ಹೌದು ನಾನು ಅಸ್ಪೃಶ್ಯಳೇ
ಮೇಲಿನವರಿಗೆ ಮೇಲಿನ ಕೇರಿಯವರಿಗೆ
ತಾವೇ ಮೇಲೆಂದು ಭಾವಿಸುವ ಎಲ್ಲರಿಗೂ
ನಾನು ಅಸ್ಪೃಶ್ಯಳೆ

ಒಂದು ಕಾಲದಲ್ಲಿ.. ಅವರಾಗಿಯೇ ನನ್ನನ್ನು
ಹೊರಗಟ್ಟಿದ್ದಿರಬಹುದು ಹೊರಗಿಟ್ಟಿದ್ದಿರಬಹುದು
ಹಾಗೆ ದೂಡಿದವರ ಹಿಡಿತಕ್ಕೆ ಇಂದು ನನ್ನ
ನೆರಳೂ ಕೂಡ ಸಿಕ್ಕದು..
ಕವಿತೆ – ಚಿತ್ರ – ಹಾಡು ಎಲ್ಲವೂ
ಅವರಿಗೆ ಅಸ್ಪೃಶ್ಯವೆ..!
ಕಾರಣ ಅವರು ಹೇಳಿದಂತೆ
ಅವರು ಕುಣಿಸಿದಂತೆ
ಅವರು ಪುಂಗಿದ್ದನ್ನೇ ಶಾಸ್ತ್ರವೆಂಬಂತೆ
ನಾನು ಬರೆಯುವುದಿಲ್ಲ-
ಹಾಡುವುದೂ ಇಲ್ಲ..
ನನ್ನ ರೇಖೆಗಳಿರುವುದೇ ಬೂದಿ
ಮುಚ್ಚಿದ ಕೆಂಡಗಳನ್ನು ಕೆದಕುವುದಕ್ಕೆ
ನನ್ನಪ್ಪ ತನ್ನ ಒಡಲಲ್ಲಿ ಸುಡುತ್ತಿದ್ದ
ಕೆಂಡಗಳ ನನ್ನ ಮಡಿಲಿಗೆ ದಾಟಿಸಿ ಹೋದ
ಆ ಕೆಂಡಗಳೆಲ್ಲ ಇಂದು ರೇಖೆಗಳಾಗಿ ಬಂದರೆ
ಕೆಲವರು ನಡುಗುತ್ತಾರೆ.
ಇನ್ನು ಕೆಲವರು ಒಳಗೊಳಗೆ ಕುದಿಯುತ್ತಾರೆ
ಬಾಯಲ್ಲಿ ಬೆಲ್ಲದ ಮಾತುಗಳನ್ನಾಡುತ್ತಲೇ
ಎದೆಗೆ ಮುಳ್ಳುಗಳಿಂದ ತಿವಿಯುತ್ತಾರೆ
ಪಾಪ ! ಅವರಿಗೆ ಗೊತ್ತಿಲ್ಲ..
ನಮ್ಮವರ ಎದೆಯಲ್ಲಿರುವುದು
ರಕ್ತ ಮಾಂಸಗಳಲ್ಲ..
ಅವರ ಚೂಪು ನೋಟಕ್ಕೆ ನುಡಿಗೆ
ಅಡ್ಡಲಾಗಿ ಎದ್ದು ನಿಂತ ಕರಿ ಕಲ್ಲ ಗೋಡೆಗಳು..!!
ಅಡ್ಡಲಾಗಿ ಎದ್ದು ನಿಂತ ಕರಿ ಕಲ್ಲ ಗೋಡೆಗಳು..!!
ಸಂಘಮಿತ್ರೆ, ನಾಗರಘಟ್ಡ