ಸಂಕಷ್ಟಕ್ಕೆ ಸಿಲುಕಿದ ಮಕ್ಕಳಿಗೆ ನೆರವು ನೀಡಲು ಜಿಲ್ಲಾಧಿಕಾರಿ ಸೂಚನೆ

ತುಮಕೂರು : ಜಿಲ್ಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ ಮಕ್ಕಳಿಗೆ ರಕ್ಷಣೆ, ಆಪ್ತ ಸಮಾಲೋಚನೆ, ಹಾಗೂ ಉಚಿತ ಕಾನೂನು ನೆರವು ನೀಡಿ ಅವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾ ಮಕ್ಕಳ ರಕ್ಷಣ ಘಟಕದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಸಂಕಷ್ಟದಲ್ಲಿರುವ ಸಂತ್ರಸ್ತ ಮಕ್ಕಳಿಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ. ಅಲ್ಲದೆ, ಹೆಚ್‍ಐವಿ ಬಾಧಿತ ಮಕ್ಕಳಿಗೆ ಆರ್ಥಿಕ ಸೌಲಭ್ಯ ಒದಗಿಸಲು ವಿಶೇಷ ಪಾಲನಾ ಯೋಜನೆ, ಒಂಟಿ ಪೋಷಕರನ್ನು ಹೊಂದಿರುವ ಮಕ್ಕಳಿಗಾಗಿ ಪ್ರಾಯೋಜಿತ ಕಾರ್ಯಕ್ರಮ, ಉಪಕಾರ ಯೋಜನೆ, ಮುಖ್ಯಮಂತ್ರಿಗಳ ಬಾಲಸೇವಾ ಯೋಜನೆಯಡಿ ಕೋವಿಡ್ ಸೋಂಕಿನ ಕಾರಣದಿಂದ ಪೋಷಕರಿಬ್ಬರನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳಿಗೆ ಆರ್ಥಿಕ ಸೌಲಭ್ಯ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದು, ಸಂತ್ರಸ್ತ ಮಕ್ಕಳಿಗೆ ಸರ್ಕಾರಿ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಅವರು ಅಧಿಕಾರಿಗಳಿಗೆ ನಿರ್ದೇಶಿಸಿದರು.

ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆಯಡಿ ಕೋವಿಡ್-19 ಸೋಂಕಿನಿಂದ ತಂದೆ-ತಾಯಿ ಇಬ್ಬರನ್ನು ಕಳೆದುಕೊಂಡ ಅನಾಥ ಮಕ್ಕಳಿಗೆ ಆರ್ಥಿಕ ಸೌಲಭ್ಯ ನೀಡಬಹುದಾಗಿದೆ. ಪ್ರಸಕ್ತ ಸಾಲಿನಲ್ಲಿ ಗುರುತಿಸಿರುವ ಇಬ್ಬರು ಮಕ್ಕಳಿಗೆ ಸೌಲಭ್ಯ ಒದಗಿಸಲು ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರಲ್ಲದೇ, ಮಕ್ಕಳ ರಕ್ಷಣಾ ಘಟಕದಿಂದ ಮಕ್ಕಳನ್ನು ದತ್ತು ನೀಡುವಾಗ ಜಿಲ್ಲಾಧಿಕಾರಿ, ಸಿಇಓ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳ ಪೈಕಿ ಯಾರಾದರೂ ಒಬ್ಬರ ಸಮ್ಮುಖದಲ್ಲಿ ನೀಡುವುದು ಅವಶ್ಯ ಎಂದರು.

ಪೋಕ್ಸೋ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಶೀಘ್ರ ನ್ಯಾಯ ಒದಗಿಸುವಂತಹ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಸಮನ್ವಯದಿಂದ ಕೆಲಸ ನಿರ್ವಹಿಸಬೇಕೆಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶೆ ನೂರುನ್ನಿಸಾ ತಿಳಿಸಿದರು.

