
ತುಮಕೂರು- ಗ್ಯಾರೆಂಟಿ ಯೋಜನೆ ಜಾರಿ ವಿಚಾರದಲ್ಲಿ ಮಾಧ್ಯಮದವರು ಏಕೆ ಇಷ್ಟು ಆತುರಪಡುತ್ತಿದ್ದೀರಾ, ಸರ್ಕಾರ ಅಸ್ತಿತ್ವಕ್ಕೆ ಬಂದು ಇನ್ನು 8-10 ದಿನಗಳಾಗಿವೆ ಅಷ್ಟೆ. ದಯವಿಟ್ಟು ತಾಳ್ಮೆಯಿಂದ ಇರಿ, ಶೀಘ್ರದಲ್ಲೇ ಜಾರಿಗೆ ಬರಲಿವೆ ಎಂದು ವಸತಿ ಹಾಗೂ ವಕ್ಫ್ ಖಾತೆ ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.
ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು, ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷ ಚುನಾವಣಾ ಪೂರ್ವದಲ್ಲಿ 5 ಗ್ಯಾರಂಟಿಗಳನ್ನು ಘೋಷಿಸಿತ್ತು. ಈಗಾಗಲೇ ಮೊದಲ ಸಚಿವ ಸಂಪುಟದಲ್ಲೇ ಈ ಗ್ಯಾರೆಂಟಿಗಳಿಗೆ ತಾತ್ವಿಕ ಒಪ್ಪಿಗೆ ನೀಡಿದ್ದೇವೆ. ಆದಷ್ಟು ಬೇಗ ಮುಖ್ಯಮಂತ್ರಿಗಳು ಈ ಗ್ಯಾರೆಂಟಿಗಳನ್ನು ಜಾರಿ ಮಾಡುತ್ತಾವೆ ಎಂದರು.
ಮುಖ್ಯಮಂತ್ರಿ ನನಗೆ ನೀಡಿರುವ ಖಾತೆಯಲ್ಲಿ ಬಡವರ ಸೇವೆ ಮಾಡಲು ಅವಕಾಶ ಇದೆ. ಹಾಗಾಗಿ ಈ ಖಾತೆ ಸಿಕ್ಕಿರುವುದು ನನಗೆ ಖುಷಿ ತಂದಿದೆ ಎಂದು ತಿಳಿಸಿದರು.
ನನಗೆ ನೀಡಿರುವ ಖಾತೆಯಲ್ಲಿ ಕೆಲಸ ಮಾಡಲು ತೃಪ್ತಿ ಇದೆ. ರಾಜ್ಯದ ಬಡವರ ಸೇವೆಗೆ ಇದೊಂದು ಸುವರ್ಣಾವಕಾಶವನ್ನು ಮುಖ್ಯಮಂತ್ರಿಗಳು ಕಲ್ಪಿಸಿಕೊಟ್ಟಿದ್ದಾರೆ ಎಂದರು.
ಸಿದ್ದಗಂಗಾ ಮಠಕ್ಕೆ ನಾನು ಹೊಸದಾಗಿ ಬಂದಿಲ್ಲ. ಈ ಹಿಂದೆ ಮಂತ್ರಿಯಾಗಿದ್ದಾಗಲೂ ಬಂದಿದ್ದೆನು. ಈಗಲೂ ಮಂತ್ರಿಯಾಗಿದ್ದೇನೆ. ಹಾಗಾಗಿ ಶ್ರೀಮಠಕ್ಕೆ ಬಂದಿದ್ದು, ಶ್ರೀಗಳ ಆಶೀರ್ವಾದ ಪಡೆದಿದ್ದೇನೆ ಎಂದರು.
ಸಿದ್ದಗಂಗಾ ಮಠದಲ್ಲಿ 10 ಸಾವಿರ ಮಕ್ಕಳಿಗೆ ಮಾತ್ರ ವಾಸ್ತವ್ಯಕ್ಕೆ ವ್ಯವಸ್ಥೆ ಇದೆ. ಹಾಗಾಗಿ ಶ್ರೀಗಳು ಕಟ್ಟಡ ವ್ಯವಸ್ಥೆ ಇಲ್ಲದ ಕಾರಣ ಈ ಬಾರಿ 10 ಸಾವಿರ ಮಕ್ಕಳಿಂದ ಅರ್ಜಿ ಸ್ವೀಕರಿಸಲು ಮಾತ್ರ ತೀರ್ಮಾನ ಮಾಡಿದ್ದಾರೆ.
ಹಾಗಾಗಿ ಈ ಬಾರಿ ಮಠಕ್ಕೆ ಮಕ್ಕಳನ್ನು ದಾಖಲಿಸಲು ಬೇಡಿಕೆ ಜಾಸ್ತಿಯಾಗಿದೆ. ನಾನು ಸಹ ಶ್ರೀಗಳಿಗೆ ಮುಂದಿನ ವರ್ಷ ಮತ್ತಷ್ಟು ಸಂಖ್ಯೆಯಲ್ಲಿ ಮಕ್ಕಳನ್ನು ದಾಖಲಿಸಿಕೊಳ್ಳುವಂತೆ ಮನವಿ ಮಾಡಿದ್ದೇನೆ ಎಂದರು.
ಸಿದ್ದಗಂಗಾ ಮಠದಲ್ಲಿ ಹಾಸ್ಟೆಲ್ ಕಟ್ಟಡ ನಿರ್ಮಾಣಕ್ಕೆ ಬಿಜೆಪಿ ಸರ್ಕಾರ 10 ಕೋಟಿ ರೂ. ಹಣ ಬಿಡುಗಡೆ ಮಾಡಿತ್ತು. ಈ ಆದೇಶವನ್ನು ಕಾಂಗ್ರೆಸ್ ಸರ್ಕಾರ ತಡೆ ಹಿಡಿದಿದೆಯಲ್ಲ ಎಂಬ ಪ್ರಶ್ನೆಗೆ ಈ ಬಗ್ಗೆ ನನ್ನ ಜತೆ ಶ್ರೀಗಳು ಚರ್ಚಿಸಿಲ್ಲ. ಈ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ. ಅಗತ್ಯ ಕಟ್ಟಡ ವ್ಯವಸ್ಥೆಗೆ ಸಹಕಾರ ನೀಡುವುದಾಗಿ ಅವರು ತಿಳಿಸಿದರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಜಾವೀದ್ ಕರಂಗಿ, ಎಇಇ ಮಹಲಿಂಗಪ್ಪ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಅಲೀಮ್ ಮತ್ತಿತರರು ಉಪಸ್ಥಿತರಿದ್ದರು.