
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಬಜೆಟ್ ಮಂಡನೆ ವೇಳೆಯಲ್ಲಿ ಸಂಕಷ್ಟದಲ್ಲಿರುವ ಪತ್ರಕರ್ತರುಗಳಿಗೆ ಮಾಶಾಸನ 10,000 ಬದಲು 12,000ಗಳಿಗೆ ಹೆಚ್ಚಿಸಿರುತ್ತಾರೆ ಹಾಗೂ ಕುಟುಂಬದವರಿಗೆ ನೀಡುತ್ತಿದ್ದ 3000 ಬದಲು 6,000ಗಳಿಗೆ ನೀಡಲಾಗಿದೆ ಎಂದು ಮುಂಗಡಪತ್ರದಲ್ಲಿ ಮಂಡಿಸಿದ್ದಾರೆ.
ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 14ನೇ ಬಜೆಟ್ ಹಲವಾರು ಯೋಜನೆಗಳನ್ನು ಜನಮುಖಿಯಂತೆ ಘೋಷಿಸಿದ್ದು, ಐದು ಗ್ಯಾರಂಟಿ ಯೋಜನೆಗಳಿಗೆ ಮಹತ್ವ ನೀಡುವುದರ ಜೊತೆಗೆ ಸಿದ್ದರಾಮಯ್ಯ ಸರ್ಕಾರ ಕೃಷಿ ಕ್ಷೇತ್ರಕ್ಕೂ ಉತ್ತಮ ಕೊಡುಗೆ ನೀಡಿದೆ.
ರೈತರು ತಮ್ಮ ಹಾಗೂ ತಮ್ಮ ನೆರೆಹೊರೆಯ ರೈತರ ಉತ್ಪನ್ನಗಳನ್ನು ಸಂಗ್ರಹಿಸಲು ಅನುಕೂಲವಾಗುವಂತೆ ಗೋದಾಮ ನಿರ್ಮಿಸಲು ಬ್ಯಾಂಕುಗಳು ನೀಡುವ 20 ಲಕ್ಷ ರೂ ವರೆಗಿನ ಸಾಲಕ್ಕೆ ರಾಜ್ಯ ಸರ್ಕಾರವು ಶೇಕಡಾ 7ರಷ್ಟು ಬಡ್ಡಿ ಸಹಾಯಧನ ನೀಡಲಿದೆ.
ರಾಜ್ಯದ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ನೀಡುತ್ತಿರುವ ಅಲ್ಪಾವಧಿ ಸಾಲದ ಮಿತಿಯನ್ನು ಸದ್ಯದ 3 ಲಕ್ಷ ರೂಗಳಿಂದ 5 ಲಕ್ಷ ರೂ ಗಳಿಗೆ ಹೆಚ್ಚಿಸಲಾಗುವುದು. ಅದೇ ರೀತಿ ಶೇ 3ರ ಬಡ್ಡಿ ದರದಲ್ಲಿ ನೀಡುವ ಮಾಧ್ಯಮಾವಧಿ ಮತ್ತು ದೀರ್ಘಾವಧಿ ಸಾಲದ ಮಿತಿಯನ್ನು 10 ಲಕ್ಷ ರೂಗಳಿಂದ 15 ಲಕ್ಷ ರೂಗಳಿಗೆ ಹೆಚ್ಚಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ 35 ಲಕ್ಷಕ್ಕಿಂತ ಹೆಚ್ಚಿನ ರೈತರಿಗೆ 25,000 ಕೋಟಿ ರೂಗಳಷ್ಟು ಸಾಲ ವಿತರಣೆ ಮಾಡುವ ಗುರಿ ಹೊಂದಲಾಗಿದೆ.
ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಗುಡ್ಡಗಾಡು ಪ್ರದೇಶಗಳ ರೈತರ ಕೃಷಿ ಉತ್ಪನ್ನ ಮತ್ತು ಪರಿಕರಗಳ ಸಾಗಾಣಿಕೆಗಾಗಿ ನಾಲ್ಕು ಚಕ್ರದ ಪಿಕಪ್ ವ್ಯಾನ್ ಖರೀದಿಸಲು 7 ಲಕ್ಷ ರೂ ವರೆಗಿನ ವಾಹನ ಖರೀದಿಸಲು ಶೇಕಡಾ ನಾಲ್ಕರ ಬಡ್ಡಿ ದರದಲ್ಲಿ ಸಾಲ ವಿತರಿಸಲಾಗುವುದು. ರಾಜ್ಯದ 50 ತರಕಾರಿ ಮಾರುಕಟ್ಟೆಗಳಲ್ಲಿ ಕೆಪೆಕ್ ಸಹಯೋಗದೊಂದಿಗೆ ಮಿನಿ ಶೀತಲ ಗೃಹಗಳನ್ನು ಸ್ಥಾಪಿಸಲು ತೀರ್ಮಾನಿಸಲಾಗಿದೆ.
ಎಪಿಎಂಸಿ ಕಾಯ್ದೆ ರದ್ದು: ಎಪಿಎಂಸಿ ಕಾಯ್ದೆ ಜಾರಿ ನಂತರ ರೈತರಿಗೆ ಉಂಟಾಗಿರುವ ಹಾನಿ ಪರಿಗಣಿಸಿ ಈ ರೈತ ವಿರೋಧಿ ಕಾಯ್ದೆಯನ್ನು ಹಿಂಪಡೆಯಲು ಸರ್ಕಾರ ನಿರ್ಧರಿಸಿದೆ. ಕಾಯಕ ನಿಧಿ ಯೋಜನೆ ಅಡಿ ರಾಜ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಮಾಲರು ಮರಣ ಹೊಂದಿದಲ್ಲಿ ಶವ ಸಂಸ್ಕಾರಕ್ಕಾಗಿ ನೀಡಲಾಗುತ್ತಿದ್ದ 10,000 ವನ್ನು 25,000 ರೂ.ಗೆ ಹೆಚ್ಚಳ ಮಾಡುವುದಾಗಿ ಬಜೆಟ್ನಲ್ಲಿ ತಿಳಿಸಿದೆ.
ನವೋದ್ಯಮ ಯೋಜನೆ: ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಕೃಷಿ ಮಾರುಕಟ್ಟೆಗೆ ಸಂಬಂಧಿಸಿದ ವಲಯಗಳಲ್ಲಿ ನಾವೀನ್ಯತೆಯನ್ನು ಪೆÇ್ರೀತ್ಸಾಹಿಸುವ ನಿಟ್ಟಿನಲ್ಲಿ ಕೃಷಿ ಉದ್ಯಮಗಳಿಗೆ ಉತ್ತೇಜನ ನೀಡಲು ʻನವೋದ್ಯಮʼ ಎಂಬ ಹೊಸ ಯೋಜನೆಯಡಿ 10 ಕೋಟಿ ರೂ. ಒದಗಿಸಲಾಗುವುದು.
ಏಕೀಕೃತ ಬ್ರಾಂಡಿಂಗ್ ವ್ಯವಸ್ಥೆ: ರೈತರು ಬೆಳೆದ ಉತ್ಪನ್ನಗಳನ್ನು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅನುಕೂಲವಾಗುವಂತೆ ʻನಂದಿನಿʼ ಮಾದರಿಯಲ್ಲಿ ರೈತ ಉತ್ಪನ್ನಗಳಿಗೆ ಏಕೀಕೃತ ಬ್ರಾಂಡಿಂಗ್ ವ್ಯವಸ್ಥೆ ರೂಪಿಸಲು 10 ಕೋಟಿ ರೂ. ಒದಗಿಸಲಾಗುವುದು. ರೈತ ಉತ್ಪಾದಕ ಸಂಸ್ಥೆಗಳನ್ನು ಬಲಪಡಿಸಲು ಹಿಂದುಳಿದ ತಾಲ್ಲೂಕುಗಳ 100 ರೈತ ಉತ್ಪಾದಕ ಸಂಸ್ಥೆಗಳಿಗೆ ಸಹಕಾರಿ ಮತ್ತು ವಾಣಿಜ್ಯ ಬ್ಯಾಂಕುಗಳು ನೀಡುವ ತಲಾ 20 ಲಕ್ಷ ರೂ. ವರೆಗಿನ ಸಾಲಕ್ಕೆ ಶೇ.4 ರ ಬಡ್ಡಿ ಸಹಾಯಧನ ನೀಡಲಾಗುವುದು.
