ಲಾಭಿಯ ನಡುವೆಯೂ ಅರ್ಹರಿಗೆ ರಾಜ್ಯೋತ್ಸವ ಪ್ರಶಸ್ತಿ,ಒಂದೆರಡು ಅಕ್ಷರ ಗೀಚದಿದ್ದರೆ ಆತ್ಮ ವಂಚನೆಯಾಗುತ್ತದೆ.

ಸಂಕಟ ಆಗೋದು ಇಂತಹ ಸಂದರ್ಭದಲ್ಲೇ, ಈ ಬಾರಿಯ ತುಮಕೂರು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಬಹುತೇಕ ನನ್ನ ಹಿರಿಯ-ಕಿರಿಯ ಗೆಳೆಯರಿಗೆ ಲಭಿಸಿದೆ. ಇಂತಹ ಪ್ರಶಸ್ತಿ ಬಂದಾಗ ಯಾರ ಬಗ್ಗೆ ಬರೆಯೋದು, ಬಿಡೋದು ಎಂಬುದೇ ಈಗ ತಲೆಬಿಸಿ, ಆದರೂ ಒಂದು ಮೂರು-ನಾಲ್ಕು ಜನರ ಬಗ್ಗೆ ಬರೆಯಲೇ ಬೇಕೆನಿಸಿದೆ ಏಕೆಂದರೆ ಪ್ರಶಸ್ತಿಗಾಗಿ ಲಾಭಿ ನಡೆಯುವ ಕಾಲದಲ್ಲಿ ಕೆಲ ಅರ್ಹರಿಗೆ ಪ್ರಶಸ್ತಿ ನೀಡುರುವಾಗ ಒಂದೆರಡು ಸಾಲುಗಳನ್ನು ಗೀಚಬೇಕಾಗಿದೆ.

ಡಾ||ಬಸವರಾಜು : ಡಾ|| ಬಸವರಾಜು ಅವರು ತೀರ ಉಣ್ಣಲು ಇಲ್ಲದಂತಹ ಬಡತನದಿಂದ ಓದಿ ವೈದ್ಯರಾದವರು, ಕೆಲವರಿಗೆ ವೈದ್ಯ ಎಂದರೇನೆ ದಪ್ಪ ಚರ್ಮ, ಕಣ್ಣಿಗೆ ಪೊರೆ ಬೆಳದು ಬಿಡುತ್ತದೆ, ಆದರೆ ಈ ವೈದ್ಯರು ಜಿಲ್ಲೆಯಲ್ಲಿ ತಮ್ಮ ವೈದ್ಯಕೀಯ ಉತ್ತಮ ಸೇವೆಯಿಂದ ಹೆಸರು ಪಡೆದಿರುವುದಲ್ಲದೆ. ಆ ಹುದ್ದೆಗೆ ಒಂದು ಘನತೆಯನ್ನು ತಂದುಕೊಟ್ಟಿದ್ದಾರೆ.

ಒಬ್ಬ ವೈದ್ಯರೆಂದರೆ ರೋಗಿಗಳ ಸಂಬಂಧವನ್ನು ಹೇಗೆ ಇಟ್ಟುಕೊಳ್ಳಬೇಕೆಂಬುದನ್ನು ವೈದ್ಯರು ರೋಗಿಗಳನ್ನು ಮಾತನಾಡಿಸುವ, ಮುಟ್ಟುವ ಪ್ರೀತಿಯಿಂದ ಮೈ ದಡವುದರಲ್ಲಿ ಅಡಗಿದೆ, ಇಂಜೆಕ್ಷನ್ ಮತ್ತು ಮಾತ್ರೆಗಿಂತ ವೈದ್ಯರು ರೋಗಿಗಳನ್ನು ಪ್ರೀತಿಯಿಂದ ಮಾತನಾಡಿಸುವುದರಿಂದ ರೋಗಿಯ ರೋಗವನ್ನು ಗುಣಪಡಿಸಬಹುದು ಎಂಬುವುದರಿಂದಲೇ ‘ವೈದ್ಯೋ ನಾರಾಯಣೋ ಹರಿಃ’ ಅನ್ನೋದು.

