ಕುಣಿಗಲ್: ಸಮಾಜದಲ್ಲಿ ಜಾತೀಯತೆ, ಅಸ್ಪೃಶ್ಯತೆ ಹಾಗೂ ಅಸಮಾನತೆಗಳು ಇರುವವರೆಗೆ ನೈಜ ಸಾಮಾಜಿಕ ನ್ಯಾಯ ಸಾಧ್ಯವಿಲ್ಲ. ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ತತ್ವಗಳು ಸಮಾಜದಲ್ಲಿ ಸಾಕಾರಗೊಳ್ಳಬೇಕಾದರೆ ಪ್ರತಿಯೊಬ್ಬರಿಗೂ ಆರ್ಥಿಕ ಭದ್ರತೆ ದೊರೆಯಬೇಕು ಎಂದು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ಸಂತೋಷ್ ನಾಯಕ್ ಆರ್. ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯದ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ, ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ತರಬೇತಿ, ಸಂಶೋಧನೆ ಹಾಗೂ ವಿಸ್ತರಣಾ ಕೇಂದ್ರ ಮತ್ತು ಕುಣಿಗಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ನ. 04 ಬುಧವಾರದಂದು ಆಯೋಜಿಸಿದ್ದ ‘ಸಾಮಾಜಿಕ ನ್ಯಾಯ: ಡಾ. ಬಿ.ಆರ್. ಅಂಬೇಡ್ಕರ್ ಅವರ ದೃಷ್ಟಿಕೋನ’ ಎಂಬ ವಿಷಯದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾನವನ ವಿಕಾಸದೊಂದಿಗೆ ಸಮಾಜದಲ್ಲಿ ತಾರತಮ್ಯ, ದ್ವೇಷ, ಅಸೂಯೆ ಹಾಗೂ ಅಸಮಾನತೆಗಳು ಹೆಚ್ಚಾಗಿವೆ. ಸಾಮಾಜಿಕ ನ್ಯಾಯದ ಕೊರತೆಯಿಂದಾಗಿ ಅದರ ಅಗತ್ಯತೆ ಮತ್ತು ಮಹತ್ವದ ಕುರಿತು ಚರ್ಚಿಸುವ ಅನಿವಾರ್ಯತೆ ಎದುರಾಗಿದೆ. ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಬುದ್ಧ, ಬಸವಣ್ಣನವರು ಪ್ರತಿಪಾದಿಸಿದ್ದು, ನಂತರ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಅದಕ್ಕೆ ಬಲವಾದ ನೆಲೆ ಒದಗಿಸಿದರು. ದೇಶದ ಪ್ರತಿಯೊಬ್ಬ ಪ್ರಜೆಗೂ ಸಾಮಾಜಿಕ ನ್ಯಾಯ ದೊರೆಯುವಂತೆ ಮಾಡಿದ ಅಂಬೇಡ್ಕರ್ ಅವರ ಕೊಡುಗೆ ಸ್ಮರಣೀಯ ಎಂದರು.
ಸ್ವಾತಂತ್ರ್ಯ ಎಂದರೆ ಸಮಾಜದ ಎಲ್ಲರಿಗೂ ಸಮಾನ ಅವಕಾಶಗಳು ದೊರೆಯುವುದು. ಭ್ರಾತೃತ್ವ ಎಂದರೆ ನಾವೆಲ್ಲರೂ ಒಂದೇ ಎಂಬ ಸಹೋದರತ್ವದ ಮನೋಭಾವ ಬೆಳೆಸಿಕೊಳ್ಳುವುದು. ಈ ಮೂರು ಮೌಲ್ಯಗಳು ಕೇವಲ ಸಂವಿಧಾನದ ಆಶಯಗಳಾಗಿ ಉಳಿಯದೆ ಜನರ ಬದುಕಿನಲ್ಲಿ ಸಾಕಾರಗೊಳ್ಳಬೇಕು. ಅದಕ್ಕೆ ಆರ್ಥಿಕ ಭದ್ರತೆ ಅತ್ಯಗತ್ಯ. ಆರ್ಥಿಕವಾಗಿ ಸಬಲರಾಗದಿದ್ದರೆ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಸಂಪೂರ್ಣವಾಗಿ ಅನುಭವಿಸಲು ಸಾಧ್ಯವಿಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪೆÇ್ರ. ರಾಮಾಂಜನಪ್ಪ ಮಾತನಾಡಿ, ಜೀತ ಪದ್ಧತಿ, ಜಾತಿ ಪದ್ಧತಿ ಮತ್ತು ಸಾಮಾಜಿಕ ಅಸಮಾನತೆಗಳನ್ನು ಹೋಗಲಾಡಿಸಲು ಶ್ರಮಿಸಿದ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ದೇಶದ ಪ್ರತಿಯೊಬ್ಬ ಪ್ರಜೆಯೂ ಸ್ಮರಿಸಿಕೊಳ್ಳಬೇಕು ಎಂದರು.
ಕಾಲೇಜಿನ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ಸಂಯೋಜಕರಾದ ಪೆÇ್ರ. ಈಶ್ವರಪ್ಪ ಎಂ.ಟಿ. ಮಾತನಾಡಿ, ಮಹಾನ್ ಮಾನವತಾವಾದಿ ಹಾಗೂ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಪ್ರತಿಪಾದಿಸಿದ ಸಾಮಾಜಿಕ ನ್ಯಾಯದ ಆಶಯಗಳ ಕುರಿತು ಇಂದಿನ ಸಮಾಜದಲ್ಲಿ ವ್ಯಾಪಕ ಚರ್ಚೆ ನಡೆಯಬೇಕಿದೆ ಎಂದರು.
ತುಮಕೂರು ವಿಶ್ವವಿದ್ಯಾನಿಲಯದ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕರಾದ ಪೆÇ್ರ. ಕೇಶವ ಸ್ವಾಗತಿಸಿದರು. ರವಿಕುಮಾರ್ ವಂದಿಸಿದರು. ಡಾ. ಮಮತಾ ನಿರೂಪಿಸಿದರು.