ತುಮಕೂರು : ಮೂರು ತಿಂಗಳೊಳಗೆ ರಾಜ್ಯದ ಎಲ್ಲ ಉಪ ನೋಂದಣಾಧಿಕಾರಿಗಳ ಕಚೇರಿಯನ್ನು ಸಾರ್ವಜನಿಕ ಸ್ನೇಹಿಯನ್ನಾಗಿ ಮಾರ್ಪಡಿಸಬೇಕೆಂದು ನೋಂದಣಿ ಮಹಾ ಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತೆ ಡಾ|| ಬಿ.ಆರ್. ಮಮತಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ನೋಂದಣಾಧಿಕಾರಿಗಳ ಕಚೇರಿಯಲ್ಲಿಂದು ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು ಸರ್ಕಾರದ ಬೊಕ್ಕಸ ತುಂಬಲು ಉಪ ನೋಂದಣಾಧಿಕಾರಿಗಳ ಕಚೇರಿಗೆ ಬರುವಂತಹ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲೇಬೇಕೆಂದು ಕಂದಾಯ ಖಾತೆ ಸಚಿವರು ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು 3 ತಿಂಗಳೊಳಗೆ ತಮ್ಮ ಕಚೇರಿಗಳಲ್ಲಿ ಅಗತ್ಯ ಸೌಕರ್ಯಗಳನ್ನು ಕಲ್ಪಿಸುವತ್ತ ಕಾರ್ಯಪ್ರವೃತ್ತರಾಗಬೇಕೆಂದು ಅವರು ನಿರ್ದೇಶನ ನೀಡಿದರು.
ನಿವೇಶನ/ಜಮೀನು ನೋಂದಣಿಗಾಗಿ ಬರುವವರಿಗೆ ಕುಡಿಯುವ ನೀರು, ಶೌಚಾಲಯ, ವೈಟಿಂಗ್ ರೂಂ, ಪೀಠೋಪಕರಣ, ವಿಕಲಚೇನತರಿಗಾಗಿ ರ್ಯಾಂಪ್ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕಲ್ಲದೆ ಟೋಕನ್ ಪದ್ಧತಿಯಡಿ ನೋಂದಣಿ ಮಾಡಬೇಕು. ರಾಜ್ಯದ ಎಷ್ಟೋ ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ಶೌಚಾಲಯದ ವ್ಯವಸ್ಥೆ ಇರುವುದಿಲ್ಲ. ಹೊಸ ಶೌಚಾಲಯ ನಿರ್ಮಾಣಕ್ಕಾಗಿ ಅನುದಾನ ಕಲ್ಪಿಸಲಾಗುವುದು. ಕೆಲವು ಕಟ್ಟಡಗಳು ಶಿಥಿಲಾವಸ್ಥೆ ತಲುಪಿ ಮೇಲ್ಛಾವಣಿ ಸೋರುತ್ತಿದೆ. ಇಂತಹ ಕಟ್ಟಡಗಳನ್ನು ಗುರುತಿಸಿ ಬೇರೆಡೆ ಸ್ಥಳಾಂತರಿಸಲು ಹಾಗೂ ಸ್ವಂತ ನಿವೇಶನಗಳಿದ್ದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ನೋಂದಣಿ ಉಪ ಮಹಾಪರಿವೀಕ್ಷಕಿಯರಾದ ಕೆ.ಎನ್. ವಿಮಲ(ಆಡಳಿತ ಮತ್ತು ಕಾನೂನು), ಸವಿತಾ ಲಕ್ಷ್ಮಿ(ವಿಚಕ್ಷಣ ದಳ), ಬಿ.ಎನ್. ಶಶಿಕಲ(ಕಾನೂನು), ಜಿಲ್ಲಾ ನೋಂದಣಾಧಿಕಾರಿ ಸೈಯದ್ ನೂರ್ ಪಾಷಾ, ಚಿಕ್ಕಬಳ್ಳಾಪುರ ಜಿಲ್ಲಾ ನೋಂದಣಾಧಿಕಾರಿ ಎಂ. ಶ್ರೀದೇವಿ, ತುಮಕೂರಿನ ಉಪನೋಂದಣಾಧಿಕರಿ ರಂಗರಾಜು, ಮತ್ತಿತರರು ಉಪಸ್ಥಿತರಿದ್ದರು.