ನಾನು ಕಂಡಂತೆ ನಿಷ್ಕಲ್ಮಶ, ಅಧಿಕಾರ, ಹಣದ ಹಿಂದೆ ಬೀಳದೆ ತಮ್ಮ ಬಡತನವನ್ನು ಆಗಾಗ ನೆನೆಯುತ್ತಾ, ನಾನು ವೈದ್ಯನಾಗಿ ಯಾವುದೋ ಹಳ್ಳಿಯಿಂದ ಬಡವರು, ರೈತರು ಬಂದಾಗ ಅವರಿಗೆ ಪ್ರೀತಿಯಿಂದ ನನ್ನ ಕೈಲಾದ ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ಮಾಡಿ ಕಳಿಸುತ್ತೇನೆ, ಆ ನಂತರ ಬಂದು ಕೈ ಮುಗಿಯುತ್ತಾರೆ ನಾನೇನೂ ದೇವರಲ್ಲ, ದೇವದೂತನೂ ಅಲ್ಲ, ನಾನು ಮನುಷ್ಯ ನನಗೂ ರೋಗ-ರುಜಿನ ಬರುತ್ತವೇ ಕಣಲೇ, ಒಳ್ಳೆ ಹುಡುಗನಾದೆಯಲ್ಲಾ ಅಂತ ತಮ್ಮ ಮೂಗನ್ನು ನೀವುತ್ತಾ ಪಕಾರನೇ ಯಾವುದೇ ಕಲ್ಮಶವಿಲ್ಲದಂತೆ ನಗುತ್ತಾರೆ.

ನನಗೆ ತಿಳಿದಿರುವಂತೆ ಕೊರೋನಾ ಕಾಲದಲ್ಲಿ ಕೊರೋನ ಬಂದವರಿಗೆ ಇವರಿಗೆ ಪೋನ್ ಮಾಡಿದಾಗ ಯಾವ ಆಸ್ಪತ್ರೆಯೂ ಬೇಡ ನಾನು ಹೇಳಿದ ಟ್ರೀಟ್ ಮೆಂಟ್ ತಗೊಳ್ಳಿ ಎಂದು ಹತ್ತಾರು ಜೀವ ಉಳಿಸಿದ್ದಾರೆ, ನನಗೆ ಗೊತ್ತಿರುವಂತೆ ಬದುಕಲು ಸಾಧ್ಯವಿಲ್ಲ ಅನ್ನುವಂತಹ ರೋಗಿಗಳನ್ನು, ಕ್ಯಾನ್ಸರ್ ರೋಗಿಗಳು ಬದುಕುವುದಿಲ್ಲ ಎಂಬ ಹಂತಕ್ಕೆ ಬಂದವರಿಗೂ ಜೀವ, ಜೀವನ, ಬದುಕು ಕಟ್ಟಿಕೊಳ್ಳುವಂತೆ ರೋಗವನ್ನು ಗುಣಮುಖ ಮಾಡಿದ್ದಾರೆ.

ಇವರು ಸರ್ಕಾರಿ ಸೇವೆಯಲ್ಲಿದ್ದಾಗ ಹಲವಾರು ಹಳ್ಳಿಗಳಲ್ಲಿ ಮತ್ತು ತುಮಕೂರು ಜನರಲ್ ಆಸ್ಪತ್ರೆಯಲ್ಲಿ ಮಾನವೀಯ ನೆಲೆಯೊಳಗೆ ಕಾರ್ಯನಿರ್ವಹಿಸಿದ್ದಾರೆ, ನಿವೃತ್ತಿಯ ನಂತರ ತಮ್ಮದೆಯಾದ ‘ಚರಕ’ ಆಸ್ಪತ್ರೆಯನ್ನು ಬುದ್ಧ, ಬಸವ ಮತ್ತು ಗಾಂಧಿಯ ಆಶಯಗಳೊಂದಿಗೆ ನಡೆಸಿಕೊಂಡು ಬರುತ್ತಿರುವ ಚರಕ ಆಸ್ಪತ್ರೆಯ ಹಿರಿಯ ಸ್ತ್ರೀರೋಗ ತಜ್ಞರಾದ ಡಾ,ಬಸವರಾಜು ಅವರಿಗೆ ಈ ಬಾರಿಯ ಜಿಲ್ಲಾ ಕನ್ನಡ ರಾಜ್ಯೋತ್ಸವ ಸಿಕ್ಕಿ ಸನ್ಮಾನಕ್ಕೊಳಗಾಗಿರುವುದು ಖುಷಿ, ಸಂತೋಷದ ವಿಷಯ ಎವರ್ ಗ್ರೀನ್ ನಗುವಿನ ಡಾಕ್ಟರಿಗೆ ಅಭಿನಂದನೆಗಳು.

