ಸುಂದರವಾದ ಹಡಗಿಯರು ಮೇಕಪ್ ಮಾಡಿಕೊಂಡು ಸೊಂಟದ ಮೇಲೆ ಹೊಳೆಯುವ ತಾಮ್ರದ ಬಿಂದಿಗೆ ಇಟ್ಟುಕೊಂಡು ಬಳುಕುತ್ತಿದ್ದರೆ, ನನ್ನ ಗೆಳೆಯ ಅಡ್ಡೆಯಲ್ಲಿ ನಾಲ್ಕು ತಾಮ್ರದ ಬಿಂದಿಗೆಯಲ್ಲಿನೀರು ತುಂಬಿಕೊಂಡು ಅಡ್ಡೆಯನ್ನು ಜೀಕಿ, ಜೀಕಿ ಅನ್ನಿಸಿಕೊಂಡು ನಡೆಯುತ್ತಿದ್ದರೆ ಆ ಸುಂದರಿಯರು ಇವನನ್ನು ನೋಡಿ ಒಮ್ಮೆ ನೋಡಿ ಹುಸಿ ನಗದೆ ಹೋಗಲು ಸಾಧ್ಯವೇ ಇರಲಿಲ್ಲ.

ಅವನಿದ್ದ ಊರಿನ ಪಕ್ಕದ ರಸ್ತೆಯಲ್ಲಿ ನಾನು ಓಡಾಡುತ್ತಿದ್ದ ಬಸ್ಸು ಹಲವಾರು ಸಲ ಓಡುತ್ತಿದ್ದರು, ಆ ಗೆಳೆಯನನ್ನು ಕಾಣಬೇಕೆಂದರೂ ನನ್ನ ಕೆಲಸ, ಚಿಕ್ಕಮಗಳೂರಿನಲ್ಲಿ ನನಗಾಗಿ ತಹತಹಿಸುತ್ತಾ ಕಾಯುತ್ತಾ ಇರುತ್ತಿದ್ದ ಗೆಳೆಯರ ಪ್ರೀತಿಯ ಕೈಕುಲುಕುವಿಕೆ ನನ್ನ ಮುಂದೆ ಹೋಗುವಂತೆ ಮಾಡಿ ಬಿಡುತ್ತಿತ್ತು. ಈ ಅಡ್ಡೆ ಹೊರುತ್ತಿದ್ದ ಗೆಳೆಯನನ್ನು ಕಂಡು ತಬ್ಬಬೇಕೆಂಬ ತವಕವಿದ್ದರೂ ಅದು ಸಾಧ್ಯವೇ ಆಗಿರಲಿಲ್ಲ.
ಮೊನ್ನೆ ನನ್ನ ಬಾಲ್ಯದ ಗೆಳೆಯ ಅಪ್ಪಾಜಿ.ಪಿ.ಎಂ. ಬಂದು ನಮ್ಮ ಅಕ್ಕನ ಮಗನ ಮದುವೆ ಕಡೂರಿನಲ್ಲಿದೆ ಬಾ ಎಂದು ಆಹ್ವಾನ ಪತ್ರಿಕೆಯ ಜೊತೆಗೆ ರಾಮರಾಜ್ ನ ಪ್ಯಾಂಟ್, ಶರ್ಟ್ ಪೀಸ್ ಕೊಟ್ಟ, ಹೀಗೆ ಕೊಡುವುದಾದರೆ ನಾನು ಮದುವೆಗೆ ಬರುವುದಿಲ್ಲ ಅಂದೆ, ಅದು ನಿನಗೆ ಬಿಟ್ಟಿದ್ದು, ನಾವು ಚಿಕ್ಕವರಿದ್ದಾಗ ತಿನ್ನಲು ಅನ್ನವಿರಲಿಲ್ಲ, ಉಡಲು ಬಟ್ಟೆ ಇರಲಿಲ್ಲ ಸುಮ್ಮನೆ ಈಗ ಎಲ್ಲಾ ಇರುವಾಗ ಗೆಳೆಯನಿಗೆ ಒಂದು ಜೊತೆ ಬಟ್ಟೆ ಕೊಟ್ಟರೆ ತಪ್ಪೇನು ಅಂತ ಗಹಗಹಿಸಿ ನಕ್ಕನು.
