ಸ್ವಚ್ಚತೆಯ ಬಗ್ಗೆ ಅರಿವಿಲ್ಲದ ಕಾರಣದಿಂದಾಗಿಯೇ ಮಹಿಳೆಯರು ನಾನಾ ಕಾಯಿಲೆ-ಡಾ.ಪಾವನ ಕಳವಳ

ತುಮಕೂರು: ಸ್ವಚ್ಚತೆಯ ಬಗ್ಗೆ ಅರಿವಿಲ್ಲದ ಕಾರಣದಿಂದಾಗಿಯೇ ಮಹಿಳೆಯರು ನಾನಾ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆಂದು ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರಾದ ಡಾ.ಪಾವನ ಕಳವಳ ವ್ಯಕ್ತಪಡಿಸಿದರು.

ತುಮಕೂರು ನಗರ ಎನ್.ಆರ್.ಕಾಲೋನಿ ಸಮುದಾಯಭವನದಲ್ಲಿ ಮಹಿಳಾ ಇಲಾಖೆ ಮತ್ತು ವರದಕ್ಷಿಣೆ ವಿರೋಧಿ ವೇದಿಕೆ ಸಹಯೋಗದ ತುಮಕೂರು ನಗರ ಸಾಂತ್ವನ ಕೇಂದ್ರ. ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯ ಮಹಿಳಾ ಘಟಕ ಹಾಗೂ ಕೋತಿತೋಪು ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಹದಿಹರೆಯದ ಹೆಣ್ಣುಮಕ್ಕಳು, ಮಹಿಳೆಯರಿಗಾಗಿ ಹಮ್ಮಿಕೊಂಡಿದ್ದ ಋತುಸ್ರಾವ ನೈರ್ಮಲ್ಯ – ಸ್ವಚ್ಚತೆ ಕುರಿತ ಅರಿವಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಬಹಳಷ್ಟು ಮಹಿಳೆಯರಿಗೆ ಆರೋಗ್ಯ ಮತ್ತು ಸ್ವಚ್ಛತೆಯ ಅರಿವಿನ ಕೊರತೆ ಇದೆ. ಇದರಿಂದಾಗಿಯೇ ಸಾಕಷ್ಟು ರೋಗಗಳನ್ನು ತಂದುಕೊಳ್ಳುತ್ತಿದ್ದಾರೆಂದು ವಿಷಾದಿಸಿದರು.

ಗ್ರಾಮೀಣ ಮಹಿಳೆಯರು, ತಾಂಡಾಗಳು, ಹಟ್ಟಿಗಳು, ಕೊಳಗೇರಿ ನಿವಾಸಿಗಳು, ಹಿಂದುಳಿದ ಪ್ರದೇಶಗಳಲ್ಲಿ ವಾಸಿಸುವ ಹೆಣ್ಣು ಮಕ್ಕಳಿಗೆ ಆರೋಗ್ಯ ಮತ್ತು ಶುಚಿತ್ವದ ಬಗ್ಗೆ ಹೆಚ್ಚು ಅರಿವು ಮೂಡಿಸಿದರೆ ಸಾಕಷ್ಟು ಕಾಯಿಲೆಗಳನ್ನು ತಡೆಗಟ್ಟಬಹುದು. ಇಂದಿಗೂ ಸಹ ಮುಟ್ಟಿನ ಸಮಯದಲ್ಲಿ ಹೇಗೆ ಶುಚಿತ್ವ ಮತ್ತು ಆರೋಗ್ಯ ಕಾಪಾಡಿಕೊಳ್ಳಬೇಕು ಎಂಬ ಬಗ್ಗೆ ಕೆಲವರಿಗೆ ತಿಳವಳಿಕೆ ಇಲ್ಲ. ಮುಟ್ಟಾದ ಸಮಯದಲ್ಲಿ 8 ಗಂಟೆಯವರೆಗೆ ಪ್ಯಾಡ್‍ಗಳನ್ನು ಬದಲಾಯಿಸಬೇಕು, ಬಟ್ಟೆಯಾದರೆ ಶುದ್ಧ ನೀರಿನಲ್ಲಿ ತೊಳೆದು ಒಣಗಿಸಿದ ನಂತರವೇ ಉಪಯೋಗಿಸಬೇಕು ಎಂದರು.