ಪುಟ್ಟಸ್ವಾಮಯ್ಯ ಮಣಿವಿನಕುರಿಕೆ : ರಾತ್ರಿ ಎರಡು ಗಂಟೆ ಬೆಳಗಾಗುವುದರೊಳಗೆ ಈ ದೇಶದ ಜಾತಿ, ಧರ್ಮ ಮೂಲೋತ್ಪಾಟನೆ ಮಾಡಬೇಕೆಂದು ಆಗಿನ ಪಿಯುಸಿ, ಪದವಿ ಓದುತ್ತಿದ್ದ ವಿದ್ಯಾಥಿಗಳಿಗೆ, ಹಳ್ಳಿಯಿಂದ ನಗರಕ್ಕೆ ಬಂದಿದ್ದ ಆಸೆಗಣ್ಣಿನ ಯುವಕರಿಗೆ ಇವರ ಸಮಾಜ ಬದಲಾವಣೆಯ ಪುಂಕಾನು ಪುಂಕ ಮಾತುಗಳು ಏನೋ ಕ್ರಾಂತಿ ಬೆಳಗಾಗುವುದರಲ್ಲಿ ಆಗಲಿದೆ ಎಂದುಕೊಳ್ಳುತ್ತಿದ್ದರು.

ಈ ಕ್ರಾಂತಿಕಾರಿ ರೈತ-ದಲಿತ ಹೋರಾಟಗಾರನನ್ನು, ಸಮಾಜವಾದಿ, ಪ್ರಗತಿಪರ ಹಿರಿಯ ಗೆಳೆಯನನ್ನು ಅನಾಮತ್ತು ತಮ್ಮ ಸೋರುವ ರೂಂಗಳಿಗೆ ಕರೆ ತಂದು ಮಲಗಿಸುತ್ತಿದ್ದರು, ಇವರೆಲ್ಲಾ ಕಾಲೇಜಿಗೆ ಹೋಗಲು ತಯಾರುಗುವ ವೇಳೆಗೆ ಕಣ್ಣು ಬಿಡುತ್ತಿದ್ದ ಈ ಕ್ರಾಂತಿಕಾರಿ ಹೋರಾಟಗಾರ, ಏ ಹಾಸ್ಟಲ್ ಗೆ ತಿಂಡಿಗೆ ಹೊಂಟಿದ್ದಿರೇನೋ ನನಗೂ ಒಂದಿಷ್ಟು ತಿಂಡಿ ಕೊಡಿಸಿ ಊರಿಗೆ ಹೋಗಲು ಬಸ್ ಚಾರ್ಚಿಗೆ ದುಡ್ಡು ಕೊಡಿ ಅಂದಾಗ ಯುವಕರೆಲ್ಲಾ ಪಕಾರನೇ ನಕ್ಕು,ರಾತ್ರಿಯೆಲ್ಲಾ ದೇಶ ಉದ್ದಾರ ಮಾಡ್ತೀವಿ ಅಂತ ಸಿದ್ಧಾಂತ ಹೇಳಿ, ಈಗ ದುಡ್ಡು ಕೇಳಿದರೆ ಇದ್ಯಾವ ಸಿದ್ಧಾಂತ ಅಂದಾಗ ಅವನ್ಯಾವೋನು ನಾಟಕಕ್ಕೆ ತಬಲ ಬಾರಿಸೋಕೆ ಕರೆದಿದ್ದ ದುಡ್ಡೇ ಕೊಡಲಿಲ್ಲ, ಅವನು ಕೊಟ್ಟ ಮೇಲೆ ಕೊಡ್ತೀನಿ ಕೊಡ್ರೋ ಅಂದಾಗ ಈ ಯುವಕರು ಹಾಸ್ಟಲ್ ತಿಂಡಿ ತಿನಿಸಿ, ಚಾರ್ಜ್‍ಗೆ ಕಾಸು ಕೊಟ್ಟು ಕಳಿಸೋರು.