ಅವರ ಅಕ್ಕನ ಮಗನ ಮದುವೆಯ ಹೊರಟಾಗಲೇ ಗೆಳೆಯ ಅಡ್ಡೆ ಸಿದ್ದಪ್ಪ ಅಲಿಯಾಸ್ ಸಿದ್ದಪ್ಪ.ಪಿ.ಎಂ.ಗೆ ಪೋನ್ ಮಾಡಿ ಗೆಳೆಯ ನಾಳೆ ಬರುತ್ತೇನೆ, ಬಾ ಗೆಳೆಯ ನೀನು ಬರುವುದು ನನಗೆ ಭಾಗ್ಯ ಬಂದಂತೆ ಅಂತ ಹೇಳಿದ, ನನಗಾಗಿ ಆ ದಿನ ರಾತ್ರಿ ನಾನು ಬರುತ್ತೇನೆ ಎಂದು ಮೂಡಿಗೆರೆಯಿಂದ ಗೆಳೆಯರ ದಂಡೇ ಬಂದು ಚಿಕ್ಕಮಗಳೂರಿನಲ್ಲಿ ನನಗಾಗಿ ಕಾಯುತ್ತಿದ್ದರು, ಚಿಕ್ಕಮಗಳೂರಿಗೆ ಹೋದ ಕೂಡಲೇ ಆ ಗೆಳೆಯರು ನನ್ನ ಬಾಚಿ ತಬ್ಬಿಕೊಂಡು ತಣ್ಣನೆಯ ಗಾಳಿ ಬೀಸಿ ನಕ್ಕರು, ಅವರ ಕಣ್ಣುಗಳ ಆನಂದಕ್ಕೆ ನಾನು ಫಿದಾನಾಗಿ ಬಿಟ್ಟೆ.

ಅವರ ಪ್ರೀತಿಯ ಮಾತುಗಳು ರಾತ್ರಿಯೆಲ್ಲಾ ನದಿಯಾಗಿ ಹರಿದವು, ಬೆಳಗ್ಗೆ ಮಂಜುನಾಥ ರಾಧಮಣಿ ಮನೆಗೆ ಸ್ಥಳಾಂತರಗೊಂಡವು, ಅಲ್ಲಿ ಸಂತೋಷದ ಚಿಲುಮೆಯ ಬುಗ್ಗೆ ಹಾಡಾಗಿ ಬೆಳಗಿನ ಇಬ್ಬನಿಯ ಕರಗಿಸಿತು, ತಿಂಡಿ-ತಿಂದು ಕಡೂರಿಗೆ ಹೊರಟೆ ತಹಶೀಲ್ದಾರ್ ಕಛೇರಿಯ ಬಳಿ ಇದ್ದ ಗೆಳೆಯ ಸಿದ್ದಯ್ಯನ ಬಳಿಗೆ ಹೋದೆ.
ಏನೋ ಗೆಳೆಯ ಇಲ್ಲಿಗೆ ಬಂದೆ ಅಂದ, ಹೌದಪ್ಪ ನೀನು ರೈತ ಅಲ್ಲಿಗೆ ಬಾ. ಇಲ್ಲಿಗೆ ಬಾ ಎಂದು ಕರೆಸಿಕೊಳ್ಳುವುದು ಸರಿಯಲ್ಲ. ನೀನು ಎಲ್ಲಿ ಇರುತ್ತೇಯೋ ಅಲ್ಲಿಗೆ ಬಂದಾಗ ಮಾತ್ರ ಗೆಳೆತನಕ್ಕೆ ಅರ್ಥ ಎಂದೆ, ನೋಡು ಸಿದ್ದಪ್ಪ ಇಲ್ಲಿ ವೈದ್ಯರಾದ ಗೆಳೆಯ ಡಾ|| ಸಿ.ಜಿ.ಕರಿಯಪ್ಪನನ್ನು ಮಾತನಾಡಿಸೋಣ ಅಂದೆ, ಅಲ್ಲಿ ಹೋದಾಗ ವೈದ್ಯ ಗೆಳೆಯ ಕುರ್ಚಿಯಲ್ಲಿ ಕುಳಿತು ಕಂಪ್ಯೂಟರ್ ಒತ್ತುತ್ತಿದ್ದ, ಓ ಬಂದ್ರಾ ಅಂದ, ಕುಳಿತುಕೊಳ್ಳಿ ಅಂದ, ಕುಳಿತುಕೊಂಡೆವು, ಸ್ವಲ್ಪ ಹೊತ್ತಿನ ನಂತರ ನಾನು ಪೋಸ್ಟ್ ಮಟನ್ ಮಾಡಬೇಕು ಅಂದ, ಸೌಜನ್ಯಕ್ಕೂ ಏನು ಬಂದಿದ್ದು, ಬನ್ನಿ ಪೋಸ್ಟ್ ಮಟನ್ ಮುಖ್ಯವಲ್ಲ ಗೆಳೆಯ ಬಂದಿರುವುದು ಮುಖ್ಯ ಎಂದು ಊಟದ ಸಮಯವಾದರೂ ಊಟ ಮಾಡುತ್ತೀರ ಅಂತ ಕೇಳಲಿಲ್ಲ. ನಾವಿಬ್ಬರೂ ಏನು ಮಾತನಾಡದೆ ಆತನ ವೈದ್ಯನ ಕೊಠಡಿಯಿಂದ ಹೊರ ಬಂದೆವು.
