ಭಾಷಾಂತರಕ್ಕೆ ಮಾನಸಿಕ ಮಡಿವಂತಿಕೆ ಮೀರಬೇಕು: ಬರಗೂರು ರಾಮಚಂದ್ರಪ್ಪ

ತುಮಕೂರು: ನಿಜವಾದ ಭಾವಾಂತರ ಆಗಬೇಕಾದರೆ ಮಾನಸಿಕ ಮಡಿವಂತಿಕೆಯನ್ನು ಮೀರಬೇಕು. ಆಗ ಮಾತ್ರ ದಲಿತ ಸಂವೇದನೆ ಅರ್ಥವಾಗುತ್ತದೆ. ಮುಸ್ಲಿಂ ಸಂವೇದನೆ ಅರ್ಥವಾಗುತ್ತದೆ. ಸ್ತ್ರೀ ಸಂವೇದನೆ ಅರ್ಥವಾಗುತ್ತದೆ. ಮಡಿವಂತಿಕೆಯನ್ನು ಮೀರದೇ ಇದ್ದರೆ ನಾವು ಸಂಕುಚಿತವಾಗಿ ಇರುತ್ತೇವೆ ಎಂದು ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಹೇಳಿದರು.

ತುಮಕೂರು ವಿಶ್ವವಿದ್ಯಾನಿಲಯದ ಡಾ.ಡಿ.ವಿ.ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರವು ಝೆನ್ ಟೀಮ್ ಸಹಯೋಗದೊಂದಿಗೆ ಗುರುವಾರ ಆಯೋಜಿಸಿದ್ದ ಬಿ.ಆರ್.ಜಯರಾಮರಾಜೇ ಅರಸು ಅವರ ಅನುವಾದಿತ ಕೃತಿ ‘ಹೆಣ ಹೊರುವವನ ವೃತ್ತಾಂತ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.

ಭಾಷಾಂತರ ಎನ್ನುವುದು ಒಂದು ಸಾಮಾಜಿಕ ಸಾಂಸ್ಕøತಿಕ ಪ್ರವೇಶಕ್ಕೂ ಕಾರಣವಾಗುತ್ತದೆ. ಪ್ರೇರಣೆ, ಪ್ರತಿಭೆಯನ್ನು ಬಯಸುತ್ತದೆ. ಆ ದೃಷ್ಟಿಯಿಂದ ಇದೊಂದು ಸೃಜನಶೀಲವಾದ ಪ್ರಕ್ರಿಯೆಯೂ ಆಗಿರುತ್ತದೆ. ತನ್ನದಲ್ಲದ ಭಾಷೆಯೊಂದಿಗೆ ಅನುಸಂಧಾನ ಮಾಡಬೇಕು. ಅಲ್ಲಿರುವ ಭಾವದ ಜೊತೆ ಅನುಸಂಧಾನವನ್ನು ನಡೆಸಬೇಕು. ಹೀಗಾಗಿ ಇದೊಂದು ರೀತಿಯಲ್ಲಿ ಅನುಸಂಧಾನದ ಒಂದು ಪ್ರಕ್ರಿಯೆ ಇದು. ಇದು ಭಾವಾನು ಸಂಧಾನವೂ ಹೌದು. ಒಂದು ಸಾಂಸ್ಕೃತಿಕ ಸಾಮಾಜಿಕ ಅನುಸಂಧಾನವೂ ಆಗಿರುತ್ತದೆ ಎಂದರು.

ಸಾಮಾಜಿಕ ಸಂವೇದನೆ ಎಲ್ಲ ಸಾಹಿತಿಗಳಲ್ಲಿಯೂ ಇರಬೇಕು.ಸಾಮಾಜಿಕ, ಪರಿಸರ ಅಸ್ಮಿತೆಯನ್ನು ಆಧರಿಸಿ ಭಾಷಾಂತರಿಸಿದಾಗ ಮಾತ್ರ ಕೃತಿಗೆ ಸಾಮಾಜಿಕ ಸಾಂಸ್ಕøತಿಕ ಪ್ರೇರಣಾ ಶಕ್ತಿ ಬರಲಿದೆ ಎಂದು ಹೇಳಿದರು.

