ತುಮಕೂರು: ನಮ್ಮ ಕೌಟುಂಬಿಕ ವ್ಯವಸ್ಥೆಯ ನಿರ್ವಹಣೆಯಲ್ಲಿ ಮಹಿಳೆಯ ಪಾತ್ರ ಅತ್ಯಂತ ಮಹತ್ತರವಾಗಿದ್ದು, ಆಕೆಯ ಶಕ್ತಿ ಸಾಮಥ್ರ್ಯವನ್ನು ಗುರುತಿಸುವ ಕಾರ್ಯ ಆಗಬೇಕು ಎಂದು ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಸದಸ್ಯರಾದ ಕನ್ನಿಕಾ ಪರಮೇಶ್ವರ್ ಸಲಹೆ ನೀಡಿದರು.
ವರದಕ್ಷಿಣೆ ವಿರೋಧಿ ವೇದಿಕೆ, ಸಾಂತ್ವನ ಕೇಂದ್ರ, ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆ, ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ ಇವರ ಸಹಯೋಗದಲ್ಲಿ ಎಸ್.ಎಸ್.ಐ.ಟಿ. ಸ್ಟೆಪ್ ಸಭಾಂಗಣದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ-2023ರ ವಿವಿಧ ಮಹಿಳಾ ಪ್ರಶಸ್ತಿಗಳನ್ನು ಸಾಧಕಿಯರಿಗೆ ಪ್ರದಾನ ಮಾಡಿ ಮಾತನಾಡಿದ ಅವರು, ನಮ್ಮ ಭಾರತೀಯ ಕೌಟುಂಬಿಕ ವ್ಯವಸ್ಥೆ ಇಡೀ ವಿಶ್ವದಲ್ಲಿಯೇ ವಿಶಿಷ್ಟ ಪರಂಪರೆಯಲ್ಲಿ ಸಾಗಿದೆ. ಇಲ್ಲಿನ ಕೌಟುಂಬಿಕ ವ್ಯವಸ್ಥೆ ಅಷ್ಟೇ ಚೆನ್ನಾಗಿದೆ. ಇದಕ್ಕೆ ಮೂಲ ಕಾರಣ ಆ ಕುಟುಂಬದ ಮಹಿಳೆ ಎಂಬುದನ್ನು ಮರೆಯಬಾರದು ಎಂದು ಒತ್ತಿ ಹೇಳಿದರು.
ಹಿಂದೆ ಮಹಿಳೆ ಮನೆ ಬಿಟ್ಟು ಹೊರಗೆ ಬರುತ್ತಿರಲಿಲ್ಲ. ಇಂದು ಎಲ್ಲ ಕ್ಷೇತ್ರಗಳಲ್ಲಿ ಮಹಿಳೆ ಪಾದಾರ್ಪಣೆ ಮಾಡಿದ್ದಾಳೆ. ಕೆಲಸ ಕಾರ್ಯದಲ್ಲಿ ಮಹಿಳೆಯರ ಶಿಸ್ತು ಬದ್ಧತೆಯನ್ನು ಹೆಚ್ಚು ಕಾಣಬಹುದು. ಶಕ್ತಿ ಸಾಮಥ್ರ್ಯ ಇದ್ದರೂ ಆಕೆಯನ್ನು ಎರಡನೇ ದರ್ಜೆಯ ಪ್ರಜೆಯನ್ನಾಗಿಯೇ ನೋಡಲಾಗುತ್ತಿದೆ. ಆಕೆಯೂ ಸಮಾನಳು ಎಂಬ ಪರಿಕಲ್ಪನೆ ಮೂಡಬೇಕು. ಮನೆಯಿಂದಲೇ ಬದಲಾವಣೆ ಆರಂಭವಾಗಬೇಕು. ಮನೆಯಲ್ಲಿ ಮಹಿಳೆಗೆ ಪ್ರೋತ್ಸಾಹ ಸಿಕ್ಕಿದಾಗ ಇಡೀ ಕುಟುಂಬ ಮತ್ತಷ್ಟು ಬದಲಾವಣೆಯೊಂದಿಗೆ ಅಭಿವೃದ್ಧಿ ಹೊಂದಲು ಸಾಧ್ಯವಿದೆ ಎಂದರು.
ಪ್ರಧಾನ ಭಾಷಣಕಾರರಾಗಿ ಆಗಮಿಸಿದ್ದ ಲೇಖಕಿ, ತುಮಕೂರು ವಿಶ್ವವಿದ್ಯಾಲಯದ ಉಪನ್ಯಾಸಕಿ ಡಾ. ಆಶಾರಾಣಿ ಬಗ್ಗನಡು ಮಾತನಾಡಿ ಸಮಾನತೆ, ಸ್ವಾತಂತ್ರ್ಯ ಎಂಬ ಮಾತುಗಳೆಲ್ಲ ಭಾಷಣಗಳಾಗಿವೆ. ವಾಸ್ತವವಾಗಿ ಕ್ರೌರ್ಯ, ದೌರ್ಜನ್ಯಗಳು ಮುಂದುವರಿದೇ ಇವೆ. ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಮಹಿಳೆಯರು ನಾನಾ ರೀತಿಯ ಶೋಷಣೆ ಅನುಭವಿಸುತ್ತಿದ್ದಾರೆ. ಎಲ್ಲವನ್ನು ಮೌನವಾಗಿಯೇ ಅನುಭವಿಸುವ ಆ ಮಹಿಳೆಯರು ಶೋಷಣೆಯನ್ನು ಸಹಿಸುವುದೂ ಸಹ ಮಹಿಳೆಯರ ಹಕ್ಕು ಅಂದುಕೊಂಡಿದ್ದಾರೆ. ಹೀಗಿರುವಾಗ ಸಮಾನತೆ ಎಂಬುದು ಎಲ್ಲಿ ಸಾಧ್ಯವಿದೆ ಎಂದು ಪ್ರಶ್ನಿಸಿದರು.