ಬರುವಾಗ ಕಡೂರಿನ ಕಥಾರಿ ಮರದ ವ್ಯಾಪಾರದ ಗೋಡನ್ ಗೆ ಹೋಗಿ ನಾನು ಮನೆ ಕಟ್ಟುತ್ತಿರುವುದಕ್ಕೆ ಸ್ವಲ್ಪ ನಾನು ಸಿದ್ದಪÀ್ಟ್ಮರವನ್ನು ವ್ಯಾಪಾರ ಮಾಡಿದೆವು, ಆಗ ಸಿದ್ದಪ್ಪ ಈ ಮರ ನಿನ್ನ ಮನೆಗೆ ಹಾಕಿದಾಗ ಒಂದನೆಯದು ಮದುವೆಗೆ ಬಂದದ್ದು, ಮತ್ತೊಂದು ನಮ್ಮ ಮನೆಗೆ ಬಂದಿದ್ದ ನೆನಪಿರುತ್ತದೆ ಎಂದು ಹೇಳಿದ.
ಅಲ್ಲಿಂದ ಅವರ ಮನೆಗೆ ಹೋದೆವು, ಆತನ ಮನೆ ಪಂಚನಹಳ್ಳಿಯ ಮನೆಯಂತೆಯೇ ಹೆಂಚಿನ ಮನೆಯಾದರೂ ತಪ್ಪಾಗಿ, ಚಂದವಾಗದೆ, ಮನೆಯವರಿಗೆಲ್ಲಾ ಪರಿಚಯ ಮಾಡಿಕೊಟ್ಟ, ಹಸುಗೆ ಮೇವು ತರುತ್ತೇನೆ ಅಂದಾಗ ನಾನು ಅವನ ಜೊತೆ ಹೋದೆ, ಆತ ಪಂಚನಹಳ್ಳಿಯಲ್ಲಿ ಅವರ ಮನೆಯ ದನಗಳಿಗೆ ಮೇವು ತರುತ್ತಿದ್ದನಲ್ಲ ಅದೇ ರೀತಿ ಮೇವನ್ನು ಎಳೆದು ಕಟ್ಟಲು ಗುಡ್ಡೆ ಹಾಕುವುದನ್ನು ಪೋಟೋ-ವಿಡಿಯೋ ಮಾಡಿಕೊಂಡೆ ಆತ ಹುಲ್ಲು ಹೊರೆ ಹೊತ್ತುಕೊಂಡಾಗ ಜೊತೆಯಲ್ಲಿ ಪೋಟೋ ಕ್ಲಿಕ್ಕಿಸಿದೆ.

ಊಟಕ್ಕೆ ಜೊತೆಯಲ್ಲೇ ಕುಳಿತೆವು ಆಗ ನನ್ನ ಮನಸ್ಸು ಪಂಚನಹಳ್ಳಿಗೆ ಕರೆದುಕೊಂಡು ಹೋಯಿತು, ಸಿದ್ದಪ್ಪ ನನ್ನ ಜೊತೆ 7ನೇ ತರಗತಿಯಿಂದ ಒಟ್ಟಿಗೆ ಓದಿದವರು, ಇವರ ಅಣ್ಣ ಗವಿಯಪ್ಪ ಒಮ್ಮೆ ಸಿಕ್ಕಿ ನಮ್ಮ ಸಿದ್ದಪ್ಪ 7ನೇ ತರಗತಿಯಲ್ಲಿ ಫೇಲಾಗಿದ್ದಾನೆ, ನೀನು ನಮ್ಮನೆಗೆ ಬಂದು ಅವನಿಗೆ ಲೆಕ್ಕ, ಇಂಗ್ಲೀಷ್, ಭೌತಶಾಸ್ತ್ರ ಹೇಳಿಕೊಡು ಅಂದರು, ಆ ದಿನ ಸಂಜೆ ಅವರ ಮನೆಗೆ ಹೋದಾಗ ಅವರ ಅಣ್ಣ ಅವರಮ್ಮನಿಗೆ, ಅವರ ಮಡದಿಗೆ ನನ್ನ ಪರಿಚಯಿಸಿ ಇವನು ಯಾವಾಗಲೇ ಬರಲಿ ಊಟ ಕೊಡಿ ಅಂದರು.
