
ತುಮಕೂರು : ಖಾಸಗಿಯವರು ಅಕ್ರಮವಾಗಿ ಒತ್ತುವರಿ ಮಾಡದಂತೆ ಸರ್ಕಾರಿ ಆಸ್ತಿಯನ್ನು ಸಂರಕ್ಷಿಸಿ ನ್ಯಾಯಾಲಯದಲ್ಲಿ ವ್ಯಾಜ್ಯಗಳನ್ನು ನಿರ್ವಹಿಸಲು ಸರ್ಕಾರಿ ಅಧಿಕಾರಿ-ನೌಕರರು ಕಾನೂನು ವಿಷಯದಲ್ಲಿ ಪರಿಣತಿ ಹೊಂದಿರುವುದು ಅತ್ಯಗತ್ಯವೆಂದು ನಿವೃತ್ತ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ಬೆಂಗಳೂರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮಾಜಿ ಅಧ್ಯಕ್ಷರಾದ ವೆಂಕಟ ಸುದರ್ಶನ್ ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿ ಸಹಯೋಗದಲ್ಲಿ ನಗರದ ಕನ್ನಡ ಭವನದಲ್ಲಿಂದು ಸರ್ಕಾರಿ ಅಧಿಕಾರಿ-ನೌಕರರಿಗಾಗಿ “ಸರ್ಕಾರದ ಹಾಗೂ ಸಾರ್ವಜನಿಕ ಆಸ್ತಿಗಳ ಸಂರಕ್ಷಣೆ” ಕುರಿತು ಆಯೋಜಿಸಿದ್ದ ಕಾರ್ಯಾಗಾರವನ್ನುದ್ದೇಶಿಸಿ ಮಾತನಾಡಿದ ಅವರು, ಸರ್ಕಾರಿ ಹಾಗೂ ಸಾರ್ವಜನಿಕ ಆಸ್ತಿ ಸಂರಕ್ಷಣೆಗಾಗಿ ಅಧಿಕಾರಿ-ನೌಕರರು ಕಾಲ-ಕಾಲಕ್ಕೆ ಹೊರಡಿಸಲಾಗುವ ಕಾನೂನು ತಿದ್ದುಪಡಿಗಳ ಬಗ್ಗೆ ತಿಳಿದುಕೊಂಡಿರಬೇಕು. ಸರ್ಕಾರದ ವಿರುದ್ಧ ಯಾವುದೇ ವ್ಯಕ್ತಿಗಳು ನ್ಯಾಯಾಲಯದಲ್ಲಿ ದಾವೆ ಹೂಡಿದಾಗ ಯಾವ ರೀತಿ ಕ್ರಮಗಳನ್ನು ಅನುಸರಿಸಬೇಕೆಂದು ಮಾಹಿತಿ ನೀಡಿದರು.
ವಿಷಯ ನಿರ್ವಾಹಕರಿಗೆ ಕಾನೂನಿನ ಬಗ್ಗೆಯಿರುವ ಅರಿವಿನ ಕೊರತೆಯಿಂದ ಹಾಗೂ ನ್ಯಾಯಾಲಯದಲ್ಲಿರುವ ಸರ್ಕಾರಿ ವ್ಯಾಜ್ಯಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡದೆ ಇರುವುದರಿಂದ ಪ್ರಕರಣಗಳು ಬಗೆಹರಿಯದೆ ನ್ಯಾಯಾಲಯದಲ್ಲಿ ಬಾಕಿ ಉಳಿದಿವೆ ಎಂದು ತಿಳಿಸಿದರಲ್ಲದೆ ನ್ಯಾಯಾಲಯ ನಿರ್ವಹಣಾ ವಿಧಾನ, ಸಿವಿಲ್ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ಸರ್ಕಾರದ ಪರವಾಗಿ ವಾದಿಸಲು ಕಲೆ ಹಾಕಬೇಕಾದ ದಾಖಲೆ ಮತ್ತು ಸಾಕ್ಷಿಗಳು, ಸರ್ಕಾರದ ವಿರುದ್ಧ ಬಂದ ನೋಟೀಸುಗಳಿಗೆ ಯಾವ ರೀತಿ ಉತ್ತರಿಸಬೇಕೆಂಬ ಬಗ್ಗೆ ಸರ್ಕಾರಿ ಅಧಿಕಾರಿ-ನೌಕರರಿಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಾಗಾರವನ್ನು ಏರ್ಪಡಿಸಲಾಗಿದ್ದು, ಅಧಿಕಾರಿ-ನೌಕರರು ಕಾರ್ಯಾಗಾರದಿಂದ ಕಾನೂನು ಅರಿವು ಪಡೆದು ಸರ್ಕಾರಿ-ಸಾರ್ವಜನಿಕ ಆಸ್ತಿಯನ್ನು ಸಂರಕ್ಷಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಸರ್ಕಾರಿ ಆಸ್ತಿ ಸಂರಕ್ಷಣೆಯಲ್ಲಿ ನಿರ್ಲಕ್ಷ್ಯ ತಾಳಿದರೆ ನ್ಯಾಯಾಲಯದ ವ್ಯಾಜ್ಯಗಳನ್ನು ಎದುರಿಸಬೇಕಾದ ಪರಿಸ್ಥಿತಿ ಒದಗಿ ಬರುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು-ನೌಕರರು ನಿಷ್ಠೆ, ಪ್ರಾಮಾಣಿಕ, ಶ್ರದ್ಧೆಯಿಂದ ಕಾರ್ಯನಿರ್ವಹಿಸಬೇಕು.
