
ತುಮಕೂರು: ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಇಡೀ ಕುಟುಂಬವನ್ನು ಹತ್ಯೆ ಮಾಡುವ ಸಂಚು ಮಾಡಿರುವ ಬಿಜೆಪಿ ನಾಯಕನ ವಿರುದ್ಧ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲಾಯಿತು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ ಹಾಲಪ್ಪ ಎಐಸಿಸಿ ವೀಕ್ಷಕರಾದ ನಸೀಂಖಾನ್ ನೇತೃತ್ವದಲ್ಲಿ ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ತೆರಳಿ ದೂರು ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಎಐಸಿಸಿ ವೀಕ್ಷಕ ನಸೀಂಖಾನ್, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬವನ್ನು ಹತ್ಯೆ ಮಾಡುತ್ತೇನೆ ಎಂದು ಚಿತ್ತಾಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವ ಬಿ.ಜೆ.ಪಿ ಪಕ್ಷದ ಅಭ್ಯರ್ಥಿ ಮಣಿಕಂಠ ರಾಥೋಡ್ ಮೇಲೆ 40ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಿದ್ದು ಇತ್ತೀಚೆಗೆ ರಿವಾಲ್ವರ್ ಹಿಡಿದುಕೊಂಡು ತಿರುಗಿಸಿದ ವೀಡಿಯೋ ಕೂಡ ಬಹಿರಂಗವಾಗಿದೆ ಎಂದರು.
ಮೇ.6ರಂದು ಅಪರಿಚಿತ ವ್ಯಕ್ತಿಯೊಂದಿಗೆ ಮಣಿಕಂಠ ರಾಥೋಡ್, ಖರ್ಗೆ ರವರ ಫೆÇೀನ್ ನಂಬರ್ ಇದ್ದರೆ ಇಡೀ ಕುಟುಂಬವನ್ನು ಹೆಂಡತಿ ಮಕ್ಕಳನ್ನು ಸೇರಿಸಿ ಸಾಫ್ ಮಾಡಿ ಬಿಡುತ್ತಿದ್ದೆ ಎಂದು ಎ.ಐ.ಸಿ.ಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಕುಟುಂಬದ ಸದಸ್ಯರನ್ನು ಕುರಿತು ಮಾತನಾಡಿರುವ ಆಡಿಯೋ ಸಂಭಾಷಣೆ ಬಹಿರಂಗವಾಗಿದೆ. 50 ವರ್ಷಕ್ಕೂ ಹೆಚ್ಚು ರಾಜಕೀಯ ಅನುಭವ ಇರುವ ಮುತ್ಸದ್ದಿ ನಾಯಕ ಮಲ್ಲಿಕಾರ್ಜುನ ಖರ್ಗೆ ರವರ ವಿರುದ್ಧ ತೀವ್ರ ಅಸಹನೆ ದ್ವೇಷದಿಂದ ಕೊಲೆ ಮಾಡುವ ಮನಸ್ಥಿತಿ ಹೊಂದಿರುವ ವ್ಯಕ್ತಿ ಮಣಿಕಂಠ ರಾಥೋಡ್ ಈಗಾಗಲೇ ಗಡಿಪಾರಿಗೆ ಗುರಿಯಾಗಿದ್ದರು. ಮಲ್ಲಿಕಾರ್ಜುನ ಖರ್ಗೆ ರವರ ಇಡೀ ಕುಟುಂಬ ಮತ್ತು ಶಾಸಕರಾಗಿರುವ ಪ್ರಿಯಾಂಕ ಖರ್ಗೆ ಅವರನ್ನು ಹತ್ಯೆ ಮಾಡಲಿ ಸಂಚು ರೂಪಿಸಿರುವುದು ಆಘಾತಕಾರಿ ವಿಚಾರವಾಗಿದೆ.
ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ದುರುದ್ದೇಶದಿಂದ ದ್ವೇಷಪೂರಿತವಾಗಿ ಹತ್ಯೆ ಮಾಡಲು ಆಲೋಚನೆ ಹೊಂದಿರುವ ಅಪಾಯಕಾರಿ ವ್ಯಕ್ತಿ ಮಣಿಕಂಠ ರಾಥೋಡ್ ಸುಪಾರಿ ಹಂತಕನಾಗಿದ್ದು, ಆತನ ವಿರುದ್ಧ ಕೊಲೆಯತ್ನ, ಗಲಭೆಗೆ ಸಂಚು ರೂಪಿಸಿದ ಪ್ರಕರಣಗಳಡಿ ತಕ್ಷಣವೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ ಹಾಲಪ್ಪ ಮಾತನಾಡಿ, ಇತ್ತೀಚೆಗೆ ಮಾಜಿ ಡಿಸಿಎಂ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಜಿ.ಪರಮೇಶ್ವರ್ ಅವರ ಪರವಾಗಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಬಂದು ಪ್ರಚಾರ ಮುಗಿಸಿ ವಾಪಸ್ ತೆರಳಬೇಕಾದರೆ ಅವರನ್ನು ದಾರಿ ತಪ್ಪಿಸುವ ಕೆಲಸವನ್ನು ಮಾಡಿದರು. ಇದಾದ ನಂತರ ಮಾಜಿ ಡಿಸಿಎಂ ಅವರ ಮೇಲೆ ರಣ ಹೇಡಿಗಳು ಡಾ.ಜಿ.ಪರಮೇಶ್ವರ್ ಅವರ ಮೇಲೆ ಹಿಂದಿನಿಂದ ಬಂದು ಕಲ್ಲಿನಿಂದ ತಲೆಗೆ ಹೊಡೆದು ಗಾಯಗೊಳಿಸಿದ್ದಾರೆ. ಈಗ ಮಲ್ಲಿಕಾರ್ಜುನ ಖರ್ಗೆ ಮತ್ತವರ ಕುಟುಂಬವನ್ನು ಹತ್ಯೆ ಮಾಡುವುದಾಗಿ ಹೇಳಿರುವ ಬಿಜೆಪಿ ಮುಖಂಡರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಇದೆಲ್ಲವನ್ನೂ ಗಮನಿಸಿದರೆ ಬಿಜೆಪಿ ಎಲ್ಲೋ ಒಂದು ಕಡೆ ಸೋಲಿನ ಭೀತಿಯಿಂದ ಇಂತಹ ಕೃತ್ಯಗಳಿಗೆ ಕೈ ಹಾಕುತ್ತಿದ್ದಾರೆ ಎನ್ನುವ ಸಂಶಯ ವ್ಯಕ್ತವಾಗುತ್ತಿದೆ. ಆದುದರಿಂದ ಕೂಡಲೇ ಆರೋಪಿಯ ವಿರುದ್ಧ ಯಾವುದೇ ಮುಲಾಜಿಗೆ ಒಳಗಾಗದೆ ಪೊಲೀಸ್ ಅಧಿಕಾರಿಗಳು ತಮ್ಮ ಕರ್ತವ್ಯ ನಿಷ್ಠೆಯನ್ನು ತೋರಿಸಬೇಕೆಂದು ಮನವಿ ಮಾಡಿದರು. ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಷಹಪೂರ್‍ವಾಡ್ ಅವರಿಗೆ ದೂರು ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ರೇವಣಸಿದ್ಧಯ್ಯ, ಅತೀಕ್ ಅಹಮದ್, ಸಿದ್ಧಲಿಂಗೇಗೌಡ, ನರಸೀಯಪ್ಪ, ಹೆಚ್.ಸಿ.ಹನುಮಂತಯ್ಯ, ಸಂಜೀವ್‍ಕುಮಾರ್, ಜಗದೀಶ್, ನಾಗರಾಜ್, ನಟರಾಜು, ಮಂಜುನಾಥ್, ಪ್ರಕಾಶ್, ಡಾ.ಅರುಂಧತಿ, ವಸುಂಧರ, ಎಸ್.ವಿ.ಗೀತಾ, ಸುಜಾತ, ತಾಜುದ್ದೀನ್ ಷರೀಫ್, ಮುಂತಾದವರು ಭಾಗವಹಿಸಿದ್ದರು.