ತುಮಕೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತುಮಕೂರು ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಮಾಜಿ ಶಾಸಕರಾದ ಡಾ.ರಫೀಕ್ ಅಹಮದ್ ಅವರಿಗೆ ಟಿಕೇಟ್ ನೀಡಬೇಕೆಂದು ಡಾ.ರಫೀಕ್ ಅಭಿಮಾನಿ ಬಳಗದ ಮುಖಂಡರು ಕಾಂಗ್ರೆಸ್ ಪಕ್ಷದ ಹೈಕಮಾಂಡ್‍ನನ್ನು ಒತ್ತಾಯಿಸಿದ್ದಾರೆ.
ಹೊಸದಾಗಿ ತುಮಕೂರು ನಗರ ವಿಧಾನಸಭಾ ಕ್ಷೇತ್ರ ರಚನೆಯಾದ ನಂತರ 2008ರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಡಾ.ರಫೀಕ್ ಅಹಮದ್,ಅತಿ ಕಡಿಮೆ ಅಂತರದಲ್ಲಿ ಸೋಲು ಕಂಡಿದ್ದರು.ಆದರೂ ಕ್ಷೇತ್ರದಲ್ಲಿಯೇ ನಿರಂತರವಾಗಿ ಜನಸಂಪರ್ಕದಲ್ಲಿದ್ದ ಪರಿಣಾಮ 2013ರ ಚುನಾವಣೆಯಲ್ಲಿ ಗೆಲುವು ಸಾಧಿಸಿದರು. 2018ರಲ್ಲಿ ಅತಿ ಕಡಿಮೆ ಅಂತರದಲ್ಲಿ ಸೋಲು ಕಂಡಿದ್ದಾರೆ. ಹಾಗಾಗಿ 2023ರ ಮೇ ನಲ್ಲಿ ನಡೆಯುವ ಚುನಾವಣೆಯಲ್ಲಿ ಮತ್ತೊಮ್ಮೆ ಸ್ಪರ್ಧಿಸಲು ಡಾ.ರಫೀಕ್ ಅಹಮದ್ ಅವರಿಗೆ ಟಿಕೇಟ್ ನೀಡಬೇಕೆಂಬುದು ನಮ್ಮಗಳ ಆಗ್ರಹವಾಗಿದೆ.
ಇಂದು ರಾಷ್ಟ್ರನಾಯಕರು,ರಾಜ್ಯ ನಾಯಕರು ತುಮಕೂರು ನಗರದಲ್ಲಿ ನಡೆದಿರುವ ಅಭಿವೃದ್ದಿ ಕಾಮಗಾರಿಗಳು, ಅದರಲ್ಲಿಯೂ ಸ್ಮಾರ್ಟ್‍ಸಿಟಿ ಯೋಜನೆಯನ್ನು ತಮ್ಮದೆಂದು ಬೀಗುತ್ತಿದ್ದಾರೆ.ಆದರೆ ಸ್ಮಾರ್ಟ್‍ಸಿಟಿ ಯೋಜನೆಯ ಮೂಲ ಕಾರಣಕರ್ತರು ಡಾ.ರಫೀಕ್ ಅಹಮದ್,ಅವರು ಶಾಸಕರಾಗಿದ್ದ ಕಾಲದಲ್ಲಿ ಸರಕಾರದ ನಿಗಧಿ ಪಡಿಸಿದ ಮಾನದಂಡಗಳನ್ನು ಅನುಸರಿಸಿ,ಸರಕಾರಕ್ಕೆ ಮನದಟ್ಟು ಮಾಡಿಕೊಟ್ಟ ಪರಿಣಾಮ 2ನೇ ಹಂತದ ಸ್ಮಾರ್ಟಿಸಿಟಿ ಯೋಜನೆಯಲ್ಲಿ ತುಮಕೂರು ನಗರ ಆಯ್ಕೆಯಾಯಿತು. ಅಲ್ಲದೆ ದಿಬ್ಬೂರಿನಲ್ಲಿ ರಾಜೀವ್‍ಗಾಂಧಿ ಹೌಸಿಂಗ್ ಕಾರ್ಪೋರೇಷನ್ ವತಿಯಿಂದ ನಿರ್ಮಿಸಿರುವ ದೇವರಾಜ ಅರಸು ಬಡಾವಣೆ ಸಹ ಡಾ.ರಫೀಕ್ ಅಹಮದ್ ಅವರು ಈ ನಗರದ ಬಡಜನರಿಗೆ ನೀಡಿದ ಕೊಡುಗೆ ಯಾಗಿದೆ.ಸರಕಾರದವತಿಯಿಂದ ನಿರ್ಮಿಸಿದ ಸುಮಾರು 1200 ಮನೆಗಳ ಸಮುಚ್ಚಯವನ್ನು ಸಾಮಾಜಿಕ ನ್ಯಾಯದ ಅಡಿಯಲ್ಲಿ ಆರ್ಹರಿಗೆ ಹಂಚಿಕೆ ಮಾಡಿ,ಸೂರಿಲ್ಲದೆ ರಸ್ತೆ ಬದಿ, ಚರಂಡಿ ಮೇಲೆ,ಹೈಟೆಷನ್ ವೈರ್ ಕೆಳಗೆ ಬದುಕುತಿದ್ದ ನೂರಾರು ಕುಟುಂಬಗಳು ನೆಮ್ಮದಿಯ ಜೀವನ ನಡಸುವಂತಾಗಲು ಶ್ರಮಿಸಿದವರು.ಹಾಗಾಗಿ ಈ ಸಾಲಿನ ಚುನಾವಣೆಯಲ್ಲಿ ಅವರನ್ನು ಹೊರತು ಪಡಿಸಿ, ಕಾಂಗ್ರೆಸ್ ಪಕ್ಷ ಬೇರೆಯವರಿಗೆ ಟಿಕೇಟ್ ನೀಡಬಾರದೆಂಬುದು ಡಾ.ರಫೀಕ್ ಅಹಮದ್ ಅಭಿಮಾನಿ ಬಳಗದ ಒಕ್ಕೊರಲ ಒತ್ತಾಯವಾಗಿದೆ.
ವಿದ್ಯಾವಂತ,ಸಜ್ಜನ ರಾಜಕಾರಣಿಯಾಗಿ,ಪಕ್ಷಭೇಧವಿದಲ್ಲದೆ ಎಲ್ಲರೊಂದಿಗೆ ಸ್ನೇಹದಿಂದ ಇರುವ ಡಾ.ರಫೀಕ್ ಅಹಮದ್ ಅವರಿಗೆ ಟಿಕೇಟ್ ನೀಡದೆ ಬೇರೊಬ್ಬರಿಗೆ ಜಿಲ್ಲಾ ಕಾಂಗ್ರೆಸ್‍ನಿಂದ ಟಿಕೇಟ್ ನೀಡಿದರೆ, ಡಾ.ರಫೀಕ್ ಅಹಮದ್ ಅಭಿಮಾನಿಗಳು ಕಾಂಗ್ರೆಸ್ ಪಕ್ಷದಿಂದ ಹಿಂದೆ ಸರಿಯುವುದು ಅನಿವಾರ್ಯವಾಗುತ್ತದೆ ಎಂಬ ಎಚ್ಚರಿಕೆಯನ್ನು ಸಹ ಪಕ್ಷದ ಹೈಕಮಾಂಡ್‍ಗೆ ನೀಡಬಯಸುತ್ತೇವೆ.