ಗ್ರಾಮ ಪಂಚಾಯಿತಗಳ ಆಡಳಿತದಲ್ಲಿ ಜಿ.ಪಂ. ತುಮಕೂರು ಸಿಇಒ ಹಸ್ತಕ್ಷೇಪ ನಿಲ್ಲಿಸಲು ಆಗ್ರಹ

ಗುಬ್ಬಿ: ತುಮಕೂರು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಗ್ರಾಮ ಪಂಚಾಯತಿಗಳನ್ನು ಸ್ಥಳೀಯ ಸ್ವಯಂ ಸರ್ಕಾರಗಳೆಂದು ಭಾವಿಸದೆ, ತಮ್ಮ ಶಾಖಾ ಕಛೇರಿಗಳೆಂದು ಪರಿಭಾವಿಸಿ ತಮ್ಮ ಅಧಿಕಾರದ ವ್ಯಾಪ್ತಿಮೀರಿ ಅವರಿಗೆ ಬೇಕಾದ ಹಾಗೆ ಆದೇಶಗಳನ್ನು ಮಾಡುತ್ತಾ ಇರುವುದನ್ನು ಕೂಡಲೆ ನಿಲ್ಲಸುವಂತೆ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ಸದಸ್ಯರ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷರಾದ ಸತೀಶ್ ಕಾಡಶೆಟ್ಟಿಹಳ್ಳಿ ಅವರು ಆಗ್ರಹಿಸಿದ್ದಾರೆ.

ಅವರಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಗಾಂಧೀಜಿ “ನನ್ನ ಕನಸಿನ ಪಂಚಾಯತ್ ರಾಜ್ ವ್ಯಸ್ಥೆಯ ಮೂಲಕ, ಈ ದೇಶದ ಕಟ್ಟಕಡೆಯ ವ್ಯಕ್ತಿಯನ್ನೂ, ಬಡವ ಬಲ್ಲಿದನೆಂಬ ಭೇದವಿಲ್ಲದೇ ಪ್ರಭುವನ್ನಾಗಿಸಿ, ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸ ಬಯಸುತ್ತೇನೆ.” ಎನ್ನುತ್ತಾರೆ .
ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ತತ್ವದ ಅಡಿಯಲ್ಲಿ ದೇಶದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.

ಭಾರತದ ಸಂವಿಧಾನದ ಭಾಗ 4 ರ( ರಾಜ್ಯ ನೀತಿಯ ನಿರ್ದೇಶಕ ತತ್ವಗಳು) ಪ್ರಕರಣ 40, ಸಂವಿಧಾನದ 73 ನೆಯ ತಿದ್ದುಪಡಿಯ ಅನ್ವಯ ಸೇರಿಸಲಾದ ಭಾಗ 9ರ ಪ್ರಕರಣ 243ಜಿ ಮತ್ತು ಕರ್ನಾಟಕ ಗ್ರಾಮಸ್ವರಾಜ್ ಮತ್ತು ಪಂಚಾಯತ್ ರಾಜ್ ಅದಿನಿಯಮ 1993ರ ಪ್ರಕರಣ 58(4) ರ ಅನ್ವಯ ಗ್ರಾಮ ಪಂಚಾಯತಿಗಳು ಸ್ವಯಂ ಆಡಳಿತ ಸಂಸ್ಥೆಗಳಾಗಿವೆ ಎಂದು ತಿಳಿಸಿದರು.