ಮತ್ತೊಂದು ಸಲ ಈ ಎನ್.ಜಿ.ರಾಮಚಂದರ ಬರಿತ್ತೀನಿ ಊಟ ಕೊಡಿಸುತ್ತೀನಿ ಅಂತ ಹೇಳಿದ್ದ, ಅತ್ತ-ಇತ್ತ ನೋಡುತ್ತಾ ಕ್ರಾಂತಿಕಾರ ಮಾತುಗಳನ್ನು ಮಾತನಾಡೋದು, ಕೊನೆಗೆ ಆ ಹುಡುಗ್ರು ಆವಣ್ಣ ಎಲ್ಲಿ ಭಾಷಣ ಮಾಡ್ತಾ ಐತೋ ಬಾ ನಮ್ಮ ಹಾಸ್ಟಲ್ ನಲ್ಲಿ ಉಂಡು ಹೋಗುವಂತೆ ಅಂತ ಕರೆದುಕೊಂಡು ಹೋಗಿ ಊಟ ಕೊಡಿಸೋದು.

ಈ ಕ್ರಾಂತಿಕಾರಿ ಹೋರಾಟಗಾರನಿಗೆ ಗೊತ್ತು ರಾಮಚಂದ್ರ ಬರಲ್ಲ, ಊಟ ಕೊಡಸಲ್ಲ ಅನ್ನೋದು, ಕಲೆ ನೆಚ್ಚಿಕೊಂಡು ನಗರಕ್ಕೆ ಬಂದಾಗ ಹೊಟ್ಟೆಪಾಡಿಗೆ ಏನಾದರೂ ಒಂದು ವೇಶವನ್ನು ಕಲಾವಿದರಾಗಿ ಈ ಪುಟ್ಟಶಾಮಣ್ಣ ಮಣಿವಿನಕುರಿಕೆ ಹಳ್ಳಿ ಭಾಷೆಯಲ್ಲಿ ಹೋರಾಟದ ಕೆಚ್ಚನ್ನು ಯುವಕರಿಗೆ ಹೇಳಿದಾಗ ನಕ್ಕರೆ ಇದೇನೋ ಮಾರಾಯ್ರ ನಗುತ್ತೀರ ನಾವೆಲ್ಲಾ ಎಷ್ಟು ಏಟು ತಿಂದಿದ್ದೀವಿ ಅಂತ ಗಂಭೀರ ಆಗೋರು.

ಈ ಹೋರಾಟದ ಜೊತೆಗೆ ತಬಲ ಬಾರಿಸೋದು, ಕಿನ್ನರಿ ಬಾರಿಸೋದು, ತತ್ವಪದ ಹಾಡೋದು, ನಾಟಕಗಳಲ್ಲಿ ಪಾತ್ರ ಮಾಡೋದು ನೋಡಿದ ಮನೆಯವರು ಹೋರಾಟಕ್ಕೆ ಹೋಗೋದು, ಅಲ್ಲದೆ ಬಣ್ಣ ಬ್ಯಾರೆ ಹಾಕಿಕೊಂಡು ಕುಣಿಯುತ್ತೀಯ, ಮನೆ ಮಠ ಯಾಕೆ ಬೇಕು, ಆಂಜನೇಯನ ಬಯಲಾಟ ಆಡಿಕೊಂಡು ಜೀವನ ಮಾಡಿಕೋ ಹೋಗು ಅಂತ ಆಗಾಗ ಜಗಳಾಡೋರು.

