ಬಾಂಗ್ಲಾ ದೇಶದ ಬಾಲಕನಿಗೆ ಜನ್ಮಜಾತ ಹೃದಯ ಚಿಕಿತ್ಸೆ
ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್ ಸೆಂಟರ್‍ಗೆ ಅಂತಾರಾಷ್ಟ್ರೀಯ ಮೈಲಿಗಲ್ಲು

ತುಮಕೂರು: ತುಮಕೂರಿನ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ‘ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್ ಸೆಂಟರ್‍ನಲ್ಲಿ ಬಾಂಗ್ಲಾ ದೇಶದ 9 ವರ್ಷದ ಕೌಶಿಕ್ ಬರ್ಮನ್ ಎಂಬ ಬಾಲಕನಿಗೆ ಸಂಕೀರ್ಣವಾದ ಕಾಂಜೆನೈಟಲ್(ಜನ್ಮಜಾತ ಹೃದಯ ರೋಗ)ಸಮಸ್ಯೆಗೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿದ್ಧಾರ್ಥ ಆಸ್ಪತ್ರೆ ಮನ್ನಣೆ ಗಳಿಸಿದೆ ಎಂದು ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿಗಳು ಮತ್ತು ಶ್ರೀ ಸಿದ್ಧಾರ್ಥ ವೈದ್ಯಕೀಯ ಆಸ್ಪತ್ರೆ ಮತ್ತು ಕಾಲೇಜಿನ ನಿರ್ದೇಶಕರು ಆದ ಡಾ.ಜಿ.ಪರಮೇಶ್ವರ ಅವರು ಪ್ರಶಂಸೆ ವ್ಯಕ್ತಪಡಿಸಿದರು.

ಅವರಿಂದು ಸಿದ್ಧಾರ್ಥ ವೈದ್ಯಕೀಯ ಕಾಲೇಜಿನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು

1000ಕ್ಕೂ ಹೆಚ್ಚು ಕಾರ್ಡಿಯಾಲಜಿ ಪ್ರೊಸೀಜರ್‍ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, 130ಕ್ಕೂ ಹೆಚ್ಚು ಹೃದ್ರೋಗ ಶಸ್ತ್ರಚಿಕಿತ್ಸೆಗಳನ್ನು ಪೂರ್ಣಗೊಳಿಸಲಾಗಿದೆ. ಇದೀಗ ಆಸ್ಪತ್ರೆಯಲ್ಲಿ ವಿದೇಶಿ ರೋಗಿಯೊಬ್ಬರಿಗೆ ಅತ್ಯುತ್ತಮ ಚಿಕಿತ್ಸೆ ನೀಡಿದ ವೈದ್ಯರ ತಂಡ ಗಮನಾರ್ಹ ಮೈಲಿಗಲ್ಲಿನತ್ತ ದಾಪುಗಾಲು ಹಾಕಿದೆ. ಆ ಮೂಲಕ ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಸರಿಸಾಟಿಯಾಗಬಲ್ಲ ಆಧುನಿಕ ಉಪಕರಣಗಳ ಅಳವಡಿಕೆ, ತಜ್ಞ-ನುರಿತ ವೈದ್ಯರ ತಂಡ ತುಮಕೂರಿನಲ್ಲಿದೆ ಎಂಬುದು ಸಾಬೀತಾಗಿದೆ. ಭಾರತದಿಂದ ವಿದೇಶಕ್ಕೆ ಹೋಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಬದಲಾಗಿ, ವಿದೇಶದ ರೋಗಿಗಳು ತುಮಕೂರಿನಂತ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಮಟ್ಟದ ವೈದ್ಯಕೀಯ ಸೌಲಭ್ಯ ಪಡೆಯುವಂತಾಗಿದೆ. ಸರ್ಜರಿಯಾದ ನಾಲ್ಕನೇ ದಿನ ಬಾಲಕ ಸಾಮಾನ್ಯರಂತೆ ಚಟುವಟಿಕೆ ಆರಂಭಿಸಿದ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಅವರು ವಿವರಿಸಿದರು.

