ಗುಬ್ಬಿ: ದೇಶದ ಐಕ್ಯತೆಗಾಗಿ ರಾಹುಲ್ ಗಾಂಧಿ ಅವರು ಪ್ರಾರಂಭಿಸಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿ ಹೆಜ್ಜೆ ಹಾಕುವ ಮೂಲಕ ಯಾತ್ರೆಯನ್ನು ಯಶಸ್ವಿಗೊಳಿಸುವಂತೆ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರು ಮನವಿ ಮಾಡಿದರು.
ರಾಹುಲ್ ಗಾಂಧಿಯವರು ಆರಂಭಿಸಿರುವ ಭಾರತ ಐಕ್ಯತಾ ಯಾತ್ರೆಯ ಪೂರ್ವಭಾವಿ ಸಿದ್ಧತೆಯ ಹಿನ್ನೆಲೆಯಲ್ಲಿ ಇಂದು ಜಿಲ್ಲೆಯ ತುರುವೇಕೆರೆ, ಗುಬ್ಬಿ ತಾಲ್ಲೂಕುಗಳಿಗೆ ಭೇಟಿ ನೀಡಿ ಕಾಂಗ್ರೆಸ್ ಮುಖಂಡರ ಜೊತೆ ಚರ್ಚೆ ನಡೆಸಿ, ಅವರಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡುವ ಸಂಬಂಧ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಗೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ತುಮಕೂರು ಜಿಲ್ಲೆಯಲ್ಲಿ ಭಾರತ ಐಕ್ಯತಾ ಯಾತ್ರೆಯು 4 ದಿನ ಸಂಚರಿಸಲಿದ್ದು, ಜಿಲ್ಲೆಯ ಎಲ್ಲಾ ನಾಯಕರು ಸೇರಿದಂತೆ ಜಿಲ್ಲೆಯ ಎಲ್ಲಾ ಮಂಚೂಣಿ ನಾಯಕರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ರಾಜ್ಯದಲ್ಲಿ 22 ದಿನ ನಡೆಯುವ ಭಾರತ ಐಕ್ಯತಾ ಯಾತ್ರೆಯು ಒಟ್ಟು 510 ಕಿ.ಮೀ. ಸಂಚರಿಸಲಿದೆ, ತುಮಕೂರು ಜಿಲ್ಲೆಯಲ್ಲಿ ಅಕ್ಟೋಬರ್ 9ರಿಂದ 12ರವರೆಗೆ ಸಂಚರಿಸಲಿದೆ, ಪ್ರತಿದಿನ 20 ಸಾವಿರ ಜನ ಈ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಲಿದ್ದಾರೆ. ದಿನಕ್ಕೆ 25 ಕಿ.ಮೀ.ನಂತೆ ಪಾದಯಾತ್ರೆ ಸಂಚರಿಸಲಿದೆ. ಬೆಳಗ್ಗೆ ನಡಿಗೆ, ಮಧ್ಯಾಹ್ನ ಊಟದ ನಂತರ ಸ್ಥಳೀಯ ಸಮಸ್ಯೆಗಳ ಕುಂತು ಮುಖಂಡರೊಂದಿಗೆ ರಾಹುಲ್ ಗಾಂಧಿ ಚರ್ಚೆ ನಡೆಸಲಿದ್ದಾರೆ, ಈ ಸಂದರ್ಭದಲ್ಲಿ ಮಹಿಳೆಯರು, ಕಾರ್ಮಿಕರು, ಮತ್ತು ರಾಜಕೀಯೇತರರ ಜೊತೆ ಮಾತುಕತೆ ನಡೆಸಿ ಸ್ಥಳೀಯ ಸಮಸ್ಯಗಳನ್ನು ಆಲಿಸುವುದರ ಜೊತೆಗೆ ಪಕ್ಷದ ಬಲವರ್ಧನೆಗೆ ಪಕ್ಷದ ಕಾರ್ಯಕರ್ತರ ಜೊತೆ ಮಾತುಕತೆ ನಡೆಸಲಿದ್ದಾರೆ ಎಂದರು.
ರಾಹುಲ್ ಗಾಂಧಿಯವರ ಯಾತ್ರೆಯ ಸಂದರ್ಭದಲ್ಲಿ ಭದ್ರತೆಯ ದೃಷ್ಠಿಯಿಂದ ಅವರಿಗೆ ಹಾರ, ತುರಾಯಿಗಳನ್ನು ಹಾಕಲು ಅವಕಾಶವಿರುವುದಿಲ್ಲ, ಯಾರೂ ಹಾರ-ತುರಾಯಿಗಳನ್ನು ಹಾಕಲು ಮುಂದಾಗಬಾರದು ಎಂದು ತಿಳಿಸಿದರು. ಯಾತ್ರೆಯ ಸಂದರ್ಭದಲ್ಲಿ ಪ್ರಮುಖವಾದ ದೇವಾಲಯ, ಮಸೀದಿ, ಚರ್ಚ್‍ಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆಯಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಗುಬ್ಬಿ ತಾಲ್ಲೂಕು ಕಾಂಗ್ರೆಸ್ ಮುಖಂಡರಾದ ಜಿ.ಎಸ್.ಪ್ರಸನ್ನಕುಮಾರ್, ಹೊನ್ನಗಿರಿಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಆರ್.ರಾಮಕೃಷ್ಣ, ಮಾಜಿ ಶಾಸಕರಾದ ಕೆ.ಷಡಕ್ಷರಿ, ವಿಧಾನಪರಿಷತ್ ಮಾಜಿ ಸದಸ್ಯರಾದ ಬೆಮಲ್ ಕಾಂತರಾಜು, ಮುರಳೀಧರ ಹಾಲಪ್ಪ, ಗುಬ್ಬಿ ತಾಲ್ಲೂಕು ಕಾಂಗ್ರೆಸ್‍ನ ಪ್ರಚಾರ ಸಮಿತಿ ಅಧ್ಯಕ್ಷರಾದ ಸಲೀಂಪಾಶ ಮುಂತಾದವರಿದ್ದರು.