ಅಂದಿನಿಂದ ನಾನು,ಸಿದ್ದಪ್ಪ ಅಣ್ಣ ತಮ್ಮಂದಿರಂತೆ ಅವರ ಮನೆಯಲ್ಲಿ ಒಂದು ರೂಂನಲ್ಲಿ ಓದಿಕೊಳ್ಳುತ್ತಿದ್ದವು, ಅವನಿಗೆ ಬೆಳಿಗ್ಗಿನ ಜಾವವೆ ಎಬ್ಬರಿಸಿ ಗಣಿತ, ಸಂಜೆ ಇಂಗ್ಲೀಷ್, ಭೌತಶಾಸ್ತ್ರ ಹೇಳಿಕೊಡುತ್ತಿದ್ದೆ, ಪಂಚನಹಳ್ಳಿಯಲ್ಲಿ ಆ ದಿನಗಳಲ್ಲಿ ನೀರಿಗೆ ತುಂಬಾ ಬರ, ಕೆರೆಯಲ್ಲಿದ್ದ ಸಿಹಿ ನೀರಿನ ಬಾವಿಯಿಂದ ನೀರನ್ನು ಪ್ರತಿಯೊಂದಕ್ಕು ತರಬೇಕಾಗಿತ್ತು, ಸಂಜೆ ಶಾಲೆಯಿಂದ ಬಂದಾಗ ಅವರ ಅತ್ತಿಗೆ ತಿಮ್ಮಕ್ಕ ತಾಮ್ರದ ಬಿಂದಿಗೆಯನ್ನು ತಳ ತಳ ಹೊಳೆಯುವಂತೆ ತಿಕ್ಕಿ ತೊಳೆದು ಕೊಡೋರು, ಆಗ ಸಿದ್ದಪ್ಪ ಅಡ್ಡೆಯಲ್ಲಿ ಹಿಂದೆ-ಮುಂದೆ ಎರಡೆರಡು ಬಿಂದಿಗೆ ಇಟ್ಟುಕೊಂಡು ಹೊರಟರೆ ಇವನ ಹಿಂದೆ ಹುಡುಗ-ಹುಡುಗಿಯರ ದಂಡೇ ಹೊರಡುತ್ತಿತ್ತು.
ಹುಡುಗಿಯರು ಯಾಕೆ ಈತನ ಹಿಂದೆ ಬೀಳುತ್ತಿದ್ದರು ಅಂದರೆ ಆಗಿನ ಕಾಲಕ್ಕೆ ಸಿದ್ದಪ್ಪ ದಷ್ಟ-ಪುಷ್ಟವಾಗಿ ದಪ್ಪವಾಗಿ ಜಟ್ಟಿ ಇದ್ದ ಹಾಗೆ ಇದ್ದ ಬಾವಿಯ ಒಳಕ್ಕೆ ತನ್ನ ಕೊಡ ಬಿಟ್ಟು ಮೂರೇ ಎಳತಕ್ಕೆ ಬಿಂದಿಗೆಯನ್ನು ಮೇಲಕ್ಕೆ ಎಳೆದು ಹಗ್ಗದಿಂದ ಬಿಚ್ಚಿ ಮತ್ತೊಂದು ಬಿಂದಿಗೆಯನ್ನು ಭರನೇ ಬಾವಿಗೆ ಇಳಿ ಬಿಟ್ಟು ಎಳೆದು ಬಿಡುತ್ತಿದ್ದ.

ಅಷ್ಟೊತ್ತಿಗೆ ಸಂಜೆಯ ಬಿಂದಿಗೆಯ ಬಿಳಿ ಜಿರಲೆಯಂತಹ ಸಣಕಲು ಹುಡುಗಿರು ತಮ್ಮ ಸೊಂಟ ಬಳಿಕಿಸುತ್ತಾ, ತಲೆಗೆ ಮಲ್ಲಿಗೆ ಹೂ ಮುಡಕೊಂಡು ಬಂದು ಸಿದ್ದಪ್ಪನ ಸುತ್ತ ಬಿಂದಿಗೆ ಹಿಡಿದು ನಿಂತು ಬಿಡುತ್ತಿದ್ದರು, ಸಿದ್ದಪ್ಪನಿಗೆ ಗೊತ್ತು, ಎಲ್ಲಾ ಸಾಲಾಗಿ ನಿಲ್ಲಿ ಯಾರೂ ಜಗಳವಾಡಬೇಡಿ ಎಂದು ಮೊದಲೇ ಹೇಳಿ ಬಿಡುತ್ತಿದ್ದ, ನನಗೆ ಒಂದೊಂದೇ ಹುಡುಗಿಯರ ಬಿಂದಿಗೆ ಇಸ್ಕೊಂಡು ಕೊಡು ಅನ್ನೋನು ಒಂದೈದು ನಿಮಿಷದಲ್ಲಿ ಹತ್ತು ಹುಡುಗಿಯರ 20 ಬಿಂದಿಗೆ ನೀರು ಸೇದಿ ಬಾವಿ ಕಟ್ಟೆಯ ಸುತ್ತ ಜೋಡಿಸಿ ಬಿಡುತ್ತಿದ್ದ.