ಉದ್ಯೋಗ ಖಾತರಿಗೆ ಮರು ಜೀವ: ಕೃಷಿ ಭಾಗ್ಯ ಯೋಜನೆಯನ್ನು ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯೊಂದಿಗೆ ಸಂಯೋಜಿಸಿ 100 ಕೋಟಿ ವೆಚ್ಚದಲ್ಲಿ ಮರು ಜಾರಿ ಮಾಡುವುದಾಗಿ ಸಿದ್ದರಾಮಯ್ಯ ಬಜೆಟ್ನಲ್ಲಿ ಘೋಷಿಸಿದ್ದಾರೆ.
ಸೀಡ್ ಕ್ಯಾಪಿಟಲ್: ರೈತ ಉತ್ಪಾದಕ ಸಂಸ್ಥೆಗಳ ಉತ್ಪನ್ನ ರಫ್ತುಗೆ ಅನುಕೂಲ ಕಲ್ಪಿಸಲು ಗೋದಮು ಶೀತಲ ಗೃಹ ನಿರ್ಮಾಣ ಮತ್ತು ಇತರೆ ಮೂಲ ಸೌಕರ್ಯ, ಸೃಜನ ಯೋಜನಾ ವೆಚ್ಚದ ಗರಿಷ್ಠ ಶೇಕಡ 20ರಷ್ಟು ಅಂದರೆ ಒಂದು ಕೋಟಿ ರೂ ಮೀರದಂತೆ ಸೀಡ್ ಕ್ಯಾಪಿಟಲ್ ಒದಗಿಸುವಿಕೆ. ಕೃಷಿ ಮತ್ತು ತೋಟಗಾರಿಕೆ ಉತ್ಪನ್ನ ರಫ್ತು ಉತ್ತೇಜನಕ್ಕೆ ಸಂಸ್ಥೆ ಮೂಲಕ ರೈತ ಉತ್ಪಾದಕ ಸಂಸ್ಥೆಗಳು ನವೋದ್ಯಮಿಗಳು ಮತ್ತು ಕಿರು ಆಹಾರ ಸಂಸ್ಕರಣ ಉದ್ಯಮೆದಾರರಿಗೆ ಬೆಂಬಲ ನೀಡಲು 5 ಕೋಟಿ ರೂಪಾಯಿ ಒದಗಿಸಲಾಗುವುದು
ಕಾಫಿಗೆ ಬ್ರ್ಯಾಂಡಿಂಗ್: ಚಿಕ್ಕಮಗಳೂರು, ಕೊಡಗು ಮತ್ತು ಬಾಬಾಬುಡನ್ಗಿರಿಯ ಅರೇಬಿಕಾ ಕಾಫಿಗೆ ಜಿಐ ಟ್ಯಾಗ್ ಹೊಂದಿದ್ದು, ಇವರುಗಳನ್ನು ಇನ್ನಷ್ಟು ಪ್ರಚುರಗೊಳಿಸಲು ಮತ್ತು ಕಾಫಿ ಎಕೋ ಟೂರಿಸಂ ಅನ್ನ ಉತ್ತೇಜಿಸಲು ಕರ್ನಾಟಕ ಕಾಫಿ ಬ್ರ್ಯಾಂಡಿಂಗ್ ಮಾಡಲಾಗುವುದು ಎಂದು ಆಯವ್ಯಯದಲ್ಲಿ ಮಂಡಿಸಲಾಗಿದೆ. ವಿಶೇಷ ಕಂಪುರುಚಿ ಮತ್ತು ಸೊಗಡಿನಿಂದ ಕೂಡಿರುವ ಮೈಸೂರು ಮಲ್ಲಿಗೆ ನಂಜನಗೂಡು ರಸಬಾಳೆ ಮತ್ತು ಮೈಸೂರು ವೀಳ್ಯದೆಲೆಗಳು ಜಿಐ ಟ್ಯಾಗ್ ಅನ್ನು ಪಡೆದಿದ್ದು, ಇವುಗಳ ಉತ್ಪಾದನೆ ಸಂಶೋಧನೆ ಮಾರುಕಟ್ಟೆ ಮತ್ತು ಬ್ರಾಂಡಿಂಗ್ ಉತ್ತೇಜಿಸಲು ನೂತನ ಕಾರ್ಯಕ್ರಮ ಇದೇ ಬಜೆಟ್ನಲ್ಲಿ ಮಾಡಲು ಸಿದ್ದರಾಮಯ್ಯ ಚಿಂತಿಸಿದ್ದಾರೆ.
ರಾಮನಗರದಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆ: ರಾಮನಗರ ಮತ್ತು ಶಿಡ್ಲಘಟ್ಟ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಏμÁ್ಯದಲ್ಲಿ ಅತಿ ಹೆಚ್ಚಿನ ವಹಿವಾಟು ನಡೆಯುತ್ತಿದ್ದು ರಾಮನಗರ ಜಿಲ್ಲೆಯಲ್ಲಿ 75 ಕೋಟಿ ರೂ ವೆಚ್ಚದಲ್ಲಿ ಅತಿ ದೊಡ್ಡ ಹೈಟೆಕ್ ಮಾರುಕಟ್ಟೆ ನಿರ್ಮಾಣ. ಕೋಲಾರ ಚಿಕ್ಕಬಳ್ಳಾಪುರ ಹಾಗೂ ಸುತ್ತಲಿನ ರೈತರಿಗೆ ಅನುಕೂಲವಾಗುವಂತೆ ಶಿಡ್ಲಘಟ್ಟದಲ್ಲಿ ಮಾರುಕಟ್ಟೆ 75 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ರೇಷ್ಮೆ ಗೂಡು ಮಾರುಕಟ್ಟೆಯಾಗಿ ಅಭಿವೃದ್ಧಿಗೆ ಸರ್ಕಾರ ನಿರ್ಧರಿಸಿದೆ.
ಮೈಸೂರು ಬಿತ್ತನೆ ಪ್ರದೇಶದಲ್ಲಿ ಮೂಲಭೂತ ಸೌಕರ್ಯ ಅಳವಡಿಕೆ. ಈ ಮೂಲಕ ಗುಣಮಟ್ಟದ ರೋಗರಹಿತವಾದ ಮೈಸೂರು ಬಿತ್ತನೆ ಗೂಡುಗಳ ಉತ್ಪಾದನೆ, ವಾಣಿಜ್ಯ ರೇಷ್ಮೆ ಬೆಳೆಗಾರರಿಗೆ ವಿತರಿಸಲು ಮತ್ತು ಉತ್ತಮ ಗುಣಮಟ್ಟದ ಮಿಶ್ರತಳಿ ಕಚ್ಚಾ ರೇಷ್ಮೆಯನ್ನು ಉತ್ಪಾದಿಸಲು ಅನುಕೂಲ ಮಾಡಿಕೊಡುವುದು ಮತ್ತು ರೇಷ್ಮೆ ನೂಲು ಬಿಚ್ಚಾಣಿಕೆ ದಾರರಿಗೆ ಸುಲಭವಾಗಿ ದುಡಿಯುವ ಬಂಡವಾಳ ಒದಗಿಸಲು, ರೇಷ್ಮೆ ಗೂಡಿನ ಖರೀದಿಯಲ್ಲಿ ಸಕ್ರಿಯವಾಗಿ ಭಾಗವಹಿಸಲು 5 ಲಕ್ಷ ವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಘೋಷಿಸಿದ್ದಾರೆ.
