ಕೋವಿಡ್-19: ಇಂದಿನಿಂದ ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ ಬೂಸ್ಟರ್ ಡೋಸ್ ಲಭ್ಯ-ಜಿಲ್ಲಾಧಿಕಾರಿ


ತುಮಕೂರು :  ಕೋವಿಡ್-19 ತಡೆಗಟ್ಟಲು ಲಸಿಕಾಕರಣ ಮುಂದುವರೆದಿದೆ. ಮೊದಲ ಎರಡು ಡೋಸ್ ಹಾಕಿಸಿಕೊಂಡು 60 ದಿನ ಕಳೆದ 18 ರಿಂದ 59 ವಯೋಮಾನದ ಎಲ್ಲರೂ ಹತ್ತಿರದ ಸರ್ಕಾರಿ ಲಸಿಕಾ ಕೇಂದ್ರಗಳಿಗೆ ತೆರಳಿ ಮುನ್ನೆಚ್ಚರಿಕಾ(ಬೂಸ್ಟರ್) ಡೋಸ್ ಪಡೆಯಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದರು.

ಮುಖ್ಯ ಕಾರ್ಯದರ್ಶಿಯವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ನಡೆದ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಭಾಗವಹಿಸಿದ ನಂತರ ತಮ್ಮ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಮತ್ತೆ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಇಂದಿನಿಂದ 75 ದಿನಗಳ ಕಾಲ ವಿಶೇಷ ಅಭಿಯಾನ ನಡೆಯಲಿದ್ದು, ಈಗಾಗಲೇ ಎರಡು ಡೋಸ್ ಪಡೆದು 60 ದಿನ ಆದವರು ಹತ್ತಿರದ ಲಸಿಕಾ ಕೇಂದ್ರಗಳಲ್ಲಿ  ಬೂಸ್ಟರ್ ಡೋಸ್ ಪಡೆಯಬೇಕೆಂದರು.

ಜಿಲ್ಲೆಯಲ್ಲಿ 12-14 ವಯೋಮಾನದ ಮಕ್ಕಳ ಲಸಿಕಾಕರಣ ಮೊದಲ ಡೋಸ್ ಶೇ.113.4ರಷ್ಟು, ಎರಡನೇ ಡೋಸ್ ಶೇ.87.6ರಷ್ಟು ಪೂರ್ಣಗೊಂಡಿದ್ದು, ಶಾಲಾ ಮುಖ್ಯೋಪಾಧ್ಯಾಯರು ಸಂಬAಧಿಸಿದ ಬಿಇಓ ಅಧಿಕಾರಿಗಳ  ಗಮನಕ್ಕೆ ತಂದು ಹತ್ತಿರದ ಲಸಿಕಾ ಕೇಂದ್ರಗಳಿಗೆ ತೆರಳಿ ಲಸಿಕೆಯನ್ನು ಹಾಕಿಸಬೇಕು ಹಾಗೂ 15-17 ವಯೋಮಾನದ ಮಕ್ಕಳಿಗೆ ನೀಡುತ್ತಿರುವ ಲಸಿಕಾಕರಣವು ಮೊದಲ ಡೋಸ್ ಶೇ.80.7ರಷ್ಟು, ಎರಡನೇ ಡೋಸ್ ಶೇ. 75.2ರಷ್ಟು ಪೂರ್ಣಗೊಂಡಿದ್ದು ಸಂಬಂಧಿಸಿದ ಪಿಯುಸಿ, ಡಿಪ್ಲೊಮಾ, ಐಟಿಐ ಸಂಸ್ಥೆಗಳ ಪ್ರಾಂಶುಪಾಲರು ಡಿಡಿಪಿಯು ಮತ್ತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿ ಮಕ್ಕಳ ಲಸಿಕಾಕರಣಕ್ಕೆ ಮುಂದಾಗಬೇಕು ಎಂದು ಹೇಳಿದರಲ್ಲದೇ, ಶೀಘ್ರ ಶೇ.100% ಲಸಿಕಾಕರಣ ಪ್ರಗತಿ ಸಾಧಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಅಂಗವಾಗಿ ‘ಹರ್ ಘರ್ ತಿರಂಗಾ’ ಕಾರ್ಯಕ್ರಮದ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರ ನಿರ್ದೇಶನಗಳನ್ನು ಹೊರಡಿಸಿದ್ದು, ಅದರಂತೆ ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ, ಎಲ್ಲಾ ಅನುದಾನಿತ, ಅನುದಾನರಹಿತ ಶಾಲಾ- ಕಾಲೇಜುಗಳಲ್ಲಿ, ಅಂಗನವಾಡಿ ಕಟ್ಟಡಗಳ ಮೇಲೆ ಹಾಗೂ ಜಿಲ್ಲೆಯಲ್ಲಿರುವ ಎಲ್ಲಾ ಮನೆಗಳ ಮೇಲೆ 20×30 ಇಂಚು ಅಳತೆಯ ರಾಷ್ಟ್ರಧ್ವಜವನ್ನು ಹಾರಿಸಬೇಕು. ಈ ಮೂಲಕ ದೇಶದ ಜನರಲ್ಲಿ ರಾಷ್ಟ್ರಾಭಿಮಾನವನ್ನು ಬೆಳೆಸುವ ಉದ್ದೇಶ ಸರ್ಕಾರದ್ದಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಶಸ್ತ್ರ  ಚಿಕಿತ್ಸಕ ಡಾ: ಟಿ.ಎ.ವೀರಭದ್ರಯ್ಯ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ: ಮೋಹನ್ ದಾಸ್, ಜಿಲ್ಲಾ ಟಿಬಿ ನಿಯಂತ್ರಣಾಧಿಕಾರಿ ಡಾ: ಸನತ್ ಕುಮಾರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದರು

Leave a Reply

Your email address will not be published. Required fields are marked *