ಭಿಕ್ಷಾಟನೆಯಲ್ಲಿ ತೊಡಗಿರುವ, ಚಿಂದಿ ಆಯುವ, ಬೀದಿ ಬದಿಯ ಅನಾಥ ಮಕ್ಕಳನ್ನು ಗುರುತಿಸಿ ಅವರನ್ನು ರಕ್ಷಣೆ ಮಾಡಿ ಪುನರ್ವಸತಿ ಕಲ್ಪಿಸಬೇಕಲ್ಲದೇ, ಹತ್ತಿರವಿರುವ ವಸತಿ ಶಾಲೆಗಳಿಗೆ ದಾಖಲಿಸಲು ಕ್ರಮವಹಿಸಬೇಕು ಎಂದು ಸೂಚಿಸಿದರಲ್ಲದೆ, ಬಾಲ್ಯವಿವಾಹ ಪ್ರಕರಣಗಳು ವರದಿಯಾಗುತ್ತಿರುವ ಕಡೆ ಅಧಿಕಾರಿಗಳು ಕಣ್ಣಿಟ್ಟಿರಬೇಕು. ತಾಲ್ಲೂಕು ಕಾನೂನು ಸೇವಾ ಪ್ರಾಧಿಕಾರ, ಸ್ಥಳೀಯ ಮಟ್ಟದ ಅಧಿಕಾರಿಗಳು, ಆಶಾ/ಅಂಗನವಾಡಿ ಕಾರ್ಯಕರ್ತರು ಹೆಚ್ಚಿನ ನಿಗಾವಹಿಸಿ ಬಾಲ್ಯವಿವಾಹಗಳನ್ನು ತಡೆದು ಪ್ರಕರಣ ದಾಖಲಿಸಬೇಕು ಎಂದು ಅವರು ತಿಳಿಸಿದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪವಿತ್ರಾ ಸಭೆಗೆ ಮಾಹಿತಿ ನೀಡುತ್ತಾ, ಬಾಲನ್ಯಾಯ ಮಂಡಳಿ ಮುಂದೆ ಸೆಪ್ಟೆಂಬರ್ ಅಂತ್ಯದವರೆಗೆ ಒಟ್ಟು 137 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 59 ಪ್ರಕರಣಗಳು ಇತ್ಯರ್ಥಗೊಂಡು, 78 ಪ್ರಕರಣಗಳು ಬಾಕಿ ಇರುತ್ತವೆ ಎಂದು ತಿಳಿಸಿದರಲ್ಲದೇ ಇದೇ ಅವಧಿಯಲ್ಲಿ ಪೋಕ್ಸೋ ಕಾಯ್ದೆಯಡಿ ದಾಖಲಾದ 178 ಪ್ರಕರಣಗಳ ಪೈಕಿ 21 ಖುಲಾಸೆಗೊಂಡು 2 ಪ್ರಕರಣಗಳಲ್ಲಿ ಶಿಕ್ಷೆಯಾಗಿ ಒಟ್ಟು 23 ಪ್ರಕರಣಗಳು ಇತ್ಯರ್ಥಗೊಂಡಿದ್ದು, 155 ಪ್ರಕರಣಗಳು ಬಾಕಿ ಇರುತ್ತವೆ ಎಂದು ತಿಳಿಸಿದರು.

ನಂತರ ಬೀದಿ ಬದಿ ಮಕ್ಕಳನ್ನು ರಕ್ಷಣೆ ಮಾಡಿ ಪುನರ್ವಸತಿ ಕಲ್ಪಿಸಿದ ವಿವರ ನೀಡಿದ ಅವರು ಏಪ್ರಿಲ್ 2022 ರಿಂದ ಈವರೆಗೆ ತುಮಕೂರು ನಗರದ ವಿವಿಧ ವೃತ್ತಗಳಲ್ಲಿ ಹಾಗೂ ಕುಣಿಗಲ್ ಪಟ್ಟಣದಲ್ಲಿ ಕಾರ್ಯಚಾರಣೆ ಮಾಡಲಾಗಿದ್ದು, ಇಬ್ಬರು ಮಕ್ಕಳನ್ನು ಮಕ್ಕಳ ಪಾಲನಾ ಸಂಸ್ಥೆಗೆ ಹಾಗೂ ತಾಯಿಯೊಂದಿಗೆ ಇದ್ದ ಮಗುವನ್ನು ಸ್ವಾಧಾರ ಕೇಂದ್ರಕ್ಕೆ ದಾಖಲು ಮಾಡಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ ವಿದ್ಯಾಕುಮಾರಿ, ಹೆಚ್ಚುವರಿ ಪೋಲಿಸ್ ವರಿμÁ್ಟಧಿಕಾರಿ ಉದೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀಧರ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಟಿಎಸ್‍ಎಲ್ ಪ್ರೇಮಾ, ಕಾರ್ಮಿಕಾಧಿಕಾರಿ ಡಾ.ರಮೇಶ್, ಕೌಶಲ್ಯಾಭಿವೃದ್ಧಿ ಅಧಿಕಾರಿ ಶ್ರೀನಿವಾಸ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎನ್.ಅಂಜನಪ್ಪ, ಜಿಲ್ಲೆಯ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸೇರಿದಂತೆ ಇನ್ನಿತರರು ಹಾಜರಿದ್ದರು.

Leave a Reply

Your email address will not be published. Required fields are marked *