ತುಮಕೂರು : ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತಿಯಲ್ಲಿ ‘ಅಮೃತ ಸರೋವರ’ಗಳನ್ನು ನಿರ್ಮಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಹಾಗೂ ದಿಶಾ ಸಮಿತಿ ಅಧ್ಯಕ್ಷ ಎ.ನಾರಾಯಣಸ್ವಾಮಿ ತಿಳಿಸಿದರು.
ಜಿಲ್ಲಾ ಪಂಚಾಯತಿಯಲ್ಲಿಂದು ಜರುಗಿದ ದಿಶಾ ಸಮಿತಿ ಸಭೆಯ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಒಂದು ಹನಿ ನೀರೂ ಸಹ ವ್ಯರ್ಥವಾಗಬಾರದೆನ್ನುವ ಉದ್ದೇಶದಿಂದ ಪ್ರಧಾನ ಮಂತ್ರಿಗಳ ಆಶಯವಾದ ‘ಅಮೃತ ಸರೋವರ’ ನಿರ್ಮಾಣ ಕಾರ್ಯವನ್ನು ಅತಿ ಜರೂರಾಗಿ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ದಿಶಾ ಸಭೆಯಲ್ಲಿ ಸೂಚಿಸಿದ್ದೇನೆ ಎಂದು ಹೇಳಿದರು.
ಕೇಂದ್ರ ಪುರಸ್ಕøತ ಯೋಜನೆಗಳ ಪ್ರಗತಿ ಪರಿಶೀಲಿಸಿ ದಿಶಾ ಸಮಿತಿ ಅಧ್ಯಕ್ಷರನ್ನಾಗಿ ಸರ್ಕಾರ ನನ್ನನ್ನು ನೇಮಿಸಿದ್ದು, ಜಿಲ್ಲೆಯಲ್ಲಿ ಕೇಂದ್ರ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು. ಪ್ರಮುಖವಾಗಿ ನರೇಗಾ ಯೋಜನೆಯಡಿ ಅಮೃತ ಸರೋವರಗಳನ್ನು ನಿರ್ಮಿಸಲು ಆದ್ಯತೆ ನೀಡಲಾಗುವುದು. ಈಗಾಗಲೇ ಜಿಲ್ಲೆಯಲ್ಲಿ 70 ಅಮೃತ ಸರೋವರಗಳನ್ನು ಗುರುತಿಸಲಾಗಿದ್ದು, 20ಕ್ಕೂ ಹೆಚ್ಚು ಅಮೃತ ಸರೋವರಗಳನ್ನು ಹೊಸದಾಗಿ ನಿರ್ಮಿಸಲಾಗಿದೆ ಎಂದು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ ಎಂದರಲ್ಲದೆ, ನರೇಗಾ ಮೂಲಕ ಎನ್‍ಆರ್‍ಎಲ್‍ಎಂ ಯೋಜನೆಯಡಿ ಸ್ತ್ರೀಶಕ್ತಿ ಗುಂಪುಗಳಿಗೆ ಕಟ್ಟಡ ನಿರ್ಮಾಣ ಮಾಡಿಕೊಡಬೇಕೆನ್ನುವ ಗುರಿ ಹೊಂದಲಾಗಿದ್ದು, ಈಗಾಗಲೇ 50 ಕಟ್ಟಡಗಳ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ಹಂತದಲ್ಲಿದೆ ಎಂದು ತಿಳಿಸಿದರು.
ನರೇಗಾ ಯೋಜನೆಯಡಿ ಜಿಲ್ಲೆಯ 600ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿಗೆ ಆವರಣ ಗೋಡೆ, 440 ಶಾಲೆಗಳಲ್ಲಿ ಶೌಚಾಲಯ, 334 ಶಾಲೆಗಳಲ್ಲಿ ಆಟದ ಮೈದಾನ ನಿರ್ಮಾಣ ಮಾಡುವುದರ ಜೊತೆಗೆ ನೀರಿನ ಸಂರಕ್ಷಣೆಗಾಗಿ 391 ಶಾಲೆ ಹಾಗೂ ಪಂಚಾಯತಿ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ವಿಧಾನವನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕೇಂದ್ರದ ಜಲ್ ಜೀವನ್ ಮಿಷನ್ ಯೋಜನೆಯಡಿ 84 ಗ್ರಾಮಗಳಲ್ಲಿ 16596 ಮನೆಗಳಿಗೆ ನಳ ಸಂಪರ್ಕ ನೀಡಿ ಕುಡಿಯುವ ನೀರು ಸರಬರಾಜು ಮಾಡುವ ಕಾರ್ಯ ಬಹುತೇಕ ಪೂರ್ಣಗೊಂಡಿದೆ ಎಂದರು.
