ತು.ಗ್ರಾ. ಬಿ.ಸುರೇಶ್‍ಗೌಡ ಎಂಬ ಕುದುರೆ ಕಟ್ಟಿ ಹಾಕಲು ಸವಾಲು

ತುಮಕೂರು:2018ರ ಚುನಾವಣೆಯಲ್ಲಿ ಕಾರ್ಯಕರ್ತರ ಅತಿಯಾದ ಆತ್ಮವಿಶ್ವಾಸದಿಂದ ಬಿ.ಸುರೇಶಗೌಡರು ಸೋಲು ಕಂಡಿದ್ದು ಈ ಬಾರಿ 100ಕ್ಕೆ ನೂರರಷ್ಟು ಗೆಲುವು ಸಾಧಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರು ಹೇಳಿದರು.

ಅವರಿಂದು ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಹೊನ್ನುಡಿಕೆ ಮತ್ತು ಹೆಬ್ಬೂರು ಹೋಬಳಿಗಳ ಬಿಜೆಪಿ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತಿದ್ದರು.

ಧರ್ಮ ಸಂಸ್ಥಾಪನಾರ್ಥವಾಗಿ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ನಡೆಯುತ್ತಿರುವ ಚುನಾವಣೆ ಎಂಬ ಅಶ್ವಮೇಧಯಾಗಕ್ಕೆ ಸುರೇಶಗೌಡ ಎಂಬ ಕುದುರೆಯನ್ನು ಬಿಟ್ಟಿದ್ದೇವೆÉ.ವಿರೋಧ ಪಕ್ಷಗಳಿಗೆ ತಾಕತ್ತು ಇದ್ದರೆ ಈ ಕುದುರೆಯನ್ನು ಕಟ್ಟಿ ಹಾಕಿ ಎಂದು ಎಂದು ಸವಾಲಾಕಿದ ಸದಾನಂದಗೌಡರು, ತಮ್ಮ ಹತ್ತು ವರ್ಷಗಳ ಶಾಸಕ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ದಿಗಾಗಿ 2000 ಕೋಟಿಗೂ ಅಧಿಕ ಅನುದಾನವನ್ನು ತಂದು ರಸ್ತೆ, ಚರಂಡಿ,ಸಮುದಾಯ ಭವನ, ವಿದ್ಯುತ್ ಸಂಪರ್ಕ,ಪ್ರಾಥಮಿಕ ಶಾಲೆಗಳ ಅಭಿವೃದ್ದಿ ಸೇರಿದಂತೆ ಕ್ಷೇತ್ರದ ಮೂಲಭೂತ ಸೌಕರ್ಯಗಳಿಗೆ ಹೆಚ್ಚು ಒತ್ತು ನೀಡಿದ್ದಾರೆ ಎಂದರು.

ರಾಜ್ಯದಲ್ಲಿ ಅಧಿಕಾರದ ಆಸೆಗಾಗಿ ನಡೆಯುತ್ತಿರುವ ಜೆಡಿಎಸ್‍ನ ಪಂಚರತ್ನ ಯಾತ್ರೆ, ಪಂಚರ್ ಆಗಿದೆ.ಕಾಂಗ್ರೆಸ್‍ನ ಪ್ರಜಾದ್ವನಿಗೆ ಉಸಿರೇ ಇಲ್ಲದಂತಾಗಿದೆ.ಡಿ.ಕೆ.ಶಿ, ಸಿದ್ದರಾಮಯ್ಯ ಅವರದ್ದು ಒಂದೊಂದು ದ್ವನಿಯಾದರೆ, ಮಲ್ಲಿಕಾರ್ಜುನ ಖರ್ಗೆಅವರದೇ ಬೇರೆ ಆಲೋಚನೆಯಾಗಿದೆ.ದೇಶ, ನಾಡಿನ ಅಭಿವೃದ್ದಿ ಪರಿಕಲ್ಪನೆಯಲ್ಲಿ ದುಡಿಯುತ್ತಿರುವ ಎಕೈಕ ಪಕ್ಷವೆಂದರೆ ಅದು ಬಿಜೆಪಿ ಮಾತ್ರ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಬಿ.ಸುರೇಶಗೌಡ ಮಾತನಾಡಿ,ನನ್ನ 10 ವರ್ಷಗಳ ಆಡಳಿತದಲ್ಲಿ ಕುಡಿಯುವ ನೀರು, ಸರಕಾರಿ ಶಾಲೆಗಳ ಉನ್ನತ್ತೀಕರಣ, ವಿದ್ಯುತ್ ಸ್ಥಾವರಗಳ ನಿರ್ಮಾಣ, ಹೆಬ್ಬೂರು, ಗೂಳೂರು ಏತ ನೀರಾವರಿ, ಒಂದು ಐಪಿಸೇಟ್‍ಗೆ ಒಂದು ಟಿ.ಸಿ. ಪ್ರಾಯೋಗಿಕ ಯೋಜನೆಗಳ ತಂದು ಇಡೀ ದೇಶವನ್ನು ಮಾದರಿಯಾಗಿ ಮಾಡಿದ್ದೇನೆ.ಇದಕ್ಕೆ ಸದಾನಂದಗೌಡ ಬೆಂಬಲವೂ ಇತ್ತು. ಅವರು ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ ಕ್ಷೇತ್ರಕ್ಕೆ ನೂರಾರು ಕೋಟಿ ರೂಗಳ ಅನುದಾನ ನೀಡಿ, ಸಹಕರಿಸಿದ್ದಾರೆ ಎಂದರು.

ಮುಂದಿನ ಚುನಾವಣೆಯಲ್ಲಿ ಗೆದ್ದರೆ ನಾಗವಲ್ಲಿಗೆ ಪ್ರಥಮದರ್ಜೆ ಕಾಲೇಜು,ಹೊಸದಾಗಿ ನರಸಾಪುರಕ್ಕೆ ಐಟಿಐ ಕಾಲೇಜು ಸೇರಿದಂತೆ ಹಲವಾರು ಹೊಸ ಯೋಜನೆಗಳನ್ನು ತರಲಾಗುವುದು ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ ಮಾತನಾಡಿದರು. ವೇದಿಕೆಯಲ್ಲಿ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಶಿವಪ್ರಸಾದ್,ಜಿ.ಪಂ.ಮಾಜಿ ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ, ಮಂಡಲ ಅಧ್ಯಕ್ಷ ಶಂಕರ್, ಜಿ.ಪಂ.ಮಾಜಿ ಸದಸ್ಯರಾದ ರಾಜೇಗೌಡ,ರಾಮುಸ್ವಾಮಿಗೌಡ, ಮುಂತಾದವರಿದ್ದರು.

Leave a Reply

Your email address will not be published. Required fields are marked *