ಬಿ. ಆರ್.ಜಯರಾಮರಾಜೇ ಅರಸು ಅವರು ನೀತಿ ನಿಯಮಗಳ ಸಮನ್ವಯಕಾರರು. ನಿಯಮವನ್ನು ನೀತಿಯ ಮಡಿಲಿಗೆ ಒಪ್ಪಿಸಿ ಸಾಮಾಜಿಕ ಕಾರ್ಯಗಳನ್ನು ಮಾಡಿದವರು.ಸಾಮಾಜಿಕತೆಯ ಬೇರು ಬರೆವಣಿಗೆಯಲ್ಲಿ ಬೆರೆತಾಗ ಮಾತ್ರ ಇಂತಹ ಕೃತಿ ಹುಟ್ಟಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ನಿಘಂಟಿನ ಆಧಾರದ ಮೇಲೆ ಭಾಷಾಂತರ ಮಾಡಿದರೆ ಅದು ಶುಷ್ಕ ಕೃತಿಯಾಗುತ್ತದೆ.ಮೂಲ ಕೃತಿಯ ಭಾವ ಮತ್ತು ಸಾಮಾಜಿಕ ಪರಿಸರ, ಅಸ್ಮಿಯತೆಯನ್ನು ಇಟ್ಟುಕೊಂಡು ಒಂದು ಕೃತಿಯ ಅನುವಾದ ಮಾಡಬೇಕು.ಮಾನಸಿಕ ಮಡಿವಂತಿಕೆಯನ್ನು ಮೀರಿದಾಗ ಮಾತ್ರ ನಾವು ಮತ್ತೊಂದು ಕೃತಿಯ ಒಳ ಹೊಕ್ಕಲು ಸಾಧ್ಯ.ಒಂದು ವಿಷಯ, ವಸ್ತು ಹಾಗೂ ಭಾಷೆಯನ್ನು ನಮ್ಮದನ್ನಾಗಿಸಿಕೊಳ್ಳುವುದರ ಮೂಲಕ ಒಂದು ಭಾಷೆ ಬೆಳೆಯುತ್ತದೆ ಎಂದರು.

ತುಮಕೂರು ವಿವಿಯ ಕುಲಸಚಿವೆ ನಾಹಿದಾ ಜûಮ್ ಜûಮ್ ಮಾತನಾಡಿ, ಬರಗೂರು ರಾಮಚಂದ್ರಪ್ಪ ಅವರು ನಮಗೆಲ್ಲಾ ಆದರ್ಶವಾಗಿದ್ದಾರೆ. ಐಎಎಸ್ ಅಧಿಕಾರಿ ಬಿ.ಆರ್.ಜಯರಾಮರಾಜೇ ಅರಸು ಅವರು ನಮ್ಮ ವೃತ್ತಿ ಜೀವನದ ಆದರ್ಶವಾಗಿದ್ದಾರೆ. ಉತ್ತಮ ಆಡಳಿತಕ್ಕೆ ಜಯರಾಮರಾಜೇ ಅರಸು ಅವರು ಮಾದರಿಯಾಗಿದ್ದಾರೆ. ಹೆಣ ಹೊರುವವನ ವೃತ್ತಾಂತ ಕೃತಿಯಲ್ಲಿ ಹೆಣ ಹೊರುವ ಪದ್ಧತಿಯ ವಿಸ್ಮøತ ರೂಪ ತಿಳಿಸಿದ್ದಾರೆ ಎಂದು ಹೇಳಿದರು.

ಕೃತಿಯ ಲೇಖಕ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಬಿ.ಆರ್.ಜಯರಾಮರಾಜೇ ಅರಸು ಮಾತನಾಡಿ, ‘ಹೆಣ ಹೊರುವವನ ವೃತ್ತಾಂತ’ ಕೃತಿಯಲ್ಲಿ ಬರುವ ಪ್ರತಿಯೊಂದು ಪಾತ್ರ ಮತ್ತು ಸಂಗತಿಗಳ ಬಗ್ಗೆ ಅರ್ಥಪೂರ್ಣವಾಗಿ ವಿವರಿಸಿದರು.ಅನುವಾದ ಮಾಡುವಾಗ ಯಾವ ಯಾವ ರೀತಿ ಅಧ್ಯಯನ ಮಾಡಿದ್ದರು, ನವ್ಯ ಪದಗಳ ಸಂಗ್ರಹಣೆ ಹೇಗೆ ಸಂಗ್ರಹಿಸಲಾಯಿತು ಎಂದು ತಿಳಿಸಿದರು.