ಆಗ ಹುಡುಗಿಯರು ತಲೆ ಮೇಲೆ ಒಂದು ಬಿಂದಿಗೆ ಇಟ್ಟುಕೊಂಡ ಮೇಲೆ ನನಗೆ ಏ ಸೊಂಟಕ್ಕೆ ಒಂದು ಬಿಂದಿಗೆ ಇಕ್ಕೋ ಸಿದ್ದಪ್ಪ ಹೋಗಿ ನೀರಾಕಿ ಬರಲಿ ಅನ್ನುತ್ತಿದ್ದರು, ನಾನು ಅದಕ್ಕೆ ಕಾಯುತ್ತಿದದ್ದು ಉಂಟು, ಹುಡುಗಿರ ಸೊಂಟವೆಂದರೆ ಹುಡುಗಾಟವೆ, ಹುಡುಗಿಯರ ಸೊಂಟಕ್ಕಾಗಿ ಹುಡುಗರು ತಮ್ಮ ಸೊಂಟ ಮುರಿದುಕೊಂಡಿದ್ದಾರೆ. ತಲೆ ಮೇಲೆ ಬಿಂದಿಗೆ ಹೊತ್ತ ಹುಡುಗಿಯರ ಸೊಂಟಕ್ಕೆ ಒಂದೊಂದೆ ಬಿಂದಿಗೆ ಇಡುತ್ತಿದ್ದೆ, ಸಿದ್ದಪ್ಪ ಕೊನೆಯದಾಗಿ ಅಡ್ಡೆ ಸವಾರಿ ಸಂದರ್ಭದಲ್ಲಿ ಅಲ್ಲಾ ಕಣೋ ನಾನು ಕಷ್ಟಪಟ್ಟು ನೀರು ಸೇದಿದರೆ ಹುಡುಗಿಯರ ಸೊಂಟಕ್ಕೆ ಬಿಂದಿಗೆ ಇಡೋ ಅದೃಷ್ಠ ಮಾತ್ರ ನಿನ್ನದು ನೀನು ಪುಣ್ಯವಂತ ಕಣಯ್ಯ ಅನ್ನೋನು.
ಹಂಗಾರೆ ನಾಳೆಯಿಂದ ನೀನೇ ಹುಡುಗಿಯರ ಸೊಂಟಕ್ಕೆ ಬಿಂದಿಗೆ ಕೊಡು ಎಂದರೆ, ಆತ ಪಕಾರನೇ ನಕ್ಕು ನಾನು ತುಂಬಿದ ಕೊಡವನ್ನು ನಾನು ಅಡ್ಡೆ ಹೊರಬೇಕೆಂಬ ಧಾವಂತದಲ್ಲಿ ಬಲವಾಗಿ ಎತ್ತಿ ಹುಡುಗಿಯರ ಸೊಂಟಕ್ಕೆ ಇಕ್ಕಾನ ಅವರ ಸಣಕಲು ಸೊಂಟ ಮುರಿದು ಹೋಗಲಿ ಅಂತ ಕಾಯುತ್ತಾ ಇದ್ದೀಯ ನನಗೆ ಹೊದೆ ಕೊಡಿಸಲು ಅಂತ ಪಕಾರನೆ ನಗೋನು.
ಮತ್ತೆ ನಾನಿಟ್ಟರೆ ನಿಂಗೆ ಹೊಟ್ಟೆ ಉರಿ ಅಂದರೆ, ಮತ್ತೆ ಉರಿಯುತ್ತೇ ಕಣೋ ನನಗೆ ಆ ಭಾಗ್ಯ ಇಲ್ಲ ಅಂತ, ನಾನು ಹುಡಿಗೀರ ಸೊಂಟಕ್ಕೆ ಬಿಂದಿಗೆ ಇಡುತ್ತಾ ಕೂತರೆ, ಸ್ನಾನಕ್ಕೆ, ದನಕ್ಕೆ, ಜನಕ್ಕೆ ನೀರು ತುಂಬಿಸಲು ಮೂರು ದಿನವಾಗುತ್ತೆ ನೀನೇ ಸೊಂಟಕ್ಕೆ ಬಿಂದಿಗೆ ಕೊಟ್ಟು ನೀನೇ ತರಹ ತರಹ ಸೊಂಟ ನೋಡಿ ರಾತ್ರಿಕ್ಕೆ ನಿದ್ದೆ ಕೆಡಿಸಿಕೊಳ್ಳಪ್ಪ ಅಂತ ಮತ್ತೊಮ್ಮೆ ಪಕಾರನೇ ನಗೋನು.

