ತುಮಕೂರು: ವಾಹನ ಸವಾರರು ಸಂಚಾರಿ ನಿಯಮಗಳನ್ನು ಪಾಲಿಸಿದಲ್ಲಿ ಅಪಘಾತಗಳನ್ನು ತಪ್ಪಿಸಬಹುದಾಗಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಎ. ಎನ್. ಗಜೇಂದ್ರಕುಮಾರ್ ತಿಳಿಸಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ “ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಹಾಗೂ ಇಂಧನ ಉಳಿತಾಯ ಮಾಸಿಕ ಮಾಸಿಕ ಕಾರ್ಯಕ್ರಮ”ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು “ನಿಮ್ಮ ಸುರಕ್ಷತೆಯೇ, ನಿಮ್ಮ ಕುಟುಂಬಕ್ಕೆ ಭದ್ರತೆ ರಸ್ತೆಯಲ್ಲಿ ಎಚ್ಚರಿಕೆಯಿಂದಿರಿ” ಎಂಬ ಧ್ಯೇಯ ವಾಕ್ಯದೊಂದಿಗೆ ಜನವರಿ 16 ರಿಂದ ಫೆಬ್ರವರಿ 15ರವರೆಗೆ ಮಾಸಿಕ ಸಪ್ತಾಹವನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದರಲ್ಲದೆ, ಸಪ್ತಾಹದ ಅಂಗವಾಗಿ ಘಟಕ ಮಟ್ಟದಲ್ಲಿ ನೇತ್ರ ತಪಾಸಣಾ ಹಾಗೂ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದ್ದು ಈ ಶಿಬಿರದಲ್ಲಿ ನಿಗಮದ ಸಿಬ್ಬಂದಿಗಳು ತಮ್ಮ ನೇತ್ರ ಹಾಗೂ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಹೆಚ್ಚಿನ ಅಪಘಾತಗಳು ದ್ವಿಚಕ್ರ ಸವಾರರು-ಪಾದಚಾರಿಗಳ ನಡುವೆ ಸಂಭವಿಸುತ್ತಿದ್ದು, ಸಂಸ್ಥೆಯ ಚಾಲಕರು ರಸ್ತೆಯಲ್ಲಿ ಸಂಚರಿಸುವ ಪಾದಚಾರಿ ಮತ್ತು ದ್ವಿಚಕ್ರ ವಾಹನಗಳನ್ನು ಸೂಕ್ಷ್ಮವಾಗಿ ನಿಗಾವಹಿಸಿ ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು ಎಂದರಲ್ಲದೆ ಕಳೆದ ವರ್ಷಕ್ಕಿಂತ ಈ ವರ್ಷದಲ್ಲಿ ಅಪಘಾತದಲ್ಲಿ ಮೃತರ ಪ್ರಮಾಣ ಕಡಿಮೆಯಾಗಿದೆ. ಮುಂದಿನ ವರ್ಷದ ಸಪ್ತಾಹಕ್ಕೆ ಮರಣ ಪ್ರಮಾಣವನ್ನು ಪೂರ್ಣ ಕಡಿಮೆಗೊಳಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮರಿಯಪ್ಪ, ಆರಕ್ಷಕ ವೃತ್ತ ನಿರೀಕ್ಷಕ ಗುರುನಾಥ್, ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಜು, ವಿಭಾಗೀಯ ಸಂಚಲನಾಧಿಕಾರಿ ಪರಮೇಶ್ವರಪ್ಪ, ಘಟಕ ವ್ಯವಸ್ಥಾಪಕ ತುಳಸಿರಾಮ್ ಹಾಗೂ ನಟರಾಜು, ವಿಭಾಗದ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.