ಪ್ರಜಾಪ್ರಭುತ್ವದಲ್ಲಿ ಬೇಕಾಗಿರುವುದು ಅಂದರೆ ನೀವು ನಂಬಿದ ನೀತಿ ಯಾವುದು? ನೀವು ನಂಬಿದ ಸಾಮಾಜಿಕ ನೀತಿ ಏನು? ರಾಜಕೀಯ ನೀತಿ ಏನು? ಅದಕ್ಕನುಗುಣವಾಗಿ ನೀವು ನಿಯಮಗಳನ್ನು ರೂಪಿಸುತ್ತಾ ಹೋದರೆ ಅದು ಜನಗಳಿಗೆ ಅನುಕೂಲ ಮಾಡಿಕೊಡುತ್ತದೆ. ಜನ ಸಾಮಾನ್ಯರ ಹತ್ತಿರಕ್ಕೆ ಹೋಗುತ್ತದೆ. ಅದಕ್ಕೆ ಬೇಕಾಗಿರುವುದು ಒಂದು ಸಂವೇದನೆ. ಅಂತಹದೊಂದು ಸಂವೇದನೆಯನ್ನು ಅರಸು ಅವರಲ್ಲಿ ಕಂಡಿದ್ದೆ. ಸಾಹಿತಿಗೆ ಒಂದು ಸಾಮಾಜಿಕ ಸಂವೇದನೆ ಇರಬೇಕು. ಸಾಮಾಜಿಕ ಸಂವೇದನೆ ಇಲ್ಲದೇ ಹೋದರೆ ಅವನು ನಿಜವಾದ ಅರ್ಥದಲ್ಲಿ ಉತ್ತಮವಾದ ಸಾಹಿತ್ಯವನ್ನು ರಚಿಸುತ್ತಾರೆಂಬ ನಂಬಿಕೆ ನನಗೆ ಇಲ್ಲ ಎಂದರು.

ತುಮಕೂರು ವಿವಿಯ ಡಾ.ಡಿ. ವಿ. ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಮುಖ್ಯಸ್ಥೆ ಪ್ರೊ.ಅಣ್ಣಮ್ಮ ಮಾತನಾಡಿ, ‘ಹೆಣ ಹೊರುವವನ ವೃತ್ತಾಂತ’ ಕೃತಿಯ ಕರ್ತೃ ಬಿ.ಆರ್.ಜಯರಾಮರಾಜೇ ಅರಸು ಅವರು ಉಜ್ವಲ ಪ್ರತಿಭೆ. ಇನ್ನಷ್ಟು ಕೃತಿಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕು ಎಂದರು.

ತುಮಕೂರು ವಿವಿಯ ಡಾ.ಡಿ. ವಿ. ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕಿ ಡಾ.ಗೀತಾ ವಸಂತಅವರು ಪುಸ್ತ ಕುರಿತು ಮಾತನಾಡುತ್ತಾ ‘ಹೆಣ ಹೊರುವವನ ವೃತ್ತಾಂತ’ ಕೃತಿಯ ಕುರಿತು ಮಾತನಾಡಿ, ಹೆಣ ಹೊರುವವನ ವೃತ್ತಾಂತ ಕೃತಿಯಲ್ಲಿ ಕಥಾ ಸಂಗಮವನ್ನು ಕಾಣಬಹುದು.ಇಲ್ಲಿ ನೆನಪುಗಳು ಕನ್ನಡಿಯಾಗಿವೆ. ಕಾನೂನುಗಳ ವಿದ್ಯಾಮಾನಗಳ ಚರ್ಚೆ, ರಾಜಕೀಯ ಚಿಂತನೆ, ಇವೆಲ್ಲವನ್ನೊಳಗೊಂಡಿರುವುದನ್ನೂ ಗಮನಿಸಬಹುದು.ಈ ಕೃತಿ ಕನ್ನಡಕ್ಕೆ ಹೊಸ ಸಂವೇದನೆಯನ್ನು ಪರಿಚಯಿಸುತ್ತದೆ ಎಂದು ತಿಳಿಸಿದರು.

ಇರಾನಿನ ಪಾರ್ಸಿ ಧರ್ಮದಜ್ವರಾಷ್ಟ್ರೀಜನಾಂಗದ ಪರಿಕಲ್ಪನೆಯನ್ನು ಈ ಪುಸ್ತಕದಲ್ಲಿ ತುಂಬಾ ಸುಂದರವಾಗಿ ಕಟ್ಟಿಕೊಡಲಾಗಿದೆ. ಈ ಧರ್ಮದ ಶುದ್ಧತೆ ಮತ್ತು ಮಾಲಿನ್ಯದ ಬಗ್ಗೆ, ಅಂದರೆ, ಆ ಜನಾಂಗದಲ್ಲಿ ಮರಣದ ನಂತರ ಮೃತ ದೇಹದ ಅಂತ್ಯ ಕ್ರಿಯೆಯ ವಿಧಿ ವಿಧಾನದ ಬಗ್ಗೆ ಇಲ್ಲಿ ಅರ್ಥಪೂರ್ಣವಾಗಿ ತಿಳಿಸಿದ್ದಾರೆ ಎಂದರು.

ತುಮಕೂರಿನ ಝೆನ್‍ಟೀಮ್ ಮುಖ್ಯಸ್ಥ ಉಗಮ ಶ್ರೀನಿವಾಸ್ ಸ್ವಾಗತಿಸಿದರು.ಲೇಖಕ ಕೆ. ಪಿ. ಲಕ್ಷ್ಮೀಕಾಂತರಾಜೇ ಅರಸ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.

Leave a Reply

Your email address will not be published. Required fields are marked *