ಆದರೆ ತುಮಕೂರು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಗ್ರಾಮ ಪಂಚಾಯತಿಗಳನ್ನು ಸ್ಥಳೀಯ ಸ್ವಯಂ ಸರ್ಕಾರಗಳೆಂದು ಭಾವಿಸದೆ, ತಮ್ಮ ಶಾಖಾ ಕಛೇರಿಗಳೆಂದು ಪರಿಭಾವಿಸಿ ತಮ್ಮ ಅಧಿಕಾರದ ವ್ಯಾಪ್ತಿಮೀರಿ ತಮಗೆ ಬೇಕಾದ ಹಾಗೆ ಆದೇಶಗಳನ್ನು ಮಾಡುತ್ತಾ, ತಮ್ಮ ನೇರ ನಿಯಂತ್ರಣದಲ್ಲಿರುವ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಮೂಲಕ, ತಮ್ಮಿಚ್ಛೆಯ ಕಾರ್ಯಕ್ರಮಗಳನ್ನು, ಪ್ರಜಾಸತ್ತಾತ್ಮಕವಾಗಿ ಗ್ರಾಮ ಸಭೆಗಳಲ್ಲಿ ಚರ್ಚಿಸದೆ, ಜನರಿಂದ ಆಯ್ಕೆಯಾದ ಗ್ರಾಮ ಪಂಚಾಯತಿಗಳ ಸಭೆಯಲ್ಲಿ ಚರ್ಚಿಸದೆ, ಗ್ರಾಮಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರನ್ನು ಸಂಪೂರ್ಣವಾಗಿಕಡೆಗಣಿಸಿ ನೇರವಾಗಿ ತಮ್ಮ ಆದೇಶಗಳನ್ನು ಅನುಷ್ಠಾನಗೊಳಿಸುವಂತೆ ಮಾಡುತ್ತಿದ್ದಾರೆ. ಇದು ಸಂವಿಧಾನ ವಿರೋಧಿ ಹಾಗೂ ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ. ಇದನ್ನು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ಸದಸ್ಯರ ಮಹಾ ಒಕ್ಕೂಟ ಖಂಡಿಸುತ್ತದೆ ಎಂದು ಕರ್ನಾಟಕ ರಾಜ್ಯ ಗ್ರಾಮಪಂಚಾಯತಿ ಸದಸ್ಯರ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷರಾದ ಕಾಡಶೆಟ್ಟಿಹಳ್ಳಿ ಸತೀಶ್ ತೀಳಿಸಿದರು.

ಸಂವಿಧಾನದ ಪ್ರಕರಣ 243ಜಿ(ಎ) ಗ್ರಾಮ ಪಂಚಾಯತಿಗಳ ಸ್ಥಾಪನೆಯ ಉದ್ದೇಶ ಕುರಿತು ಹೀಗೆ ಹೇಳುತ್ತದೆ, “ ಆರ್ಥಿಕಾಭಿವೃದ್ಧಿಯ ಮತ್ತು ಸಾಮಜಿಕ ನ್ಯಾಯ ಯೋಜನೆಗಳನ್ನು ಸ್ಥಾಪಿಸುವುದಕ್ಕೆ”;
243ಜಿ9(ಬಿ); ಹನ್ನೊಂದನೆಯ ಅನುಸೂಚಿಯಲ್ಲಿ ಪಟ್ಟಿಮಾಡಿದ ವಿಷಯಗಳಿಗೂ ಸೇರಿದಂತೆ, ಪಂಚಾಯತಿಗಳಿಗೆ ವಹಿಸಬುದಾದಂಥ ಆರ್ಥಿಕಾಭಿವೃದ್ಧಿಯ ಮತ್ತು ಸಾಮಾಜಿಕ ನ್ಯಾಯದ ಪರಿಯೋಜನೆಗಳ ಅನುಷ್ಠಾನಕ್ಕೆ ಎಂದು ಹೇಳುತ್ತದೆ.

ಆದರೆ ಸಿಇಒ ರವರು ಉದ್ಯೋಗಖಾತ್ರಿ ಯೋಜನೆಯಲ್ಲಿ ಗ್ರಾಮ ಪಂಚಾಯತಿಗಳು ಗ್ರಾಮಸಭೆಗಳ ಮೂಲಕ ರೂಪಿಸಿದ ವಾರ್ಷಿಕ ಕ್ರಿಯಾಯೋಜನೆಗಳನ್ನು ಧಿಕ್ಕರಿಸಿ, ತಾವು ಗ್ರಾಮ ಪಂಚಾಯತಿ ಅಧಿಕಾರಿಗಳು ಮತ್ತು ನೌಕರರ ಮೂಲಕ ಕೇವಲ ಉದಿಬದ ಕಾಮಗಾರಿಗಳ ಯೋಜನೆ ರೂಪಿಸಿ(ಮಿಷನ್ 500) ಅದನ್ನೇ ಅನುಷ್ಠಾನಮಾಡುವಂತೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಅನುಷ್ಠಾನಗೊಳಿಸುತ್ತಿರುವುದನ್ನು ತಾವ್ರವಾಗಿ ಖಂಡಿಸಿದ್ದಾರೆ.

