ತುಮಕೂರು ಸಮೀಪದ ರಾಷ್ಟ್ರೀಯ ಹೆದ್ದಾರಿ-4ರ ಪಕ್ಕದಲ್ಲಿರುವ ಹೆಬ್ಬಾಕದ ಕೆರೆಗೆ ರಾತ್ರಿ ಬಿದ್ದ ಮಳೆಯಿಂದ ನಿರೀಕ್ಷೆಗಿಂತಲೂ ನೀರು ಸಂಗ್ರಹವಾದ ಕಾರಣ ಕೋಡಿ ಹೊಡೆದು ನೀರನ್ನು ಹೊರಬಿಟ್ಟ ಕಾರಣ ಹೆದ್ದಾರಿ ಜಲಾವೃತಗೊಂಡು ಟ್ರಾಫಿಕ್ ಜಾಮ್ ಉಂಟಾಗಿದೆ.
ಕಳೆದ ಐದಾರು ದಿನಗಳ ಹಿಂದೆಯೇ ಕೋಡಿ ಬಿದ್ದದ್ದ ಹೆಬ್ಬಾಕದ ಕೆರೆಗೆ ರಾತ್ರಿ ಬಿದ್ದ ಮಳೆಯಿಂದ ಕೆರೆಗೆ ಹೆಚ್ಚು ನೀರು ಸಂಗ್ರಹ ವಾಗಿ ಅಪಾಯ ಮಟ್ಟ ಮುಟ್ಟಿದ ಕಾರಣ ಇಂದು ಬೆಳಿಗ್ಗೆ ಕೋಡಿ ಏರಿಯನ್ನು ಹೊಡಿದಿದ್ದರಿಂದ ನೀರು ಹೆದ್ದಾರಿಯಲ್ಲಿ ನದಿಯಂತೆ ಹರಿದ ಕಾರಣ ಸಂಚಾರಕ್ಕೆ ಅಡಚಣೆಯುಂಟಾಗಿ 10 ಕಿ.ಮೀ.ಹೆಚ್ಚು ವಾಹನಗಳು ಸಾಲುಗಟ್ಟಿ ನಿಂತಿವೆ.
ಊರುಕೇರಿ ಗ್ರಾಮದ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ಕೋಡಿ ನೀರು ಹರಿಯುತ್ತಿದೆ. ರಸ್ತೆ ಮೇಲೆ ನೀರು ಹರಿಯುತ್ತಿರುವುದರಿಂದ ತುಮಕೂರು-ಬೆಂಗಳೂರು ಮಾರ್ಗದ ಕ್ಯಾತ್ಸಂದ್ರದಿಂದ ತುಮಕೂರು-ಶಿರಾ ಮಾರ್ಗದ ಕೋರಾ ಗ್ರಾಮದವರೆಗೂ ವಾಹನಗಳು ಸಾಲುಗಟ್ಟಿ ನಿಂತಿವೆ. ಸುಮಾರು 10 ಕಿಮೀ ಉದ್ದಕ್ಕೆ ವಾಹನ ಸಾಲುಗಟ್ಟಿರುವುದರಿಂದ ಪ್ರಯಾಣಿಕರು ಪರದಾಡುತ್ತಿದ್ದಾರೆ.
ಈ ಹೆದ್ದಾರಿಯು ರಾಜಧಾನಿ ಬೆಂಗಳೂರಿನೊಂದಿಗೆ ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಕಲ್ಯಾಣ ಕರ್ನಾಟಕ ಮತ್ತು ಮುಂಬೈ ಕರ್ನಾಟಕದ ಬಹುತೇಕ ಜಿಲ್ಲಾ ಕೇಂದ್ರಗಳನ್ನು ಸಂಪರ್ಕಿಸುತ್ತದೆ. ಅಷ್ಟೇ ಅಲ್ಲದೆ, ಬೆಳಗಾವಿ-ಪುಣೆ ಮಾರ್ಗವಾಗಿ ಉತ್ತರ ಭಾರತದೆಡೆಗೆ ತೆರಳುವ ವಾಹನಗಳು ಸಹ ಇದೇ ಮಾರ್ಗವನ್ನು ಬಳಸುತ್ತವೆ. ಟ್ರಾಫಿಕ್ ಜಾಮ್ನಲ್ಲಿ ಸಿಲುಕಿ ಚಾಲಕರು ಮತ್ತು ವಾಹನ ಸವಾರರು ಪರದಾಡುತ್ತಿದ್ದಾರೆ. ಸಂಚಾರ ವ್ಯವಸ್ಥೆಯನ್ನು ಮತ್ತೆ ತಹಬದಿಗೆ ತರಲು ಪೊಲೀಸರು ಹರಸಾಹಸ ಮಾಡುತ್ತಿದ್ದಾರೆ. ಊರುಕೆರೆ-ಹೆಬ್ಬಾಕ ನಡುವಣ ರಸ್ತೆ ಸಂಪರ್ಕ ಕಡಿತಗೊಂಡಿದೆ. ಗ್ರಾಮದ ಆಂಜನೇಯ ದೇಗುಲ, ಕೆರೆ ಅಂಚಿನ ಮನೆಗಳು ಮುಳುಗಿವೆ. ಹೆಬ್ಬಾಕ, ನರಸಾಪುರ, ಊರುಕೆರೆ ಭಾಗದ ಬಹುತೇಕ ಅಡಿಕೆ ಹಾಗೂ ತೆಂಗು ತೋಟಗಳು ಜಲಾವೃತಗೊಂಡಿವೆ.