
ತುರುವೇಕೆರೆ : ದೇಶವು ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದೆ, ಬೆಲೆ ಏರಿಕೆ, ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡುವಂತಹ ಕೆಲಸವನ್ನು ಬಿಜೆಪಿ ಸರ್ಕಾರ ಮಾಡುತ್ತಿದ್ದು, ಇಂದು ಇವುಗಳ ರಕ್ಷಣೆಗಾಗಿ ಕಾಂಗ್ರಸ್ ಪಕ್ಷವನ್ನು ಬೆಂಬಲಿಸುವ ಅನಿವಾರ್ಯ ಎಂದು ಲೇಖಕ ಕೆ.ಪಿ,ನಟರಾಜು ಹೇಳಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಮೇ 10 ರಂದು ನಡೆಯುವ ಕರ್ನಾಟಕ ವಿಧಾನಸಬಾ ಚುನಾವಣೆಯಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿನ ಡಬಲ್ ಇಂಜಿನ್ ಬಿಜೆಪಿ ಸರ್ಕಾರಗಳು ಅಭಿವೃದ್ಧಿ ಸಾಧಿಸುವ ಬದಲು ಜನರಲ್ಲಿ ದ್ವೇಷ ಬಿತ್ತಲಾಯಿತು. ಅಬಿವೃದ್ಧಿಯ ಪಾಲನ್ನು ಕಾರ್ಪೋರೇಟ್ ಕಂಪನಿಗಳ ಖಜಾನೆ ತುಂಬಿಸಿ, ಜನರಿಗೆ ಬೆಲೆ ಏರಿಕೆ ಮತ್ತು ತೆರಿಗೆ ಹೆಚ್ಚಳ ಮಾಡಿದ ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸಲು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದಾಗಿ ಜಾಗೃತ ಮತದಾರರ ವೇದಿಕೆ ಮತ್ತು ಎದ್ದೇಳು ಕರ್ನಾಟಕ ಒಕ್ಕೂಟದ ಪದಾಧಿಕಾರಿಗಳು ನಿರ್ಧರಿಸಿರುವುದಾಗಿ ಹೇಳಿದರು.
ಸಂವಿಧಾನ ಅಡಿಯಲ್ಲಿ ಪ್ರಜಾಪ್ರಭುತ್ವ ರಕ್ಷಣೆಗೆ, ಜಾತಿ ದೌರ್ಜನ್ಯ ತಡೆಯುವ, ಮಹಿಳೆಯರ ರಕ್ಷಣೆ, ಅಲ್ಪಸಂಖ್ಯಾತರ ಮೇಲಿನ ದಾಳಿ, ಕೋಮು ದ್ವೇಷ ಹೆಚ್ಚುಮಾಡುವ ಶಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸದೆ ಮೌನವಹಿಸಿದ ಸರ್ವಾಧಿಕಾರಿ ದೋರಣೆಯ ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸಬೇಕೆಂದು ತಿಳಿಸಿದರು.
ಕೋವಿಡ್ ಸಾಂಕ್ರಾಮಿಕ ಸಂದರ್ಭ ಮತ್ತು ನೆರೆ ಬಂದಾಗ ಪ್ರದಾನ ಮಂತ್ರಿ ಸೇರಿದಂತೆ ಕೇಂದ್ರ-ರಾಜ್ಯ ಸಚಿವರು ಚುನಾವಣಾ ಗೆಲುವಿಗೆ ಕಾಳಜಿ ವಹಿಸುತ್ತಿರುವಂತೆ ಅಂದು ಜನರ ಕಷ್ಟಗಳಿಗೆ ಪೂರ್ಣಮನಸ್ಸಿನಿಂದ ಸ್ಪಂದಿಸಲಿಲ್ಲ. ಪಡಿತರ ಕಡಿತ, ಗ್ಯಾಸ್ ಸಬ್ಸಿಡಿ ಕಿತ್ತುಹಾಕಿ ದರ ಹೆಚ್ಚಳದಿಂದ ಜನಸಾಮಾನ್ಯರ ಬದುಕು ತೀವ್ರ ಸಂಕಷ್ಟಕ್ಕೆ ಸಿಲುಕಿದೆ ಎಂದರು.
ಆರೋಗ್ಯ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕರಾದ ಡಾ.ಹೆಚ್.ವಿ.ರಂಗಸ್ವಾಮಿ ಮಾತನಾಡಿ, ಪ್ರಜಾಪ್ರಭುತ್ವ ದೊಡ್ಡ ರಾಷ್ಟ್ರವಾದ ಭಾರತದಲ್ಲಿ ಇಂದು ವಾತವರಣ ಕಲುಷಿತಗೊಂಡಿದ್ದು, ಇತ್ತೀಚಿನ ಸರ್ಕಾರಗಳು ಹೇಳಿದಂತೆ ನಡೆದುಕೊಳ್ಳುತ್ತಿಲ್ಲ, ಸಂವಿಧಾನದಡಿಯಲ್ಲಿ ಆಯ್ಕೆಯಾದ ಸರ್ಕಾರಗಳು ಸಂವಿಧಾನ ಆಶಯಗಳನ್ನು ಪಾಲಿಸದೆ ಮತಾಂದತೆಯನ್ನು ಭಿತ್ತುವುದು, ಧರ್ಮ, ಧರ್ಮಗಳನ್ನು ಒಡೆಯುವ ಕೆಲಸವನ್ನು ಮಾಡುತ್ತಿವೆ ಎಂದರು.
ಮನುಷ್ಯ ಪರವಾದ ವಾತವರಣ ಕಣ್ಮರೆಯಾಗುತ್ತಿದ್ದು, ಸಂವಿಧಾನ ಮತ್ತು ಪ್ರಜಾಪ್ರಭುತ್ವ ಸಂಕಷ್ಟಕ್ಕೆ ಸಿಲುಕಿರುವ ಇಂತಹ ಕಾಲದಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯುತ್ತಿದ್ದು, ಕಾಂಗ್ರೆಸ್ ಪರವಾಗಿರುವ ಅಲೆ ಇರುವುದರಿಂದ ಸುಭದ್ರ ಸರ್ಕಾರಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಜಾಗೃತ ಮತದಾರರ ವೇದಿಕೆ ಮತ್ತು ಎದ್ದೇಳು ಕರ್ನಾಟಕ ಬೆಂಬಲಿಸಲಿವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ನಿವೃತ್ತ ಉಪ ವಿಭಾಗಾಧಿಕಾರಿ ಎಂ.ಸಿ.ನರಸಿಂಹಮೂರ್ತಿ, ರೈತ ಸಂಘದ ಯರಗುಂಟೆ ನಟರಾಜಪ್ಪ, ನಿವೃತ್ತ ಪ್ರಾಂಶುಪಾಲರಾದ ನಾಗೇಂದ್ರಪ್ಪ, ನಿವೃತ್ತ ಉಪನ್ಯಾಸಕರಾದ ಹೆಚ್.ಎಸ್.ಶ್ರೀನಿವಾಸನ್ ಉಪಸ್ಥಿತರಿದ್ದರು.