ನಮ್ಮನ್ನೆಲ್ಲಾ ಕ್ರಾಂತಿಗೆ ಮುನ್ನುಡಿ ಬರೆದ ಪುಟ್ಟಶಾಮಣ್ಣ ಈಗೊಂದು ಹತ್ತನ್ನೆರಡು ದಿನದ ಹಿಂದೆ ತುಮಕೂರು ಪತ್ರಿಕಾಭವನದ ಮುಂದೆ ಒಂದು ಹಳೆ ಬಾಗು ಹಿಡಿದು ಪ್ರತ್ಯಕ್ಷವಾದರು, ಅವರು ನನ್ನ ನೋಡಿ ಬಂದು ತಬ್ಬಿಕೊಂಡು ಬಿಟ್ಟರು, ಯಾಕಣ್ಣ ಇಲ್ಲಿ ಅಂದೆ, ಅಯ್ಯೋ ಹಲವಾರು ವರ್ಷದಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಹಾಕುತ್ತಾ ಇದ್ದೇನೆ. ಯಾವುದಾದರೂ ನೆಪ ಹೇಳಿ ರಿಜೆಕ್ಟ್ ಮಾಡ್ತಾರೆ ಅಂದರು.

ಅಯ್ಯೋ ಶಿವನೇ ಎಲ್ಲಾ ಗೆಳೆಯರಲ್ಲವೆ ಯಾಕೆ ಆಯ್ಕೆ ಮಾಡುತ್ತಿಲ್ಲ ಅಂದೆ, ಅದೇನೋ ಗೊತ್ತಿಲ್ಲ, ನಿನ್ನ ಮಾತು ನಡೆಯುತಂತೆ ಹೇಳೋ ತಮ್ಮ ಅಂದರು, ಅವರು ಈ ರೀತಿಯಾಗಿ ಪ್ರಶಸ್ತಿಗೆ ಅಲವತ್ತುಕೊಂಡವರಲ್ಲ, ಏ ಬಿಡ್ರೀ ಆ ಪ್ರಶಸ್ತಿಗೆ ಚಿಕ್ಕಾಸು ಕೊಡಲ್ಲ ಯಾಕೆ ಅಂದೆ, ಇಲ್ಲ ತಮ್ಮ ಒಂದು ಸಲ ಹೇಳು ಅಂದರು, ನೀವು ಇನ್ನೊಂದು ಸಲ ಈ ರೀತಿ ಪ್ರಶಸ್ತಿಗೆ ಅಲೆಯಬಾರದು ಹುಡುಕಿ ಬರಬೇಕೆಂದೆ, ಆಯ್ತು ಗುರುವೆ ಅಂದರು. ನಂತರ ಪ್ರಶಸ್ತಿ ಪೇಟ ಇಟ್ಟುಕೊಂಡು ಎಂ.ಜಿ.ಸ್ಟೇಡಿಯಂನಲ್ಲಿ ಸಿಕ್ಕಿ ತಬ್ಬಿಕೊಂಡರು. ಅದನ್ನು ನೋಡಿ ಸಂತೋಷವಾಯಿತು ಅಭಿನಂದನೆಗಳು.

ಸುರೇಂದ್ರ ಶಿಲ್ಪ ಸ್ಟುಡಿಯೋ : ಸಮುದಾಯದಲ್ಲಿದ್ದ ಕಲಾವಿದರು ಇವರು, ಏನ್ರಿ ನೀವು ಬೆಳ್ಳಗಿಲ್ಲ, ಬೆಳ್ಳಗ್ಗೆ ಪೋಟೋ ಹೊಡೆಯಿರಿ ಅಂದ್ರೆ ಹ್ಯಂಗೆ, ಓ ಹೋ ನೀವೇನು ಇಂಗ್ಲೆಂಡಿನವರು ಹೊಳೆದಂಗೆ ಹೊಳೆಯುತ್ತಿದ್ದೀರಿ, ನಮಗಿಂತ ಕರ್ರಗೆ ಇದ್ದೀರ, ಅದೇನ್ರೀ ಬೆಳಗಿರೋರನಾ ಮದುವೆಯಾಗಿದ್ದೀರ ಅಂದ್ರೆ ಈಗೇನಪ್ಪ ನಿನ್ನ ಪೋಟೋ ಬೆಳ್ಳಗೆ ಮಾಡಬೇಕು, ನನ್ನ ಬಣ್ಣದ ಬಗ್ಗೆ ಮಾತನಾಡಬೇಡ ಎಂಬ ಹುಸಿ ಜಗಳದ ಶಿಲ್ಪ ಸ್ಟುಡಿಯೋ ಸುರೇಂದ್ರ.