ಸ್ವಚ್ಛಭಾತರ ಮಿಷನ್ ಯೋಜನೆಯಲ್ಲೂ ಎಲ್ಲಾ ಪಂಚಾಯತಿಗಳು ವೀಡ್ ಕಟಿಂಗ್ ಮೆಷಿನ್ ಖರೀದಿ ಮಾಡಿ ತಾವ Åಹೇಳಿದಂತೆ ರಸ್ತೆ ಬದಿಯಲ್ಲಿ ಸ್ವಚ್ಛಮಾಡುವಂತೆ ಒತ್ತಾಯ ಹಾಕಿ, ತಾವು ಹೇಳಿದ ಕಾರ್ಯಕ್ರವಗಳನ್ನು ಕನಿಷ್ಠ ಗ್ರಾಮ ಪಂಚಾಯತಿ ಸಭೆಗಳಲ್ಲಿ ಅಧ್ಯಕ್ಷರ ಸದಸ್ಯರ ಗಮನಕ್ಕೂ ತಾರದೇ ತಾವು ಹೇಳಿದ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿಸುತ್ತಿದ್ದಾರೆ, ಇದು ಸಂರ್ಪೂವಾಗಿ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿರೋಧಿ ಹಾಗೂ ವಿಕೇಂದ್ರೀಕರಣ ವಿರೋಧಿ ಕ್ರಮವಾಗಿದೆ ಎಂದರು.

“ಕೂಸಿನ ಮನೆ” ಒಂದು ಅವ್ಶೆಜ್ಞಾನಿಕ ಯೋಜನೆಯಾಗಿದೆ, ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ-2005 ಅನುಸೂಚಿ 2 ರಲ್ಲಿ ಕಾಮಗಾರಿ ಸ್ಥಳದ ಸವಲತ್ತುಗಳ ಪೈಕಿ, ಪ್ರಕರಣ 28 ಮತ್ತು 29ರಲ್ಲಿ ಹೀಗೆ ಹೇಳಿದೆ, ಕಾಮಗಾರಿಲ್ಲಿ ಭಾಗವಹಿಸಿರುವ 5ಕ್ಕೂ ಹೆಚ್ಚು ಮಹಿಳೆಯರ ಜೊತೆಯಲ್ಲಿ 6 ವರ್ಷದೊಳಗಿನ ಮಕ್ಕಳು ಇದ್ದಲ್ಲಿ ಹೆಚ್ಚುವರಿಯಾಗಿ ಮತ್ತೊಬ್ಬ ಮಹಿಳಾ ಕಾರ್ಯಕರ್ತೆಯನ್ನು ಮಕ್ಕಳನ್ನು ನೋಡಿಕೊಳ್ಳಲು ನಿಯೋಜನೆ ಮಾಡತಕ್ಕದ್ದು ಎಂದಿದೆ. ಆದರೆ ರಾಜ್ಯ ಸರ್ಕಾರ ಗ್ರಾಮ ಪಂಚಾಯತಿಗೊಂದು ಕೂಸಿನ ಮನೆ ಸ್ಥಾಪಿಸುವ ಮೂಲಕ, ಕಾಮಗಾರಿ ನಡೆಯುವ ಸ್ಥಳದಲ್ಲಿ ತಾತ್ಕಾಲಿಕವಾಗಿ ಮಾಡಬೇಕಾದ ವ್ಯವಸ್ಥೆಯನ್ನು ಸಾಂಸ್ಥಿಕರಣಗೊಳಿಸಲು ಹೋರಟಿದೆ, ತನ್ಮೂಲಕ ಗ್ರಾಮ ಪಂಚಾಯತಿಗಳಿಗೆ ಹೆಚ್ಚಿನ ಆರ್ಥಿಕ ಹೊರೆಯನ್ನು ಹೇರಲು ಹೊರಟಿದೆ, ಇದನ್ನು ಸರ್ಕಾರದ ಮಟ್ಟದಲ್ಲಿ ನಮ್ಮ ಸಂಘಟನೆ ವಿರೋಧಿಸಿದೆ ಎಂದರು.

