿಸಿದೆ. ಈ ಬಗ್ಗೆ 2022-23ರ ಸಾಲಿನ ಬಜೆಟ್‍ನಲ್ಲಿ ಘೋಷಿಸಲಾಗಿದೆ ಎಂದು ಕೂಡಾ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಬ್ರಾಹ್ಮಣ ಸಮುದಾಯದ ಒಡೆತನದ ನಾಲ್ಕು ಪುಟಗಳಲ್ಲಿ ಪ್ರಕಟವಾಗುತ್ತಿರುವ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಸರ್ಕಾರದ ಆದೇಶದಲ್ಲಿ ತಿಳಿಸಿರುವ ಷರತ್ತಿಗೊಳಪಟ್ಟು ಪ್ರತಿ ತಿಂಗಳು 2 ಪುಟಗಳ ಜಾಹೀರಾತು ಬಿಡುಗಡೆ ಮಾಡಲು ಅರ್ಹ ಪತ್ರಿಕೆಗಳ ಮಾಹಿತಿ ನೀಡುವಂತೆ ಸುತ್ತೋಲೆಯು ವಾರ್ತಾ ಇಲಾಖೆಯು ಕೇಳಿದೆ.
ಸುತ್ತೋಲೆಯು ಸರ್ಕಾರದ ಆದೇಶದಂತೆ ಹೊರಡಿಸಲಾಗಿದ್ದು, ವಾರ್ತಾ ಇಲಾಖೆಯ ಆಯುಕ್ತರ ಪರವಾಗಿ ಉಪನಿರ್ದೇಶಕರಾದ ಕೆ.ಪಿ. ಪುಟ್ಟಸ್ವಾಮಯ್ಯ ಅವರು ಸಹಿ ಮಾಡಿದ್ದಾರೆ.
ಈ ಬಗ್ಗೆ ರಾಜ್ಯ ವಾರ್ತಾ ಇಲಾಖೆ ಸುತ್ತೋಲೆ ಹೊರಡಿಸಿದೆ. ಈ ಬಗ್ಗೆ ಆಕ್ರೋಶ ವ್ಯಕ್ತವಾಗಿದ್ದು, ‘ಮುಖ್ಯಮಂತ್ರಿ ಬೊಮ್ಮಾಯಿ ಅವರು ನಾಗಪುರದ ಆದೇಶವನ್ನು ಚಾಚೂ ತಪ್ಪದೆ ಪಾಲಿಸುತ್ತಿರುವ ನಿಷ್ಠಾವಂತ ನೌಕರ’ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.