ಇವರ ಸ್ಟುಡಿಯೋಕ್ಕೆ ಹೋದರೆ ಬರೀ ನಗು,ಹುಸಿ ಜಗಳ, ಆ ಜನ್ನಿಯನ್ನು, ಡೇವಿಡ್ ಗೆ ನಾನೇ ಮಾರಾಯ್ಯ ಜೀವನ ತೋರಿಸಿದ್ದು, ಆ ಕಾರ್ಟೂನ್ ಪ್ರಸನ್ನ ನಮ್ಮನ್ನೆಲ್ಲಾ ಪಿಶಾಚಿಯಂತೆ ಕಾಡಿ, ಚಿತ್ರ ಬರಸೋನು, ಚಿತ್ರ ಪ್ರದರ್ಶನಗಳನ್ನು ಮಾಡಿಸೋನು, ಆ ಕೃಷ್ಣಸ್ವಾಮಿಯನ್ನು ಕರೆಸಿ ನಾಟಕ ಮಾಡಿಸೋನು ಅಂತ ಪಕಾರನೇ ನಗುವ ಸುರೇಂದ್ರರವರನ್ನು ಆಗಾಗ ನಿಮಗೆ ರಾಜ್ಯೋತ್ಸವ ಪ್ರಶಸ್ತಿ ಯಾಕೆ ಕೊಟ್ಟಿಲ್ಲ ಅಂದ್ರೆ ಯಾಕೋ ಅನ್ನೋರು, ನಾನು ನಗುತ್ತಾ ನೀವು ಕರನೆ ಗಡಿಗೆ ತರಹ ಇದ್ದೀರ ಅಂದಾಗ ಇಬ್ಬರೂ ಬಿದ್ದು ಬಿದ್ದು ನಗುತ್ತಿದ್ದೆವು. ಇಂತಹ ಸುರೇಂದ್ರರವರಿಗೆ ತಮ್ಮ ಚಿತ್ರಕಲೆಗೆ ರಾಜ್ಯೋತ್ಸವ ಸಿಕ್ಕಿರುವುದು ಸಂತೋಷವಾಗಿದೆ ಅಭಿನಂದನೆಗಳು.

ಶಿವಣ್ಣ ತಿಮ್ಲಾಪುರ : ಕೆ.ಬಿ.ಸಿದ್ದಯ್ಯ ಬದುಕಿರುವತನಕ ಅವರ ಎಲ್ಲಾ ತರಹದ ಆಗು-ಹೋಗುಗಳನ್ನು ಅವರೊಂದಿಗೆ ಏಗಿಕೊಂಡು, ಭಾಗಿಯಾಗುವುದನ್ನು ಕಂಡ ಕೆಲವರು ತಿಮ್ಲಾಪುರ ಕೇಬಿ ಜೊತೆ ಬಿದ್ದು ಕೆಟ್ಟೋದ ಅನ್ನೋರು, ಅಂತಹ ತಿಮ್ಲಾಪುರ ಸಾಹಿತ್ಯ ವಲಯದಲ್ಲಿ ತಮ್ಮದೇಯಾದ ಚಾಪು ಮೂಡಿಸಿದ್ದಾರೆ. ಕವಿತೆ ಮತ್ತು ಕಥೆಗಳ ಮೂಲಕ ತಮ್ಮದೆಯಾದ ಹೊಸ ಆಯಾಮವನ್ನು ಸಾಹಿತ್ಯ ಕ್ಷೇತ್ರದಲ್ಲಿ ಹೊಸತನ ಹುಟ್ಟು ಹಾಕಿದ್ದಾರೆ.