ಹುಡುಗಿಯರು ಇವನ ಭೀಮನಂತಹ ಶಕ್ತಿ ಕಂಡು ಆಹಾ ನಮಗೆ ಸಿಗುವ ಗಂಡ ಸಿದಪ್ಪನಂಗೆ ಇರಲಿ, ಇಲ್ಲ ಸಿದ್ದಪ್ಪನೇ ನಮ್ಮ ಗಂಡನಾಗಿ ಸಿಗಲಿ ಎಂದು ಪಿಸ ಪಿಸ ಮಾತನಾಡಿಕೊಂಡು ನಗಾಡುತ್ತಿದ್ದರು, ಇದರಿಂದ ಪುಳಕಿತಗೊಂಡ ಸಿದ್ದಪ್ಪ ತನ್ನ ನಾಲ್ಕು ಕೊಡಗಳ ಅಡ್ಡೆಯನ್ನು ಹೆಗಲ ಮೇಲೆ ಅನಾಮತ್ತು ಎತ್ತಿ ಇಟ್ಟಕೊಂಡು ತನ್ನ ಯೌವನದಲ್ಲಿ ಮದಗಜನಂತೆ ಅಡ್ಡೆಯನ್ನು ಜೀಕಿ ಜೀಕಿ ಅಂತ ಶರವೇಗದಲ್ಲಿ ಮನೆಯ ಹಂಡೆಗೆ ಹೊಯ್ದು, ಮತ್ತೆ ಹುಡುಗಿಯರು ಸೊಂಟ ಬಳಕಿಸಿಕೊಂಡು ಬರುವ ವೇಳೆಗೆ ಎರಡು ಸಲ ಅಡ್ಡೆ ನೀರು ಮನೆಗೆ ಹೊಯ್ದು ಬರುತ್ತಿದ್ದ, ಹಬ್ಬ ಹರಿ ದಿನಗಳಲ್ಲಿ ಹುಡುಗಿಯರು ನಮ್ಮಿಬ್ಬರಿಗೂ ಹಬ್ಬಕ್ಕೆ ಮಾಡಿದ್ದ ಸಿಹಿ ತಿಂಡಿಗಳನ್ನು ತಮ್ಮ ಲಂಗ-ಧಾವಣಿಗಳಲ್ಲಿ ಮುಚ್ಚಿಕೊಂಡು ತಂದು ಕೊಡೋರು, ನಾನು ಸಿದ್ದಪ್ಪ ಹುಡುಗಿಯರಿಂದ ಪರಮಾನಂದದಿಂದ ಇಸ್ಕೊಂಡು ಬಾವಿ ಕಟ್ಟೆ ಮೇಲೆ ಕುಳಿತು ತಿಂದು ನೀರು ಕುಡಿಯುತ್ತಿದ್ದವು, ಮನೆಗೆ ಬರುವಾಗ ಯಾವ ಯಾವ ಮನೆಯ ಸ್ವೀಟ್ ಚೆನ್ನಾಗಿತ್ತು ಮಾತನಾಡಿದ್ದಲ್ಲದೆ ರೂಂನಲ್ಲಿ ಯಾವ ಯಾವ ಹುಡುಗಿ ಹಬ್ಬದ ಸಿಹಿ ತಂದಿಲ್ಲ ನೆನಪಿಟ್ಟಕೋ ನಾಳೆ ನನಗೆ ಕಣ್ಣು ಮಿಸುಕು ಅವರ ನೀರು ಸೇದದೆ ಅಯ್ಯೋ ಅನ್ನಿಸೋಣ ಅನ್ನೋನು.
ಮಾರನೆಯ ದಿನ ಇಂತಹ ಹುಡುಗಿ ಸ್ವೀಟ್ ತಂದಿಲ್ಲ ಅಂತ ಕಣ್ಣು ಮಿಸುಕಿದ ಕೂಡಲೇ ಬಿಂದಿಗೆಯನ್ನು ಪಕ್ಕಕ್ಕೆ ಇಟ್ಟು ಬೇರೆ ಹುಡುಗಿಯರ ಬಿಂದಿಗೆ ಇಸ್ಕೊಂಡು ಸೇದೋನು, ಕೊನೆಗೆ ಒಂದೈದಾರು ಹುಡುಗಿಯರ ಬಿಂದಿಗೆ ಸೇದದೆ ಪಕ್ಕದಲ್ಲಿ ಖಾಲಿ ಬಿಂದಿಗೆಗಳು ನಗುತ್ತಿದ್ದವು. ಆ ಸುಂದರ ಬಿಳಿ ಹುಡುಗಿರು, ಕಪ್ಪು ಸುಂದರಿಯುರು ಸಿದ್ದಪ್ಪ ನಮ್ಮವನ್ನು ಸೇದಿ ಕೊಡು ಮುಂದಿನ ಹಬ್ಬಕ್ಕೆ ಜಾಸ್ತಿ ತಂದುಕೊಡುತ್ತೇವೆ ಅನ್ನೋರು, ಹೋಗ್ರಲೇ ಮುಂದಿನ ಹಬ್ಬದ ತನಕ ಕಾಯಬೇಕಂತೆ ನಿಮ್ಮ ನೀರು ಸೇದಿ ನನ್ನ ರಟ್ಟೆ ಬಿದ್ದು ಹೋಗ್ತಾವೆ, ಇನ್ನೊಂದು ಹಬ್ಬ ಕಾಯಬೇಕೆಂತೆ ಅನ್ನೋನು ಕೊನೆಗೆ ಹುಡಿಗೀರು ದೈನೇಶಿಯಿಂದ ಈಗ ಸೇದಲ್ಲ ಅನ್ನು ಅಂತ ಕೊಡ ತಗೊಂಡು ಹಗ್ಗ ಕಟ್ಟಿದ ಕೂಡಲೇ ಸಿದ್ದಪ್ಪನಿಗೆ ಕರುಳು ಚುರುಕೆನಿಸಿ ನೀರು ಸೇದಿ ಕೋಡೋನು.