ಹೃದಯ ಶಸ್ತ್ರಚಿಕಿತ್ಸೆ ಒಳಗಾದ ಬಾಲಕ ಬಾಂಗ್ಲಾ ದೇಶದ ನೊಗಾ ಜಿಲ್ಲೆಯ ತೀರಾ ಹಿಂದುಳಿದ ಪ್ರದೇಶವಾದ ಪಡಸಾವಿಳಿ ಗ್ರಾಮದವನು. ಕ್ಲಿಷ್ಟಕರವಾದ ಪರಿಸ್ಥಿತಿಯಲ್ಲಿದ್ದ ಬಾಲಕನ ಹೃದಯರೋಗ ಸಮಸ್ಯೆಯನ್ನು ಚಿಕಿತ್ಸೆ ಮೂಲಕ ಗುಣಪಡಿಸಿ ಆತÀನಿಗೆ ಮರುಜನ್ಮ ನೀಡುವಲ್ಲಿ ‘ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್ ಸೆಂಟರ್’ ಮುಖ್ಯಸ್ಥರಾದ ಡಾ. ತಮೀಮ್ ಅಹಮ್ಮದ್ ನೇತೃತ್ವದ ತಂಡ ಯಶಸ್ವಿಯಾಗಿದೆ. ಈ ಸಂಕೀರ್ಣವಾದ ಕಾಂಜೆನೈಟಲ್(ಜನ್ಮಜಾತ ಹೃದಯ ರೋಗ)ಸಮಸ್ಯೆಯನ್ನು ತೆರೆದ ಹೃದಯ ಶಸ್ತ್ರಚಿಕಿತ್ಸೆ ಮೂಲಕ ಬಗೆಹರಿಸಿದ ತಂಡವನ್ನು ಆಸ್ಪತ್ರೆಯ ನಿರ್ದೇಶಕರು ಆದ ಡಾ.ಜಿ.ಪರಮೇಶ್ವರ ಮುಕ್ತಕಂಠದಿಂದ ಶ್ಲಾಘಿಸಿದರು.

ಬಾಲಕನ ಹಿನ್ನಲೆ:
ಬಾಲಕನ ತಂದ ಬಿಪುಲ್ ಬರ್ಮನ್ ಅವರು ಕೃಷಿಕರಾಗಿದ್ದು, ಆರ್ಥಿಕವಾಗಿ ಹಿಂದುಳಿದ ವರ್ಗದರಾಗಿದ್ದಾರೆ. ತಮ್ಮ ಗ್ರಾಮದ ಹಿರಿಯೊಬ್ಬರ ಮಾರ್ಗದರ್ಶನದಲ್ಲಿ ಬೆಂಗಳೂರಿಗೆ ಬಂದ ಇವರಿಗೆ ತುಮಕೂರಿನ ‘ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್ ಸೆಂಟರ್‍ನಲ್ಲಿ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ದೊರೆತ ನಂತರ ಡಾ. ತಮೀಮ್ ಅಹಮ್ಮದ್ ಅವರ ಸಂಪರ್ಕ ಪಡೆದುಕೊಂಡು ತಮ್ಮ ಪುತ್ರನ ಹೃದಯರೋಗದ ಮೂಲವನ್ನು ಪತ್ತೆ ಮಾಡಿಕೊಂಡಿದ್ದಾರೆ.

ಕೌಶಿಕ್ ಬರ್ಮನ್‍ಗೆ 2 ವರ್ಷವಿರುವಾಗಲೇ ಕಾಂಜೆನೈಟಲ್(ಜನ್ಮಜಾತ) ಹೃದಯ ರೋಗಕ್ಕೆ ತುತ್ತಾಗಿದ್ದ. ಆದರೆ ಚಿಕಿತ್ಸೆ ಪಡೆದುಕೊಂಡಿರಲಿಲ್ಲ. ಸಮಸ್ಯೆ ಉಲ್ಬಣಗೊಂಡಿದ್ದರ ಹಿನ್ನೆಲೆಯಲ್ಲಿ ತಪಾಸಣೆಗೆ ಒಳಗಾದಾಗ ರೋಗದ ಸಂಕೀರ್ಣತೆ ಮತ್ತು ತೀಕ್ಷ್ಣತೆಯನ್ನು ಅರಿತ ಡಾ. ತಮೀಮ್ ಅಹಮ್ಮದ್ ನೇತೃತ್ವದ ತಂಡ ಬಾಲಕನಿಗೆ ಒಟ್ಟು 30 ದಿವಸಗಳ ಕಾಲ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಿದೆ.