ಕನ್ನಡ ಆಧುನಿಕ ದಲಿತ ಸಾಹಿತ್ಯಕ್ಕೀಗ ಐವತ್ತು ವರ್ಷ ವಯಸ್ಸು.ಈ ಕಾಲಾವಧಿಯಲ್ಲಿ ಸುಮಾರು ಮೂರು ತಲೆಮಾರುಗಳು ದಲಿತ ಸಾಹಿತ್ಯ ಎನ್ನುವ ಈ ಜೀವಧಾರೆಯನ್ನು ಹರಿಸುತ್ತಾ ಬಂದಿವೆ. ಇಪ್ಪತ್ತೊಂದನೆ ಶತಮಾನದ ಈ ಎರಡು ದಶಕಗಳಲ್ಲಿ ಅದು ಭರತದಂತೆ ಮುನ್ನಡೆದಿದೆ. ದಲಿತ ಸಾಹಿತ್ಯ ಎನ್ನುವ ಧಾರೆಯಲ್ಲಿ ಬರೆದವರೆಲ್ಲರೂ ದಲಿತ ಅನುಭವ ಲೋಕವನ್ನು ಬಗೆದಿಡುತ್ತಾ ಬಂದವರೇ.ಆ ಚಿತ್ರಣದಲ್ಲಿ ಬೇರೆ ಬೇರೆ ಬಗೆಯ ಬಣ್ಣಗಳಿವೆ. ಆಯಾ ಸೀಮೆ, ಪ್ರಾಂತ್ಯಗಳ ಸಂಕಟಗಳಿಗಿರುವ ಸ್ಥಳೀಯ ಸ್ವರೂಪವನ್ನು ಅಲ್ಲಿಯದೇ ಆಡುನುಡಿಯಲ್ಲಿ ಕಟ್ಟಿಕೊಡುವುದರಿಂದ ವೈವಿಧ್ಯತೆಯೂ ಒದಗಿ ಬಂದಿದೆ.

ಡಾ. ಶಿವಣ್ಣ ತಿಮ್ಲಾಪುರ ತರುಣ ತಲೆಮಾರಿನ ಕವಿ, ಸಂಘಟಕ ಹಾಗೂ ಎಚ್ಚೆತ್ತ ಸಾಮಾಜಿಕ ಚಿಂತನೆಯ ಲೇಖಕ. ಶ್ರದ್ಧಾಪೂರ್ವಕವಾಗಿ ಸಾಹಿತ್ಯ – ಸಂಸ್ಕೃತಿಗಳ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಅಧ್ಯಯನಶೀಲ. ಸಾಮಾಜಿಕ ನ್ಯಾಯದ ಜಾಗೃತಿಯನ್ನು, ತಾನು ಮೂಡಿ ಬಂದ ಸಮುದಾಯದ ಸ್ವಾಭಿಮಾನದ ಜೊತೆ ಕೂಡಿಸಿಕೊಂಡು ಕಾವ್ಯ ಕಟ್ಟುತ್ತಿರುವ ಪ್ರತಿಭಾವಂತ. ಹೊಸ ತಲೆಮಾರಿನ ಲೇಖಕರಲ್ಲಿ ತುಮಕೂರು ಸೀಮೆಯ ಹೆಚ್ಚಿನ ಸಂಖ್ಯೆಯ ಲೇಖಕರು ಭರವಸೆ ಹುಟ್ಟಿಸಿರುವ ಸತ್ವ ಶಾಲಿಗಳಾಗಿದ್ದಾರೆ.ಅವರಲ್ಲಿ ಶಿವಣ್ಣತಿಮ್ಲಾಪುರ ಎದ್ದು ಕಾಣುವ ಹೆಸರುಗಳಲ್ಲೊಂದು.

ಕನ್ನಡ ಕಾವ್ಯ ರೈತನನ್ನು “ನೇಗಿಲ ಯೋಗಿ ” ಎಂದು ಕೀರ್ತಿಸಿತು. ಶಿವಣ್ಣತಿಮ್ಲಾಪುರ ಈಗ ಗಲ್ಲೆಬಾನೆಯ ಕಾಯಕ ಜೀವಿಯನ್ನು “ತೊಗಲ ಯೋಗಿ” ಎಂದು ಸನ್ಮಾನಿಸಿದ್ದಾರೆ. ಅನಾದಿಯ ಕುಲ ಕಸುಬೊಂದರ ಯೋಗ್ಯತೆಯನ್ನು ಹೀಗೆ ಈ ಕಾಲದಲ್ಲಿ ಕಾವ್ಯದ ಮೂಲಕ ಪ್ರಮಾಣೀಕರಿಸಲಾಗಿದೆ.
-ಬಂಜಗೆರೆ ಜಯಪ್ರಕಾಶ
ಇಂತಹ ಶಿವಣ್ಣ ತಿಮ್ಲಾಪುರರವರಿಗೆ ಪ್ರಶಸ್ತಿ ಲಭಿಸಿರುವುದು ಸಂತೋಷ, ಅಭಿನಂದನೆಗಳು.