ಎಷ್ಟೇ ಉನ್ನತ ಅಧಿಕಾರಿಗಳಾಗಿದ್ದರೂ ಕಾನೂನು ವಿಷಯದಲ್ಲಿ ಅರಿವು ಇಲ್ಲದಿದ್ದರೆ ಸರ್ಕಾರದ ವ್ಯಾಜ್ಯಗಳು ನ್ಯಾಯಾಲಯದಲ್ಲಿ ಬಗೆಹರಿಯದೆ ಬಾಕಿ ಉಳಿದುಕೊಳ್ಳುವ ಸಾಧ್ಯತೆ ಹೆಚ್ಚು ಎಂದು ತಿಳಿಸಿದರು.
ಸರ್ಕಾರಿ ಆಸ್ತಿ ಒತ್ತುವರಿಯಾದ ಸಂದರ್ಭದಲ್ಲಿ ಒತ್ತುವರಿ ಮಾಡಿರುವವರ ಬಗ್ಗೆ ನೌಕರರು ಇಲಾಖಾ ಮುಖ್ಯಸ್ಥರ ಗಮನಕ್ಕೆ ತರಬೇಕು. ನಂತರ ಇಲಾಖಾ ಮುಖ್ಯಸ್ಥರು ಪ್ರಕರಣದ ಬಗ್ಗೆ ತಮ್ಮ ಇಲಾಖೆಯ ಆಡಳಿತಾತ್ಮಕ ಕಾರ್ಯದರ್ಶಿಗಳ ಅವಗಾಹನೆಗೆ ತರಬೇಕು ಎಂದು ಮಾಹಿತಿ ನೀಡಿದರು.
ನೌಕರರು ಸರ್ಕಾರಿ ಆಸ್ತಿ ಒತ್ತುವರಿ ಮಾಡಿದವರ ವಿರುದ್ಧ ಮೇಲಾಧಿಕಾರಿಗಳ ಗಮನಕ್ಕೆ ತರುವುದರೊಂದಿಗೆ ವಿವರವಾದ ಟಿಪ್ಟಣಿ ಮೂಲಕ ಆಸ್ತಿಯ ವಸ್ತುಸ್ಥಿತಿ, ಸರ್ಕಾರದ ಹಕ್ಕಿನ ಪ್ರಮಾಣ, ದಾಸ್ತಾವೇಜು, ಸಾಕ್ಷ್ಯಾಧಾರಗಳ ಬಗ್ಗೆ ಮಾಹಿತಿ ನೀಡಿದಲ್ಲಿ ಆಸ್ತಿಯನ್ನು ಸಂರಕ್ಷಿಸಲು ಸಾಧ್ಯವೆಂದು ಸಲಹೆ ನೀಡಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷೆ ಕೆ.ಬಿ.ಗೀತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಸ್ವಂತ ಆಸ್ತಿ ಹೇಗೆ ಕಾಪಾಡಿಕೊಳ್ಳುತ್ತೇವೆಯೋ ಅದೇ ರೀತಿ ಸರ್ಕಾರದ ಅನ್ನ ತಿನ್ನುತ್ತಿರುವ ನಾವೆಲ್ಲಾ ಸರ್ಕಾರಿ ಹಾಗೂ ಸಾರ್ವಜನಿಕರ ಆಸ್ತಿಯನ್ನು ಸಂರಕ್ಷಿಸುವಲ್ಲಿ ಆಸಕ್ತಿ ವಹಿಸಬೇಕು. ಸರ್ಕಾರದ ವ್ಯಾಜ್ಯಗಳ ಬಗ್ಗೆ ಕಾಳಜಿಯಿಂದ ಕ್ರಮಕೈಗೊಂಡಲ್ಲಿ ಮೌಲ್ಯಯುತವಾದ ಸರ್ಕಾರಿ ಸ್ಥಳಗಳನ್ನು ಉಳಿಸಿಕೊಳ್ಳಬಹುದಾಗಿದೆ. ಇಲ್ಲದಿದ್ದಲ್ಲಿ ಸರ್ಕಾರಿ ಆಸ್ತಿಯನ್ನು ಲಪಟಾಯಿಸುವವರ ಸಂಖ್ಯೆಯನ್ನು ನಿಯಂತ್ರಿಸಲು ಕಷ್ಟಸಾಧ್ಯವಾಗುತ್ತದೆ ಎಂದರಲ್ಲದೆ, ಇಂಥ ಕೃತ್ಯಗಳಿಗೆ ಒಂದು ರೀತಿಯಲ್ಲಿ ನಾವೂ ಸಹ ಪರೋಕ್ಷವಾಗಿ ಕಾರಣರಾಗುತ್ತೇವೆ ಎಂದು ತಿಳಿಸಿದರು.
ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸಲು ನ್ಯಾಯಾಲಯ ಬದ್ಧವಾಗಿದೆ. ಆದರೆ ಸರ್ಕಾರಿ ಜಮೀನುಗಳ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ಸಮರ್ಪಕವಾದ ದಾಖಲೆಯಿಲ್ಲದೆ ಇರುವುದು, ನಿಗಧಿತ ಸಮಯಕ್ಕೆ ವಿಚಾರಣೆಗೆ ಹಾಜರಾಗದೆ ಇರುವುದು, ಅಧಿಕಾರಿಗಳಿಗೆ ಇಚ್ಛಾಶಕ್ತಿ ಕೊರತೆ, ಸಂಬಂಧಿಸಿದ ಇಲಾಖೆಗಳ ನಡುವೆ ಸಮನ್ವಯತೆ ಇಲ್ಲದಿರುವುದರಿಂದಲೂ ಸರ್ಕಾರಿ ವ್ಯಾಜ್ಯಗಳು ಬಗೆಹರಿಯದೆ ನ್ಯಾಯಾಲಯದಲ್ಲಿ ಬಾಕಿ ಉಳಿದುಕೊಂಡಿವೆ. ಸೂಕ್ತ ದಾಖಲೆಗಳಿಲ್ಲದೆ ತೀರ್ಪು ನೀಡಲು ಸಾಧ್ಯವಾಗುವುದಿಲ್ಲ. ಈ ಹಿನ್ನಲೆಯಲ್ಲಿ ಸರ್ಕಾರಿ ಅಧಿಕಾರಿ-ನೌಕರರು ಸೂಕ್ತ ದಾಖಲೆಗಳನ್ನು ನ್ಯಾಯಾಲಯಕ್ಕೆ ಒದಗಿಸುವುದರಿಂದ ವ್ಯಾಜ್ಯಗಳನ್ನು ಶೀಘ್ರ ಬಗೆಹರಿಸಬಹುದೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಮಾತನಾಡಿ, ಈ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ವೆಂಕಟ್ ಸುದರ್ಶನ್ ಅವರು ಸಿವಿಲ್ ದಾವೆಗಳಲ್ಲಿನ ಹಂತಗಳು ಹಾಗೂ ಸರ್ಕಾರಿ ವ್ಯಾಜ್ಯಗಳಲ್ಲಿ ಸರ್ಕಾರಿ ನೌಕರರ ಪಾತ್ರದ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದರಲ್ಲದೆ ಸರ್ಕಾರಿ ಆಸ್ತಿ ಕಾಪಾಡುವಲ್ಲಿ ಉದಾಸೀನ ಬೇಡ. ಸರ್ಕಾರಿ ವ್ಯಾಜ್ಯಗಳು ಶೀಘ್ರ ವಿಲೇವಾರಿಯಾಗಲು ಅಧಿಕಾರಿಗಳು ಸಹಕರಿಸಬೇಕು. ಸರ್ಕಾರಿ ಸೇವೆಯಲ್ಲಿರುವವರೆಲ್ಲರೂ ಭಾಗ್ಯಶಾಲಿಗಳು. ಸರ್ಕಾರಿ ಆಸ್ತಿ ಸಂರಕ್ಷಣೆಯಲ್ಲಿ ಕೈಜೋಡಿಸುವ ಮೂಲಕ ಸರ್ಕಾರದ ಋಣವ ತೀರಿಸಿ ಋಣಮುಕ್ತರಾಗಬೇಕೆಂದು ಕರೆ ನೀಡಿದರು.
ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಮಾತನಾಡಿ, ಸರ್ಕಾರಿ-ಸಾರ್ವಜನಿಕರ ಆಸ್ತಿಗೆ ಸರ್ಕಾರಿ ನೌಕರರು ಕಾವಲುಗಾರರಾಗಿರಬೇಕು. ಆಸ್ತಿ ಉಳಿಸುವಲ್ಲಿ ಕಾಳಜಿ ಹೊಂದಿರಬೇಕು. ಜಿಲ್ಲೆಯ ನ್ಯಾಯಾಲಗಳಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕರ ಕೊರತೆ ನೀಗಿಸುವ ದೃಷ್ಟಿಯಿಂದ ಆಗಸ್ಟ್ ಮಾಹೆಯೊಳಗೆ 16 ಹುದ್ದೆಗಳನ್ನು ಭರ್ತಿ ಮಾಡಲು ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ. ನ್ಯಾಯಾಲಯದಲ್ಲಿ ಸರ್ಕಾರಿ ವ್ಯಾಜ್ಯಗಳನ್ನು ಪ್ರತಿನಿಧಿಸಲು ಈ ನೇಮಕಾತಿ ಅನುಕೂಲವಾಗಲಿದೆ. ಸರ್ಕಾರಿ ನೌಕರರು-ಅಧಿಕಾರಿಗಳು ಕೋರ್ಟ್ ಆದೇಶಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಬಾಕಿ ಇರುವ ವ್ಯಾಜ್ಯಗಳ ಬಗ್ಗೆ 15 ದಿನಗಳಿಗೊಮ್ಮೆ ಪರಿಶೀಲಿಸಿ ವಿಲೇವಾರಿಗೆ ಕ್ರಮವಿಡಲಾಗಿದೆ ಎಂದು ತಿಳಿಸಿದರಲ್ಲದೆ, ಸಾರ್ವಜನಿಕರಿಗೆ ಬಳಕೆಯಾಗುವ ಆಸ್ತಿಯನ್ನು ಭೂಕಬಳಿಕೆದಾರರು ಅನುಭವಿಸದಂತೆ ಅಧಿಕಾರಿಗಳು ಕಟ್ಟೆಚ್ಚರ ವಹಿಸಬೇಕೆಂದು ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಮಾತನಾಡಿ, ಆಸ್ತಿ ಸಂರಕ್ಷಣೆಯಲ್ಲಿ ಕಾನೂನು ಜ್ಞಾನದ ಕೊರತೆ ಪ್ರಮುಖ ಸಮಸ್ಯೆಯಾಗಿರುವುದರಿಂದ ಆಸ್ತಿ ಹಕ್ಕುಗಳ ಬಗ್ಗೆ ಅಧಿಕಾರಿ-ನೌಕರರು ಹೆಚ್ಚಿನ ಜ್ಞಾನ ಹೊಂದಿರಬೇಕು. ಕಾನೂನು ಜ್ಞಾನದ ಕೊರತೆ ಇರುವುದರಿಂದ ಖಾಸಗಿ ವ್ಯಕ್ತಿಗಳು ಸರ್ಕಾರಿ ಜಮೀನುಗಳನ್ನು ಕಬಳಿಸುತ್ತಿದ್ದಾರೆ. ಸಮಯೋಚಿತವಾಗಿ ಉಪಕ್ರಮ ಕೈಗೊಳ್ಳುವುದರಲ್ಲಿ ವಿಳಂಬವಾಗುತ್ತಿರುವುದರಿಂದ ಆಸ್ತಿ ಕಬಳಿಕೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಅರಿವು ಮೂಡಿಸುವ ಸಲುವಾಗಿ ಮೊದಲ ಹಂತದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ತಾಲ್ಲೂಕು, ಗ್ರಾಮ ಮಟ್ಟದ ಅಧಿಕಾರಿಗಳಿಗೂ ಕಾರ್ಯಾಗಾರ ಆಯೋಜಿಸಲಾಗುವುದು ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ತಹಶೀಲ್ದಾರ್ ಸಿದ್ಧೇಶ್, ಜಿಪಂ. ಉಪಕಾರ್ಯದರ್ಶಿಗಳಾದ ಹಾಲಸಿದ್ಧಪ್ಪ ಪೂಜೇರಿ ಹಾಗೂ ನರಸಿಂಹಮೂರ್ತಿ, ಮುಖ್ಯ ಲೆಕ್ಕಾಧಿಕಾರಿ ನರಸಿಂಹಮೂರ್ತಿ, ಮುಖ್ಯ ಯೋಜನಾಧಿಕಾರಿ ಸಣ್ಣ ಮಸಿಯಪ್ಪ, ರೇಷ್ಮೆ ಇಲಾಖೆ ಉಪನಿರ್ದೇಶಕ ಬಾಲಕೃಷ್ಣ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಯ ಅಧಿಕಾರಿಗಳು, ತಹಶೀಲ್ದಾರರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.