ಇದರ ಜೊತೆಗೆ ಹಿತ್ತಲಿಂದ ಹುಲ್ಲು ತರೋದು, ಭಾನುವಾರ ತಮ್ಮ ತೋಟಕ್ಕೆ ದನ ಮೇಯಿಸಲು ಹೋದಾಗ ಸೌದೆ ಹೊರೆ ತರುತ್ತಿದ್ದ, ನಾನು ಹುಲ್ಲು, ಸೌದೆ ಹೊರುತ್ತೇನೆ ಅಂದರೆ ನಿನಗೆ ಹಾಸ್ಟಲ್ ನಲ್ಲಿ ಬರೀ ಮುದ್ದೆ ಹಾಕಿರೋದರಿಂದ ಸಣ್ಣ ಇದ್ದೀಯ ನಿನ್ನ ಕತ್ತು ಮುರಿದು ಹೋಗೊತ್ತೆ,ನನಗೆ ಲೆಕ್ಕ, ಇಂಗ್ಲೀಷ್ ಹೇಳಿ ಕೊಡು ಸಾಕು ಅನ್ನೋನು.
ಎಸ್ಎಸ್ಎಲ್ಸಿ ನಂತರ ನಾನು ತುಮಕೂರಿಗೆ ಓದಲು ಬಂದರೆ ಅವನು ಪಂಚನಹಳ್ಳಿಯಲ್ಲಿ ಮುಂದಿನ ಶಿಕ್ಷಣ ಮುಂದುವರಿಸಿದ ನಾನು ನಮ್ಮೂರಿಗೆ ಹೋದಾಗಲೆಲ್ಲಾ ಅವರ ಮನೆಗೆ ಹೋಗಿ ಮಾತನಾಡಿಸಿಕೊಂಡು ಊಟ ಮಾಡಿಕೊಂಡು ಬರುತ್ತಿದ್ದೆ.
ಈತ ಪದವಿ ಓದುತ್ತಿರುವಾಗಲೆ ಚಿಕ್ಕಮಗಳೂರು ಜಿಲ್ಲೆ ಕಡೂರಿಗೆ 5ಕಿ.ಮೀ.ದೂರದಲ್ಲಿರುವ ಕಂಸಾಪುರದಲ್ಲಿ ಮನೆಯಾಳುತನಕ್ಕೆ ಹುಡುಗಿಯನ್ನು ಮದುವೆಯಾಗಿ ಅಲ್ಲೆ ಮೆನೆಯ ಮಗನಾಗಿ ಬಿಟ್ಟ, ನನಗೂ ಅವನಿಗೂ ಭೇಟಿಯೇ ಇಲ್ಲಂದಂತಾಯಿತು.
ಮೊನ್ನೆ ಮದುವೆಯ ನೆಪದಲ್ಲಿ ಆತನ ಮನೆಗೆ ಹೋದಾಗ ಮದೆವೆಯಾದ 33ವರ್ಷಗಳ ನಂತರ ನೀನೊಬ್ಬನೇ ಗೆಳೆಯ ನನ್ನ ಹುಡುಕಿಕೊಂಡು ಬಂದಿರೋದು ಅಂತ ಅದೇ ಪ್ರೀತಿಯಿಂದ ಮನೆಯವರಿಗೆಲ್ಲಾ ಪರಿಚಯಿಸಿದ ನಾನು ಬರುತ್ತೇನೆಂದು ಹೊಲದ ಸೊಪ್ಪಿನ ಸಾರು, ಮುದ್ದೆ, ಬೋಂಡ ಮಾಡಿಸಿದ್ದ, ತೋಟಕ್ಕೆ ಕರೆದುಕೊಂಡು ಎಳನೀರು ಕುಡಿಸಿ ತಬ್ಬಿ ಕಣ್ಣೀರಾದ, ಆಗಾಗ ಬರುತ್ತಿರು ಅಂದ, ಸಂಜೆ ಹೊರಡಬೇಕೆಂದಾಗ ಇವತ್ತು ಇರು ಅಂದರೂ ನಾನು ಹೊರಟು ನಿಂತೆ.
ಆತನ ಮಗ ಅಂಕಲ್ ನಲ್ಲಿ ಬೈಕ್ ನಲ್ಲಿ ಬಿಡುವುದುಬೇಡ ಅಂತ ಕಾರಿನಲ್ಲಿ ರೈಲ್ವೆ ನಿಲ್ದಾಣಕ್ಕೆ ಬಿಟ್ಟು ರೈಲು ಟಿಕೆಟ್ ಕೊಡಿಸಿ ಆಗಾಗ ಬರುತ್ತಿರು ಅಂದ.
ಮನೆಗೆ ಹೋದಾಗ ಜೊತೆಯಲ್ಲಿ ಹುಲ್ಲು ತಂದೆವು, ತೋಟಕ್ಕೆ ಹೋದೆವು, ಆದರೆ ಈಗ ಮನೆ ಮುಂದಕ್ಕೆ ನಲ್ಲಿ ಬಂದಿರುವುದರಿಂದ ನೀರು ತರಲಿಲ್ಲ, ಈಗ ನೀರು ಸೇದುವ ಬಾವಿಗಳೂ ಇಲ್ಲ, ಆಗ ಆತ ನೀರು ಸೇದುತ್ತಿದ್ದುದ್ದನ್ನು ನೆನಸಿಕೊಂಡು ನಕ್ಕು ನಕ್ಕು ಸಾಕಾಯಿತು.