ಶಾಲಾ ಕಾಲೇಜುಗಳಲ್ಲಿ ಓದುವ ವಿದ್ಯಾರ್ಥಿನಿಯರು ಶೌಚಾಲಯ ಇಲ್ಲದ ಕಡೆ ಮೂತ್ರ ವಿಸರ್ಜನೆ ಮಾಡದೆ ಮನೆಗೆ ಬರುತ್ತಾರೆ. ಇದು ಬಹಳಷ್ಟು ಅನಾಹುತಗಳಿಗೆ ಕಾರಣವಾಗುತ್ತದೆ. ಗರ್ಭಕೋಶಕ್ಕೆ ಹಾನಿ ಉಂಟಾಗುತ್ತದೆ. ಹೆಚ್ಚು ನೀರು ಕುಡಿದರೆ ಮೂತ್ರ ವಿಸರ್ಜನೆ ಸಮಸ್ಯೆ ಎಂದು ಕೆಲವರು ನೀರು ಕುಡಿಯುವುದಿಲ್ಲ. ಇವೆಲ್ಲವೂ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ ಎಂದರು.
ಹದಿಹರೆಯದ ಹಂತದಲ್ಲಿ ವಿದ್ಯಾರ್ಥಿಗಳು ಪ್ರೀತಿ-ಪ್ರೇಮದ ಬಲೆಗೆ ಬೀಳುವುದು ಹೆಚ್ಚಾಗುತ್ತಿದೆ. ಮೊಬೈಲ್‍ಗಳು ಹದಿಹರೆಯದವರನ್ನು ದಾರಿ ತಪ್ಪಿಸುತ್ತಿವೆ. ಇವುಗಳಿಗೆ ಬಲಿಯಾಗದಂತೆ ಎಚ್ಚರಿಕೆ ವಹಿಸಬೇಕು. ಶಿಕ್ಷಣದ ಕಡೆಗೆ ಗಮನಹರಿಸಬೇಕು. ಚಿಕ್ಕ ವಯಸ್ಸಿನಲ್ಲಿ ವಿವಾಹ ಮಾಡಿಕೊಂಡರೆ ಅಪರಾಧವಾಗುತ್ತದೆ. ಪೋಕ್ಸೋ ಕಾಯ್ದೆಯ ಬಳಕೆಯೂ ಆಗುತ್ತದೆ ಎಂದು ಎಚ್ಚರಿಸಿದರು.