ಜನ್ಮಜಾತ ಹೃದ್ರೋಗವು ಸಾಮಾನ್ಯ ಜನನ ದೋಷವಾಗಿದೆ. ಜನ್ಮಜಾತ ಹೃದ್ರೋಗವು ಜನ್ಮ ದೋಷದ ಸಾಮಾನ್ಯ ವಿಧಗಳಲ್ಲಿ ಒಂದಾಗಿದೆ, ಜನಿಸಿದ 100 ಶಿಶುಗಳಲ್ಲಿ 1 ಶಿಶು ಈ ರೋಗದಿಂದ ಬಳಲಬಹುದು, ಇಂತಹ ವಿಶಿಷ್ಟ ಕಾಯಿಲೆಯಿಂದ ಈ ಬಾಲಕ ಬಳಲುತ್ತಿದ್ದ. ಮಗು ಹುಟ್ಟುವ ಸಂದರ್ಭದಲ್ಲಿ (ಅಂದರೆ ಮಗು ಗರ್ಭಕೋಶದಲ್ಲಿದ್ದಾಗ ತೆರೆದಿರುವ ನರ, ಹುಟ್ಟಿದ ತಕ್ಷಣ ಮುಚ್ಚಿಕೊಳ್ಳಬೇಕು) ಹೃದಯದೊಳಗೆ ಇದ್ದ 2 ಮುಖ್ಯ ವಾಲ್ವ್‍ಗಳು ಪೂರ್ಣವಾಗಿ ಮುಚ್ಚಿಕೊಳ್ಳದಿದ್ದರಿಂದ ರಕ್ತಸ್ರಾವವಾಗುತ್ತಿತ್ತು. ಇದು ಸಂಕೀರ್ಣ ಪ್ರಕರಣವಾಗಿತ್ತು. ಒಂದು ವೇಳೆ ಇದಕ್ಕೆ ಚಿಕಿತ್ಸೆ ದೊರೆಯದಿದ್ದರೆ, ಹೃದಯ ದೊಡ್ಡದಾಗಿ ಅದರ ಕಾರ್ಯಗಳು ಸ್ಥಗಿತಗೊಳ್ಳುತ್ತಿದ್ದವು. ವಾಲ್ವ್‍ಗಳು ಮುಚ್ಚಿಕೊಳ್ಳದಿದ್ದರೆ ರಕ್ತದ ಹರಿಯುವಿಕೆಯಲ್ಲಿ ಒತ್ತಡ ಉಂಟಾಗಿ ಹೃದಯಕ್ಕೆ ತೊಂದರೆಯಾಗುತ್ತಿತ್ತು. ಈ ರೀತಿ ಕಾಂಜೆನೈಟಲ್ ಸಮಸ್ಯೆಯನ್ನು 9 ವರ್ಷದ ಕೌಶಿಕ್ ಬರ್ಮನ್ ಎದುರಿಸಿದ್ದ. ಬಾಲಕ ಎದುರಿಸುತ್ತಿದ ಸಮಸ್ಯೆ ಕುರಿತು ಆಸ್ಪತ್ರೆಯ ವೈದ್ಯರ ತಂಡ, ಸುದೀರ್ಘ ಅವಧಿ ಸಮಾಲೋಚನೆ ನಡೆಸಿ ಆಧುನಿಕ ಉಪಕರಣದ ಮೂಲಕ ಓಪನ್ ಆಗಿದ್ದ ನರವನ್ನು ಓಪನ್ ಹಾರ್ಟ್ ಶಸ್ತ್ರಚಿಕಿತ್ಸೆಯ ಮೂಲಕ ಮುಚ್ಚಿ, ಜನ್ಮಜಾತ ರೋಗವನ್ನು ಗುಣಪಡಿಸಿದರು. ಈ ಚಿಕಿತ್ಸೆಯಿಂದ ಮಗುವಿನ ಮುಂದಿನ ಬೆಳವಣಿಗೆ ಉತ್ತಮವಾಗಿದೆ. ಅಲ್ಲದೆ ಸಾಮಾನ್ಯರಂತೆ ಮುಂದಿನ ಭವಿಷ್ಯ ಕಂಡುಕೊಳ್ಳಲಿದ್ದಾನೆ ಎಂದು ‘ಕಾರ್ಡಿಯಾಕ್ ಫ್ರಾಂಟಿ¬ಡಾ ಹಾಗೂ ಸಿದ್ಧಾರ್ಥ ಹಾರ್ಟ್ ಸೆಂಟರ್’ ಮುಖ್ಯಸ್ಥರಾದ ಡಾ. ಡಾ.ತಮೀಮ್‍ಅಹಮ್ಮದ್ ವಿವರಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಸುಶೀಲ್ ಚಂದ್ರ ಮಹಾಪಾತ್ರ, ಉಪಪ್ರಾಂಶುಪಾಲರಾದ ಡಾ.ಪ್ರಭಾಕರ್ ಹಾಗೂ ಹೃದಯಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರ ತಂಡ ಹಾಗೂ ಬಾಲಕನ ತಂದ ಬಿಪುಲ್ ಬರ್ಮನ್ ಹಾಗೂ ತಾಯಿ ಶಿವಾನಿ ಇತರರಿದ್ದರು

Leave a Reply

Your email address will not be published. Required fields are marked *