ನಂದಿನಿಗೆ ಇನ್ನಷ್ಟು ಬಲ: ನಂದಿನಿ ಉತ್ಪನ್ನವನ್ನು ಕನ್ನಡಿಗರಿಗೆ ಉಳಿಸಿ ಇನ್ನಷ್ಟು ಬೆಳೆಸಲು ಸರ್ಕಾರ ಬದ್ಧವಾಗಿದೆ ಎಂದು ಬಜೆಟ್ ವೇಳೆ ಸಿದ್ದರಾಮಯ್ಯ ಹೇಳಿದ್ದಾರೆ. ಅಲ್ಲದೇ ಈ ಬಾರಿ ರಾಸುಗಳಿಗಗೆ ಕಾಡಿದ ಚರ್ಮ ಗಂಟು ರೋಗದ ಬಗ್ಗೆಯೂ ಬೆಳಕು ಚೆಲ್ಲಿದ್ದಾರೆ. ಚರ್ಮ ಗಂಟು ರೋಗದಿಂದ ಹಾಲಿನ ಉತ್ಪಾದನೆಯಲ್ಲಿ ಇಳಿಕೆಯಾಗಿದ್ದು, ಇದಕ್ಕಾಗಿ ಉತ್ತಮ ಹಾಲು ನೀಡುವ ತಳಿಯನ್ನು ಅಭಿವೃದ್ಧಿಪಡಿಸುವ ಹಾಗೂ ರೋಗಗಳಿಂದ ಬಳಲುತ್ತಿರುವ ಜಾನುವಾರುಗಳಿಗೆ ಸೂಕ್ತ ಸಮಯದಲ್ಲಿ ಸಮರ್ಪಕ ಚಿಕಿತ್ಸೆ ಔಷಧಿ ಮತ್ತು ಲಸಿಕೆ ಒದಗಿಸುವ ಮೂಲಕ ಹಾಲಿನ ಇಳುವರಿ ಹೆಚ್ಚಿಸಲು ಪ್ರಯತ್ನಕ್ಕೆ ಸರ್ಕಾರ ಬಜೆಟ್ನಲ್ಲಿ ಮುಂದಾಗಿದೆ.
ಮೃತಪಟ್ಟ ಜಾನುವಾರಿಗೆ ಪರಿಹಾರ: ಚರ್ಮ ಗಂಟು ರೋಗದಿಂದ ಒಟ್ಟು 32,045 ಜಾನುವಾರುಗಳು ಮರಣ ಹೊಂದಿವೆ. ಈ ಪೈಕಿ ಒಟ್ಟು 25,859 ಮರಣ ಹೊಂದಿದ ಜಾನುವಾರುಗಳಿಗೆ 53 ಕೋಟಿ ರೂಪಾಯಿ ಪರಿಹಾರ ಧನ ವಿತರಿಸಲಾಗಿದೆ. ಬಾಕಿ ಇರುವ 5851 ಮರಣ ಹೊಂದಿರುವ ಜಾನುವಾರುಗಳ ಮಾಲೀಕರಿಗೆ 12 ಕೋಟಿ ಪರಿಹಾರಧನ ವಿತರಿಸುವ ಬಗ್ಗೆ ಆಯವ್ಯಯದಲ್ಲಿ ಮಂಡಿಸಲಾಗಿದೆ. ಗ್ರಾಹಕರಿಗೆ ಹಗ್ಗದ ದರದಲ್ಲಿ ಗುಣಮಟ್ಟದ ಪೆÇ್ರಟೀನ್ ಯುಕ್ತ ಮಾಂಸ ಮತ್ತು ಮೊಟ್ಟೆ ಪೂರೈಕೆಗೆ ಅವಕಾಶ ಕಲ್ಪಿಸಲು ಖಾಸಗಿ ಸಹಭಾಗಿತ್ವದಲ್ಲಿ ಜಾನುವಾರು ಉತ್ಪನ್ನಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಘಟಕಗಳ ಹಾಗೂ ಉತ್ತಮ ಮಾರುಕಟ್ಟೆ ಅಭಿವೃದ್ಧಿ ಪಡಿಸುವ ಚಿಂತನೆಯನ್ನು ಮಂಡಿಸಲಾಗಿದೆ