ಜಿಲ್ಲಾ ಆರೋಗ್ಯ ಇಲಾಖೆಯ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜಯಣ್ಣ ಮಾತನಾಡಿ ಹೆಣ್ಣು ಮಕ್ಕಳು ಸ್ವಚ್ಛತೆ ಮತ್ತು ಪೌಷ್ಠಿಕ ಆಹಾರದ ಕಡೆಗೆ ಹೆಚ್ಚು ಗಮನ ಹರಿಸಬೇಕು. ನಮ್ಮ ಸುತ್ತಮುತ್ತ ಬೆಳೆಯುವ ತರಕಾರಿ, ಸೊಪ್ಪು, ಹಣ್ಣುಗಳಲ್ಲಿ ಸಾಕಷ್ಟು ಪೌಷ್ಠಿಕಾಂಶವಿರುತ್ತದೆ. ಈ ಬಗ್ಗೆ ಅಸಡ್ಡೆ ಮಾಡಬಾರದು. ಶೌಚಾಲಯಗಳನ್ನು ಬಳಸುವಾಗ, ಋತುಸ್ರಾವ ಸಂದರ್ಭಗಳಲ್ಲಿ ಹೇಗೆ ಶುಚಿತ್ವ ಕಾಪಾಡಿಕೊಳ್ಳಬೇಕು ಎಂಬ ಬಗ್ಗೆ ತಿಳವಳಿಕೆ ಹೊಂದಬೇಕು. ಚಿಕ್ಕ ವಯಸ್ಸಿನಲ್ಲಿ ವಿವಾಹವಾದರೆ ಗರ್ಭಪಾತವಾಗುವುದೂ ಸೇರಿದಂತೆ ಹಲವು ಅನಾರೋಗ್ಯಗಳು ದೇಹದಲ್ಲಿ ಕಾಣಿಸಿಕೊಳ್ಳುತ್ತವೆ ಎಂದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ತುಮಕೂರು ನಗರ ಸಾಂತ್ವನ ಕೇಂದ್ರದ ಸಮಾಜ ಕಾರ್ಯಕರ್ತೆ ಪಾರ್ವತಮ್ಮ ರಾಜಕುಮಾರ ಮಾತನಾಡಿ ಕೌಟುಂಬಿಕ ಸ್ವಾಸ್ಥ್ಯ ಕಾಪಾಡುವುದು ಸಾಂತ್ವನ ಕೇಂದ್ರಗಳ ಜವಾಬ್ದಾರಿ. ಕುಟುಂಬಗಳಲ್ಲಿ ಎದುರಾಗುವ ಸಣ್ಣಪುಟ್ಟ ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಬೇಕು. ಸಮಸ್ಯೆಗಳು ದೊಡ್ಡದಾಗಲು ಬಿಟ್ಟರೆ ಬಹಿರಂಗ ರಂಪಾಟಗಳಾಗಿ ಕುಟುಂಬದ ಶಾಂತಿ, ನೆಮ್ಮದಿ ಹಾಳಾಗುತ್ತದೆ. ಈ ನಿಟ್ಟಿನಲ್ಲಿ ಕುಟುಂಬ ಪ್ರೀತಿ ಹೆಚ್ಚಿಸುವುದು, ಸ್ವಾಸ್ತ್ಯ ಕಾಪಾಡುವುದು, ಹೆಣ್ಣು ಮಕ್ಕಳಲ್ಲಿ ಅರಿವು ಮೂಡಿಸುವುದರಿಂದ ಒಂದು ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದರು.
ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯ ಮಹಿಳಾ ಘಟಕದ ಸಮಾಜ ಕಾರ್ಯಕರ್ತೆ ಅನುಪಮಾ ಮಾತನಾಡಿ ಮಹಿಳೆಯರು ವಿವಿಧ ರೀತಿಯ ತರಬೇತಿ ಮತ್ತು ಅರಿವಿನ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದರು.

ಕಾರ್ಯಕ್ರಮದಲ್ಲಿ ಸಾಂತ್ವನ ಕೇಂದ್ರದ ಸಮಾಲೋಚಕಿ ಎ.ಎನ್.ಸವಿತ, ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಅಧಿಕಾರಿ ಜಯಲಕ್ಷ್ಮಮ್ಮ, ಆರೋಗ್ಯ ಮೇಲ್ವಿಚಾರಕಿ ಮಂಜುಳ, ಮಹಿಳಾ ಆರೋಗ್ಯಾಧಿಕಾರಿ ಜಯಲಕ್ಷ್ಮಿ, ಕಿರಿಯ ಮಹಿಳಾ ಆರೋಗ್ಯಾಧಿಕಾರಿ ರಾಧಮ್ಮ, ಸಿಎಚ್‍ಓ ಲಕ್ಷ್ಮೀ, ಅಂಗನವಾಡಿ ಶಿಕ್ಷಕಿಯರಾದ ಭಾಗ್ಯಮ್ಮ, ಸುವರ್ಣ, ರಾಧಾಮಣಿ, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *