ತುಮಕೂರು:ಕರ್ನಾಟಕದ ಜನತೆ ಬದಲಾವಣೆ ಬಯಸುತಿದ್ದು,ಇದನ್ನು ಸಕಾರಗೊಳ್ಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿ ಬ್ಲಾಕ್ ಮತ್ತು ಬೂತ್ ಹಂತದಲ್ಲಿ ಮನೆ ಮನೆಗೆ ತೆರಳಿ ಜನರ ಮನವೊಲಿಸುವ ಕೆಲಸ ಮಾಡಬೇಕೆಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ತುಮಕೂರು ಉಸ್ತುವಾರಿ ಮಯೂರ ಜಯಕುಮಾರ್ ತಿಳಿಸಿದರು.
ನಗರದ ಶೆಟ್ಟಿಹಳ್ಳಿ ಮುಖ್ಯರಸ್ತೆಯ ಹೆಚ್.ಎಂ.ಎಸ್.ಕಾಲೇಜು ಆವರಣದಲ್ಲಿ ತುಮಕೂರು ನಗರ ಬ್ಲಾಕ್ ಕಾಂಗ್ರೆಸ್ ಕಚೇರಿ ಉದ್ಘಾಟಿಸಿ ಮಾತನಾಡುತಿದ್ದ ಅವರು,ರಾಜ್ಯದಲ್ಲಿರುವ ಜನವಿರೋಧಿ, ಶೇ40ರ ಕಮಿಷನ್ ಆಧಾರಿತ ಬಿಜೆಪಿ ಸರಕಾರವನ್ನು ಕಿತ್ತೊಗೆಯಲು ಜನತೆ ಬಯಸಿದ್ದು,ಹಾಗಾಗಿ ಕಾಂಗ್ರೆಸ್ ಕಾರ್ಯಕರ್ತರು ಇದಕ್ಕೆ ಸಜ್ಜಾಗಬೇಕೆಂದರು.
ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಪ್ರಸ್ತುತ ಬಿಜೆಪಿ ಸರಕಾರದಿಂದ ಜನರಿಗೆ ಯಾವುದೇ ರೀತಿಯ ಅನುಕೂಲವಿಲ್ಲ. ಜಿ.ಎಸ್.ಟಿ, ಇನ್ನಿತರ ತೆರಿಗೆಗಳ ಮೂಲಕ ಸಾಕಷ್ಟು ಹಣ ವ್ಯಯಿಸುತಿದ್ದಾರೆ.ಆದರೆ ಅದರ ಬಹುಪಾಲು ರಾಜ್ಯದ ಅಭಿವೃದ್ದಿಗೆ ಬಳಕೆಯಾಗುತ್ತಿಲ್ಲ.ಬದಲಾಗಿ ಬಿಜೆಪಿ ಶಾಸಕರು, ಅವರ ಹಿಂಬಾಲಕರ ಜೇಬು ಸೇರುತ್ತಿದೆ. ಕಾಂಗ್ರೆಸ್ ಸರಕಾರವಿದ್ದಾಗ ಜಾರಿಗೆ ತಂದ ಅನೇಕ ಜನಪರ,ಬಡವರ ಪರ ಕಾರ್ಯಕ್ರಮಗಳು ರದ್ದಾಗಿವೆ.ಇಂದಿರಾ ಕ್ಯಾಂಟೀನ್ನಂತಹ ಯೋಜನೆ ರದ್ದಾಗಿರುವುದು ನಿಜಕ್ಕೂ ಈ ಸರಕಾರ ಯಾರ ಪರವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಹಾಗಾಗಿ ಕೇವಲ ಕಚೇರಿ ಉದ್ಘಾಟಿಸಿದರೆ ಸಾಲದು, ಪ್ರತಿ ದಿನ ಬ್ಲಾಕ್ ಮತ್ತು ಬೂತ್ ಲೇವಲ್ ಕಾರ್ಯಕರ್ತರು ಕೂತು ಚರ್ಚೆ ನಡೆಸಿ,ಜನರ ಸಮಸ್ಯೆಗಳನಿಟ್ಟು ಚರ್ಚೆ ನಡೆಸಿ, ಜನರ ಮುಂದಿಡುವ ಕೆಲಸ ಮಾಡಬೇಕೆಂದು ಮಯೂರ ಜಯಕುಮಾರ್ ಸೂಚಿಸಿದರು.
