ತುಮಕೂರು: ರಾಜ್ಯದ ಬಿಜೆಪಿ ಸರ್ಕಾರವು ಕಡು ಭ್ರಷ್ಟ, ಜನವಿರೋಧಿ ಸರ್ಕಾರವಾಗಿದ್ದು, ಈ ವಿಷಯವನ್ನು ಮತದಾರರಿಗೆ ಜಾಗೃತಿ ಮೂಡುಸಿ, ಬಿಜೆಪಿ ಸರ್ಕಾರ ಕಿತ್ತೊಗೆದು ಕಾಂಗ್ರೆಸ್ ಆಡಳಿತ ತರುವ ನಿಟ್ಟಿನಲ್ಲಿ ‘ಪ್ರಜಾಧ್ವನಿ’ ಯಾತ್ರೆಯನ್ನು ಜನವರಿ 24ರ ಮಂಗಳವಾರ ನಗರದ ಅಮಾನಿಕೆರೆ ಗಾಜಿನ ಮನೆಯಲ್ಲಿ ಹಮ್ಮಿಕೊಂಡಿರುವುದಾಗಿ ಮಾಜಿ ಶಾಸಕರು ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಕೆ.ಎನ್. ತಿಳಿಸಿದರು.
ಅವರಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಹಲವು ಕಡೆ ಈಗಾಗಲೇ ‘ಪ್ರಜಾಧ್ವನಿ’ ಯಾತ್ರೆ ನಡೆದಿದ್ದು, ಜನವರಿ 24ರಂದು ತುಮಕೂರಿನಲ್ಲಿ ನಡೆಯಲಿದ್ದು, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ಸಿಂಗ್ ಸರ್ಜೆವಾಲ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಪ್ರಚಾರ ಸಮಿತಿ ಅಧ್ಯಕ್ಷರಾದ ಎಂ.ಬಿ.ಪಾಟೀಲ್, ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸೇರಿದಂತೆ ಅನೇಕ ನಾಯಕರುಗಳು ಭಾಗವಹಿಸಲಿದ್ದಾರೆ ಎಂದರು.
ಜನ ಸಾಮಾನ್ಯರು ಭ್ರಷ್ಟಚಾರದಿಂದ ರೋಸತ್ತು ಹೋಗಿದ್ದಾರೆ. ಪ್ರಜಾ ಧ್ವನಿಯಾಗಿ ನಾವಿಂದು ಪ್ರಜೆಗಳಿಗೆ ನ್ಯಾಯ ಒದಗಿಸಲು ಈ ಯಾತ್ರೆಯನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರಾದ ರಾಯಸಂದ್ರ ರವಿಕುಮಾರ್ ಮಾತನಾಡಿ ತುಮಕೂರಿನಲ್ಲಿ ಗರ್ಭಿಣಿ ಮಹಿಳೆಯೊಬ್ಬರಿಗೆ ಚಿಕಿತ್ಸೆ ಸಿಗದೆ ಮೃತ ಪಟ್ಟಿದ್ದು, ಇತ್ತೀಚೆಗೆ ಚಿ.ನಾ.ಹಳ್ಳಿ ತಾಲ್ಲೂಕಿನಲ್ಲಿ ಮೂವರು ಯುವತಿಯರು ಆತ್ಮಹತ್ಯೆ ಮಾಡಿಕೊಂಡಿದ್ದು ಬಿಜೆಪಿಯ ಭ್ರಷ್ಟ ವ್ಯವಸ್ಥೆಯೇ ಕಾರಣ, ಈ ಸರ್ಕಾರದ ಜನವಿರೋಧಿ ನೀತಿಗಳನ್ನು ಜನರಿಗೆ ತಿಳಿಸುವ ಹಿನ್ನಲೆಯಲ್ಲಿ ಈ ಪ್ರಜಾಧ್ವನಿ ಯಾತ್ರೆಯನ್ನು ಹಮ್ಮಿ ಕೊಂಡಿರುವುದಾಗಿ ತಿಳಿಸಿದರು.
ಶಫೀವುಲ್ಲಾ ಅವರು ಮಾತನಾಡಿ ಈ ಸರ್ಕಾರದ ಸುಳ್ಳುಗಳ ಬಗ್ಗೆ ಜನರಿಗೆ ತಿಳಿಸಲಾಗುವುದು, ಮಾರ್ಚ್ 17ರ ವೇಳೆಗೆ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನೋಟಿಫೀಕೇಷನ್ ಆಗುವ ಸಾಧ್ಯತೆ ಇದ್ದು, ಪಕ್ಷದ ಕಾರ್ಯಕರ್ತರು ಸಾಕಷ್ಟು ಶ್ರಮಿಸಿ, ನಮ್ಮ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕೆಂದು ಕರೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ, ಮಾಜಿ ಅಧ್ಯಕ್ಷ ಎಸ್. ಷಫಿಅಹಮದ್, ಮಾಜಿ ಶಾಸಕರಾದ ಡಾ. ಎಸ್.ರಫೀಕ್ ಅಹಮದ್, ಆರ್.ನಾರಾಯಣ್, ಮುಖಂಡರಾದ ರೆಡ್ಡಿ ಚಿನ್ನಯಲ್ಲಪ್ಪ, ಹೆಚ್.ವಿ.ವೆಂಕಟೇಶ್, ಫರನಾಬೇಗಂ, ಧನಂಜಯ್, ಇಕ್ಬಾಲ್ ಅಹಮದ್, ಇತರರಿದ್ದರು.