ಇನ್ನು ಮುಂದೆ ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಮಕ್ಕಳಿಗೆ ವಾರದಲ್ಲಿ 2ದಿನ ಮೊಟ್ಟೆ, ಕಡಲೆಕಾಯಿ ಚಿಕ್ಕಿ ಮತ್ತು ಬಾಳೆಹಣ್ಣನ್ನು ವಿತರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಈವರೆಗೂ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವಿದ್ಯಾಭ್ಯಾಶ ಮಾಡುತ್ತಿರುವ 1 ರಿಂದ 8ನೇ ತರಗತಿವರೆಗೆ ವಿದ್ಯಾರ್ಥಿಗಳಿಗೆ ವಾರದಲ್ಲಿ ಒಂದು ದಿನ ಮೊಟ್ಟೆ, ಕಡಲೆಕಾಯಿ ಚಿಕ್ಕಿ ಹಾಗೂ ಬಾಳೆಹಣ್ಣನ್ನು ವಿತರಿಸಲಾಗುತ್ತಿತ್ತು. ಈಗ ಈ ಯೋಜನೆಯನ್ನು 9 ಮತ್ತು 10ನೇ ತರಗತಿ ಮಕ್ಕಳಿಗೂ ವಿಸ್ತರಿಸಲಾಗುವುದು ಎಂದು ಹೇಳಿದ್ದಾರೆ.
ಈ ಯೋಜನೆಯಿಂದ ವಿದ್ಯಾರ್ಥಿಗಳ ಮಾನಸಿಕ ಸಮತೋಲನ ಉಂಟಾಗುತ್ತದೆ. ಜೊತೆಗೆ ಈ ಯೋಜನೆಯನ್ನು 9 ಮತ್ತು 10ನೇ ತರಗತಿ ವ್ಯಾಸಂಗ ಮಾಡುತ್ತಿರುವ 60 ಲಕ್ಷ ಮಕ್ಕಳಿಗೂ ವಿಸ್ತರಿಸಲಾಗಿದ್ದು, ಇದಕ್ಕಾಗಿ 280 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ ಎಂದು ತಿಳಿಸಿದ್ದಾರೆ.
ಮಕ್ಕಳಲ್ಲಿ ಉಂಟಾಗುವ ಕಲಿಕಾ ನ್ಯೂನತೆಯನ್ನು ನಿವಾರಿಸಲು ಸುಮಾರು 33 ಲಕ್ಷ ವಿದ್ಯಾರ್ಥಿಗಳಿಗೆ 80 ಕೋಟಿ ರೂಪಾಯಿ ವೆಚ್ಚದಲ್ಲಿ ಕಲಿಕಾ ಬಲವರ್ಧನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಮರುಸಿಂಚನ ಎಂಬ ಯೋಜನೆಯಡಿ 1 ಲಕ್ಷ ವಿದ್ಯಾರ್ಥಿಗಳಿಗೆ ಪ್ರೌಢಶಾಲಾ ಹಂತದ ಪರೀಕ್ಷೆಗಳಿಗೆ ಸಜ್ಜುಗೊಳಿಸಲು ವಿಶೇಷ ತರಬೇತಿಯನ್ನು ಕೊಡಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.