ಒಬ್ಬ ಮಗಳು ಬಿ.ಎಸ್ಸಿ ನರ್ಸಿಂಗ್, ಮತ್ತೊಬ್ಬ ಮಗ ಎಂಎಸ್ಸಿ ನರ್ಸಿಂಗ್ ಮಾಡಿ ಕಂಪನಿ ಸ್ಥಾಪಿಸಿರುವುದು, ಮತ್ತೊಬ್ಬ ಮಗ ಎಂಎಸ್ಸಿ ಮಾಡಿದ್ದು ನನ್ನ ಗೆಳೆಯ ರೈತನಾದರೂ ಮಕ್ಕಳನ್ನು ಚೆನ್ನಾಗಿ ಓದಿಸಿರುವುದನ್ನು ನೋಡಿ ಸಂತೋಷವಾಯಿತು. ನಾನು ರೈಲಿನಲ್ಲಿ ಬರುವಾಗ ಅಡ್ಡೆ ಸಿದ್ದಪ್ಪ ಅಡ್ಡೆಯಲ್ಲಿ ನೀರು ಹೊರುತ್ತಿದ್ದದ್ದು, ಹುಡುಗಿಯರು ಇವನಿಗೆ ನೀರು ಸೇದಿ ಕೊಡು ಅಂತ ಬೇಡುತ್ತಿದ್ದದ್ದು ಕಣ್ಣಿಗೆ ಕಟ್ಟಿದಂತಾಯಿತು.
ಈತನು ನನ್ನನ್ನು ಪ್ರೀತಿಯಿಂದ ತಬ್ಬಿ ಸ್ನೇಹವೆಂಬ ಹುಲ್ಲಿಗೆ ಬಂಗಾರದ ಲೇಪನ ಮಾಡಿದ, ಆತ ತನ್ನ ತೋಟದಲ್ಲಿ ಎಳೆನೀರು ಕುಡಿಯುವಾಗ ಒಬ್ಬರನೊಬ್ಬರನ್ನು ನೋಡಿಕೊಂಡು ಖುಷಿಗೆ ನಮ್ಮ ಕಣ್ಣುಗಳಲ್ಲಿ ಎರಡು ಹನಿ ಕಣ್ಣೀರು ನೆಲಕ್ಕೆ ಬಿದ್ದದ್ದು ನಾನು ಬಹಳ ದಿನ ಮರೆಯುವಂತಿಲ್ಲ.
ಆತ ಬರುವಾಗ ನೀನು ಎಷ್ಟು ದೊಡ್ಡ ಮನುಷ್ಯನಪ್ಪ, ನಿನ್ನ ಹಾಗೆ ಇಂತಹ ದೊಡ್ಡ ಪತ್ರಕರ್ತ ಆಗಿದ್ದರೆ ನನ್ನ ಹೆಸರು ನೆನೆಯುತ್ತಿರಲಿಲ್ಲ, ನೀನು ಆಗ ಹೇಗೆ ಇದ್ದಿಯೋ ಹಾಗೆ ಈಗಲೂ ಇದ್ದೀಯ ಆ ಪ್ರೀತಿನೇ ಕಣೋ ನಿನ್ನ ದೊಡ್ಡ ಎತ್ತರಕ್ಕೆ ಬೆಳಸಿರೋದು ಅಂತ ನನ್ನ ಪ್ರೀತಿಯ ಸೇದುವ ಬಾವಿಗೆ ತಳ್ಳಿದ, ಲಂಗ ಧಾವಣಿ ಹಾಕಿಕೊಂಡು ಬಿಂದಿಗೆ ಹೊತ್ತು ನಿಂತಿದ್ದ ಹುಡುಗಿಯರ ದಂಡು ಪಕಾರನೆ ನಕ್ಕರು, ರೈಲು ಶರವೇಗದಲ್ಲಿ ಓಡುತ್ತಿತ್ತು ತುಮಕೂರು ಹತ್ತಿರವಾದಂತೆ ಕಂಸಾಪುರ ದೂರವಾಯಿತು. ಆತ ನೀನು ಗೃಹ ಪ್ರವೇಶಕ್ಕೆ ಕರೆ ಖಂಡಿತ ಹೆಂಡತಿ ಜೊತೆ ಬರುತ್ತೇನೆ ಎಂದು ಹೇಳಿದ್ದು ನನ್ನ ತಲೆಯಲ್ಲಿ ಹಾಗೆ ಬಿಂದಿಗೆ ಹೊತ್ತ ಹುಡುಗಿಯರ ನಗುಮುಖದಂತೆ ಕಾಣಿಸುತ್ತಾ ಇದೆ—–
-ವೆಂಕಟಾಚಲ.ಹೆಚ್.ವಿ.