ಮಾನ್ಯ ಸಿಇಒ ರವರು ತಾವು ಕೂಸಿನ ಮನೆ ಕುರಿತ ತಮ್ಮ ವಾಟ್ಸಪ್ ಸಂದೇಶದಲ್ಲಿ ಮಕ್ಕಳನ್ನು ಕರೆತರಲು ವಾಹನ ವ್ಯವಸ್ಥೆಯನ್ನೂ ಗ್ರಾಮ ಪಂಚಾಯತಿಗಳು ಮಾಡಬೇಕೆಂದು, ತಮ್ಮದೊಂದು ಹೆಚ್ಚುವರಿ ಅದೇಶ ಮಾಡುವ ಮೂಲಕ ಗ್ರಾಮ ಪಂಚಾಯತಿಗಳ ಆರ್ಥಿಕ ವ್ಯಸ್ಥೆಯಲ್ಲೂ ಕೈಹಾಕುತ್ತಿದ್ದಾರೆ. ಹೀಗೆ ಎಲ್ಲಾ ತೀರ್ಮನಗಳನ್ನೂ ಮೇಲಿನ ಹಂತದ ಅಧಿಕಾರಿಗಳು ಮಾಡಿ ಸ್ಥಳೀಯ ಸ್ವಯಂ ಸರ್ಕರಗಳಾದ ಗ್ರಾಮ ಪಂಚಾಯತಿಗಳ ಮೇಲೆ ತಮ್ಮ ಅಧಿಕಾರದ ವ್ಯಾಪ್ತಿ ಮೀರಿ ಹೇರುವುದು, ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ ಹಾಗೂ ವಿಕೇಂದ್ರೀಕರಣ ವಿರೋದಿ ಕ್ರಮವಾಗುತ್ತದೆ ಎಂದು ತಿಳಿಸಿದರು.

ಆದ್ದರಿಂದ ಈ ಕೂಡಲೇ ಸಂವಿಧಾನಾತ್ಮಕ ಸ್ಥಳೀಯ ಸ್ವಯಂ ಸಕಾರಗಳಾದ ಗ್ರಾಮ ಪಂಚಾಯತಿಗ ಆಡಳಿತದಲ್ಲಿ , ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳನ್ನು ಅಮಾನತ್ತು ಮಾಡುವ ಬೆದರಿಕೆ ಹಾಕುವ ಮೂಲಕ ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸಬೇಕು ಎಂದು ಸಿಇಒ ರವರನ್ನು ಮಹಾ ಒಕ್ಕೂಟ ಆಗ್ರಹಿಸುತ್ತದೆ. ಇಲ್ಲವಾದಲ್ಲಿ ರಾಜ್ಯ ಸಕಾರದ ಗಮನಕ್ಕೆ ಈ ವಿಷಯವನ್ನು ತರುದಲ್ಲದೆ, ಗ್ರಾಮ ಪಂಚಾಯತಿಗಳ ಸ್ವಾಯತ್ತತೆಗಾಗಿ ತುಮಕೂರು ಜಿಲ್ಲಾ ಪಂಚಾಯತ್ ಕಛೇರಿಯ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು.
“ಗ್ರಾಮ ಪಂಚಾಯತಿಗಳು ಜಿಲ್ಲಾ ಪಂಚಾಯತಿಯ ಶಾಖಾ ಕಛೇರಿಗಳೇ? ಅಥವಾ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿರುವ ಸ್ಥಳೀಯ ಸ್ವಯಂ ಸರ್ಕಾರಗಳೇ?” ಎಂಬುದನ್ನು ಸ್ಪಷ್ಠಪಡಿಸಬೇಕೆಂದು ಸಿಇಒ ರವರನ್ನು ಒತ್ತಾಯಿಸಿದರು.

One thought on “ಗ್ರಾಮ ಪಂಚಾಯಿತಗಳ ಆಡಳಿತದಲ್ಲಿ ಜಿ.ಪಂ. ತುಮಕೂರು ಸಿಇಒ ಹಸ್ತಕ್ಷೇಪ ನಿಲ್ಲಿಸಲು ಆಗ್ರಹ

  1. ನಾಗೇಂದ್ರ ಜೆ ಹುಲ್ಲಹಳ್ಳಿ ಗ್ರಾಮ ಪಂಚಾಯತ್ ಸದಸ್ಯರು. ನಂಜನಗೂಡು ತಾಲ್ಲೂಕು ಮೈಸೂರು ಜಿಲ್ಲೆ says:

    50ವಸಂತ ಗಳನ್ನು ತುಂಬಿದ ಕರ್ನಾಟಕ ರಾಜ್ಯ ಪಂಚಾಯತ್ ಆಡಳಿತದಲ್ಲಿ ಸ್ಥಳೀಯ ಸರ್ಕಾರ ಗಳ ಆಡಳಿತ ದಲ್ಲಿ ಅಧಿಕಾರಿಗಳ ಆಡಳಿತ ನಿಲ್ಲಲಿ .

Leave a Reply

Your email address will not be published. Required fields are marked *