ತುಮಕೂರು : ನಗರ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗುವ ಪೌರಕಾರ್ಮಿಕರಿಗೆ ಅನೇಕ ಸರ್ಕಾರ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದ್ದು ಈ ಹಿನ್ನೆಲೆಯಲ್ಲಿ ತುಮಕೂರು ಮಹಾನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುವ ಪೌರಕಾರ್ಮಿಕರು ಸೇರಿದಂತೆ ಇತರರಿಗೆ 2016ರಲ್ಲಿ ದಿಬ್ಬೂರಿನಲ್ಲಿ ಗೃಹಭಾಗ್ಯ ಯೋಜನೆಯಡಿ ಪಾಲಿಕೆಯಿಂದ 72 ಪೌರಕಾರ್ಮಿಕರಿಗೆ ನಿರ್ಮಿಸಲಾಗಿರುವ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲು ಸ್ಥಳೀಯ ಆಡಳಿತ ಮೀನಾ ಮೇಷ ಎಣಿಸುತ್ತಿದೆ ಎಂದು ತುಮಕೂರು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಅತಿಕ್ ಅಹಮ್ಮದ್ ಅವರು ಖಂಡಿಸಿದರು.
ನಗರದ ಆರನೇ ವಾರ್ಡ್ ನಲ್ಲಿರುವ ದಿಬ್ಬೂರಿನಲ್ಲಿ ತುಮಕೂರು ಮಹಾನಗರ ಪಾಲಿಕೆಯಿಂದ ಪೌರಕಾರ್ಮಿಕರಾಗಿ ಅಂದಾಜು 538.50 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಸುತ್ತಿರುವ ಮನೆ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಿ ಕೂಡಲೇ ಸಂಬಂಧಪಟ್ಟ ಪೌರಕಾರ್ಮಿಕರಿಗೆ ಮನೆಗಳನ್ನು ಹಸ್ತಾಂತರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನಗರ ಅಭಿವೃದ್ಧಿ ಇಲಾಖೆ ಪೌರಾಡಳಿತ ನಿರ್ದೇಶನಾಲಯ ತುಮಕೂರು ಮಹಾನಗರ ಪಾಲಿಕೆ ಇವರುಗಳು 2016ರ ಆಗಸ್ಟ್ 9ರಂದು ಗೃಹಭಾಗ್ಯ ಯೋಜನೆಯ ಆರನೇ ರಾಜ್ಯಮಟ್ಟದ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಂಡು 72 ಮನೆಗಳನ್ನು ನಿರ್ಮಾಣ ಮಾಡಲು ನಿವೇಶನವನ್ನು ಗುರುತಿಸಿ ಮನೆಗಳನ್ನು ನಿರ್ಮಿಸಿದ್ದರು ಈವರೆಗೂ ಫಲಾನುಭವಿಗಳಿಗೆ ಹಂಚಿಕೆಯಾಗಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಆರು ವರ್ಷಗಳಿಂದ ಮನೆ ನಿರ್ಮಿಸುತ್ತಿರುವ ಕಾಮಗಾರಿ ಕುಂಟುತ್ತಾ ಸಾಗಿದ್ದು ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತಕ್ಕೆ ಪೌರಕಾರ್ಮಿಕರ ಬಗ್ಗೆ ಕಾಳಜಿ ಇಲ್ಲ ನಿರ್ಮಾಣವಾಗಿರುವ ಮನೆಗಳನ್ನು ವಾಸಕ್ಕೆ ನೀಡದೆ ಮನೆಗಳ ಕಿಟಕಿ ಬಾಗಿಲುಗಳು ಒಡೆದು ಪೌರಕಾರ್ಮಿಕರಿಗೆ ಎಂದೇ ನಿರ್ಮಿಸಲಾಗಿರುವ ಮನೆಗಳು ಸೊರಗುತ್ತಿದ್ದು ಕೂಡಲೇ ಪೌರಕಾರ್ಮಿಕರಿಗೆ ಮನೆಗಳನ್ನು ಹಸ್ತಾಂತರಿಸಬೇಕು ನಗರದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಅವರಿಗೆ ಅನುಕೂಲ ಕಲ್ಪಿಸಬೇಕು ಮನೆ ಹಸ್ತಾಂತರಕ್ಕೆ ಎದುರಾಗಿರುವ ತೊಡಕುಗಳನ್ನ ನಿವಾರಿಸಿ ಮನೆ ನೀಡಲು ಅಧಿಕಾರಿಗಳು ಸೂಕ್ತ ಕ್ರಮವಹಿಸಲು ಆಗ್ರಹಿಸಿದರು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ಪಿ ಎನ್ ರಾಮಯ್ಯ ಮಾತನಾಡಿದರು.