ಮಾಜಿ ಶಾಸಕ ಎಸ್.ಷಪಿ ಅಹಮದ್ ಮಾತನಾಡಿ,ಇಂದು ಕಾಂಗ್ರೆಸ್ ಪಕ್ಷಕ್ಕೆ ಕಷ್ಟಕಾಲವಿರಬಹುದು. ಆದರೆ ಎಂದಿಗೂ ಕಾರ್ಯಕರ್ತರು ಎದೆಗುಂದಬಾರದು.ಎಲ್ಲರೂ ಒಗ್ಗೂಡಿ ಮುನ್ನೆಡೆದರೆ ಗೆಲುವು ನಿಶ್ಚಿತ ಈ ನಿಟ್ಟಿನಲ್ಲಿ ನಾವೆಲ್ಲರೂ ಪಕ್ಷದ ಹೈಕಮಾಂಡ್ ನೀಡುವ ಸೂಚನೆಗಳನ್ನು ಪಾಲಿಸುತ್ತಾ ಪಕ್ಷವನ್ನು ಸಂಘಟಿಸಿ,ಮುಂದಿನ ಚುನಾವಣೆಯಲ್ಲಿ 11ಕ್ಕೆ 11 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವಂತೆ ಮಾಡಬೇಕೆಂದರು.
ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಆರ್.ರಾಮಕೃಷ್ಣ ಮಾತನಾಡಿ, ಪಕ್ಷದ ಹೈಕಮಾಂಡ್ ಸೂಚನೆಯಂತೆ ಎಲ್ಲಾ ಬ್ಲಾಕ್ಗಳಲ್ಲಿಯೂ ಪಕ್ಷದ ಕಚೇರಿ ತೆರೆಯಲಾಗುತ್ತಿದೆ.ಅದರ ಭಾಗವಾಗಿ ಇಂದು ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಬ್ಲಾಕ್ ಕಚೇರಿ ಆರಂಭಗೊಂಡಿದೆ.ಪ್ರತಿಯೊಬ್ಬ ಬೂತ ಮಟ್ಟದ ಸಹಾಯಕನು ತಮ್ಮ ಬೂತ್ನಲ್ಲಿ ಡಿಲೀಟ್ ಆಗಿರುವ ಮತದಾರರನ್ನು ಪತ್ತೆ ಹೆಚ್ಚಿ, ಡಿಸೆಂಬರ್ 08ರೊಳಗೆ ಸೂಕ್ತ ದಾಖಲೆಗಳೊಂದಿಗೆ ಅಕ್ಷೇಪಣೆ ಸಲ್ಲಿಸುವ ಮೂಲಕ ಮತದಾರರ ಹಕ್ಕು ದೊರೆಯುವಂತೆ ಮಾಡಬೇಕೆಂದು ಕರೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷ ಚಂದ್ರಶೇಖರಗೌಡ ಮಾತನಾಡಿ,ತುಮಕೂರು ಬ್ಲಾಕ್ ಕಾಂಗ್ರೆಸ್ ಕಚೇರಿ ಉದ್ಘಾಟಿಸುವ ಮೂಲಕ ಹೊಸ ಶಕ್ತಿ ತುಂಬಿದೆ.ವಾಮ ಮಾರ್ಗದ ಮೂಲಕ ಗೆಲುವ ಕನಸು ಕಾಣುತ್ತಿರುವ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್ ಪಕ್ಷದ ಎಲ್ಲಾ ಕಾರ್ಯಕರ್ತರು ಒಗ್ಗೂಡಿ ಕೆಲಸ ಮಾಡಬೇಕೆಂದರು.
ಮಾಜಿ ಶಾಸಕ ಡಾ.ಎಸ್.ರಫೀಕ್ ಅಹಮದ್ ಮಾತನಾಡಿ,ಬ್ಲಾಕ್ ಕಾಂಗ್ರೆಸ್ ಕಚೇರಿ ತೆರೆಯುವ ಮೂಲಕ ಪಕ್ಷದ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮಾಡಲಾಗುತ್ತಿದೆ.ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಈ ಕಚೇರಿಯನ್ನು ಪಕ್ಷ ಸಂಘಟನೆಗೆ ಬಳಕೆ ಮಾಡಿಕೊಳ್ಳಬಹುದು ಎಂದು ಸಲಹೆ ನೀಡಿದರು.