ರಂಗಮ್ಮ ಹೊದೆಕಲ್ಲು : ರಂಗಮ್ಮ ಹೊದೆಕಲ್ಲು ಅಂದ ಕೂಡಲೇ ಹೊಟ್ಟಕಿಚ್ಚುಪಡುವವರಲ್ಲಿ ನಾನು ಕೂಡ ಒಬ್ಬ, ನನ್ನ ಗುರುಗಳಾದ ವಿ.ನಾಗೇಶ್ ನಂತರ ಅಕ್ಷರಗಳನ್ನು ಮುತ್ತಿನಂತೆ ದುಂಡಾಗಿ ಬರೆಯುವುದನ್ನು ರಂಗಮ್ಮ ಹೊದೆಕಲ್ಲು, ಸಾಕಷ್ಟು ಕವಿತೆಗಳನ್ನು ಬರೆದಿರುವ ಇವರು, ಕವನ ಸಂಕಲನಗಳನ್ನು ಹೊರ ತಂದಿದ್ದಾರೆ. ಇವರ ಕೈ ಬರವಣಿಗೆಯಲ್ಲಿ “ಶೈನಾ” ಪತ್ರಿಕೆಯನ್ನು ತಮ್ಮ ದುಂಡಾದ ಅಕ್ಷರಗಳಿಂದ ಬರೆದು ಹೊರ ತರುತ್ತಿದ್ದನ್ನು ಯಾರೂ ಮರೆಯಲು ಸಾಧ್ಯವಿಲ್ಲ.

ಇವರು ಕವಯತ್ರಿಯಲ್ಲದೆ, ಶಿಕ್ಷಕಿಯಾಗಿಯೂ ತಮ್ಮ ವಿದ್ಯಾರ್ಥಿಗಳಿಗೆ ಗುಣಾತ್ಮಕ ಪಾಠಗಳನ್ನು ಹೇಳಿಕೊಡುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯ ಮತ್ತು ಸತ್ಕಾರ್ಯವನ್ನು ಕಲಿಸಿದ್ದಾರೆ. ಇವರು ಸಾಹಿತ್ಯದ ಕಾರ್ಯಕ್ರಮದ ನೀರೂಪಣೆಯನ್ನು ಚೆಂದವಾಗಿ ನಡೆಸಿ ಕೊಡುತ್ತಾರೆ, ದುಂಡಾದ ಅಕ್ಷರ ಬರೆದು ನಮ್ಮ ಹೊಟ್ಟೆ ಹುರಿಸುವ ರಂಗಮ್ಮ ಹೊದೆಕಲ್ಲುರವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಸಂತೋಷ, ಅಭಿನಂದನೆಗಳು.

ತುಮಕೂರು ಜಿಲ್ಲಾ ಮತ್ತು ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ನನ್ನೆಲ್ಲಾ ಪತ್ರಿಕಾ ಗೆಳೆಯರಿಗೆ ಹುತ್ಫೂರ್ವಕ ಅಭಿನಂದನೆಗಳು.

ಇದೇ ರೀತಿ ಹಲವಾರು ಗೆಳೆಯರಿಗೆ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದ್ದು, ಪ್ರಶ್ತಿಗೆ ಲಾಭಿ ನಡೆಯುವ ಕಾಲದಲ್ಲೂ ಮುಕಟ ಮಣಿಯಂತಿರುವ, ಸಮಾಜಮುಖಿ ಬಯಸುವ ಇಂತಹವರ ಬಗ್ಗೆ ಒಂದೆರಡು ಅಕ್ಷರ ಬರೆಯದಿದ್ದರೆ ನನ್ನ ಆತ್ಮಕ್ಕೆ ಚ್ಯುತಿ ತಂದುಕೊಂಡಂತಾಗುತ್ತದೆ.

-ವೆಂಕಟಾಚಲ,ಹೆಚ್.ವಿ.

Leave a Reply

Your email address will not be published. Required fields are marked *