ಪ್ರಧಾನಿಗಳ ಪರಿಕಲ್ಪನೆಯಂತೆ ನೀರು ಸಂರಕ್ಷಣೆಗಾಗಿ ಅಂತರ್ಜಲ ಮರುಪೂರಣಗೊಳಿಸಲು ಜಿಲ್ಲೆಯಲ್ಲಿ 25 ಸಮುದಾಯ ಸೋಕ್ ಪಿಟ್‍ಗಳನ್ನು ನಿರ್ಮಿಸಲಾಗಿದ್ದು, 5851 ವೈಯಕ್ತಿಕ ಸೋಕ್ ಪಿಟ್‍ಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿರುವ ಬೇಚರ್ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಅಧಿಸೂಚನೆ ಹೊರಡಿಸಲು ಆಯಾ ಜಿಲ್ಲಾಧಿಕಾರಿಗಳಿಗೆ ಸರ್ಕಾರ ವಿಶೇಷ ಅಧಿಕಾರ ನೀಡಿದ್ದು, ಜಿಲ್ಲೆಯಲ್ಲಿ ಈಗಾಗಲೇ 542 ಗ್ರಾಮಗಳನ್ನು ಕಂದಾಯ ಗ್ರಾಮಗಳೆಂದು ಗುರುತಿಸಲಾಗಿದೆಯಲ್ಲದೆ, ಸರ್ವೆ ಕಾರ್ಯ ಕೈಗೊಂಡು 194 ಕಂದಾಯ ಗ್ರಾಮಗಳೆಂದು ಅಂತಿಮವಾಗಿ ಅಧಿಸೂಚನೆಗೊಳಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕೈಗೊಂಡಿರುವ ತುಮಕೂರು-ರಾಯದುರ್ಗ, ತುಮಕೂರು-ದಾವಣಗೆರೆ ರೈಲು ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ತುಮಕೂರು-ದಾವಣಗೆರೆ ರೈಲು ಮಾರ್ಗದಲ್ಲಿ ದಾವಣಗೆರೆಯಿಂದ ಭರಮಸಾಗರದವರೆಗೂ ಭೂಸ್ವಾಧೀನಪಡಿಸಿಕೊಳ್ಳಲು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಭರಮಸಾಗರದಿಂದ ಚಿತ್ರದುರ್ಗದವರೆಗಿನ 18 ಕಿ.ಮೀ. ಮಾರ್ಗದಲ್ಲಿ ಭೂಸ್ವಾಧೀನಪಡಿಸಿಕೊಂಡ ಜಮೀನಿನ ಮಾಲೀಕರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ. ತುಮಕೂರು-ರಾಯದುರ್ಗ ರೈಲು ಮಾರ್ಗಕ್ಕೆ ಸಂಬಂಧಿಸಿದಂತೆ ವಿಶೇಷ ಭೂ-ಸ್ವಾಧೀನ ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಲಾಗಿದೆ ಎಂದು ತಿಳಿಸಿದರು.
ನವೆಂಬರ್ ಮಾಹೆಯ ಅಂತ್ಯದಲ್ಲಿ ರೈಲು ಯೋಜನೆ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧ ಭೂಸ್ವಾಧೀನ ಹಾಗೂ ಹಕ್ಕುಪತ್ರ ವಿತರಣೆ ಕುರಿತು ಚರ್ಚಿಸಲು ಕಂದಾಯ ಮಂತ್ರಿಗಳ ಉಪಸ್ಥಿತಿಯಲ್ಲಿ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇದಕ್ಕೂ ಮುನ್ನ 2022-23ನೇ ಸಾಲಿನ ಮೊದಲನೇ ಮತ್ತು 2ನೇ ತ್ರೈಮಾಸಿಕ ದಿಶಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ನರೇಗಾ, ಕೃಷಿ, ತೋಟಗಾರಿಕೆ, ಕೌಶಲ್ಯಾಭಿವೃದ್ಧಿ, ಸ್ವಚ್ಛಭಾರತ್ ಮಿಷನ್, ಪ್ರಧಾನಮಂತ್ರಿ ಗ್ರಾಮಸಡಕ್ ಯೋಜನೆ, ಸ್ಮಾರ್ಟ್ ಸಿಟಿ ಯೋಜನೆ, ಮತ್ತಿತರ ಯೋಜನೆಗಳ ಇಲಾಖಾವಾರು ಪ್ರಗತಿ ಪರಿಶೀಲಿಸಿದರು.