ಮಹಿಳಾ ದಿನಾಚರಣೆಗಳಲ್ಲಿ ಹೆಚ್ಚು ಪುರುಷರು ಭಾಗಿಯಾಗುವಂತೆ ಮಾಡಬೇಕು. ಮಹಿಳೆಯರ ಸಮಸ್ಯೆಗಳು ಮತ್ತು ಶೋಷಣೆ ಪುರುಷ ವರ್ಗಕ್ಕೆ ಅರ್ಥವಾಗಬೇಕು. ಸಮಾಜದಲ್ಲಿ ಕ್ರೌರ್ಯ ಹೇಗೆ ಮನೆ ಮಾಡಿದೆ, ಮಹಿಳೆಯನ್ನು ಹೇಗೆ ಭೋಗದ ವಸ್ತುವಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ರಾಜಕೀಯ ವಾತಾವರಣ ಹೇಗಿದೆ, ಅವಕಾಶಗಳನ್ನು ಹೇಗೆ ನಿರ್ಲಕ್ಷಿಸಲಾಗುತ್ತಿದೆ ಎಂಬೆಲ್ಲಾ ವಿಷಯಗಳು ಪುರುಷರಿಗೂ ತಿಳಿಯಬೇಕು ಆಗ ಮಾತ್ರ ಬದಲಾವಣೆ ನಿರೀಕ್ಷಿಸಲು ಸಾಧ್ಯ ಎಂದರು.
ಮಹಿಳೆಯರು ಪೌಷ್ಠಿಕ ಆಹಾರದ ಕೊರತೆ ಅನುಭವಿಸುತ್ತಿದ್ದಾರೆ. ಅನಾರೋಗ್ಯದ ಕಾಟ ಮಹಿಳೆಯರಲ್ಲೇ ಹೆಚ್ಚು. ಇವೆಲ್ಲವನ್ನೂ ಸರ್ಕಾರಗಳು ಗಂಭೀರವಾಗಿ ಪರಿಗಣಿಸಬೇಕು. ರಾಜಕೀಯದಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಬಲವಾಗಿ ಪ್ರತಿಪಾದಿಸಬೇಕು ಎಂದವರು ತಿಳಿಸಿದರು.
ಆಶಯ ನುಡಿಗಳನ್ನಾಡಿದ ಲೇಖಕಿ ಹಾಗೂ ಮಹಿಳಾ ಹೋರಾಟಗಾರ್ತಿ ಬಾ.ಹ. ರಮಾಕುಮಾರಿ ಮಾತನಾಡಿ ತಾರತಮ್ಯ ಮತ್ತು ಶೋಷಣೆಯ ವಿರುದ್ಧ ಹೋರಾಟ ಆರಂಭವಾದ ಹಿನ್ನೆಲೆಯಲ್ಲಿ ಮಹಿಳಾ ದಿನಾಚರಣೆಯನ್ನು ನೋಡಬೇಕಿದೆ. ಸಮಾಜದಲ್ಲಿ ಇಂದಿಗೂ ತಾರತಮ್ಯ ಮುಂದುವರಿದಿದೆ. ವಾಸ್ತವ ಸ್ಥಿತಿಗತಿಗಳ ಬಗ್ಗೆ ಚರ್ಚಿಸಲು ಮತ್ತು ಅವಲೋಕಿಸಲು ಇಂತಹ ದಿನಾಚರಣೆಗಳ ಅಗತ್ಯವಿದೆ. ಚರ್ಚೆಯ ಮೂಲಕವೇ ಸಾಮಾಜಿಕವಾಗಿ ಒಂದಷ್ಟು ಬದಲಾವಣೆ ತರಲು ಸಾಧ್ಯವಿದೆ. ಸಮಾನತೆ ಮತ್ತು ಸಂಘಟನೆ ಇವೆರಡೂ ಯಾವತ್ತೂ ಸಮಾನಾಂತರವಾಗಿ ಸಾಗಬೇಕು. ಸಮಾಜದಲ್ಲಿ ಇದಕ್ಕೆ ಪ್ರೋತ್ಸಾಹಕರ ವಾತಾವರಣ ಸಿಗಬೇಕು ಎಂದರು.
ವರದಕ್ಷಿಣೆ ವಿರೋಧಿ ವೇದಿಕೆಯಿಂದ ಪ್ರತಿವರ್ಷ ಮೂವರು ಮಹಿಳೆಯರನ್ನು ಗುರುತಿಸಿ ಸನ್ಮಾನಿಸಲಾಗುತ್ತಿದ್ದು, ಕಳೆದ 22 ವರ್ಷಗಳಿಂದ ಇದು ನಡೆದುಕೊಂಡು ಬಂದಿದೆ. ಸಾಲುಮರದ ತಿಮ್ಮಕ್ಕ, ಸೂಲಗಿತ್ತಿ ನರಸಮ್ಮ ಸೇರಿದಂತೆ ಹಲವಾರು ಸಾಧಕಿಯರನ್ನು ಪ್ರಥಮವಾಗಿ ಗುರುತಿಸಿ ಸನ್ಮಾನಿಸಿದ ಹೆಗ್ಗಳಿಕೆ ವೇದಿಕೆಗೆ ಇದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವರದಕ್ಷಿಣೆ ವಿರೋಧಿ ವೇದಿಕೆ ಅಧ್ಯಕ್ಷೆ ಎಂ.ಸಿ.ಲಲಿತ ಮಾತ